ಬೆಳ್ಳಿ ಪರದೆಯಲ್ಲಿ ನಿರ್ದೇಶಕದ್ವಯರ ಕರಾಮತ್ತು: ಭಾರತೀಯ ಚಿತ್ರರಂಗಕ್ಕೆ ದೇಸಿ ಬಾಂಡ್ ಸಿನಿಮಾ ರುಚಿ ಹತ್ತಿಸಿದ ಜೋಡಿ
ಕನ್ನಡ ಚಿತ್ರರಂಗಕ್ಕೆ ಎಸ್. ಕೆ ಭಗವಾನ್ ಅಪಾರ ಕೊಡುಗೆ ನೀಡಿದ್ದಾರೆ. 70, 80ರ ದಶಕದಲ್ಲಿ ಕನ್ನಡ ಚಿತ್ರರಂಗ ಪ್ರಜ್ವಲಿಸಲು ದೊರೆ - ಭಗವಾನ್ ಪಾತ್ರ ಮಹತ್ವದ್ದು. ಡಾ. ರಾಜ್‌ಕುಮಾರ್ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ್ದ ನಿರ್ದೇಶಕದ್ವಯರು ಹಲವು ಪ್ರಯೋಗಗಳನ್ನು ನಡೆಸಿದ್ದರು. ಅದರಲ್ಲಿ ಗೆಲುವನ್ನು ಕಂಡರು.
ಡಾ. ರಾಜ್‌ಕುಮಾರ್ ನಟಿಸಿದ ಅದ್ಭುತ ಸಿನಿಮಾಗಳ ಹಿಂದೆ ಸಾಕಷ್ಟು ತಂತ್ರಜ್ಞರ ಶ್ರಮವೂ ಅಡಗಿದೆ. ಅದರಲ್ಲಿ ದೊರೆ- ಭಗವಾನ್ ಜೋಡಿಗೂ ಕ್ರೆಡಿಟ್ ಸಲ್ಲಬೇಕು. ಭಾರತೀಯ ಚಿತ್ರರಂಗಕ್ಕೆ ಪಕ್ಕಾ ಬಾಂಡ್ ಶೈಲಿಯ ಸಿನಿಮಾಗಳನ್ನು ಇದೇ ಜೋಡಿ ಮೊದಲ ಬಾರಿಗೆ ಪರಿಚಯಿಸಿತ್ತು. ಎಸ್. ಕೆ ಭಗವಾನ್‌ಗೆ ಛಾಯಾಗ್ರಾಹಕರಾಗಿದ್ದ ಬಿ. ದೊರೆರಾಜ್ ಆಪ್ತ ಸ್ನೇಹಿತರಾಗಿದ್ದರು. ಇವರಿಬ್ಬರು ಒಟ್ಟಿಗೆ ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿದ್ದರು. ಆರಂಭದಲ್ಲಿ ಕೆಲ ಸಿನಿಮಾಗಳನ್ನು ದೊರೆ ಅವರೇ ಸೆರೆ ಹಿಡಿದರು. ನಂತರ ಸಂಪೂರ್ಣವಾಗಿ ಇಬ್ಬರು ಸಿನಿಮಾ ನಿರ್ದೇಶನ ಆರಂಭಿಸಿದರು.
ಕನ್ನಡ ಚಿತ್ರರಂಗಕ್ಕೆ ಬಾಂಡ್ ಶೈಲಿಯ ಸಿನಿಮಾಗಳು ಹಾಗೂ ಕಾದಂಬರಿ ಆಧರಿತ ಸಿನಿಮಾಗಳನ್ನು ದೊರೆ ಭಗವಾನ್ ಜೋಡಿ ನೀಡಿದೆ. 23 ವರ್ಷಗಳ ಹಿಂದೆ ನಿರ್ದೇಶಕ ದೊರೆ ನಿಧನರಾಗಿದ್ದರು. ಇದೀಗ ಅವರ ಆಪ್ತ ಸ್ನೇಹಿತ ಎಸ್. ಭಗವಾನ್ ಕೂಡ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

ತಿಂಡಿ ತಿನ್ನುವಾಗ ಬಾಂಡ್ ಐಡಿಯಾ
ಭಾರತೀಯ ಚಿತ್ರರಂಗದಮಟ್ಟಿಗೆ ಮೊದಲು ಬಾಂಡ್ ಶೈಲಿಯ ಸ್ಪೈ ಥ್ರಿಲ್ಲರ್ ಚಿತ್ರಗಳನ್ನು ಕಟ್ಟಿಕೊಟ್ಟವರು ದೊರೆ- ಭಗವಾನ್. ಅಲ್ಲಿಯವರೆಗೂ ಅಕ್ಕಪಕ್ಕದ ಇಂಡಸ್ಟ್ರಿಗಳಲ್ಲಿ ಸ್ಪೈ ಮಾದರಿಯ ಸಿನಿಮಾಗಳನ್ನು ಮಾಡುತ್ತಿದ್ದರು. ಆದರೆ ಜೇಮ್ಸ್ ಬಾಂಡ್ ಶೈಲಿಯ ಸಿನಿಮಾ ಕನ್ನಡದಲ್ಲೇ ಮೊದಲು ನಿರ್ಮಾಣವಾಗಿತ್ತು. ಒಮ್ಮೆ ಡಾ. ರಾಜ್‌ಕುಮಾರ್, ವರದಪ್ಪ, ದೊರೆ - ಭಗವಾನ್ ನಿರ್ದೇಶಕದ್ವಯರು ಮದ್ರಾಸ್‌ನಲ್ಲಿ 'ಡಾ. ನೋ' ಎನ್ನುವ ಹಾಲಿವುಡ್ ಸಿನಿಮಾ ನೋಡಿ ಬಂದು ಹೋಟೆಲ್‌ನಲ್ಲಿ ತಿಂಡಿ ತಿನ್ನುವಾಗ 'ಜೇಡರ ಬಲೆ' ಚಿತ್ರಕ್ಕೆ ಪೀಠಿಕೆ ಹಾಕಲಾಗಿತ್ತು.

4 ಬಾಂಡ್ ಚಿತ್ರಗಳ ಸೂತ್ರಧಾರಿಗಳು
ದೊರೆ ಬಾಂಡ್ ಸಿನಿಮಾ ಮಾಡೋಣ ಎಂದಾಗ "ಅಲ್ಲ ನವಿಲನ್ನು ನೋಡಿ ಕೆಂಬೂತ ಪುಕ್ಕ ಕೆದರಿಕೊಂಡಂತೆ ಇದೆ ನಿಮ್ಮ ಮಾತು. ಅಲ್ಲಾ ಇಂಗ್ಲೀಷ್ ಸಿನಿಮಾ ನೋಡಿ ಕನ್ನಡ ಸಿನಿಮಾ ಮಾಡ್ಬೇಕು ಎನ್ನುತ್ತೀರಲ್ಲ" ಎಂದು ಅಣ್ಣಾವ್ರು ಹೇಳಿದ್ದರಂತೆ. ಆದರೆ ಅವರನ್ನು ದೊರೆ - ಭಗವಾನ್ ಬಾಂಡ್ ಸಿನಿಮಾ ಮಾಡಲು ಒಪ್ಪಿಸಿದ್ದರು. ಜೇಮ್ಸ್ ಬಾಂಡ್ ಪುಸ್ತಕಗಳನ್ನು ಓದಿ ದೊರೆ ಹಾಗೂ ಭಗವಾನ್ 'ಜೇಡರ ಬಲೆ' ಚಿತ್ರದ ಕಥೆ, ಚಿತ್ರಕಥೆ ಬರೆದಿದ್ದರು. ಡಾ. ರಾಜ್ ನಾಲ್ಕೈದು ಬಾರಿ ಥಿಯೇಟರ್‌ನಲ್ಲಿ ಹಾಲಿವುಡ್ ಜೇಮ್ಸ್ ಬಾಂಡ್ ಸಿನಿಮಾಗಳನ್ನು ನೋಡಿ ನಾಯಕನ ಸ್ಟೈಲ್, ಬಾಡಿ ಲಾಂಗ್ವೇಜ್ ಎಲ್ಲವನ್ನು ಕರಗತ ಮಾಡಿಕೊಂಡಿದ್ದರು.

ಅಪರೂಪದ ಬಾಂಡ್ ಚಿತ್ರಗಳು
'ಜೇಡರ ಬಲೆ' ಚಿತ್ರದಲ್ಲಿ ಅಣ್ಣಾವ್ರ CID 999 ಪಾತ್ರ ಜನಪ್ರಿಯವಾಗಿತ್ತು. ಮುಂದೆ ಇದೇ ಪಾತ್ರವನ್ನು 'ಗೋವಾದಲ್ಲಿ CID 999', 'ಆಪರೇಷನ್ ಜಾಕ್‌ಪಾಟ್‌ನಲ್ಲಿ CID 999', ಹಾಗೂ 'ಆಪರೇಷನ್ ಡೈಮಂಡ್ ರಾಕೆಟ್' ಸಿನಿಮಾಗಳಲ್ಲಿ ಮುಂದುವರೆಸಲಾಯಿತು. ಒಂದೇ ಪಾತ್ರವನ್ನು ಹೀಗೆ 3 ಸಿನಿಮಾಗಳಲ್ಲಿ ಮುಂದುವರೆಸಿದ್ದು ಭಾರತೀಯ ಚಿತ್ರರಂಗದಲ್ಲೇ ಮೊದಲ ಪ್ರಯತ್ನ ಎನ್ನಿಸಿಕೊಂಡಿತ್ತು. 'ಆಪರೇಷನ್ ಗೋಲ್ಡನ್ ಗ್ಯಾಂಗ್' ಎನ್ನುವ ಮತ್ತೊಂದು ಸಿನಿಮಾವನ್ನು ನಿರ್ದೇಶಕದ್ವಯರು ಘೋಷಿಸಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಸೆಟ್ಟೇರಲಿಲ್ಲ.

ಪರಭಾಷೆಯಲ್ಲಿ ಬಾಂಡ್ ಸಿನಿಮಾ ಗೆಲ್ಲಲಿಲ್ಲ
ಕನ್ನಡದ 'ಜೇಡರ ಬಲೆ' ಸಿನಿಮಾ ನೋಡಿ ಮಲಯಾಳಂನಲ್ಲಿ ಪ್ರೇಮ್ ನಜೀರ್, ತೆಲುಗಿನಲ್ಲಿ ಕೃಷ್ಣ, ತಮಿಳಿನಲ್ಲಿ ಜೈಶಂಕರ್, ಹಿಂದಿಯಲ್ಲಿ ರಾಜೇಶ್ ಖನ್ನಾ ಬಾಂಡ್ ಶೈಲಿ ಸಿನಿಮಾಗಳನ್ನು ಮಾಡುವ ಪ್ರಯತ್ನ ಮಾಡಿದ್ದರು. ಆದರೆ ಕನ್ನಡದಲ್ಲಿ ಸಿಕ್ಕ ಸಕ್ಸಸ್ ಬೇರೆ ಭಾಷೆಗಳಲ್ಲಿ ಸಿಗಲಿಲ್ಲ. ಒಟ್ಟಿನಲ್ಲಿ ಕನ್ನಡದ 4 ಬಾಂಡ್ ಸಿನಿಮಾಗಳ ರುವಾರಿಗಳು ದೊರೆ- ಭಗವಾನ್. ನಮ್ಮನ್ನು ಬಿಟ್ಟರೆ ಬಾಂಡ್ ಸಿನಿಮಾ ಮಾಡಿ ಭಾರತೀಯ ಚಿತ್ರರಂಗದಲ್ಲಿ ಯಾರು ಗೆಲ್ಲಲಿಲ್ಲ ಎಂದು ಹಿಂದೆ ಫಿಲ್ಮಿಬೀಟ್ ಜೊತೆ ಮಾತನಾಡುತ್ತಾ ಎಸ್. ಕೆ ಭಗವಾನ್ ಹೇಳಿದ್ದರು.


Click it and Unblock the Notifications











