ಕಾವೇರಿ ಸಮಸ್ಯೆ ಬಗೆ ಹರಿಸಿಕೊಳ್ಳುವುದು ಹೇಗೆ ಎಂದು ತಮಿಳು ಸಂದರ್ಶನದಲ್ಲಿ ಶಿವಣ್ಣ ಮಾತು
ಇತ್ತೀಚೆಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನಟ ಶಿವರಾಜ್‌ಕುಮಾರ್‌ಗೆ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಟಿಕೆಟ್ ಆಫರ್ ನೀಡಿದ್ದರು. ಈ ಬಗ್ಗೆ ಶಿವಣ್ಣನ ಜೊತೆ ಮಾತನಾಡಿದ್ದೇನೆ, ಯಾವ ಕ್ಷೇತ್ರದಿಂದ ಸ್ಪರ್ಧಿಸಿದರೂ ಟಿಕೆಟ್ ಕೊಡುವುದಾಗಿ ಹೇಳಿದ್ದೇನೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಶಿವಣ್ಣ, ನಾನು ಎಂದಿಗೂ ರಾಜಕೀಯಕ್ಕೆ ಬರಲ್ಲ, ನಟನಾಗಿಯೇ ಇರುತ್ತೇನೆ ಎಂದು ಹೇಳಿದ್ದರು.
ತಮಿಳು ಸಂದರ್ಶನವೊಂದರಲ್ಲಿ ಮತ್ತೆ ಶಿವಣ್ಣ ರಾಜಕೀಯ ನಡೆ, ಕಾವೇರಿ ವಿವಾದದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಯಾಕೆ ತನಗೆ ಪಾಲಿಟಿಕ್ಸ್ ಬೇಡ ಎನ್ನುವುದನ್ನು ವಿವರಿಸಿದ್ದಾರೆ. ಡಾ. ರಾಜ್‌ಕುಮಾರ್ ಮನೆಯಲ್ಲಿ ಯಾರಾದರೂ ರಾಜಕೀಯರಂಗಕ್ಕೆ ಹೋಗಬೇಕು ಎಂದು ಬಯಸಲಿಲ್ಲವೇ ಎನ್ನುವ ಪ್ರಶ್ನೆಗೆ ಶಿವನ್ಣ ಉತ್ತರಿಸಿದ್ದಾರೆ. "ತಂದೆ ಯಾರಿಗೂ ಏನು ಹೇಳುತ್ತಿರಲಿಲ್ಲ. ಯಾರಿಗೆ ಏನು ಇಷ್ಟ ಇದೆಯೋ ಅದನ್ನು ಮಾಡಲು ಬಿಡುತ್ತಿದ್ದರು. 'ಓಂ' ಚಿತ್ರದಲ್ಲಿ ನಾನು ಸ್ಮೋಕ್ ಮಾಡಿದಾಗ ಅದರಲ್ಲಿ ಏನಿದೆ. ನಾನು ಮಾಡಿಲ್ಲ ಅಂತ ಅವನು ಮಾಡಬಾರದು ಅಂತಲ್ಲ" ಎಂದಿದ್ದರು.

"ತಂದೆ ಜೊತೆಗೆ ನಮ್ಮನ್ನು ಹೋಲಿಸುವುದು ತಪ್ಪು. ಭಾರತದ ಕೆಲವೇ ಅದ್ಭುತ ನಟರಲ್ಲಿ ಅಪ್ಪಾಜಿ ಒಬ್ಬರು. ರಾಜಕೀಯ ಹಿನ್ನೆಲೆ ಕುಟುಂಬದಿಂದಲೇ ಹುಡುಗಿಯನ್ನು ತಂದಿದ್ದೇವೆ(ಗೀತಾ ಶಿವರಾಜ್‌ಕುಮಾರ್) ಹಾಗಾಗಿ ರಾಜಕೀಯಕ್ಕೆ ಹೋಗಿದ್ದರೆ ಬೇಡ ಎನ್ನುತ್ತಿರಲಿಲ್ಲ. ಅದು ಬಿಟ್ಟು ರಾಜಕೀಯಕ್ಕೆ ವಿರೋಧವಿಲ್ಲ. ನಮ್ಮ ಪತ್ನಿ, ನಮ್ಮ ಮಾವ(ಮಾಜಿ ಸಿಎಂ ದಿವಂಗತ ಬಂಗಾರಪ್ಪ) ಕೂಡ ಯಾವತ್ತೂ ರಾಜಕೀಯಕ್ಕೆ ಬರುವಂತೆ ಕೇಳಿಲಿಲ್ಲ. ರಾಜಕೀಯ ಕಾರ್ಯಕ್ರಮಕ್ಕೆ ನನ್ನನ್ನು ಕರೆಯುತ್ತಿರಲಿಲ್ಲ. ಚಿತ್ರರಂಗದಲ್ಲಿರಲು ರಾಜಕೀಯದಿಂದ ದೂರ ಇರುವುದೇ ಉತ್ತಮ" ಎಂದಿದ್ದಾರೆ.
ಕಾವೇರಿ ವಿಚಾರದಲ್ಲಿ ತಮ್ಮ ನಡೆಯ ಬಗ್ಗೆಯೂ ಶಿವಣ್ಣ ಪ್ರತಿಕ್ರಿಯಿಸಿದ್ದಾರೆ. "ಪ್ರಕೃತಿಯನ್ನು ನಾವು ಮೊದಲು ಒಪ್ಪಿಕೊಳ್ಳಬೇಕು. 'ತವರಿನ ಸಿರಿ' ಚಿತ್ರದಲ್ಲಿ ಒಂದು ಹಾಡಿದೆ. ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ ಏನ್ ಚೆಂದವೋ' ಅಂತ. ಹಾಗೆ ಭೂಮಿ ಎಲ್ಲರ ಆಸ್ತಿ. ಅದು ನಮ್ಮದು ಎನ್ನುವುದು ಎಷ್ಟು ಸರಿ. ಮಳೆ ಬಂದರೆ ಯಾರೂ ತಡೆಯಲು ಸಾಧ್ಯವಿಲ್ಲ. ಮಳೆ ಬಂದಿಲ್ಲ ಅಂದ್ರೆ ಇರುವುದರಲ್ಲಿ ಎಷ್ಟು ಸಾಧ್ಯವೋ ಅಷ್ಟು ಅನುಸರಿಸಿಕೊಂಡು ಹೋಗಬೇಕು. ಆಗ ಸಮಸ್ಯೆ ಬಗೆಹರಿಯುತ್ತದೆ. ಇದನ್ನು ಯಾಕೆ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ" ಎಂದಿದ್ದಾರೆ.
ಡಾ. ರಾಜ್‌ಕುಮಾರ್ ಅಪಹರಣದ ವೇಳೆ ನೀವು ಪರಿಸ್ಥಿತಿ ನಿಭಾಯಿಸಿದ್ದು, ಇತ್ತೀಚೆಗೆ ಸಿದ್ದಾರ್ಥ್ ವಿಚಾರ, ಕಾವೇರಿ ವಿಚಾರದಲ್ಲಿ ನಡೆದುಕೊಂಡಿದ್ದು ನೋಡಿದರೆ ನಿಮ್ಮಲ್ಲಿ ರಾಜಕೀಯ ಕೋನ ಇದೆ. ಆದರೆ ಯಾಕೆ ರಾಜಕೀಯಕ್ಕೆ ಬರುತ್ತಿಲ್ಲ, ಎನ್ನುವ ಪ್ರಶ್ನೆಗೆ "ಅದ್ಯಾಕೋ ಅದು ನನಗೆ ಅಂತಹ ಆಲೋಚನೆ ಬರಲಿಲ್ಲ. ಮೊದಲಿನಿಂದಲೂ ತಂದೆಯನ್ನು ನೋಡಿ ಬೆಳೆದೆ. ಅವರು ಸಹಾಯ ಮಾಡುತ್ತಿದ್ದರು. ಹಾಗೆ ಸಹಾಯ ಮಾಡೋಣ ಅಪ್ಪಾಜಿ ಹೆಸರಲ್ಲಿ, ಅಪ್ಪು ಹೆಸರಲ್ಲಿ, ಅಮ್ಮನ ಹೆಸರಲ್ಲಿ ಟ್ರಸ್ಟ್ ಇದೆ. ಸಹಾಯ ಮಾಡಲು ರಾಜಕೀಯರಂಗ ಬೇಕಿಲ್ಲ. ನಮ್ಮ ಪತ್ನಿ ಕೂಡ ರಾಜಕೀಯ ಕುಟುಂಬದಿಂದ ಬಂದವರು" ಎಂದಿದ್ದರು.

"ಮುಂದೆ ಒಂದು ಹಿಂದೆ ಒಂದು ಮಾತನಾಡೋದು ನಮಗೆ ಬರಲ್ಲ. ರಾಜಕೀಯಕ್ಕೆ ಬಂದು ಉಳಿಯುವುದು ಕಷ್ಟ. ನಟನೆಯ ಹಿನ್ನೆಲೆ ನನ್ನದು. ಆ ಕಡೆ ಹೆಚ್ಚಿನ ಗಮನ ಹರಿಸಬೇಕು. ಒಂದು ಮಾಡುತ್ತಿರುವಾಗ ಇನ್ನೊಂದು ಜವಾಬ್ದಾರಿ ಸಾಧ್ಯವಿಲ್ಲ" ಎಂದು ಶಿವಣ್ಣ ವಿವರಿಸಿದ್ದಾರೆ.
ಕನ್ನಡ ಮಾತ್ರವಲ್ಲದೇ ಶಿವಣ್ಣ ಇದೀಗ ತಮಿಳು ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ವಯಸ್ಸು 60 ದಾಟಿದರೂ ಇವತ್ತಿಗೂ ಐದಾರು ಸಿನಿಮಾಗಳು ಸೆಂಚುರಿ ಸ್ಟಾರ್ ಕೈಯಲ್ಲಿವೆ. ಮುಂದಿನ ವಾರ ತಮಿಳಿನ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಚಿತ್ರ ಕನ್ನಡಕ್ಕೂ ಡಬ್ ಆಗಿ ಬಿಡುಗಡೆ ಆಗುತ್ತಿದೆ.


Click it and Unblock the Notifications











