'ಬಾಹುಬಲಿ'ಯನ್ನು ಹಿಂದಿಕ್ಕಲಾರದು 'RRR' ಏಕೆ? ಇಲ್ಲಿವೆ ಆರು ಕಾರಣಗಳು
ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿರುವ 'RRR' ಇನ್ನೆರಡು ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಕಲೆಕ್ಷನ್ ಬಗ್ಗೆ ಸಿನಿ ಮಾರುಕಟ್ಟೆ ತಜ್ಞರು ಈಗಾಗಲೇ ತಮ್ಮ-ತಮ್ಮ ಊಹೆಗಳನ್ನು ಪ್ರಕಟಿಸಿದ್ದಾರೆ. ಈ ಹಿಂದಿನ ಎಲ್ಲ ದಾಖಲೆಗಳನ್ನು ಈ ಸಿನಿಮಾ ಪುಡಿಗಟ್ಟಲಿದೆ ಎಂದು ಅಭಿಮಾನಿಗಳು ರಣೋತ್ಸಾಹದಲ್ಲಿದ್ದಾರೆ.
ನಿಜವಾಗಿಯೂ 'RRR' ಸಿನಿಮಾ ಹಿಂದಿನ ದಾಖಲೆಗಳನ್ನು ಪುಡಿಗಟ್ಟಲಿದೆಯೇ? ತರ್ಕವತ್ತಾಗಿ ಯೋಚಿಸಿದರೆ ಇದು ಅನುಮಾನ ಎನಿಸುತ್ತಿದೆ. 'RRR' ಮುಂದೆ ಸಾಕಷ್ಟು ಸವಾಲುಗಳಿವೆ, ಅವುಗಳನ್ನು ಎದುರಿಸಿ ಹೊಸ ದಾಖಲೆಯೊಂದನ್ನು ಸೃಷ್ಟಿಸುವುದು ಸುಲಭದ ಮಾತಲ್ಲ.
'RRR' ಸಿನಿಮಾದ ನಿರ್ದೇಶಕ ರಾಜಮೌಳಿ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ''ಬಾಹುಬಲಿ' ಬಳಿಕ ರಾಜಮೌಳಿ ಇನ್ನೇನು ಮಾಡಬಲ್ಲ? ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಆ ರೀತಿ ಅನುಮಾನ ವ್ಯಕ್ತಪಡಿಸಿದ್ದವರಿಗೆ ನನ್ನ ಉತ್ತರ 'RRR'' ಎಂದಿದ್ದರು. ತಮ್ಮ ಈ ಹಿಂದಿನ ಬ್ಲಾಕ್‌ಬಸ್ಟರ್ 'ಬಾಹುಬಲಿ'ಯನ್ನು 'RRR' ಮೀರಿಸಲಿದೆ ಎಂಬುದು ಅವರ ಉತ್ತರದಲ್ಲಿ ಸ್ಪಷ್ಟವಾಗಿತ್ತು. ಆದರೆ ಇದು ಸುಲಭ ಸಾಧ್ಯವಲ್ಲ. ಕಾರಣಗಳು ಇಲ್ಲಿವೆ...

'ಬಾಹುಬಲಿ' ಸಿನಿಮಾದ ಕ್ರೇಜ್ 'RRR'ಗಿಲ್ಲ
'ಬಾಹುಬಲಿ 2' ಸಿನಿಮಾ ನೋಡಲು ದೇಶದಾದ್ಯಂತ ಸಿನಿಮಾ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದರು. 'ಬಾಹುಬಲಿ: ದಿ ಬಿಗಿನಿಂಗ್' ಸಿನಿಮಾ ಅಂಥಹಾ ಒಂದು ಹೈಪ್ ಸೃಷ್ಟಿಸಿತ್ತು. ಎಲ್ಲಿ ನೋಡಿದರು, 'ಕಟ್ಟಪ್ಪ ಬಾಹುಬಲಿಯನ್ನು ಕೊಂದದ್ದೇಕೆ?'' ಎಂದು ಕೇಳುತ್ತಿದ್ದರು. ಸಹಸ್ರ-ಸಹಸ್ರ ಸಂಖ್ಯೆಯ ಮೀಮ್‌ಗಳು ಅಂತರ್ಜಾಲದಲ್ಲಿ ಈ ಬಗ್ಗೆ ಹರಿದಾಡುತ್ತಿದ್ದವು. 'ಬಾಹುಬಲಿ 2'ಗೆ ಸಿನಿಮಾಕ್ಕೆ ಇದ್ದ ಕ್ರೇಜ್‌ನ ಅರ್ಧದಷ್ಟೂ 'RRR' ಸಿನಿಮಾಕ್ಕೆ ಇಲ್ಲ. ಬುಕ್‌ಮೈಶೋ ತೆಗೆದು, ಚೆನ್ನೈ, ಕೊಚ್ಚಿ, ಅಹಮದಾಬಾದ್, ಮುಂಬೈಗಳಲ್ಲಿ 'RRR' ಸಿನಿಮಾ ಮೊದಲ ದಿನದ ಎಷ್ಟು ಟಿಕೆಟ್‌ಗಳು ಈವರೆಗೆ ಬುಕ್ ಆಗಿವೆ ಎಂದು ನೋಡಿದರೆ ಸಾಕು ಇದು ಖಾತ್ರಿಯಾಗುತ್ತದೆ. ಕೊಚ್ಚಿ, ಚೆನ್ನೈ, ಮುಂಬೈಗಳಲ್ಲಿ ಮೊದಲ ದಿನದ ಒಂದು ಶೋ ಸಹ ಈವೆರೆಗೆ ಪೂರ್ಣ ಬುಕ್ ಆಗಿಲ್ಲ! ಈ ನಗರಗಳಲ್ಲಿ ಈವರೆಗಿನ ಮಾಹಿತಿಯಂತೆ ಒಂದು ಶೋ ಸಹ ಹೌಸ್‌ಫುಲ್ ಆಗಿಲ್ಲ.

'RRR'ಗೆ ಎದುರಾಳಿ ಸಿನಿಮಾಗಳು ಸಾಕಷ್ಟು
'RRR' ಸಿನಿಮಾಕ್ಕೆ ಕೆಲವು ಸಿನಿಮಾಗಳು ಎದುರಾಳಿಗಳಾಗಿ ನಿಂತಿವೆ. ಕನ್ನಡದಲ್ಲಿ 'ಜೇಮ್ಸ್' ಸಿನಿಮಾ 'RRR'ಗೆ ದೊಡ್ಡ ಮಟ್ಟದ ಠಕ್ಕರ್ ಕೊಡಲಿದೆ. ಚಿತ್ರಮಂದಿರಗಳ ವಿತರಣೆ ವಿಷಯದಲ್ಲಿ ಈಗಾಗಲೇ ತಿಕ್ಕಾಟ ಆರಂಭವಾಗಿದೆ. ತಮಿಳಿನಲ್ಲಿ ಸೂರ್ಯ ನಟನೆಯ 'ಈಟಿ', 'ಹೇಯ್ ಸಿನಿಮಿಕಾ' ಇನ್ನಿತರೆ ಸಿನಿಮಾಗಳು ಇನ್ನೂ ಪ್ರದರ್ಶನ ಕಾಣುತ್ತಿವೆ. ಮಲಯಾಳಂನಲ್ಲಿ 'ಭೀಷ್ಮ ಪರ್ವಂ' ಉತ್ತಮ ಪ್ರದರ್ಶನ ಕಾಣುತ್ತಿದೆ. ಇನ್ನು ಇಡೀ ದೇಶದಾದ್ಯಂತ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ದೊಡ್ಡ ಸ್ಪರ್ಧೆಯನ್ನೇ 'RRR'ಗೆ ಒಡ್ಡಲಿದೆ. ಇವುಗಳನ್ನು ದಾಟಿ 'RRR' ಸಿನಿಮಾ ಕಲೆಕ್ಷನ್ ಮಾಡಬೇಕಿದೆ.

ಕತೆಯ ಸಮಸ್ಯೆ
'RRR' ಸಿನಿಮಾವು ತೆಲುಗು ರಾಜ್ಯಗಳ ಇಬ್ಬರು ಸ್ವಾತಂತ್ರ್ಯ ಪೂರ್ವದ ಹೋರಾಟಗಾರರ ಕತೆಯನ್ನು ಹೊಂದಿದೆ. 'ಬಾಹುಬಲಿ'ಯಂತೆ ಇದು ಕಾಲ್ಪನಿಕ ಕತೆಯಲ್ಲ. ಇದು ಒಂದು ಪ್ರದೇಶದ ಇಬ್ಬರು ವ್ಯಕ್ತಿಗಳ ಕುರಿತಾದ ಕತೆ ಹಾಗಾಗಿ 'ಬಾಹುಬಲಿ'ಯಂತೆ ಈ ಸಿನಿಮಾವನ್ನು ಸಾರ್ವತ್ರಿಕವಾಗಿ ಸ್ವೀಕರಿಸುವ ಸಾಧ್ಯತೆಗಳು ಕಡಿಮೆ. ಅದೂ ಅಲ್ಲದೆ ನಿಜ ವ್ಯಕ್ತಿಗಳ ಕುರಿತ ಸಿನಿಮಾ ಒಂದು ಬಿಡುಗಡೆ ಆದಾಗ ಸಾಕಷ್ಟು ಸಮಸ್ಯೆಗಳು ಏಳುತ್ತವೆ. ಇತಿಹಾಸ ತಿರುಚಿದ ಆರೋಪ, ಸಿನಿಮಾ ವಿರುದ್ಧ ಸಾರ್ವಜನಿಕ ಅರ್ಜಿ ದಾಖಲು ಮಾಡುವುದು, ಪ್ರತಿಭಟನೆ ಹೀಗೆ ಹಲವು ಬಗೆಯ ಸಮಸ್ಯೆಯನ್ನು ಸಿನಿಮಾ ಎದುರಿಸಬೇಕಾಗುತ್ತದೆ. 'RRR' ಸಿನಿಮಾದ ವಿಷಯದಲ್ಲಿ ಈಗಾಗಲೇ ಈ ಸಮಸ್ಯೆ ಪ್ರಾರಂಭವಾಗಿದೆ. ಸಿನಿಮಾದ ಪ್ರಮುಖ ಪಾತ್ರವಾಗಿರುವ ಕೋಮರಂ ಭೀಮ್ ಅನ್ನು ಮುಸ್ಲಿಂ ವ್ಯಕ್ತಿಯಾಗಿ ಚಿತ್ರಿಸಿರುವ ಬಗ್ಗೆ ಭೀಮ್ ವಂಶಸ್ಥರು ಆಕ್ಷೇಪಣೆ ಎತ್ತಿದ್ದಾರೆ. ಸಿನಿಮಾ ಬಿಡುಗಡೆ ಆದ ಬಳಿಕ ಈ ಚರ್ಚೆ ಇನ್ನಷ್ಟು ಹೆಚ್ಚಾಗಬಹುದು, ಪ್ರತಿಭಟನೆ ನಡೆಯುವ ಸಾಧ್ಯತೆಯೂ ಇದೆ.

ಚಿತ್ರಮಂದಿರಗಳಲ್ಲಿ ಸಿನಿಮಾಗಳ 'ಶೆಲ್ ಲೈಫ್' ಕಡಿಮೆ
ಇತ್ತೀಚಿನ ಕೆಲ ವರ್ಷಗಳಲ್ಲಿ ಚಿತ್ರಮಂದಿರಗಳಲ್ಲಿ ಸಿನಿಮಾಗಳ ಶೆಲ್ ಲೈಫ್ ಬಹಳ ಕಡಿಮೆ. ಬೆಂಗಳೂರಿನಂಥಹಾ ನಗರದಲ್ಲಿ ಒಂದು ಸಿನಿಮಾ ಒಂದು ಚಿತ್ರಮಂದಿರದಲ್ಲಿ ಎರಡು ವಾರ ಓಡಿದರೆ ಅದುವೇ ಬಹು ದೊಡ್ಡ ಸಾಧನೆ. ಮೂರನೇ ವಾರಕ್ಕೆ ಸಿನಿಮಾ ಬದಲಾಗಲೇ ಬೇಕು. ಬಿಡುಗಡೆ ಆಗಲು ಸಾಲಿನಲ್ಲಿ ನಿಂತಿರುವ ಮತ್ತೊಂದು ಸಿನಿಮಾಕ್ಕೆ ಜಾಗ ಮಾಡಿಕೊಡಲೇ ಬೇಕು. 'ಬಾಹುಬಲಿ' ಸಿನಿಮಾದ ವಿಷಯದಲ್ಲಿ ಈ ಸಮಸ್ಯೆ ಇರಲಿಲ್ಲ. 'ಬಾಹುಬಲಿ' ಸಿನಿಮಾ ಬಂದಾಗ ಈಗಿನಂತೆ ಬಿಡುಗಡೆ ಆಗಬೇಕಿರುವ ಸಿನಿಮಾಗಳ ಸಾಂದ್ರತೆ ಹೆಚ್ಚಿರಲಿಲ್ಲ. ಮೊದಲ ವಾರ ಸಾವಿರಾರು ಥೀಯೇಟರ್‌ಗಳಲ್ಲಿ 'RRR' ಸಿನಿಮಾ ಬಿಡುಗಡೆ ಆದರೂ ಸಹ ಎರಡನೇ ವಾರಕ್ಕೆ ಚಿತ್ರಮಂದಿರಗಳ ಸಂಖ್ಯೆ ಅರ್ಧಕ್ಕೆ ಕುಸಿಯುವ ಸಾಧ್ಯತೆ ದಟ್ಟವಾಗಿದೆ.

'RRR' ಸಿನಿಮಾದ ದುಬಾರಿ ಟಿಕೆಟ್ ದರ
'RRR' ಸಿನಿಮಾದ ಟಿಕೆಟ್ ದರ ದುಬಾರಿಯಾಗಿದೆ. ಬೆಂಗಳೂರಿನ ಮಲ್ಟಿಫ್ಲೆಕ್ಸ್‌ನಲ್ಲಿ ನಾಲ್ಕು ಮಂದಿಯ ಕುಟುಂಬವೊಂದು ಸಿನಿಮಾ ನೋಡಬೇಕೆಂದರೆ ಕನಿಷ್ಟ 1500-2000 (ತಿಂಡಿ-ತಿನಿಸು ಹೊರತುಪಡಿಸಿ) ಬೇಕಾಗುತ್ತದೆ. ಈ ಮೊತ್ತದಲ್ಲಿ ಕನಿಷ್ಟ ಎರಡು ವರ್ಷದ ಒಟಿಟಿ ಸಬ್‌ಸ್ಕ್ರಿಪ್ಷನ್ ಪಡೆಯಬಹುದು. ಅಲ್ಲದೆ ಸ್ಟಾರ್ ನಟರ ಸಿನಿಮಾಗಳಿಗೆ ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಅಬ್ಬರ ಸಹ ಹೆಚ್ಚು. ಅಬ್ಬರದ ನಡುವೆ ಮಹಿಳೆ ಮಕ್ಕಳೊಡನೆ ಸಿನಿಮಾ ನೋಡುವುದನ್ನು ಫ್ಯಾಮಿಲಿ ಆಡಿಯನ್ಸ್ ಇಷ್ಟಪಡಲಾರರು. ಹಾಗಾಗಿ ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರದ ಬದಲು ಒಟಿಟಿಯಲ್ಲಿ ಸಿನಿಮಾ ನೋಡಲು ಕಾಯುವ ಸಾಧ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ದೊಡ್ಡ-ದೊಡ್ಡ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆದ ಒಂದು ತಿಂಗಳ ಒಳಗಾಗಿಯೇ ಒಟಿಟಿಗೆ ಬರುವ ಕಾರಣ ಅಲ್ಲಿಯೇ ನೋಡಿಕೊಳ್ಳೋಣ ಎಂದುಕೊಳ್ಳುವ ಪ್ರೇಕ್ಷಕರ ಸಂಖ್ಯೆ ಕಡಿಮೆ ಏನಿಲ್ಲ.

ಬೆಟ್ಟದಷ್ಟು ಕಲೆಕ್ಷನ್ ಮಾಡಿದ್ದ 'ಬಾಹುಬಲಿ 2'
ಎಲ್ಲದಕ್ಕಿಂತಲೂ ಮುಖ್ಯವಾಗಿ 'ಬಾಹುಬಲಿ 2' ಸಿನಿಮಾ ಭಾರಿ ದೊಡ್ಡ ಮೊತ್ತವನ್ನು ಕಲೆಕ್ಷನ್ ಮಾಡಿತ್ತು. ಆ ಸಿನಿಮಾದ ಕಲೆಕ್ಷನ್ ಅನ್ನು ಸಮೀಪ ಭವಿಷ್ಯದಲ್ಲಿ ಮತ್ಯಾವ ಭಾರತೀಯ ಸಿನಿಮಾವೂ ಮೀರಿಸುವ ಸಾಧ್ಯತೆ ಬಹುತೇಕ ಅಸಾಧ್ಯ. 'ಬಾಹುಬಲಿ 2' ಸಿನಿಮಾ ಬರೋಬ್ಬರಿ 1810 ಕೋಟಿ ರುಪಾಯಿಗಳನ್ನು ವಿಶ್ವದಾದ್ಯಂತ ಗಳಿಸಿತ್ತು. ಟಿಕೆಟ್ ದರ ಹೆಚ್ಚು ಮಾಡಿಕೊಂಡಿದ್ದರು ಸಹ 'RRR' ಸಿನಿಮಾ ಇಷ್ಟು ದೊಡ್ಡ ಮೊತ್ತವನ್ನು ಗಳಿಸುವುದು ಕನಸಿನ ಮಾತು. ಹಾಗಾಗಿ 'RRR' ಸಿನಿಮಾ ರಾಜಮೌಳಿಯ ಮಾಸ್ಟರ್ ಪೀಸ್ 'ಬಾಹುಬಲಿ'ಯ ಮುಂದೆ ಮಂಡಿ ಊರುವುದು ಪಕ್ಕಾ.


Click it and Unblock the Notifications











