"ದೇವಿ ಮುಂದೆ ನಿಂತು ಅಮ್ಮ ನನಗೆ ಕೆಲಸ ಕೊಡು, ಇಲ್ಲ ಕರ್ಕೊಂಡ್‌ಬಿಡು ಅಂದ್ರು": ಸುಮಾ ಶಾಸ್ತ್ರಿ
ಕನ್ನಡದ ಖ್ಯಾತ ಗಾಯಕರಲ್ಲಿ ಎಲ್. ಎನ್ ಶಾಸ್ತ್ರಿ ಕೂಡ ಒಬ್ಬರು. 3000 ಸಾವಿರಕ್ಕೂ ಅಧಿಕ ಹಾಡುಗಳನ್ನು, ಟ್ರ್ಯಾಕ್‌ಗಳನ್ನು ಹಾಡಿ ಕನ್ನಡ ಚಿತ್ರರಂಗದಲ್ಲಿ ಅವರು ಹೆಸರು ಮಾಡಿದ್ದರು. ಆದರೆ 7 ವರ್ಷಗಳ ಹಿಂದೆ ಕರುಳು ಕ್ಯಾನ್ಸರ್ ಕೊನೆಯುಸಿರೆಳೆದರು. ಪತ್ನಿ ಸುಮಾ ಶಾಸ್ತ್ರಿ ಸಂದರ್ಶನವೊಂದರಲ್ಲಿ ಎಲ್. ಎನ್ ಶಾಸ್ತ್ರಿ ಅವರ ಕೊನೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಗಾಯಕರಾಗಿ ಮಾತ್ರವಲ್ಲದೇ ಹಲವು ಸಿನಿಮಾಗಳಿಗೆ ಎಲ್. ಎನ್ ಶಾಸ್ತ್ರಿ ಸಂಗೀತ ಸಂಯೋಜನೆ ಮಾಡಿದ್ದರು. ನಾದಬ್ರಹ್ಮ ಹಂಸಲೇಖ ಬಳಗದಲ್ಲಿ ಗುರ್ತಿಸಿಕೊಂಡಿದ್ದರು. 'ಎ', 'ಜನುಮದ ಜೋಡಿ', 'ಸಿಪಾಯಿ', 'ಜೋಡಿ ಹಕ್ಕಿ' ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ಹಾಡುಗಳನ್ನು ಹಾಡಿದ್ದರು. ಟ್ರ್ಯಾಕ್ ಹಾಡುವುದರಿಂದ ಸೈ ಎನಿಸಿಕೊಂಡಿದ್ದರು. ಹಾಗಾಗಿ ಎಷ್ಟೋ ಬಾರಿ ಅವರ ಹಾಡಿದ್ದನ್ನೇ ಸಿನಿಮಾಗಳಲ್ಲಿ ಉಳಿಸಿಕೊಳ್ಳುವಂತಾಗಿತ್ತು. ಕೇವಲ 46 ವರ್ಷ ವಯಸ್ಸಿಗೆ ಅವರು ಅಗಲಿದ್ದು ಚಿತ್ರರಂಗಕ್ಕೆ ತುಂಬಲಾರದ ನಷ್ಟವೇ ಸರಿ.

ಕೆಲ ವರ್ಷಗಳ ಹಿಂದೆ 'ಮೆಲೋಡಿ' ಎನ್ನುವ ಸಿನಿಮಾ ಬಂದಿತ್ತು. ಗಾಯಕ ರಾಜೇಶ್ ಕೃಷ್ಣನ್ ಹೀರೊ ಆಗಿ ನಟಿಸಿದ್ದರು. ಆ ಸಿನಿಮಾ ಸೋತಿತ್ತು. ಎಸ್. ಕೃಷ್ಣಮೂರ್ತಿ ಚಿತ್ರ ನಿರ್ಮಾಣ ಮಾಡಿದ್ದರು. ಆದರೆ ನಡುವೆ ಹಣವಿಲ್ಲದೇ ಆ ಸಿನಿಮಾ ನಿಂತಿತ್ತು. ಆ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿದ್ದ ಎಲ್. ಎನ್ ಶಾಸ್ತ್ರಿ ತಂಡದ ಬೆನ್ನಿಗೆ ನಿಂತಿದ್ದರು. ಹಾಗಾಗಿ ನಿಂತು ಹೋಗಿದ್ದ ಚಿತ್ರವನ್ನು ಸಾಲ ಮಾಡಿ ಪೂರ್ತಿ ಮಾಡಿದ್ದರು. ಆದರೂ ಸಿನಿಮಾ ಗೆಲ್ಲಲಿಲ್ಲ. ಇದೇ ಅವರು ಅನಾರೋಗ್ಯಕ್ಕೆ ತುತ್ತಾಗಲು ಒಂದರ್ಥದಲ್ಲಿ ಕಾರಣವಾಗಿತ್ತು. ರಘುರಾಮ್ ಯೂಟ್ಯೂಬ್ ಸಂದರ್ಶನದಲ್ಲಿ ಸುಮಾ ಶಾಸ್ತ್ರಿ ಈ ಬಗ್ಗೆ ಮಾತನಾಡಿದ್ದಾರೆ.
"ನಿರ್ದೇಶಕ ನಂಜುಂಡ 'ಮೆಲೋಡಿ' ಚಿತ್ರವನ್ನು ಹಾಳು ಮಾಡಿದ್ದು. ಆ ಚಿತ್ರದ ಸ್ಕ್ರಿಪ್ಟ್ ಕರೆಕ್ಷನ್ ಸಹ ಮಾಡಿಸಿದ್ದರು. ನಾವು ಸಿನಿಮಾ ನಿರ್ಮಾಣ ಮಾಡಲಿಲ್ಲ. ಕೃಷ್ಣಮೂರ್ತಿ ಎಂಬುವವರು ನಿರ್ಮಾಪಕರು. ಶಾಸ್ತ್ರಿ ಅವರಿಗೆ ಆಪ್ತರು. ಹಾಗಾಗಿ ಎಲ್ಲಾ ಸೇರಿ ಸಿನಿಮಾ ಮಾಡೋಣ ಎಂದು ಆರಂಭಿಸಿದರು. 80 ಲಕ್ಷ ಬಜೆಟ್ ಎಂದುಕೊಂಡಿದ್ದು 1 ಕೋಟಿ ರೂ. ದಾಟಿತು. ರಿಲೀಸ್ ವೇಳೆ ಹಣವಿಲ್ಲದೇ ನಿಂತು ಹೋಗಿತ್ತು"
"ನಾನು ಬೇಡ ಎಂದರೂ ಕೇಳಲಿಲ್ಲ. ಮನೆಯನ್ನು ಅಡವಿಟ್ಟು ಸಿನಿಮಾ ಬಿಡುಗಡೆಗೆ 50 ಲಕ್ಷ ತಗೊಂಡ್ರು. ಸಿನಿಮಾ ಗೆಲ್ಲಲಿಲ್ಲ. ಅದರಿಂದ ದೊಡ್ಡ ಪೆಟ್ಟುಬಿತ್ತು. ಬಳಿಕ ಚೇತರಿಸಿಕೊಂಡರು. ಆದರೆ ಬಡ್ಡಿ ಕಟ್ಟಲು ಹಣವಿಲ್ಲದಂತೆ ಆಯಿತು. ಬೆಳ್ಳಿ, ಚಿನ್ನ ಎಲ್ಲಾ ಮಾರಿ ಸಾಲು ತೀರಿಸಿದರು. ಒಂದು ದಿನ ದೇವಿ ಫೋಟೊ ಮುಂದೆ ನಿಂತು ಹತಾಶರಾಗಿ ಅತ್ತುಬಿಟ್ಟರು. ಅಮ್ಮ ನನ್ನಿಂದ ಸಾಧ್ಯವಿಲ್ಲ. ನನಗೆ ಕೆಲಸ ಕೊಡು, ಇಲ್ಲ ಕರ್ಕೊಂಡ್‌ಬಿಡು ಅಂದ್ರು. ನಾನು ಬೈದೆ. ಹೀಗೆಲ್ಲಾ ಮಾತನಾಡಬಾರದು ಎಂದು. ಆಗ ಇನ್ನು ಆರೋಗ್ಯವಾಗಿಯೇ ಇದ್ದರು"

"ಕೊನೆಗೆ ಅವಕಾಶಗಳಿಲ್ಲದೇ ಶಾಸ್ತ್ರಿ ತಮ್ಮ ಶಿಷ್ಯ ಬಳಿಯೇ ಸಹಾಯಕರಾಗಿ ಕೆಲಸಕ್ಕೆ ಹೋಗುವಂತಾಯಿತು. ಮೊದಲಿಗೆ ಕೆಲಸಕ್ಕೆ ಕರೆದ ಆತ ಬಳಿಕ ಅವಮಾನ ಮಾಡಲು ಆರಂಭಿಸಿದ. ನೀವು ಶ್ರುತಿಬದ್ಧವಾಗಿ ಹಾಡಲ್ಲ ಎಂದು ಬಿಟ್ಟ. ಆ ಬಳಿಕ ಆರೋಗ್ಯ ಕೆಡಲು ಆರಂಭವಾಯಿತು. ದಿಢೀರನೆ ಸಣ್ಣಗಾದರು. ಅದನ್ನು ಬಹಳ ಮನಸ್ಸಿಗೆ ತಗೊಂಡ್ರು ಅನ್ನಿಸುತ್ತದೆ. ನಾನು ಮನೆ ಮಾರಿ ಸಾಲ ತೀರಿಸೋಣ ಎಂದೆ ಅದು ಬೇಸರವಾಯಿತು ಅನಿಸುತ್ತೆ. ಹೀಗೆ ಬಹಳ ನೊಂದುಕೊಂಡರು"
"ಒಮ್ಮೆ ಯಾವುದೋ ಊರಿಗೆ ಹೋಗಿದ್ದರು. ಮಳೆ ನೀರು ಬಿದ್ದ ಹಲಸಿನ ಹಣ್ಣು ತಿನ್ನಬಾರದು ಅಂತಾರೆ. ಇವರು ದಾರಿಯಲ್ಲಿ ಎಲ್ಲೋ ಹಲಸಿನ ಹಣ್ಣು ತಿಂದಿದ್ದಾರೆ. ಅದು ನೇರವಾಗಿ ಲಿವರ್‌ಗೆ ಹೊಡೆದಿದೆ. ಮಳೆನೀರು ಎಳೆದ ಹಣ್ಣು ತಿನ್ನಬಾರದು. ಅವರು ತಿಂದು ಬಂದ ಮರುದಿನವೇ ಹುಷಾರು ತಪ್ಪಿದೆ. ಬಳಿಕ ಜ್ವರ ಬಂದಿದೆ. ಹೊಟ್ಟೆನೋವು ಅಂತ ಹೇಳಿದ್ರು. ಬಳಿಕ ಸ್ಕ್ಯಾನಿಂಗ್ ಮಾಡಿಸಿದಾಗ ಲಿವರ್ ಸಮಸ್ಯೆ ಗೊತ್ತಾಯಿತು, ಕ್ಯಾನ್ಸರ್ ಇರಬಹುದು ಅಂತ ಡಾಕ್ಟರ್ ಹೇಳಿದ್ರು"
"ಬಳಿಕ ನಾವು ಚಿಕಿತ್ಸೆಗೆ ಹೋಗುವ ವೇಳೆಗೆ ಕ್ಯಾನ್ಸರ್ 4ನೇ ಹಂತ ತಲುಪಿತ್ತು. ವೈಟ್ ಜಾಂಡೀಸ್ ಅಂತಾನೂ ಅಂತಾರೆ. 4ನೇ ಹಂತಕ್ಕೆ ಹೋದಮೇಲೆ ಕಷ್ಟ. ಆದರೂ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಿದ್ವಿ. ಅವತ್ತು ಮಗು, ಅಮ್ಮನ್ನು ಚೆನ್ನಾಗಿ ನೋಡ್ಕೊ ಎಂದ್ರು. ನಾನು ಗಲಾಟೆ ಮಾಡ್ದೆ. ಒಂದೂಕಾಲು ಕೋಟಿ ಸಾಲು ಆಗ. ನಿಮಗೆ ಕ್ಯಾನ್ಸರ್ ಬರೋಕೆ ಹೇಗೆ ಸಾಧ್ಯ ಎಂದೆ. ಸಾಕಷ್ಟು ಚಿಕಿತ್ಸೆ ಕೊಡಿಸಿದೆವು. ಆಗಸ್ಟ್ 30ರಂದು ತಮ್ಮ ಹುಟ್ಟುಹಬ್ಬದ ದಿನವೇ ಹೊರಟು ಹೋದರು" ಎಂದು ಸುಮಾ ಶಾಸ್ತ್ರಿ ನೆನಪಿಸಿಕೊಂಡಿದ್ದಾರೆ.


Click it and Unblock the Notifications











