50 Years of Sampathige Savaal: ಲಾಭ ಆಗ್ಲಿಲ್ಲ ಎಂದ ನಿರ್ಮಾಪಕ, ಕಲೆಕ್ಷನ್ ಲೆಕ್ಕ ತೆಗಿಸಿದ್ದ ಪಾರ್ವತಮ್ಮ; ಮುಂದೆ
ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ನಟಿಸಿದ ಹಿಟ್ ಸಿನಿಮಾಗಳಲ್ಲಿ 'ಸಂಪತ್ತಿಗೆ ಸವಾಲ್' ಮರೆಯುವಂತಿಲ್ಲ. 1974ರಲ್ಲಿ ತೆರೆಕಂಡು ಅದ್ಭುತ ಯಶಸ್ಸು ಸಾಧಿಸಿದ ಸಿನಿಮಾ ಇದೀಗ 50 ವರ್ಷ ಪೂರೈಸಿದೆ. ಎ. ವಿ ಶೇಷಗಿರಿ ರಾವ್ ನಿರ್ದೇಶನದ ಚಿತ್ರದಲ್ಲಿ ಅಣ್ಣಾವ್ರ ಜೊತೆ ಮಂಜುಳಾ ನಾಯಕಿಯಾಗಿ ನಟಿಸಿದ್ದರು.
ಬಿ. ಪಿ ದತ್ತರಾಗಿ ಬರೆದ 'ಸಾಹುಕಾರ' ನಾಟಕ ಆಧರಿಸಿ 'ಸಂಪತ್ತಿಗೆ ಸವಾಲ್' ಸಿನಿಮಾ ಕಟ್ಟಿಕೊಡಲಾಗಿತ್ತು. ಅದಾಗಲೇ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದ ವಜ್ರಮುನಿ ಈ ಚಿತ್ರದ ಸಾಹುಕಾರ ಸಿದ್ದಪ್ಪನ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಸಾಧಿಸಿದ್ದರು. ಅವತ್ತಿನ ಕಾಲದಲ್ಲಿ ಬಹಳ ಕಡೆಗಳಲ್ಲಿ 'ಸಾಹುಕಾರ' ನಾಟಕ ಪ್ರದರ್ಶನವಾಗುತ್ತಿತ್ತು. ಅದನ್ನು ದೃಶ್ಯ ರೂಪಕ್ಕಿಳಿಸಿ ಎ. ವಿ ಶೇಷಗಿರಿ ರಾವ್ ಗೆದ್ದಿದ್ದರು. 50 ವರ್ಷ ಪೂರೈಸಿದ ಈ ಚಿತ್ರವನ್ನು ಕನ್ನಡ ಸಿನಿರಸಿಕರು ಮತ್ತೆ ನೆನೆಪಿಸಿಕೊಳ್ಳುತ್ತಿದ್ದಾರೆ.

ಜಿ. ಕೆ ವೆಂಕಟೇಶ್ ಸಂಗೀತ, ಚಿ. ಉದಯ್ ಶಂಕರ್ ಹಾಗೂ ಆರ್. ಎನ್ ಜಯಗೋಪಾಲ್ ಸಾಹಿತ್ಯದ ಹಾಡುಗಳು ಹಿಟ್ ಆಗಿ ಚಿತ್ರಕ್ಕೆ ದೊಡ್ಡ ಶಕ್ತಿ ಆಗಿತ್ತು. ಜಯಂತಿ ಮಾಡಬೇಕಿದ್ದ ದುರ್ಗಾ ಪಾತ್ರ ಮಂಜುಳಾ ಪಾಲಾಗಿತ್ತು. ಆಕೆ ಕೂಡ ಪಾತ್ರಕ್ಕೆ ನ್ಯಾಯ ಒದಗಿಸಿ ಗೆದ್ದಿದ್ದರು. ನಾಟಕ ಆಧರಿಸಿ ಚಿ. ಉದಯಶಂಕರ್ ಚಿತ್ರಕಥೆ, ಸಂಭಾಷಣೆ ರಚಿಸಿದ್ದರು. ಕನ್ನಡ ಸಿನಿರಸಿಕರ ಮನಗೆದ್ದ 'ಸಂಪತ್ತಿಗೆ ಸವಾಲ್' ಮುಂದೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ರೀಮೆಕ್ ಆಗಿತ್ತು.
ಸಂಪತ್ತಿನ ಅಹಂಕಾರದಿಂದ ಮೆರೆಯುವ 'ಸಾಹುಕಾರ' ಸಿದ್ದಪ್ಪ ಹಾಗೂ ಆತಮ ಮಗಳು ದುರ್ಗಾ. ದುರಂಹಕಾರದಿಂದ ಮೆರೆಯುವ ಇವರಿಬ್ಬರಿಗೂ ಸವಾಲ್ ಹಾಕುವ ವೀರಭದ್ರ. ಸಹೋದರ ವಿಶ್ವ, ಸಾಹುಕಾರನ ಬಳಿಯೇ ಸಾಲ ಮಾಡಿ ಮದುವೆ ಆಗಿ ತಗ್ಗಿಬಗ್ಗಿ ನಡೆಯುವವನು. ಆದರೆ ಹೆಜ್ಜೆ ಹೆಜ್ಜೆ ಸಾಹುಕಾರನಿಗೆ ಸಿಂಹಸ್ವಪ್ನವಾಗುವನು ವೀರಭದ್ರ. ಕೊನೆಗೆ ತನ್ನ ಅತ್ತಿಗೆ ಮೇಲೆ ಸಿದ್ದಪ್ಪನ ವಕ್ರದೃಷ್ಟಿ ಬಿದ್ದಾಗ ವೀರಭದ್ರ ಬುದ್ಧಿಕಲಿಸುತ್ತಾನೆ. ಮುಂದೆ ಏನಾಗುತ್ತದೆ ಎನ್ನುವುದು 'ಸಂಪತ್ತಿಗೆ ಸವಾಲ್' ಸಿನಿಮಾ ಕಥೆ.
50 ವರ್ಷಗಳ ಹಿಂದೆ 'ಸಂಪತ್ತಿಗೆ ಸವಾಲ್' ಚಿತ್ರದ ಅದ್ಭುತ ಯಶಸ್ಸು ಗಳಿಸಿತ್ತು. ರಾಜ್ಯದ ಮೂಲೆ ಮೂಲೆಯಲ್ಲಿ ಸಂಭ್ರಮಾಚರಣೆ ನಡೆಯಿತು. ಸಿನಿಮಾ ನೋಡಿದ್ದು ಮಾತ್ರವಲ್ಲ, ಜನ ಸಂಭ್ರಮಾಚರಣೆ ಕಾರ್ಯಕ್ರಮಗಳಿಗೂ ದೊಡ್ಡಮಟ್ಟದಲ್ಲಿ ಸೇರುತ್ತಿದ್ದರು. ಒಮ್ಮೆ ನಿರ್ಮಾಪಕರು "ರಾಜ್‌ಕುಮಾರ್ ಅವ್ರೇ, ಈ ಸಿನಿಮಾ ಅದ್ಭುತ ಪ್ರದರ್ಶನ ಕಂಡಿದೆ. ನನಗೆ ಬಹಳ ದುಡ್ಡು ಬಂದಿದೆ ಅಂದ್ಕೊಬೇಡಿ. ನಿಮಗೆ ಹೆಸರು ಬರಲಿ ಎಂದು ನಾನು ಈ ಸಂಭ್ರಮಾಚರಣೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇನೆ" ಎಂದಂತೆ.
ನಿರ್ಮಾಪಕರ ಮಾತು ಕೇಳಿ ಅಣ್ಣಾವ್ರಿಗೆ ಅಚ್ಚರಿ ಆಗಿತ್ತಂತೆ. ಅರೇ ಸಿನಿಮಾ ಈ ರೀತಿ ಪ್ರದರ್ಶನ ಕಂಡಿದೆ. ಜನರಿಂದ ಇಂತನ ಮನ್ನಣೆ ಸಿಗುತ್ತಿದೆ. ಆದರೆ ನಿರ್ಮಾಪಕರು ಈ ರೀತಿ ಹೇಳುತ್ತಿದ್ದಾರಲ್ಲ. 'ಸಂಪತ್ತಿಗೆ ಸವಾಲ್' ರೀತಿಯ ಹಿಟ್ ಸಿನಿಮಾಗಳ ಕಥೆಯೇ ಹೀಗಾದರೆ ಬೇರೆ ಸಿನಿಮಾಗಳ ಕಥೆಯೇನು? ಎಂದು ಪಾರ್ವತಮ್ಮ ಬಗ್ಗೆ ಚರ್ಚಿಸಿದ್ದರಂತೆ. ಇದನ್ನು ಕೇಳಿ ಬೇಸರಗೊಂಡ ಪಾರ್ವತಮ್ಮ ರಾಜ್ಯದ ಎಲ್ಲಾ ಚಿತ್ರಮಂದಿರಗಳಿಂದ 'ಸಂಪತ್ತಿಗೆ ಸವಾಲ್' ಕಲೆಕ್ಷನ್ ಲೆಕ್ಕ ತರಿಸಿದ್ದರಂತೆ. ಅದರಲ್ಲಿ ಚಿತ್ರದಿಂದ ಬಂದ ಲಾಭ ಎಷ್ಟು ಎನ್ನುವುದು ಗೊತ್ತಾಗಿತ್ತು.

ನಮ್ಮ ಸಿನಿಮಾಗಳಿಂದ ನಿರ್ಮಾಪಕರಿಗೆ ನಷ್ಟವಾಗುವುದು ಬೇಡ. ನಾವೇ ಸಿನಿಮಾ ನಿರ್ಮಿಸೋಣ, ಲಾಭ, ನಷ್ಟ ನಮಗೇ ಇರಲಿ ಎಂದು ಪಾರ್ವತಮ್ಮ ತೀರ್ಮಾನಿಸಿ ಸ್ವಂತ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದರು. ತಮ್ಮ ಬ್ಯಾನರ್‌ನಲ್ಲಿ 'ತ್ರಿಮೂರ್ತಿ' ಸಿನಿಮಾ ನಿರ್ಮಿಸಿದರು. ಅಲ್ಲಿಂದ ಮುಂದೆ ಅಣ್ಣಾವ್ರ ಬೇರೆ ಬ್ಯಾನರ್ ಸಿನಿಮಾಗಳಲ್ಲಿ ನಟಿಸೋದು ಕಡಿಮೆ ಆಯಿತು. ಒಂದರ್ಥದಲ್ಲಿ ಪಾರ್ವತಮ್ಮ ಸಿನಿಮಾ ನಿರ್ಮಾಣ ಆರಂಭಿಸಲು 'ಸಂಪತ್ತಿಗೆ ಸವಾಲ್' ಚಿತ್ರದಿಂದ ಆಗಿದ್ದ ಕಹಿ ಅನುಭವವೇ ಕಾರಣ ಅಂದ್ರು ತಪ್ಪಾಗಲ್ಲ.
'ಸಂಪತ್ತಿಗೆ ಸವಾಲ್' ಚಿತ್ರದ ಮತ್ತೊಂದು ವಿಶೇಷ ಅಂದ್ರೆ, 'ಯಾರೇ ಕೂಗಾಡಲಿ' ಹಾಡು. ರಂಗಭೂಮಿ ಹಿನ್ನೆಲೆಯಿಂದ ಬಂದ ಅಣ್ಣಾವ್ರು ಅದಾಗಲೇ ಒಂದಷ್ಟು ಸಿನಿಮಾಗಳಲ್ಲಿ ಹಾಡಿದ್ದರು. ಆದರೆ ಪಿ.ಬಿ ಶ್ರೀನಿವಾಸ್ ಹಾಗೂ ಡಾ. ರಾಜ್ ಕಾಂಬಿನೇಷನ್ ಹಾಡುಗಳು ಹಿಟ್ ಆಗುತ್ತಿತ್ತು. ಕಾರಣಾಂತರಗಳಿಂದ 'ಯಾರೇ ಕೂಗಾಗಲಿ' ಹಾಡನ್ನು ಅಣ್ಣಾವ್ರ ಹಾಡಿ ಗೆದ್ದರು. ಅಲ್ಲಿಂದ ಮುಂದೆ ಬಹುತೇಕ ತಮ್ಮ ಸಿನಿಮಾಗಳ ಹಾಡುಗಳನ್ನು ತಾವೇ ಹಾಡಲು ಆರಂಭಿಸಿದರು.
ಡಾ. ರಾಜ್‌ಕುಮಾರ್ ಅವರನ್ನು ಬಹಳ ಮೆರೆಸುತ್ತಾರೆ. ಆದರೆ ನಾಡಿಗೆ, ಚಿತ್ರರಂಗಕ್ಕೆ ಅವರ ಕೊಡುಗೆ ಏನು? ಎಂದು ಕೆಲವರು ಆಕೆ ಪ್ರಶ್ನಿಸುತ್ತಿದ್ದರಂತೆ. ಅಂತಹವರಿಗೆ ತಿರಗೇಟು ನೀಡಲು ಕಟ್ಟಿದ ಹಾಡು ಇದು. ಅದನ್ನು ಪಿ. ಬಿ ಶ್ರೀನಿವಾಸ್ ಹಾಡಿದರೆ ಸರಿ ಇರುವುದಿಲ್ಲ ಎಂದು ಉದ್ದೇಶಪೂರ್ವಕವಾಗಿಯೇ ಅಣ್ಣಾವ್ರಿಂದ ಹಾಡಿಸಿದ್ದರಂತೆ. ಈ ವಿಚಾರವನ್ನು ಡಾ. ರಾಜ್‌ಗೆ ಆಪ್ತರಾಗಿದ್ದ ಪ್ರಕಾಶ್ ರಾಜ್ ಮೇಹು ತಮ್ಮ 'ಅಂತರಂಗದ ಅಣ್ಣ' ಪುಸ್ತಕದಲ್ಲಿ ದಾಖಲಿಸಿದ್ದಾರೆ. ಹಾಗಂತ ಹಾಡಿನಲ್ಲಿ ತಮ್ಮನ್ನು ತಾವು ಇಂದ್ರ, ಚಂದ್ರ, ದೇವೇಂದ್ರ ಎಂದು ಅಣ್ಣಾವ್ರು ಕೊಚ್ಚಿಕೊಳ್ಳಲಿಲ್ಲ.


Click it and Unblock the Notifications










