5 ವರ್ಷಗಳ ಹಿಂದೆ ಡಿವೋರ್ಸ್ ಸುದ್ದಿ ಹಬ್ಬಿದ್ದೇಗೆ? ಗಾಯಕಿ ವಾಣಿ ಹರಿಕೃಷ್ಣ ಪ್ರತಿಕ್ರಿಯೆ
ಖ್ಯಾತ ಸಂಗೀತ ನಿರ್ದೇಶಕ ಜಿ. ಕೆ ವೆಂಕಟೇಶ್ ಮೊಮ್ಮಗಳು ವಾಣಿ ಹರಿಕೃಷ್ಣ ಕನ್ನಡ ಚಿತ್ರರಂಗದಲ್ಲಿ ಗಾನಯಕಿಯಾಗಿ, ಸಂಗೀತ ನಿರ್ದೇಶಕಿಯಾಗಿ ಗುರ್ತಿಸಿಕೊಂಡಿದ್ದಾರೆ. ವಾಣಿ 2008ರಲ್ಲಿ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಕೈ ಹಿಡಿದರು.
'ಇಂತಿ ನಿನ್ನ ಪ್ರೀತಿಯ' ಚಿತ್ರದ 'ಮದುವನ ಕರೆದರೆ' ಹಾಡಿನ ಗಾಯನಕ್ಕಾಗಿ ರಾಜ್ಯ ಪ್ರಶಸ್ತಿ ಕೂಡ ವಾಣಿ ಹರಿಕೃಷ್ಣ ಅವರಿಗೆ ಸಿಕ್ಕಿತ್ತು. ಸೈಮಾ, ಮಿರ್ಚಿ ಮ್ಯೂಸಿಕ್ ಅವಾರ್ಡ್ ಸೇರಿ ಹಲವು ಪ್ರಶಸ್ತಿಗಳು ವಾಣಿ ಗಾಯನಕ್ಕೆ ಸಂದಿದೆ. ಗಾಯಕಿಯಾಗಿ ಮಾತ್ರವಲ್ಲದೇ 3 ಸಿನಿಮಾಗಳಿಗೆ ಸಂಗೀತ ನಿರ್ದೇಶಕಿಯಾಗಿಯೂ ಅವರು ಕೆಲಸ ಮಾಡಿದ್ದಾರೆ. 'ರಿಂಗ್ ರೋಡ್' ಚಿತ್ರದ 2 ಹಾಡಿಗೆ ಸಾಹಿತ್ಯ ರಚಿಸಿದ್ದರು.

'ಮಳೆಯಲಿ ಜೊತೆಯಲಿ', 'ಪರಮಾತ್ಮ', 'ಸಾರಥಿ', 'ಅದ್ಧೂರಿ', 'ಕಡ್ಡಿಪುಡಿ' ಸೇರಿದಂತೆ ಒಂದಷ್ಟು ಸಿನಿಮಾಗಳಿಗೆ ವಾಣಿ ಹರಿಕೃಷ್ಣ ಹಾಡಿದ್ದಾರೆ. ಬಹುತೇಕ ಎಲ್ಲವೂ ಪತಿ ವಿ. ಹರಿಕೃಷ್ಣ ಸಂಗೀತ ನಿರ್ದೇಶನದ ಸಿನಿಮಾಗಳೇ. ತಾತ ಖ್ಯಾತ ಸಂಗೀತ ನಿರ್ದೇಶಕರಾಗಿದ್ದರಿಂದ ಚಿಕ್ಕಂದಿನಿಂದಲೇ ಸಂಗೀತ ಅವರಿಗೆ ಸಿದ್ಧಿಸಿತ್ತು. ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ವಾಣಿ ಹರಿಕೃಷ್ಣ ಮಾತನಾಡಿದ್ದಾರೆ.
ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ವೈಯಕ್ತಿಕ ಹಾಗೂ ವೃತ್ತಿ ಜೀವನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲೇ ಓದಿ ಬೆಳೆದ ವಾಣಿ ಅವರ ತಂದೆ ಕೂಡ ಸಂಗೀತ ಕಲಿತ್ತಿದ್ದರು. ವಾಣಿ ಚಿಕ್ಕಂದಿನಲ್ಲೇ ಹಿಂದೂಸ್ತಾನಿ ಸಂಗೀತ ಅಭ್ಯಸಿಸಿದ್ದರು. ಆರ್ಕೇಸ್ಟ್ರಾಗಳಲ್ಲಿ ಹರಿಕೃಷ್ಣ ಕೀಬೋರ್ಡ್ ನುಡಿಸಿದರೆ, ವಾಣಿ ಹಾಡುತ್ತಿದ್ದರು. ಹೀಗೆ ಶುರುವಾದ ಪರಿಚಯ ಮದುವೆವರೆಗೂ ಬಂದು ನಿಂತಿತ್ತು.
ವಿ. ಹರಿಕೃಷ್ಣಗೆ ಮೊದಲು ವಾಣಿ ಅವರ ಮೇಲೆ ಲವ್ ಆಗಿತ್ತಂತೆ. ಆರಂಭದಲ್ಲಿ ಇದು ವಾಣಿ ಅವರಿಗೆ ಗೊತ್ತಿರಲಿಲ್ಲವಂತೆ. ಆದರೆ ಪದೇ ಪದೆ ವಾಣಿ ಅವರನ್ನು ನೋಡಲು ಹರಿಕೃಷ್ಣ ಹೋಗುತ್ತಿದ್ದಂತೆ. ಅದಕ್ಕಾಗಿಯೇ ಆರ್ಕೇಸ್ಟ್ರಾಗಳಿಗೆ ಬರುತ್ತಿದ್ದರು ಎಂದು ವಾಣಿ ವಿವರಿಸಿದ್ದಾರೆ. ಕೊನೆಗೆ ತಮ್ಮ ತಾಯಿ ಬಳಿ ವೀಣೆ ಕಲಿಯಲು ಬಂದಿದ್ದರು. ಬಳಿಕ ನನ್ನ ಮದುವೆ ಆಗುವ ಬಗ್ಗೆ ಕೇಳಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಹರಿಕೃಷ್- ವಾಣಿ ಹರಿಕೃಷ್ಣ ದಂಪತಿಗೆ ಒಬ್ಬ ಮಗ ಕೂಡ ಇದ್ದಾರೆ. 5 ವರ್ಷಗಳ ಹಿಂದೆ ಇಬ್ಬರು ದಾಂಪತ್ಯದಲ್ಲಿ ಬಿರುಕು? ಎನ್ನುವ ಗುಸುಗುಸು ಶುರುವಾಗಿತ್ತು. ಅದಕ್ಕೆ ಕಾರಣ ವಾಣಿ ಹರಿಕೃಷ್ಣ ಹಾಕಿದ್ದ ಅದೊಂದು ಪೋಸ್ಟ್. "ಕುರುಕ್ಷೇತ್ರ' ಹಾಗೂ 'ರಾಂಧವ' ಚಿತ್ರಗಳಲ್ಲಿ ತಮ್ಮಿಂದ ಮೊದಲು ಹಾಡಿಸಿದ್ದ ಹಾಡನ್ನು ತೆಗೆದುಹಾಕಿ ಬಳಿಕ ಬೇರೆಯವರಿಂದ ಹಾಡಿಸಲಾಗಿದೆ" ಎಂದು ವಾಣಿ ಹರಿಕೃಷ್ಣ ಬೇಸರದಿಂದ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದೇ ಅಂತಾದೊಂದು ಚರ್ಚೆಗೆ ಕಾರಣವಾಗಿತ್ತು. ಬಳಿಕ ಹರಿಕೃಷ್ಣ ಸಹ ಸ್ಪಷ್ಟನೆ ನೀಡಿ ಎಲ್ಲದಕ್ಕೂ ಬ್ರೇಕ್ ಹಾಕಿದ್ದರು.
ಸದ್ಯ ಆ ಪೋಸ್ಟ್ ಬಗ್ಗೆ ವಾಣಿ ಹರಿಕೃಷ್ಣ ಸಂದರ್ಶನದಲ್ಲಿ ಮಾತನಾಡಿದ್ದಾರೆ. "ಆ ಪೋಸ್ಟ್ ಮಾಡಿದ್ದು ತಪ್ಪು ಅಂತ ಎಲ್ಲರೂ ಹೇಳುತ್ತಾರೆ. ಬೇಸರದಲ್ಲಿ ಅವತ್ತು ನಾನು ಪೋಸ್ಟ್ ಮಾಡಿದ್ದೆ. 'ರಾಂಧವ' ಹಾಗು 'ಕುರುಕ್ಷೇತ್ರ' ಸಿನಿಮಾಗಳಲ್ಲಿ ನಾನು ಹಾಡಿದ್ದ ಹಾಡು ಇರಲಿಲ್ಲ. ನಾನು ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ದಾಂಪತ್ಯದಲ್ಲಿ ಬಿರುಕು ಎನ್ನುವ ಮಟ್ಟಕ್ಕೆ ಇಲ್ಲ"
"ಬಹಳ ಹಾಡುಗಳು ಅದೇ ರೀತಿ ಆಗಿತ್ತು. ಆದರೆ ಅದು ಕೃಷ್ಣ ಹಾಡು. ನಾನು ಕೃಷ್ಣನ ಭಕ್ತೆ. ಹಾಗಾಗಿ ಬೇಸರವಾಗಿತ್ತು. ಆದರೆ ಆ ಪೋಸ್ಟ್ ಅಷ್ಟು ದೊಡ್ಡದಾಗುತ್ತೆ ಎಂದು ನನಗೆ ಗೊತ್ತಿರಲಿಲ್ಲ. ಅದರಿಂದ ನಾನು ಒಂದು ಪಾಠ ಕಲಿತೆ. ಸೋಶಿಯಲ್ ಮೀಡಿಯಾ ಹೇಗೆ ಬಳಸಬೇಕು ಅಂತ" ಎಂದು ವಿವರಿಸಿದ್ದಾರೆ.


Click it and Unblock the Notifications











