18 ವರ್ಷಗಳ ಹಿಂದೆ ಸಂತುನ ಅವರದ್ದೇ ಕಾಲೇಜಿನಲ್ಲಿ ಹೀರೊ ಮಾಡಿಬಿಟ್ಟಿದ್ರು ಅಪ್ಪು!
ನಟ ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ದೂರಾಗಿದ್ದರೂ ತಮ್ಮ ಸಿನಿಮಾಗಳು ಹಾಗೂ ನೆನಪುಗಳ ಮೂಲಕ ಅಭಿಮಾನಿಗಳು ಹಾಗೂ ಆಪ್ತರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅಪ್ಪು ಸರಳ ಸಜ್ಜನ ವ್ಯಕ್ತಿತ್ವದ ಬಗ್ಗೆ ಎಷ್ಟು ಹೇಳಿದರೂ ಕಮ್ಮಿನೇ. ಪಿಆರ್‌ಕೆ ಸ್ಟಾರ್ ಫ್ಯಾನ್‌ಡಮ್ ಆಪ್ ಮೂಲಕ ಪುನೀತ್ ಅವರನ್ನು ಸಂಭ್ರಮಿಸುವ ಕೆಲಸ ಮುಂದುವರೆದಿದೆ.
ಪಿಆರ್‌ಕೆ ಆಪ್‌ನಲ್ಲಿ 'ನಾ ಕಂಡ ಅಪ್ಪು' ಪಾಡ್‌ಕಾಸ್ಟ್‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಯೋಗರಾಜ್ ಭಟ್ ಸೇರಿ ಹಲವರು ಮಾತನಾಡಿದ್ದಾರೆ. ಇದೀಗ ನಿರ್ದೇಶಕ ಸಂತೋಷ್ ಆನಂದ್‌ರಾಮ್ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. 17 ವರ್ಷಗಳ ಹಿಂದೆ ತಾವು ಕಾಲೇಜಿನಲ್ಲಿ ಇದ್ದಾಗಲೇ ಅಪ್ಪು ಅವರನ್ನು ಭೇಟಿ ಮಾಡಿದ್ದರ ಬಗ್ಗೆ ನೆನಪಿಸಿಕೊಂಡಿದ್ದಾರೆ. ಪುನೀತ್ ಸಹಾಯಗುಣವನ್ನು ಕೊಂಡಾಡಿದ್ದಾರೆ.

2014ರಲ್ಲಿ 'ಗಜಕೇಸರಿ' ಚಿತ್ರದ ಮೂಲಕ ಸಂತೋಷ್ ಆನಂದ್ ರಾಮ್ ಚಿತ್ರರಂಗಕ್ಕೆ ಬಂದಿದ್ದರು. ಬಳಿಕ 'ಮಿ. & ಮಿ. ರಾಮಾಚಾರಿ' ಸಿನಿಮಾ ನಿರ್ದೇಶಿಸಿ ಗೆದ್ದಿದ್ದರು. ಬಳಿಕ ಸೂಪರ್ ಹಿಟ್ 'ರಾಜಕುಮಾರ' ಚಿತ್ರಕ್ಕೆ ಅಪ್ಪು ಜೊತೆ ಕೈಜೋಡಿಸಿದ್ದರು. ಮುಂದೆ 'ಯುವರತ್ನ' ಚಿತ್ರದಲ್ಲಿ ಮತ್ತೊಮ್ಮೆ ಅವರನ್ನು ನಿರ್ದೇಶಿಸುವ ಅವಕಾಶ ಪಡೆದಿದ್ದರು. ಆದರೆ ತಮ್ಮ ಕಾಲೇಜು ದಿನಗಳ ಸಮಯದಲ್ಲೇ ಕಾರ್ಯಕ್ರಮವೊಂದಕ್ಕೆ ಅಪ್ಪು ಅವರನ್ನು ಆಹ್ವಾನಿಸಿ ಸಂತೋಷ್ ಕಾಲೇಜಿನಲ್ಲಿ ಹೀರೊ ಆಗಿಬಿಟ್ಟಿದ್ದರು. ಈ ವಿಚಾರವನ್ನು ಮೆಲುಕು ಹಾಕಿದ್ದಾರೆ.
"ಯುವರತ್ನ ಸಿನಿಮಾ ಟೈಮಲ್ಲಿ ಚಿತ್ರೀಕರಣದ ನಡೆದ ಕಾಲೇಜುಗಳಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 2 ಲಕ್ಷ, 5 ಲಕ್ಷ ಹಣ ಜಮೆ ಮಾಡಿದ್ರು. ಕಂಪ್ಯೂಟರ್‌ಗಳನ್ನು ಕೊಡಿಸಿದ್ರು. ನಾನು ಕೇಳಿದಾಗ ನಾನು ಓದಿಲ್ಲ ಅಲ್ವಾ? ಸಂತೋಷ್, ಓದಿನ ಬೆಲೆ ನಂಗೆ ಗೊತ್ತು. ಎಲ್ಲರೂ ಓದಬೇಕು. ಗಮನ ಸೆಳೆಯಬೇಕು ಎನ್ನುವ ಕಾಲದಲ್ಲಿ ಯಾರು ಇದನ್ನೆಲ್ಲಾ ಗಮನಿಸೋದು ಬೇಡ ಎಂದುಕೊಂಡಿದ್ದ ಮಹಾನ್ ವ್ಯಕ್ತಿ. ದಾನಕ್ಕೆ ಧರ್ಮಕ್ಕೆ ಸರಳತೆಗೆ ಸೌಜನ್ಯಕ್ಕೆ ಸಂಸ್ಕಾರಕ್ಕೆ ಒಂದು ಮುಖ ಅಂದ್ರೆ ಪುನೀತ್ ರಾಜ್‌ಕುಮಾರ್" ಎಂದು ಸಂತೋಷ್ ಆನಂದ್‌ರಾಮ್ ಹೇಳಿದ್ದಾರೆ.
ಇನ್ನು ತಮ್ಮ ಕಾಲೇಜು ದಿನಗಳ ಘಟನೆಯನ್ನು ಸಂತು ಮೆಲುಕು ಹಾಕಿದ್ದಾರೆ. "2007ರಲ್ಲಿ ನಾನು ಶೇಷಾದ್ರಿಪುರಂ ಕಾಂಪೋಸಿಟ್ ಕಾಲೇಜಿನಲ್ಲಿ ಓದಿದ್ದು. ಕಾಲೇಜ್ ಫೆಸ್ಟ್‌ಗೆ ಯಾರನ್ನು ಗೆಸ್ಟ್ ಆಗಿ ಕರೆಸೋದು ಎನ್ನುವ ಚರ್ಚೆ ನಡೀತಿತ್ತು. ನಾನು ಪುನೀತ್ ರಾಜ್‌ಕುಮಾರ್ ಅವರನ್ನು ಕರೆಸ್ತೀನಿ ಎಂದುಬಿಟ್ಟೆ. ಎಲ್ಲರೂ ಹೇಗೆ ಸಾಧ್ಯ ಅಂದ್ರು. ನನಗೂ ಗೊತ್ತಿಲ್ಲ ಹೆಂಗೆ ಅಂತ. ಜೋಶ್ ಅಲ್ಲಿ ಹೇಳಿಬಿಟ್ಟೆ. ಬಳಿಕ ವಜ್ರೇಶ್ವರಿ ಆಫೀಸ್‌ಗೆ ಹೋಗಿ ರಾಘಣ್ಣ ಬಳಿ ಮಾತನಾಡಿದ್ದೆವು. ಬಳಿಕ ಅಪ್ಪು ಅವರನ್ನು ಭೇಟಿ ಮಾಡಿ ಕಾಲೇಜ್ ಫೆಸ್ಟ್ ಬಗ್ಗೆ ಹೇಳಿ ಒಪ್ಪಿಸಿದ್ದೆವು. ಅವ್ರು ಬರೋಕೆ ಒಪ್ಪಿದ್ರು" ಎಂದು ಸಂತೋಷ್ ನೆನಪಿಸಿಕೊಂಡಿದ್ದಾರೆ.
ಕಾಲೇಜ್ ಫೆಸ್ಟ್ ದಿನ ನಾನು ಹಾಗೂ ನನ್ನ ಫ್ರೆಂಡ್ಸ್ ಇಬ್ರು ಪುನೀತ್ ಸರ್ ಮನೆಗೆ ಹೋಗಿದ್ದೆವು. ಆಗ ಇನ್ನು ಹಳೇ ಮನೆಯಲ್ಲಿದ್ರು ಎಂದು ಆ ದಿನ ನಡೆದಿದ್ದನ್ನು ಬಿಚ್ಚಿಟ್ಟಿದ್ದಾರೆ. "ಕರೆದ್ರು ಕೂರಿಸಿ ತಿಂಡಿ ಬೇಡ ಎಂದರೂ ಕೇಳದೇ ಜೂಸ್ ಕೊಟ್ಟಿದ್ರು. ಬಳಿಕ ಅವರದ್ದೇ ಕಾರಿನಲ್ಲಿ ನನ್ನನ್ನು ಕರೆದುಕೊಂಡು ಹೊರಟರು. ಅವ್ರ ಕಾರ್ ಕೂಡ ನನಗೆ ನನಪಿದೆ. ಆಗ ಹುಂಡೂ ಟೂಸಾನ್ ಇತ್ತು. ಮನೆಯಿಂದ ಬಂದು ನನ್ನ ಫೆಸ್ಟ್ ಅಟೆಂಡ್ ಮಾಡಿದ್ರು. ಅಲ್ಲಿಯವರೆಗೂ ಯಾರೂ ನಮ್ಮ ಕಾಲೇಜಿನಲ್ಲಿ ನಂಬಿರಲಿಲ್ಲ, ಪುನೀತ್ ರಾಜ್‌ಕುಮಾರ್ ಬರ್ತಾರೆ ಅಂತ. ನನ್ನ ಬಳಿ ಒಂದು ಫೋಟೊ ಕೂಡ ಇದೆ" ಎಂದು ಸಂತೋಷ್ ಆನಂದ್‌ರಾಮ್ ವಿವರಿಸಿದ್ದಾರೆ.
ಒಮ್ಮೆ ಲಿಫ್ಟ್‌ನಲ್ಲಿ ಬರುವಾಗ ಅಜ್ಜಿ ಒಬ್ರು ಸಿಕ್ಕಿದ್ರು.. ಪುನೀತ್ ರಾಜ್‌ಕುಮಾರ್ ಅವರನ್ನು ಚೆನ್ನಾಗಿ ನೋಡಿಕೋ ಎಂದು ಹೇಳಿದ್ದರು. ಅದನ್ನು ಮರೆಯೋಕೆ ಸಾಧ್ಯವಿಲ್ಲ ಎಂದು ಸಂತೋಷ್ ಹೇಳಿದ್ದಾರೆ.


Click it and Unblock the Notifications











