"ಸಾಂಗ್, ಟ್ರೈಲರ್‌ನಲ್ಲಿ ಅಪ್ಪು ಫೋಟೊ ಹಾಕಿದ್ರೆ ಮಾತ್ರ ಗೌರವನಾ? ಹಾಗಿದ್ರೆ ಎಲ್ಲಾ ಸಿನ್ಮಾ ಗೆಲ್ಲಬೇಕಲ್ಲ": ಶಿವಣ್ಣ
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ 2 ವರ್ಷ ಕಳೀತು. ಆದರೆ ಅಭಿಮಾನಿಗಳ ಹೃದಯದಲ್ಲಿ ಅಪ್ಪು ಶಾಶ್ವತವಾಗಿ ನೆಲೆಸಿದ್ದಾರೆ. ಯುವರತ್ನನ ಅಗಲಿಕೆಯ ನೋವು ಇನ್ನು ಕರಗಿಲ್ಲ. ಸೋಶಿಯಲ್ ಮೀಡಿಯಾ, ಅಂಗಡಿಗಳ ನಾಮಫಲಕ, ಬ್ಯಾನರ್, ಫ್ಲೆಕ್ಸ್ ಹೀಗೆ ಪ್ರತಿದಿನ ಎಲ್ಲಾದರೂ ಅಪ್ಪು ಕಣ್ಮುಂದೆ ಕಾಣಿಸಿಕೊಳ್ಳುತ್ತಾರೆ.
ದೊಡ್ಮನೆ ಕಲಾವಿದರ ಸಿನಿಮಾಗಳು ಬಂದಾಗ ಪುನೀತ್ ಇರಬೇಕಿತ್ತು, ಪುನೀತ್ ಕೂಡ ಈ ಸಿನಿಮಾದಲ್ಲಿ ಶಿವಣ್ಣನ ಜೊತೆ, ವಿನಯ್, ಯುವ ಜೊತೆ ನಟಿಸಬೇಕಿತ್ತು ಎಂದು ಅಭಿಮಾನಿಗಳು ಅಂದುಕೊಳ್ಳುತ್ತಾರೆ. 'ಕರಟಕ ದಮನಕ' ಸಿನಿಮಾ ಸಾಂಗ್ಸ್, ಟ್ರೈಲರ್ ಬಂದಾಗಲೂ ಛೇ, ಅಪ್ಪು ಇರಬೇಕಿತ್ತು, ಈ ಚಿತ್ರದಲ್ಲಿ ನಟಿಸಬೇಕಿತ್ತು, ಅಥವಾ ಟೈಟಲ್ ಸಾಂಗ್ ಹಾಡಬೇಕಿತ್ತು ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದರು.

ಪುನೀತ್ ರಾಜ್‌ಕುಮಾರ್ ಮೇಲೆ ಅಭಿಮಾನಿಗಳ ಪ್ರೀತಿ ಬಗ್ಗೆ ಮತ್ತೊಮ್ಮೆ ಶಿವರಾಜ್‌ಕುಮಾರ್ ಮಾತನಾಡಿದ್ದಾರೆ. ಬರೀ ಸಿನಿಮಾದಲ್ಲಿ ಫೋಟೊ ಹಾಕಿದ ಮಾತ್ರಕ್ಕೆ ಪ್ರೀತಿ, ಅಭಿಮಾನ ಅಂತಲ್ಲ. ಅದು ಮನಸ್ಸಿನಲ್ಲಿ ಇರಬೇಕು ಎಂದು ಶಿವಣ್ಣ ಹೇಳಿದ್ದಾರೆ. ಜೀ ಕನ್ನಡ ನ್ಯೂಸ್ ವಾಹಿನಿ ಸಂದರ್ಶನದಲ್ಲಿ ಶಿವಣ್ಣ ಮಾತನಾಡಿರುವ ಮಾತುಗಳು ವೈರಲ್ ಆಗಿದೆ.
"ಯಾವುದೋ ಸಿನಿಮಾ ಟೀಸರ್, ಟ್ರೈಲರ್, ಸಾಂಗ್‌ನಲ್ಲಿ ಅಪ್ಪುನ ನೆನಪಿಸಿಕೊಂಡಿಲ್ಲ ಅನ್ನೋದಲ್ಲ ನೆನಪು. ಮನಸ್ಸಿಂದ ನೆನಪಿಸಿಕೊಳ್ಳಬೇಕು. ಫೋಟೊ ಹಾಕಿ ನೆನಪಿಸಿಕೊಂಡುಬಿಟ್ಟರೆ ಆಯ್ತಾ? ನೆನಪು ಮನಸ್ಸಿನಲ್ಲಿ ಇರಬೇಕು. ಎಲ್ಲರಲ್ಲಿ ಆ ಭಾವನೆ ಬರಬೇಕು. ಅಪ್ಪು ಫೋಟೊ ಹಾಕಿ ತೋರ್ಸಿ ಅಪ್ಪು ಇದ್ದಾರೆ, ಹೊರಟುಹೋದರು ಅನ್ನೋದಲ್ಲ. ಅಪ್ಪು ನಿಮ್ಮಲ್ಲಿ ಇದ್ದಾರೆ ಅನ್ನೋದು ಬರಬೇಕು. ಬರೀ ಫೋಟೊ ಹಾಕಿ ವೀ ಮಿಸ್ ಯೂ ಅಪ್ಪು, ವೀ ಲವ್ ಯು ಎನ್ನುವುದಲ್ಲ" ಎಂದು ಶಿವಣ್ಣ ಹೇಳಿದ್ದಾರೆ.
ಮಾತು ಮುಂದುವರೆಸಿರುವ ಸೆಂಚುರಿ ಸ್ಟಾರ್ "ಮನಪೂರ್ವಕವಾಗಿ ಅಪ್ಪು ಪ್ರೀತಿಸಬೇಕು. ಹೀಗೆ ಹೇಳ್ತೀನಿ ಅಂತ ಯಾರು ಬೇಸರ ಮಾಡಿಕೊಳ್ಳಬೇಡಿ. ಫೋಟೊ ಹಾಕಿದ ಮಾತ್ರಕ್ಕೆ ಅಪ್ಪು ಮೇಲೆ ಪ್ರೀತಿ ಅಂತ ಅಲ್ಲ. ಯಾವಾಗಿದ್ದರೂ ಅಪ್ಪು ಒಳಗೆ ಇರುತ್ತಾರೆ. ನಿಮ್ಮೊಳಗೆ ನಮ್ಮೊಳಗೆ ಇಡೀ ಇಂಡಸ್ಟ್ರಿಯಲ್ಲಿ ಇರುತ್ತಾರೆ" ಎಂದು ಶಿವಣ್ಣ ತಿಳಿಸಿದ್ದಾರೆ.

ಇದೇ ವೇಳೆ ಶಿವಣ್ಣ ಹೇಳಿದ ಮಾತನ್ನು ನಿರ್ದೇಶಕ ಯೋಗರಾಜ್ ಭಟ್ ನೆನಪಿಸಿಕೊಂಡಿದ್ದಾರೆ. "ಶಿವಣ್ಣ ಒಂದು ಮಾತು ಹೇಳಿದರು. ಯಾವುದೋ ಹಾಡು ಅಥವಾ ನಾಳೆ ಸಿನಿಮಾ ಬಂದಾಗ ಪ್ರತಿಯೊಬ್ಬ ಅಭಿಮಾನಿ ಮನಸ್ಸಿನಲ್ಲಿ ಅಪ್ಪು ಇರ್ತಾರೆ. ಅವರೆಲ್ಲರೂ ಈ ಹಾಡು ಕೇಳಿಕೊಳ್ತಾರೆ. ಸಿನಿಮಾ ನೋಡುತ್ತಾರೆ. ಹಾಗೆ ಎಲ್ಲರೂ ಅಪ್ಪುನ ಕನೆಕ್ಷನ್ ಮಾಡಿಕೊಳ್ತೀರಿ. ಅಪ್ಪು ಎಲ್ಲರನ್ನು, ಎಲ್ಲವನ್ನು ನೋಡ್ತಿದ್ದಾರೆ ಎಂದರು" ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಶಿವಣ್ಣ "ಫೋಟೊ ಹಾಕಿದ ಮಾತ್ರಕ್ಕೆ ಗೌರವ ಅಂತ ಅಲ್ಲ. ಹಾಗೆ ನೋಡಿದರೆ ಎಲ್ಲರ ಫೋಟೊ ಹಾಕಬೇಕು. ಅಪ್ಪಾಜಿ, ವಿಷ್ಣು ಸರ್, ಅಂಬರೀಶ್, ಶಂಕರ್ ನಾಗ್ ಹೀಗೆ ಎಲ್ಲರ ಫೋಟೊ ಹಾಕಬೇಕಾಗುತ್ತದೆ. ನೆನಪುಗಳು ಶಾಶ್ವತವೇ ಹೊರತು, ಫೋಟೊ ಫ್ರೇಮ್ ಇಟ್ಟು ಪ್ರೀತಿ ತೋರಿಸುವುದಲ್ಲ. ಎಲ್ಲಾ ಕಡೆ ಅಪ್ಪು ಫೋಟೊ ಹಾಕಬೇಕು ಎಂದು ಕಡ್ಡಾಯ ಮಾಡುವುದಲ್ಲ. ಹಾಗಿದ್ದರೆ ಎಲ್ಲಾ ಸಿನಿಮಾ ಗೆಲ್ಲಬೇಕಲ್ಲ. ನಾನು ಓಪನ್ ಆಗಿ ಹೇಳ್ತೀನಿ. ಅವ್ರು ಅಪ್ಪು ಫೋಟೋ ಪ್ರೀತಿಯಿಂದ ಹಾಕ್ತಾರಲ್ಲ, ಅವ್ರ ಸಿನಿಮಾ ನೋಡಿ ಗೆಲ್ಲಿಸಿ ನೋಡೋಣ" ಎಂದಿದ್ದಾರೆ.
ಈ ಹಿಂದೆ ಕೆಲ ಸಿನಿಮಾಗಳ ಸಾಂಗ್, ಟ್ರೈಲರ್ ಹಾಗೂ ಸಿನಿಮಾ ಕ್ರೆಡಿಟ್ ಕಾರ್ಡ್‌ನಲ್ಲಿ ಅಪ್ಪು ಫೋಟೊ ಹಾಕಲಿಲ್ಲ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪರ ವಿರೋಧ ಚರ್ಚೆ ಕೂಡ ನಡೆದಿತ್ತು.


Click it and Unblock the Notifications











