ಆಫ್ರಿಕಾದ ಶಾಲಾ ಮಕ್ಕಳಿಗೆ ಅ, ಆ, ಇ, ಈ ಹೇಳಿಕೊಟ್ಟ ಡಾ. ಬ್ರೋ
ಕರ್ನಾಟಕ ಮೂಲದ ಯೂಟ್ಯೂಬರ್ ಮತ್ತು ಟ್ರಾವೆಲ್ ವ್ಲಾಗರ್ ಡಾ. ಬ್ರೋ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ್ದಾರೆ. ದೇಶ ವಿದೇಶಗಳನ್ನು ಸುತ್ತಾಡಿ ಅಲ್ಲಿನ ಜನ, ಆಚಾರ, ವಿಚಾರ, ಆಹಾರ ಹಾಗೂ ಸಂಸ್ಕೃತಿ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡುತ್ತಿರುತ್ತಾರೆ. ಇನ್‌ಸ್ಟಾಗ್ರಾಂ, ಯೂಟ್ಯೂಬ್‌ನಲ್ಲಿ ಲಕ್ಷಾಂತರ ಜನ ಫಾಲೋವರ್ಸ್ ಹೊಂದಿದ್ದಾರೆ. ಇದೀಗ ಡಾ. ಬ್ರೋ ಆಫ್ರಿಕಾದ ಮಕ್ಕಳಿಗೆ ಪಾಠ ಮಾಡಿರುವ ವೀಡಿಯೋ ವೈರಲ್ ಆಗ್ತಿದೆ.
ಅಚ್ಚ ಕನ್ನಡದಲ್ಲಿ ತಮ್ಮ ವಿಭಿನ್ನ ಶೈಲಿಯ ಮಾತಿನ ಮೂಲಕ ಡಾ. ಬ್ರೋ ಮೋಡಿ ಮಾಡಿದ್ದಾರೆ. ದೂರದ ದೇಶಗಳಿಗೆ ತೆರಳಿ ಕನ್ನಡದಲ್ಲೇ ಆ ಪ್ರದೇಶದ ಚಿತ್ರಣವನ್ನು ಕಟ್ಟಿಕೊಡುತ್ತಾರೆ. ನೋಡುಗರಿಗೆ ಕುಳಿತಲ್ಲೇ ಆ ದೇಶದ ಪ್ರವಾಸ ಮಾಡಿ ಬಂದ ಅನುಭವ ಆಗುವಂತೆ ಮಾಡುತ್ತಾರೆ. ಈಗಾಗಲೇ ಹತ್ತಾರು ದೇಶಗಳಿಗೆ ಗಗನ್ ಶ್ರೀನಿವಾಸ್ ಅಲಿಯಾಸ್ ಡಾ. ಬ್ರೋ ಭೇಟಿ ನೀಡಿದ್ದಾರೆ. ಮತ್ತಷ್ಟು ದೇಶಗಳಿಗೆ ಹೋಗುವ ಕನಸು ಕಂಡಿದ್ದಾರೆ.

ಈಗಾಗಲೇ ಅಫ್ಘಾನಿಸ್ತಾನ, ರಷ್ಯಾ, ಆಸ್ಟ್ರೇಲಿಯಾ, ತುಜಕಿಸ್ತಾನ್, ನೈಜೀರಿಯಾ, ಚೀನಾ ಸೇರಿದಂತೆ ಕೆಲ ದೇಶಗಳಿಗೆ ಡಾ. ಬ್ರೋ ಪ್ರವಾಸ ಕೈಗೊಂಡಿದ್ದಾರೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಮಯದಲ್ಲಿ ಗಗನ್ ಗಮನ ಸೆಳೆದಿದ್ದರು. ಅಯೋಧ್ಯೆಯ ಬಗ್ಗೆಯೂ ಕನ್ನಡದಲ್ಲಿ ವ್ಲಾಗ್ ವೀಡಿಯೋಗಳನ್ನು ಮಾಡಿದ್ದರು. 'ನಮಸ್ಕಾರ ದೇವ್ರು' ಎಂದು ಹೇಳುತ್ತಾ ತಮ್ಮ ವೀಡಿಯೋಗಳನ್ನು ಆರಂಭಿಸುವ ಗಗನ್, ಬಹಳ ಸೊಗಸಾಗಿ ವೀಡಿಯೋ ಸೆರೆಹಿಡಿದು ತೋರಿಸುತ್ತಾರೆ.
ಸಾಮಾನ್ಯವಾಗಿ ಭಾರತದ ಕೆಲ ವ್ಲಾಗ್ಲರ್‌ಗಳು ವಿದೇಶಕ್ಕೆ ಹೋದರೂ ಸಾಧ್ಯವಾದಷ್ಟು ಇಂಗ್ಲೀಷ್ ಬಳಸುತ್ತಾರೆ. ಆದರೆ ಡಾ. ಬ್ರೋ ಬಹುತೇಕ ಕನ್ನಡದಲ್ಲೇ ಮಾತನಾಡುತ್ತಾರೆ. ಅಲ್ಲಿ ಸಿಗುವ ಜನರಿಗೆ ಕರ್ನಾಟಕ ರಾಜ್ಯ, ಕನ್ನಡ ಭಾಷೆ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತಾರೆ. ಸದ್ಯ ಪಶ್ಚಿಮ ಆಫ್ರಿಕಾದ ನೈಜಿರಿಯಾ ದೇಶಕ್ಕೆ ಡಾ. ಬ್ರೋ ಭೇಟಿ ನೀಡಿದ್ದಾರೆ. ಅಲ್ಲಿ ಮಾಡಿರುವ ವ್ಲಾಗ್ ವೀಡಿಯೋ ಭಾರೀ ಚರ್ಚೆ ಹುಟ್ಟಾಕ್ಕಿದೆ.
'ಚರಂಡಿ ನೀರಿನ ಮೇಲೆ ಸಾಮ್ರಾಜ್ಯ' ಎನ್ನುವ ಹೊಸ ವ್ಲಾಗ್ ವೀಡಿಯೋವನ್ನು ಡಾ. ಬ್ರೋ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನೈಜೀರಿಯಾದ ಲಾಗೋಸ್ ನಗರದ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಚರಂಡಿ ಮೇಲೆ ತೇಲುವಂತಹ ಮಕೊಕೊ ಸ್ಲಂ ಚಿತ್ರಣ ಬಿಚ್ಚಿಟ್ಟಿದ್ದಾರೆ. ಅಲ್ಲಿನ ಶಾಲೆಯೊಂದಕ್ಕೆ ಗಗನ್ ಭೇಟಿ ನೀಡಿದ್ದಾರೆ.
ಪ್ರಾಥಮಿಕ ಶಾಲೆಯ ತರಗತಿಯೊಂದಕ್ಕೆ ಹೋಗಿರುವ ಗಗನ್, ನಾನು ನಿಮ್ಮ ಶಾಲೆಗೆ ಬಂದಿರುವ ಹೊಸ ಶಿಕ್ಷಕ ಎಂದು ಪರಿಚಯಿಸಿಕೊಂಡಿದ್ದಾರೆ. ಭಾರತದ ರಾಜ್ಯ ಕರ್ನಾಟಕ, ಅಲ್ಲಿನ ಭಾಷೆ ಕನ್ನಡ ಎಂದು ಹೇಳಿದ್ದಾರೆ. ಭಾರತದಲ್ಲಿ ಒಂದು ಭಾಷೆ ಇದೆ. ಅದು ಬಹಳ ಜನಪ್ರಿಯ. ನಾನು ನಿಮಗೆ ಭಾರತದ ರಾಷ್ಟ್ರೀಯ ಭಾಷೆ ಕಲಿಸುತ್ತೇನೆ ಎಂದು ಹೇಳಿ ಅ, ಆ, ಇ, ಈ ಕನ್ನಡ ಅಕ್ಷರಮಾಲೆಯ ಸ್ವರಗಳನ್ನು ಹೇಳಿಕೊಟ್ಟಿದ್ದಾರೆ. ಕೊನೆಗೆ ನಮಸ್ತೆ ಎಂದು ಕೈಮುಗಿದು ಬಂದಿದ್ದಾರೆ.
ಆಫ್ರಿಕಾದ ಮಕ್ಕಳಿಗೆ ಕನ್ನಡ ಅಕ್ಷರಗಳನ್ನು ಹೇಳಿಕೊಟ್ಟ ಡಾ. ಬ್ರೋ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾರತದ ರಾಷ್ಟ್ರಭಾಷೆ ಹಿಂದಿ ಎನ್ನುವ ತಪ್ಪು ಕಲ್ಪನೆ ಸಾಕಷ್ಟು ಜನರಲ್ಲಿ ಇದೆ. ಸಂವಿಧಾನದ ಪ್ರಕಾರ ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆ ಎನ್ನುವುದು ಇಲ್ಲ, ಹಿಂದಿ ಹಾಗೂ ಇಂಗ್ಲಿಷ್ ಎರಡನ್ನೂ ಭಾರತದ ಅಧಿಕೃತ ಭಾಷೆ ಎಂದು ಪರಿಗಣಿಸಲಾಗುತ್ತದೆ ಅಷ್ಟೆ. ಆದರೆ ಕನ್ನಡ ಭಾಷೆಯನ್ನು ಭಾರತದ ರಾಷ್ಟ್ರಭಾಷೆ ಎಂದು ಹೆಮ್ಮೆಯಿಂದ ಆಫ್ರಿಕಾದಲ್ಲಿ ಹೇಳಿದ ಗಗನ್‌ನನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.
ಡಾ. ಬ್ರೋ ನೈಜಿರಿಯಾದ ವ್ಲಾಗ್ ವೀಡಿಯೋ ಸದ್ದು ಮಾಡ್ತಿದೆ. ರಾಜ್ಯೋತ್ಸವ ಸಂಭ್ರಮ ಹತ್ತಿರವಾಗುತ್ತಿರುವ ಸಮಯದಲ್ಲಿ ಕನ್ನಡ ಧ್ವಜವನ್ನು ಆಫ್ರಿಕಾದಲ್ಲಿ ಹಾರಿಸಿದ್ದೀಯಾ ಡಾ. ಬ್ರೋ ಎಂದು ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











