ಬಾಲನಟರಾಗಿ ಶಿವಣ್ಣ- ಕ್ರೇಜಿಸ್ಟಾರ್ ಒಂದೇ ಫ್ರೇಮ್‌ನಲ್ಲಿ ಮಿಂಚಿದ್ದ ಸಿನಿಮಾ ಯಾವ್ದು?
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಚಿತ್ರರಂಗದ ಜನಪ್ರಿಯ ಕಲಾವಿದರು. ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಇಬ್ಬರೂ ಚಿತ್ರರಂಗದಲ್ಲಿ ಸಕ್ಸಸ್ ಕಂಡವರು. ಸಿನಿಮಾ ಹಿನ್ನೆಲೆ ಇದ್ದಿದ್ದರಿಂದ ಇಬ್ಬರೂ ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ. ಆದರೆ ಬಳಿಕ ತಮ್ಮದೇ ಪರಿಶ್ರಮದಿಂದ ಗೆದ್ದು ಬೀಗಿದ್ದನ್ನು ಮರೆಯುವಂತಿಲ್ಲ.
ಹೀರೋ ಆಗಿ ಬೆಳ್ಳಿ ಪರದೆ ಅಲಂಕರಿಸುವ ಮುನ್ನ ಶಿವಣ್ಣ ಹಾಗೂ ರವಿಮಾಮ ಬಾಲನಟರಾಗಿ ಮಿಂಚಿದ್ದೂ ಇದೆ. ಆದರೆ ಬಾಲ್ಯದಲ್ಲಿ ಅಂತಹ ದೊಡ್ಡ ಪಾತ್ರಗಳಲ್ಲಿ ನಟಿಸಲಿಲ್ಲ. 'ಕದೀಮ ಕಳ್ಳರು' ಚಿತ್ರದ ನೆಗೆಟಿವ್ ರೋಲ್‌ನಲ್ಲಿ ರವಿಚಂದ್ರನ್ ಮೊದಲ ಬಾರಿಗೆ ಗಮನ ಸೆಳೆದಿದ್ದರು. 'ಚಕ್ರವ್ಯೂಹ' ಚಿತ್ರದ ಅತಿಥಿ ಪಾತ್ರದಲ್ಲಿ ಮಿಂಚಿದ್ದರು. 'ನಾನೇ ರಾಜ' ಹೀರೊ ಆಗಿ ಕ್ರೇಜಿಸ್ಟಾರ್ ಮೊದಲ ಸಿನಿಮಾ. ಆ ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಕೊನೆಗೆ 'ಪ್ರೇಮಲೋಕ' ಸಿನಿಮಾ ಮಾಡಿ ಭರ್ಜರಿ ಸಕ್ಸಸ್ ಕಂಡಿದ್ದರು.

'ಆನಂದ್' ಚಿತ್ರದಲ್ಲಿ ಹೀರೊ ಆಗಿ ಶಿವರಾಜ್‌ಕುಮಾರ್ ಕಮಾಲ್ ಮಾಡಿದ್ದಾರೆ. ಬ್ಯಾಕ್ ಟು ಬ್ಯಾಕ್ 3 ಹಿಟ್ ಕೊಟ್ಟು ಹ್ಯಾಟ್ರಿಕ್ ಹೀರೊ ಎಂಬ ಪಟ್ಟ ಅಲಂಕರಿಸಿದ್ದರು. ಬಳಿಕ 100ಕ್ಕೂ ಅಧಿಕ ಸಿನಿಮಾಗಳಲ್ಲಿ ಹೀರೊ ನಟಿಸಿ ನಟಿಸಿ ಶಿವಣ್ಣ ಗೆದ್ದಿದ್ದಾರೆ. ಇವತ್ತಿಗೂ ಬಹುಬೇಡಿಕೆಯ ನಟನಾಗಿ ಗುರ್ತಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ಶಿವಣ್ಣ ನಟನೆಯ ಆರೇಳು ಸಿನಿಮಾಗಳು ಘೋಷಣೆಯಾಗಿದೆ. ಸದ್ಯ ಏಳೆಂಟು ಸಿನಿಮಾಗಳು ಅವರ ಕೈಯಲ್ಲಿದೆ.
ಪುನೀತ್ ರಾಜ್‌ಕುಮಾರ್ ಬಾಲನಟನಾಗಿಯೇ ಹೆಚ್ಚು ಮೋಡಿ ಮಾಡಿದ್ದರು. ಅಣ್ಣಾವ್ರ ಮಕ್ಕಳು, ಮೊಮ್ಮಕ್ಕಳಲ್ಲಿ ಬಹುತೇಕರು ಬಾಲಕಲಾವಿದರಾಗಿಯೇ ತೆರೆಮೇಲೆ ಮಿಂಚಿದ್ದರು. ವಿನಯ್, ಯುವ ರಾಜ್‌ಕುಮಾರ್ ಕೂಡ 'ಓಂ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ರಾಘಣ್ಣ ಕೂಡ 'ಶ್ರೀನಿವಾಸ ಕಲ್ಯಾಣ' ಹಾಗೂ 'ದಾರಿತಪ್ಪಿದ ಮಗ' ಚಿತ್ರದಲ್ಲಿ ಕ್ಯಾಮರಾ ಮುಂದೆ ಬಂದಿದ್ದರು. ಅಣ್ಣಾವ್ರ ಮನೆಯೇ ಸಿನಿಮಾ ಶಾಲೆ ಆಗಿತ್ತು. ಸಿನಿಮಾವನ್ನೇ ಆ ಕುಟುಂಬ ನೆಚ್ಚಿಕೊಂಡಿತ್ತು. ಮನೆ ಮಂದಿ ಸಿನಿಮಾ ಸೆಟ್‌ನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರು. ಹೀಗೆ ಹೋದಾಗ ಮಕ್ಕಳು ಚಿತ್ರದ ಸಣ್ಣ ಸಣ್ಣ ಪಾತ್ರಗಳಲ್ಲಿ ಮಿಂಚಿದ್ದು ಉಂಟು.
ರವಿಚಂದ್ರನ್ ತಂದೆ ಎನ್. ವೀರಾಸ್ವಾಮಿ ಖ್ಯಾತ ನಿರ್ಮಾಪಕರು. ಹಾಗಾಗಿ ರವಿಚಂದ್ರನ್ ಅವರಿಗೂ ಸಿನಿಮಾ ನಂಟು ಚಿಕ್ಕಂದಿನಿಂದಲೇ ಶುರುವಾಗಿತ್ತು. ಅಣ್ಣಾವ್ರ ಸಿನಿಮಾಗಳನ್ನು ನಿರ್ಮಿಸಿದ್ದು ಮಾತ್ರವಲ್ಲ, ಸಾಕಷ್ಟು ಸಿನಿಮಾಗಳಿಗೆ ಫೈನಾನ್ಸ್ ಮಾಡಿದ್ದರು. ಹಾಗಾಗಿ ಎರಡೂ ಕುಟುಂಬಗಳ ನಡುವೆ ಆತ್ಮೀಯ ಒಡನಾಟ ಇತ್ತು. ಶಿವಣ್ಣ ಹಾಗೂ ರವಿಚಂದ್ರನ್ ಒಂದೇ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ್ದರು ಎನ್ನುವುದು ಸಾಕಷ್ಟು ಜನರಿಗೆ ಗೊತ್ತಿಲ್ಲ.
ಡಾ. ರಾಜ್‌ಕುಮಾರ್ ನಟನೆಯ 'ಧೂಮಕೇತು' ಚಿತ್ರದಲ್ಲಿ ಬಾಲಕ ರವಿಚಂದ್ರನ್ ಸಣ್ಣ ದೃಶ್ಯದಲ್ಲಿ ಮಿಂಚಿದ್ದರು. ಇದು ಸಾಕಷ್ಟು ಜನರಿಗೆ ಗೊತ್ತಿದೆ. ಆದರೆ ಅದೇ ದೃಶ್ಯದಲ್ಲಿ ಬಾಲಕರಾಗಿದ್ದ ಶಿವರಾಜ್‌ಕುಮಾರ್ ಕೂಡ ಇದ್ದರು ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. 1968ರಲ್ಲಿ ಬಂದಿದ್ದ 'ಧೂಮಕೇತು' ಚಿತ್ರಕ್ಕೆ ಆರ್. ಎನ್ ಜಯಗೋಪಾಲ್ ಆಕ್ಷನ್ ಕಟ್ ಹೇಳಿದ್ದರು. ಉದಯ್ ಕುಮಾರ್, ನರಸಿಂಹ ರಾಜು, ಕೆ.ಎಸ್ ಅಶ್ವಥ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿತ್ತು.
ಚಿತ್ರದ ಆರಂಭದಲ್ಲಿ ನಾಯಕ ಕುಮಾರ್ ಬಳಿ ಒಂದಷ್ಟು ಮಕ್ಕಳು ಬಂದು ಆಟೋಗ್ರಾಫ್ ಪಡೆಯಲು ಮುಂದಾಗುತ್ತಾರೆ. ಆ ಮಕ್ಕಳ ಗುಂಪಿನಲ್ಲಿ ಬಾಲಕರಾಗಿದ್ದ ರವಿಚಂದ್ರನ್ ಹಾಗೂ ಶಿವರಾಜ್‌ಕುಮಾರ್ ಕೂಡ ಇದ್ದರು. ಬಾಲಕ ರವಿಚಂದ್ರನ್ ನೋಡಿ ಅಣ್ಣಾವ್ರು ನಿನ್ನ ಹೆಸರು ಏನು ಎಂದು ಕೇಳಿದಾಗ ರವಿಕುಮಾರ್ ಎಂದು ಹೇಳುವುದನ್ನು ನೋಡಬಹುದು. ಆಗ ಪಕ್ಕದಲ್ಲೇ ಬಾಲಕರಾಗಿದ್ದ ಶಿವರಾಜ್‌ಕುಮಾರ್ ಅವರನ್ನು ನೋಡಬಹುದು. ಅವರಿಗೆ ಯಾವುದೇ ಡೈಲಾಗ್ ಇರಲಿಲ್ಲ.
ಡಾ. ರಾಜ್‌ಕುಮಾರ್ ಕೂಡ 'ಬೇಡರ ಕಣ್ಣಪ್ಪ' ಚಿತ್ರದಲ್ಲಿ ನಟಿಸುವ ಮುನ್ನ ಒಂದೆರಡು ಚಿತ್ರಗಳಲ್ಲಿ ಹೀಗೆ ಬಂದು ಹಾಗೆ ಹೋಗಿದ್ದರು. ಇನ್ನು ಶಿವಣ್ಣ- ರವಿಚಂದ್ರನ್ ಆತ್ಮೀಯ ಸ್ನೇಹಿತರು ಎನ್ನುವುದು ಗೊತ್ತೇಯಿದೆ. 'ಕೋದಂಡರಾಮ' ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾ ಕೂಡ ತಕ್ಕ ಮಟ್ಟಿಗೆ ಸದ್ದು ಮಾಡಿತ್ತು.


Click it and Unblock the Notifications











