ನಾನು ಕರ್ನಾಟಕ ಸಿಎಂ ಆದ್ರೆ ಮೊದ್ಲು ಪೊಲೀಸ್ ಇಲಾಖೆಗೆ ಸರ್ಜರಿ ಅಂದಿದ್ದೇಕೆ ಶಿವಣ್ಣ?
ನಟ ಶಿವರಾಜ್‌ಕುಮಾರ್ ಅವರನ್ನು ರಾಜಕೀಯರಂಗಕ್ಕೆ ಸೆಳೆಯುವ ಪ್ರಯತ್ನಗಳು ನಡೀತಿದೆ. ಇತ್ತೀಚೆಗೆ ಉಪ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಬಹಿರಂಗವಾಗಿಯೇ ಈ ವಿಚಾರವನ್ನು ತಿಳಿಸಿದ್ದರು. ಆದರೆ ಶಿವಣ್ಣ ಮಾತ್ರ ನೋ ಪಾಲಿಟಿಕ್ಸ್ ಒನ್ಲಿ ಸಿನಿಮಾ ಎನ್ನುತ್ತಾ ಬರ್ತಿದ್ದಾರೆ. ಆದರೆ ಸಮಾಜಕ್ಕೆ ಏನಾದರೂ ವಾಪಸ್ ನೀಡಬೇಕು ಎನ್ನುವ ತುಡಿತ ಇದೆ.
ಡಾ. ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ದೊಡ್ಮನೆ ಕಲಾವಿದರನ್ನು ರಾಜಕೀಯರಂಗಕ್ಕೆ ಕರೆತರುವ ಮಾತುಗಳು ಕೇಳಿಬಂದಿತ್ತು. "ಜನರನ್ನು ಆಳುವವರಿಗೆ ಪೊಲಿಟಿಕಲ್ ಪವರ್ ಬೇಕು, ನಾವು ಜನರನ್ನು ಪ್ರೀತಿಸುವವರು" ಎನ್ನುವ 'ರಾಜಕುಮಾರ' ಚಿತ್ರದ ಡೈಲಾಗ್ ರೀತಿ ರಾಜಕೀಯದಿಂದ ಅಂತರ ಕಾಯ್ದುಕೊಂಡು ಬರುತ್ತಿದ್ದಾರೆ. ಪತ್ನಿ ಗೀತಾ ಶಿವರಾಜ್‌ಕುಮಾರ್ ಚುಣಾವಣೆಗಳಲ್ಲಿ ಸ್ಪರ್ಧಿಸಿದಾಗ ಶಿವಣ್ಣ ಪ್ರಚಾರ ನಡೆಸಿದ್ದು ಇದೆ. ಆದರೆ ಸಕ್ರಿಯ ರಾಜಕಾರಣ ಬೇಡವೇ ಬೇಡ ಎನ್ನುತ್ತಾ ಬರ್ತಿದ್ದಾರೆ.

ತಮಿಳು ಸಂದರ್ಶನದವೊಂದರಲ್ಲಿ ಮತ್ತೊಮ್ಮೆ ಶಿವಣ್ಣ ಪೊಲಿಟಿಕಲ್ ಎಂಟ್ರಿ ವಿಚಾರದ ಬಗ್ಗೆ ಮಾತನಾಡಿದ್ದಾರೆ. "ಚಿತ್ರರಂಗದಲ್ಲಿ ಇರಲು ರಾಜಕೀಯದಿಂದ ದೂರ ಇರುವುದೇ ಉತ್ತಮ" ಎಂದು ಸೆಂಚುರಿ ಸ್ಟಾರ್ ಹೇಳಿದ್ದಾರೆ. "ರಾಜಕೀಯ ಹಿನ್ನೆಲೆ ಕುಟುಂಬದಿಂದಲೇ ಹುಡುಗಿಯನ್ನು ತಂದಿದ್ದೇವೆ(ಗೀತಾ ಶಿವರಾಜ್‌ಕುಮಾರ್) ಹಾಗಾಗಿ ನಾನು ರಾಜಕೀಯಕ್ಕೆ ಹೋಗಿದ್ದರೆ ಅಪ್ಪಾಜಿ ಕೂಡ ಬೇಡ ಎನ್ನುತ್ತಿರಲಿಲ್ಲ" ಎಂದು ವಿವರಿಸಿದ್ದರು.
ಶಿವಣ್ಣ ಪಾಲಿಟಿಕ್ಸ್‌ಗೆ ಬರಲ್ಲ ಎಂದು ಹೇಳಿಬಿಟ್ಟಿದ್ದಾರೆ. ಒಂದು ವೇಳೆ ನೀವು ಒಂದು ದಿನದ ಮಟ್ಟಿಗೆ ಕರ್ನಾಟಕದ ಸಿಎಂ ಆದರೆ ಮೊದಲ ಮಾಡುವ ಕೆಲಸ ಏನು? ಎನ್ನುವ ಪ್ರಶ್ನೆ ಎದುರಾಗಿದೆ. ಇದಕ್ಕೆ ಶಿವಣ್ಣ ಉತ್ತರಿಸಿದ್ದಾರೆ. "ಸಾಕಷ್ಟು ಕೆಲಸಗಳಿವೆ. ಆದರೆ ಹೇಳುವುದು ಬೇಡ" ಎಂದು ನಕ್ಕಿದ್ದಾರೆ. ಮೊದಲು ನಾನು ಮಾಡೋದು ಎಲ್ಲಾ ಅಧಿಕಾರಿಗಳನ್ನು ಕರೆಸುತ್ತೇನೆ. ಒಳ್ಳೆ ಮನಸ್ಸಿನಿಂದ ಕೆಲಸ ಮಾಡಬೇಕು, ಕೆಲಸದಲ್ಲಿ ಪ್ರಾಮಾಣಿಕತೆ ಇರಬೇಕು" ಎಂದಿದ್ದಾರೆ.
ಮಾತು ಮುಂದುವರೆಸಿದ ಶಿವಣ್ಣ "ಇಡೀ ವ್ಯವಸ್ಥೆಯನ್ನು ಬದಲಿಸಬೇಕು. ಮೊದಲು ಪೊಲೀಸ್ ಇಲಾಖೆ. ಪೊಲೀಸ್ ಇಲಾಖೆ ಸಮಾಜಕ್ಕೆ ರಕ್ಷಣಾ ಕವಚ. ಅದು ಸರಿಯಾದರೆ ಎಲ್ಲವೂ ಸರಿಯಾಗುತ್ತದೆ. ಅದೇ ಕೀಲಿಕೈ. ಪೊಲೀಸ್ ಇಲಾಖೆ ಕೊಂಚ ಸ್ಟ್ರಿಕ್ಟ್ ಆದ್ರೆ ಉಳಿದದ್ದೆಲ್ಲಾ ತಾನಾಗಿಯೇ ಬದಲಾಗುತ್ತದೆ. ಮಂತ್ರಿ, ಸಿಎಂ ಯಾರೇ ಆಗಿದ್ದರೂ ತಾರತಮ್ಯ ಮಾಡಬಾರದು. ತಪ್ಪು ಅಂದ್ರೆ ತಪ್ಪು ಎನ್ನಬೇಕು" ಎಂದು ಶಿವಣ್ಣ ಹೇಳಿದ್ದಾರೆ.

'ಕ್ಯಾಪ್ಟನ್ ಮಿಲ್ಲರ್' ಚಿತ್ರದ ವಿಶೇಷ ಪಾತ್ರದ ಮೂಲಕ ಈ ವಾರ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ತಮಿಳಿನ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬಿಡುಗಡೆ ಆಗ್ತಿದೆ. ಚಿತ್ರದಲ್ಲಿ ಧನುಷ್ ಸಹೋದರನ ಪಾತ್ರದಲ್ಲಿ ಶಿವಣ್ಣ ನಟಿಸಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ.
ಸಂಕ್ರಾಂತಿಗೆ ತೆಲುಗು, ತಮಿಳಿನ ದೊಡ್ಡ ಸಿನಿಮಾಗಳು ತೆರೆಗಪ್ಪಳಿಸುತ್ತಿದೆ. ಆದರೆ ಕನ್ನಡದ ಯಾವುದೇ ಸಿನಿಮಾ ಬರ್ತಿಲ್ಲ. 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ದೊಡ್ಡಮಟ್ಟದಲ್ಲಿ ಬಿಡುಗಡೆ ಆಗುವ ಸಾಧ್ಯತೆಯಿದೆ. 'ಜೈಲರ್' ಸಿನಿಮಾ ಮೂಲಕ ಶಿವಣ್ಣ ಕಾಲಿವುಡ್ ಪ್ರವೇಶಿಸಿದ್ದರು. ಚಿತ್ರದ ಸಣ್ಣ ಪಾತ್ರದಲ್ಲಿ ಅಬ್ಬರಿಸಿ ಭಾರೀ ಮೆಚ್ಚುಗೆ ಗಳಿಸಿದ್ದರು. ಇದೀಗ ನೇರವಾಗಿ ತಮಿಳು ಸಿನಿಮಾಗಳನ್ನು ಮಾಡಲು ಮುಂದಾಗಿದ್ದಾರೆ.
ಇನ್ನುಳಿದಂತೆ 'ಭೈರತಿ ರಣಗಲ್' ಚಿತ್ರದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. 'ಕರಟಕ ದಮನಕ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇನ್ನು ಮೂರ್ನಾಲ್ಕು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ತೆಲುಗಿನಲ್ಲಿ ರಾಮ್‌ಚರಣ್- ಬುಚ್ಚಿಬಾಬು ಕಾಂಬಿನೇಷನ್ ಚಿತ್ರದಲ್ಲಿ ನಟಿಸೋ ಬಗ್ಗೆಯೂ ಚರ್ಚೆ ನಡೀತಿದೆ. ಸಿನಿಮಾಗಳಲ್ಲಿ ಶಿವಣ್ಣ ಬಹಳ ಬ್ಯುಸಿಯಾಗಿದ್ದಾರೆ. ಅದೇ ಕಾರಣಕ್ಕೆ ರಾಜಕೀಯದ ಸಹವಾಸವೇ ಬೇಡ ಎನ್ನುತ್ತಿದ್ದಾರೆ.


Click it and Unblock the Notifications











