'ದೇವರು ಕೊಟ್ಟ ತಂಗಿ' ಸೋಲು; ಕನಸಾಗಿಯೇ ಉಳಿತು ಶಿವಣ್ಣ-ರಾಧಿಕಾ 'ಬಂಗಾರದ ವಂಶ'
ಪ್ರತಿ ವರ್ಷ ರಕ್ಷಾ ಬಂಧನ ಅಂದಾಕ್ಷಣ ಅಣ್ಣ-ತಂಗಿ ಅನುಬಂಧದ ಕಥೆ ಹೇಳುವ ಕನ್ನಡ ಚಿತ್ರಗಳು ನೆನಪಾಗುತ್ತವೆ. ಅದರಲ್ಲೂ ಸೂಪರ್ ಹಿಟ್ 'ತವರಿಗೆ ಬಾ ತಂಗಿ' ಹಾಗೂ 'ಅಣ್ಣ-ತಂಗಿ' ಸಿನಿಮಾಗಳನ್ನು ಮರೆಯುವಂತಿಲ್ಲ. ಈ ಸಿನಿಮಾಗಳ ಮೂಲಕ ಶಿವರಾಜ್‌ಕುಮಾರ್ ಹಾಗೂ ರಾಧಿಕಾ ಕುಮಾರಸ್ವಾಮಿ ಅಣ್ಣ-ತಂಗಿ ಪಾತ್ರಗಳಲ್ಲಿ ಪ್ರೇಕ್ಷಕರ ಮನದಲ್ಲಿ ಛಾಪು ಮೂಡಿಸಿದ್ದರು.
ಓಂ ಸಾಯಿ ಪ್ರಕಾಶ್ ನಿರ್ದೇಶನದಲ್ಲಿ ಈ ಎರಡೂ ಸಿನಿಮಾಗಳು ಬಂದಿತ್ತು. ಶಿವಣ್ಣ ಹೀರೊ ಆಗಿ ಸಾಯಿ ಪ್ರಕಾಶ್ ನಿರ್ದೇಶನದಲ್ಲಿ 'ತವರಿನ ಸಿರಿ' ಚಿತ್ರ ಬಂದು ಗೆದ್ದಿತ್ತು. ಆದರೆ ಈ ಚಿತ್ರದಲ್ಲಿ ರಾಧಿಕಾ ಇರಲಿಲ್ಲ. ಕೊನೆಗೆ 'ದೇವರ ಕೊಟ್ಟ ತಂಗಿ' ಎಂಬ ಸಿನಿಮಾ ಬಂದು ಸೋತಿತ್ತು. ಸ್ವತಃ ಸಾಯಿ ಪ್ರಕಾಶ್ ನಿರ್ಮಾಣದ ಸಿನಿಮಾ ನಿರಾಸೆ ಮೂಡಿಸಿತ್ತು. ಆ ಬಳಿಕ ಕೂಡ ಶಿವಣ್ಣ- ರಾಧಿಕಾ ಇಬ್ಬರೂ ಅಣ್ಣ- ತಂಗಿಯಾಗಿ ನಟಿಸಬೇಕಿದ್ದ ಚಿತ್ರಕ್ಕೆ ಪ್ರಯತ್ನ ನಡೀತು. ಆದರೆ ಯಾವುದೂ ಸಕ್ಸಸ್ ಆಗಲಿಲ್ಲ.

ಶಿವಣ್ಣ- ರಾಧಿಕಾ ಕಾಂಬಿನೇಷನ್‌ನಲ್ಲಿ 'ಬಂಗಾರ ವಂಶ' ಎಂಬ ಸಿನಿಮಾ ಕೂಡ ಘೋಷಣೆ ಆಗಿತ್ತು. ಫೋಟೊಶೂಟ್ ಮಾಡಿದ್ದರು. ರಾಧಿಕಾ ಕುಮಾರಸ್ವಾಮಿ ಆ ಚಿತ್ರವನ್ನು ನಿರ್ಮಾಣ ಮಾಡಬೇಕಿತ್ತು. ಆದರೆ ಬಳಿಕ ಆ ಪ್ರಾಜೆಕ್ಟ್ ಮುಂದುವರೆಯಲಿಲ್ಲ. ರಕ್ಷಾಬಂಧನ ಹಬ್ಬದ ಸಂಭ್ರಮದಲ್ಲಿ ಈ ವಿಚಾರವನ್ನು ನಿರ್ದೇಶಕ ಓಂ ಸಾಯಿ ಪ್ರಕಾಶ್ ಫಿಲ್ಮಿಬೀಟ್ ಕನ್ನಡ ಜೊತೆ ಹಂಚಿಕೊಂಡಿದ್ದಾರೆ.
'ನವಶಕ್ತಿ ವೈಭವ' ಸಿನಿಮಾ ಬಳಿಕ ರಾಧಿಕಾ ಕುಮಾರಸ್ವಾಮಿ ದಿಢೀರ್ ಚಿತ್ರರಂಗದಿಂದ ದೂರಾಗಿದ್ದರು. ಬಳಿಕ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ವಾಪಸ್ ಬಂದಿದ್ದರು. 'ಸ್ವೀಟಿ ನನ್ನ ಜೋಡಿ' ಸಿನಿಮಾ ನಿರ್ಮಿಸಿ ನಟಿಸಿದ್ದರು. ಇದನ್ನೆಲ್ಲಾ ನೋಡಿ 'ಬಂಗಾರದ ವಂಶ' ಸಿನಿಮಾ ಕೂಡ ಪುನಃ ಶುರುವಾಗಬಹುದು ಎಂದೇ ಕೆಲವರು ಭಾವಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಈ ಬಗ್ಗೆ ಸಾಯಿ ಪ್ರಕಾಶ್ ಮಾತನಾಡಿದ್ದಾರೆ.
"ತವರಿಗೆ ಬಾ ತಂಗಿ ಹಾಗೂ 'ಅಣ್ಣ- ತಂಗಿ' ಮತ್ತೊಂದು ಸಿನಿಮಾ ಮಾಡಬೇಕಿತ್ತು. ರಾಧಿಕಾ ಕುಮಾರಸ್ವಾಮಿ ಸಿನಿಮಾ ನಿರ್ಮಾಣ ಮಾಡುವುದು ಪಕ್ಕಾ ಆಗಿತ್ತು. ಸ್ಕ್ರಿಪ್ಟ್ ಎಲ್ಲಾ ಸಿದ್ಧವಾಗಿತ್ತು. ಸೆಟ್ಟೇರಲಿಲ್ಲ. 'ಬಂಗಾರದ ವಂಶ' ಎಂಬ ಟೈಟಲ್. ಫೋಟೊಶೂಟ್ ಮಾಡಿ ಅನೌನ್ಸ್ ಮಾಡಿದ್ದೆವು. ಅಣ್ಣ-ತಂಗಿ ಕಾನ್ಸೆಪ್ಟ್‌ನಲ್ಲೇ ಈ ಸಿನಿಮಾ ಬರಬೇಕಿತ್ತು. ಪುನರ್ಜನ್ಮದ ಕಥೆ ಅದು" ಎಂದು ಸಾಯಿಪ್ರಕಾಶ್ ಮೆಲುಕು ಹಾಕಿದ್ದಾರೆ.

'ದೇವರ ಕೊಟ್ಟ ತಂಗಿ' ಚಿತ್ರದ ಸೋಲಿಗೆ ರಾಧಿಕಾ ಕುಮಾರಸ್ವಾಮಿ ಅನುಪಸ್ಥಿತಿ ಕಾರಣ ಎನ್ನುವವರು ಇದ್ದಾರೆ. ಇದೇ ಮಾತನ್ನು ಸಾಯಿಪ್ರಕಾಶ್ ಕೂಡ ಹೇಳ್ತಾರೆ. "ಶಿವಣ್ಣ-ರಾಧಿಕಾ ಇಬ್ಬರೂ ಅಣ್ಣ-ತಂಗಿ ಎಂದು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿತ್ತು. ಬೇರೆಯವರನ್ನು ಆ ಜಾಗಕ್ಕೆ ತಂದು ಕೂರಿಸಲು ಸಾಧ್ಯವಾಗಲಿಲ್ಲ. ಅದೇ ನಮಗೆ ಮೈನಸ್ ಆಯ್ತು. ಆ ಅವಕಾಶ ಮಿಸ್ ಆಗಿದ್ದ ಬೇಸರದಿಂದ ರಾಧಿಕಾ ಕುಮಾರಸ್ವಾಮಿ 'ಬಂಗಾರದ ವಂಶ' ಸಿನಿಮಾ ಮಾಡಲು ಮುಂದಾಗಿದ್ದರು" ಎಂದಿದ್ದಾರೆ.
ಅವತ್ತಿನ ಕಾಲಕ್ಕೆ 5.20 ಕೋಟಿ ರೂ. ಬಂಡವಾಳದಲ್ಲಿ 'ದೇವರು ಕೊಟ್ಟ ತಂಗಿ' ಚಿತ್ರವನ್ನು ಸಾಯಿ ಪ್ರಕಾಶ್ ನಿರ್ಮಿಸಿದ್ದರು. ಅದಕ್ಕಾಗಿ ಸಾಕಷ್ಟು ಸಾಲ ಮಾಡಿದ್ದರು. ಬೇರೆ ನಿರ್ಮಾಪಕರಿಗಾಗಿ ಮಾಡಿಕೊಟ್ಟ ಸಿನಿಮಾ ಗೆದ್ದು ತಾವೇ ನಿರ್ಮಿಸಿದ ಸಿನಿಮಾ ಸೋತಿದ್ದಕ್ಕೆ ಸಾಯಿ ಪ್ರಕಾಶ್ ಬಹಳ ನೊಂದಿದ್ದರು.
ಇವತ್ತಿಗೂ 'ಬಂಗಾರದ ವಂಶ' ಚಿತ್ರದ ಕಥೆ ನನ್ನ ಬಳಿ ಸಿದ್ಧವಿಲ್ಲ. ಯಾರಾದರೂ ನಿರ್ಮಾಪಕರು ಸಿಕ್ಕಿ ಶಿವಣ್ಣ ಹಾಗೂ ರಾಧಿಕಾ ಕುಮಾರಸ್ವಾಮಿ ಇಬ್ಬರನ್ನು ಒಪ್ಪಿಸಿದರೆ ಸಿನಿಮಾ ಮಾಡಬಹುದು ಎಂದು ನಿರ್ದೇಶಕರು ಹೇಳಿದ್ದಾರೆ.


Click it and Unblock the Notifications











