Rajinikanth: ಬಿಟಿಎಸ್ ಬಸ್ ಕಂಡೆಕ್ಟರ್ ಆಗಿ ತಲೈವಾ ಪಡೆದ ಮೊದಲ ಸಂಬಳ ಎಷ್ಟು? ಸಹೋದರ ಸತ್ಯ ನಾರಾಯಣ ಹೇಳಿದ್ದೇನು?
ಬೆಂಗಳೂರಿನಲ್ಲಿ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದ ಶಿವಾಜಿರಾವ್ ಗಾಯಕ್‌ವಾಡ್ ಮುಂದೆ ಸೂಪರ್ ಸ್ಟಾರ್ ಆಗಿದ್ದು ಗೊತ್ತೇಯಿದೆ. ಇತ್ತೀಚೆಗಷ್ಟೆ ತಲೈವಾ ಬೆಂಗಳೂರಿಗೆ ಸರ್‌ಪ್ರೈಸ್ ಎಂಟ್ರಿ ಕೊಟ್ಟು ಜಯನಗರ, ಚಾಮರಾಜಪೇಟೆ, ಗಾಂಧಿ ಬಜಾರ್‌ನಲ್ಲಿ ಸುತ್ತಾಡಿದ್ದರು. ತಮ್ಮ ಹಳೇ ದಿನಗಳನ್ನು ಮೆಲುಕು ಹಾಕಿದ್ದರು. ಜಯನಗರ ಬಸ್ ಡಿಪೋ-4ಕ್ಕೆ ಭೇಟಿ ಕೊಟ್ಟು ಅಲ್ಲಿನ ಸಿಬ್ಬಂದಿ ಜೊತೆ ಮಾತನಾಡಿ ಫೋಟೊ ಕ್ಲಿಕ್ಕಿಸಿಕೊಂಡಿದ್ದರು.
ರಜನಿಕಾಂತ್ ಆಗಿಂದಾಗ್ಗೆ ಬೆಂಗಳೂರಿಗೆ ಭೇಟಿ ಕೊಡುತ್ತಿರುತ್ತಿರುತ್ತಾರೆ. ತಲೈವಾ ಸಹೋದರ ಸತ್ಯನಾರಾಯಣ ಬೆಂಗಳೂರಿನ ಶೇಷಾದ್ರಿಪುರಂ ಬಳಿ ನೆಲೆಸಿದ್ದಾರೆ. ಅಣ್ಣನ ಮನೆಗೆ ರಜನಿಕಾಂತ್ ಬರುತ್ತಿರುತ್ತಾರೆ. ಇನ್ನು ಮಾರುವೇಷದಲ್ಲಿ ಬೆಂಗಳೂರಿನಲ್ಲಿ ಸುತ್ತಾಡುವುದು ಇದೆ. ಆದರೆ ಮೊದಲ ಬಾರಿ ವೇಷ ಮರೆಸಿಕೊಳ್ಳದೇ ತಲೈವಾ ಬೆಂಗಳೂರಿನಲ್ಲಿ ಸುತ್ತಾಡಿದ್ದರು. ದೇವನಹಳ್ಳಿಗೆ ಖಾಸಗಿ ಕಾರ್ಯಕ್ರಮ ನಿಮಿತ್ತ ಬಂದಿದ್ದ ರಜನಿಕಾಂತ್ ನಂತರ ಬೆಂಗಳೂರಿಗೆ ಬಂದಿದ್ದರು. ಸ್ನೇಹಿತ ರಾಜ್ ಬಹದ್ದೂರ್ ಜೊತೆ ಮೊದಲ ರಾಘವೇಂದ್ರ ಮಠಕ್ಕೆ ಹೋಗಿ ಪೂಜೆ ಸಲ್ಲಿಸಿದ್ದರು.

ಮಯ್ಯಸ್ ಹೋಟೆಲ್‌ನಲ್ಲಿ ಕಾಫಿ ಕುಡಿದು ಬಳಿಕ ಜಯನಗರ ಬಸ್ ಡಿಪೋಗೆ ಹೋಗಿದ್ದರು. ಹಳೇ ರಾಜ್ ಬಹದ್ಧೂರ್ ಬಳಿ ತಮ್ಮ ಹಳೇ ಸ್ನೇಹಿತರನ್ನು ಭೇಟಿ ಮಾಡುವ ಆಸೆ ವ್ಯಕ್ತ ಪಡಿಸಿದ್ದರು. ನಾನು ಮೊದಲು ಕೆಲಸ ಮಾಡಿ ಈ ಬಸ್ ಡಿಪೋಗೆ ಬರುತ್ತಿರುವುದು ಬಹಳ ಖುಷಿಯಾಗುತ್ತಿದೆ ಎಂದು ಹೇಳಿದ್ದಾಗಿ ರಾಜ್ ಬಹದ್ಧೂರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. 'ಬಾಷಾ' ಬಳಿಕ ಆಮಟ್ಟಿಗೆ 'ಜೈಲರ್' ಸಿನಿಮಾ ಸಕ್ಸಸ್ ಕಂಡಿರುವ ಖುಷಿಯನ್ನು ಕೂಡ ಸೂಪರ್ ಸ್ಟಾರ್ ಹಂಚಿಕೊಂಡಿದ್ದರು. ಸೆಪ್ಟೆಂಬರ್ 18ಕ್ಕೆ ಹೊಸ ಸಿನಿಮಾ ಆರಂಭಿಸುವುದಾಗಿ ಹೇಳಿದ್ದಾರೆ.
ಅಂದಹಾಗೆ ರಜನಿಕಾಂತ್ 2 ವರ್ಷಗಳ ಕಾಲ ಬಸ್ ಕಂಡೆಕ್ಟರ್ ಆಗಿ ಕೆಲಸ ಮಾಡಿದ್ದರು. ಮಾರ್ಕೆಟ್‌ನಿಂದ ಶ್ರೀನಗರದ ನಡುವೆ ಓಡಾಡುತ್ತಿದ್ದ 10A ಸಂಖ್ಯೆಯ ಬಸ್‌ನಲ್ಲಿ ಟಿಕೆಟ್ ಹರಿಯುತ್ತಿದ್ದರು. ಚಿಕ್ಕಂದಿನಿಂದಲೂ ವಿಭಿನ್ನ ಸ್ಟೈಲ್ ರೂಢಿಸಿಕೊಂಡಿದ್ದ ಶಿವಾಜಿ ಕಂಡೆಕ್ಟರ್ ಆಗಿದ್ದಾಗಲೂ ತಮ್ಮ ಸ್ಟೈಲ್‌ನಿಂದ ಪ್ರಯಾಣಿಕರ ಗಮನ ಸೆಳೆಯುತ್ತಿದ್ದರು. ಕೆಲಸದ ಅವಧಿ ಮುಗಿದ ಬಳಿಕ ಸ್ನೇಹಿತರ ಜೊತೆ ಸುತ್ತಾಟ, ನಾಟಕ ಕಲಿಕೆ ಹೀಗೆ ಜೀವನ ಸಾಗುತ್ತಿತ್ತು. ರಾಜ್ಯೋತ್ಸವ ಸಂದರ್ಭದಲ್ಲಿ ಆಯೋಜಿಸಿದ್ದ 'ಕುರುಕ್ಷೇತ್ರ' ನಾಟಕದಲ್ಲಿ ದುರ್ಯೋಧನನ ಪಾತ್ರ ಮಾಡಿ ರಜನಿಕಾಂತ್ ಚಪ್ಪಾಳೆ ಗಿಟ್ಟಿಸಿದ್ದರು.

ಸ್ನೇಹಿತ ರಾಜ್ ಬಹದ್ದೂರ್‌ಗೆ ನಟನಾಗುವ ಆಸೆ ಇತ್ತು. ಆತ ನಾಟಕಗಳಲ್ಲಿ ನಟಿಸುತ್ತಿದ್ದ. ನಾಟಕ ಅಭ್ಯಾಸದ ಜಾಗಕ್ಕೆ ನನ್ನು ಕರೆದುಕೊಂಡು ಹೋಗುತ್ತಿದ್ದ. ಒಮ್ಮೆ ನಾಟಕ ಮೇಷ್ಟ್ರು ಟೋಪಿ ಮುನಿಯಪ್ಪ ನನಗೆ ಜರಾಸಂಧನ ಪಾತ್ರ ಮಾಡಲು ಹೇಳಿದ್ದರು. ನಾನು ಮಾಡುತ್ತಿದ್ದೆ. ಆದರೆ ನಾಟಕಕ್ಕೆ 3 ದಿನ ಬಾಕಿ ಇರುವಾಗ ನಾನೇ ದುರ್ಯೋಧನ ಪಾತ್ರ ಸಂದಿಗ್ಧತೆ ಉಂಟಾಯಿತು. ನಾನು ಅದನ್ನು ಸವಾಲಾಗಿ ಸ್ವೀಕರಿಸಿ ಮಾಡಿದೆ. ನನ್ನ ಅಭಿನಯವನ್ನು ಎಲ್ಲರೂ ಕೊಂಡಾಡಿದರು. ಆ ಬಳಿಕ ಸ್ನೇಹಿತ ರಾಜ್ ಬಹದ್ದೂರ್ ಹಾಗೂ ಅಣ್ಣ ಸತ್ಯ ನಾರಾಯಣ ಆಸೆಯಂತೆ ಚೆನ್ನೈ ಫಿಲ್ಮ್ ಇನ್ಸ್ಟಿಟ್ಯೂಟ್ ಸೇರಿದೆ ಎಂದು ಇತ್ತೀಚೆಗೆ 'ಜೈಲರ್' ಸಿನಿಮಾ ಆಡಿಯೋ ಲಾಂಚ್ ವೇದಿಕೆಯಲ್ಲೂ ಸೂಪರ್ ಸ್ಟಾರ್ ವಿವರಿಸಿದ್ದರು.
ರಜನಿಕಾಂತ್ ಬಸ್ ಕಂಡೆಕ್ಟರ್ ಆಗಿದ್ದ ದಿನಗಳಲ್ಲೇ ಸಿಗರೇಟ್, ಮದ್ಯದ ಚಟ ಶುರುವಾಗಿತ್ತು. ಇನ್ನು ಕಂಡೆಕ್ಟರ್ ಆಗಿ ರಜನಿಕಾಂತ್ ಪಡೆದ ಮೊದಲ ಸಂಬಳ 700 ರೂಪಾಯಿ. ಈ ವಿಚಾರವನ್ನು ಸ್ವತಃ ತಲೈವಾ ಸಹೋದರ ಸತ್ಯ ನಾರಾಯಣ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ. ಆ ಹಣವನ್ನು ಸಂಪೂರ್ಣವಾಗಿ ಶಿವಾಜಿ ತಂದು ಮನೆಗೆ ಕೊಟ್ಟುಬಿಡುತ್ತಿದ್ದ ಎಂದು ನೆನಪಿಸಿಕೊಂಡಿದ್ದಾರೆ.
ರಜನಿಕಾಂತ್ ಈಗ ಚಿತ್ರವೊಂದಕ್ಕೆ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಾರೆ. ಆದರೆ ಹಳೆಯದನ್ನು ಇನ್ನು ಮರೆತ್ತಿಲ್ಲ. ಸರಳ, ಸಜ್ಜನಿಕೆ ಬಿಟ್ಟಿಲ್ಲ. ಸಾಕಷ್ಟು ಬಾರಿ ತಮ್ಮ ಸಿನಿಮಾಗಳಿಂದ ನಿರ್ಮಾಪಕರು, ವಿತರಕರು ನಷ್ಟ ಅನುಭವಿಸಿದ್ದಾಗ ಅದನ್ನು ಭರಿಸಿಕೊಟ್ಟಿದ್ದಾರೆ. ಜೈಲರ್ ಸಿನಿಮಾ ಸಕ್ಸಸ್ ಬೆನ್ನಲ್ಲೇ ತಲೈವಾಗೆ ಮತ್ತೊಂದು ಚೆಕ್ ಸಿಕ್ಕಿದೆ. ಲಾಭದಲ್ಲಿ ತಲೈವಾಗೆ ಪಾಲು ಕೊಟ್ಟಿರುವ ಬಗ್ಗೆ ಚರ್ಚೆ ಆಗುತ್ತಿದೆ. ಇನ್ನು ಬಿಎಂಡಬ್ಲ್ಯೂ ಕಾರ್ ಕೂಡ ಗಿಫ್ಟ್ ಆಗಿ ನಿರ್ಮಾಪಕರು ಕೊಟ್ಟಿದ್ದಾರೆ.


Click it and Unblock the Notifications











