10 ನಿಮಿಷದಲ್ಲಿ ಚಿಕನ್ ಫ್ರೈ? ಸೋಶಿಯಲ್ ಮೀಡಿಯಾ ಸ್ಟಾರ್ ಬೆಳ್ಳುಳ್ಳಿ ಕಬಾಬ್ ಚಂದ್ರು ರೆಸಿಪಿ ಹೇಗಿದೆ?
ಇತ್ತೀಚೆಗೆ ಪ್ರತಿಭೆಗಳಿಗೆ ಸೋಶಿಯಲ್ ಮೀಡಿಯಾ ವೇದಿಕೆಯಾಗಿದೆ. ಇದೇ ಸೋಶಿಯಲ್ ಮೀಡಿಯಾವನ್ನು ಬಳಸಿಕೊಂಡು ಅದೆಷ್ಟೋ ಮಂದಿ ಜೀವನೋಪಾಯವನ್ನೂ ಮಾಡಿಕೊಂಡಿದ್ದಾರೆ. ಮತ್ತೆ ಕೆಲವು ಜನಪ್ರಿಯರಾಗಿದ್ದಾರೆ. ಇಂತಹವ್ರಲ್ಲಿ ಬೆಳ್ಳುಳ್ಳಿ ಕಬಾಬ್ ಚಂದ್ರು ಹಾಗೂ ರಾಹುಲ್ಲ ಕೂಡ ಸೇರಿಕೊಳ್ಳುತ್ತಾರೆ. ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಇವರ ಬಗ್ಗೆನೇ ಚರ್ಚೆ.
ಬೆಳ್ಳುಳ್ಳಿ ಕಬಾಬ್ ಚಂದ್ರು ಹಾಗೂ ಅವರ ಸಹಾಯಕ ರಾಹುಲ್ಲ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅವರ ರೆಸಿಪಿಗಳು ಕೂಡ ಫೇಮಸ್ ಆಗುತ್ತಿವೆ. ಜನರು ಹುಡುಕಿ ಹುಡುಕಿ ಆ ರೆಸಿಪಿಗಳನ್ನು ಮಾಡುತ್ತಿದ್ದಾರೆ. ಅಂತಹ ರೆಸಿಪಿಗಳಲ್ಲಿ ಹತ್ತೇ ನಿಮಿಷದಲ್ಲಿ ಮಾಡುವ ಚಿಕನ್ ಫ್ರೈ ಕೂಡ ಒಂದು. ಆ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಫಟಾಫಟ್ ಅಂತ ಅಡುಗೆ ಮಾಡುವ ವಿಧಾನವನ್ನು ಚಂದ್ರು ಹೇಳಿಕೊಡುತ್ತಾರೆ. ಹೀಗಾಗಿಯೇ ಬೆಳ್ಳುಳ್ಳಿ ಕಬಾಬ್ ಚಂದ್ರು ಹೇಳಿಕೊಡುವ ರೆಸಿಪಿಗಳನ್ನು ಜನರು ಇಷ್ಟ ಪಡುತ್ತಿದ್ದಾರೆ. ಅದರಲ್ಲೂ ಬ್ಯಾಚುಲರ್‌ಗಳಿಗಾಗಿ ಹೇಳಿಕೊಡುವ ರೆಸಿಪಿ ಫೇಮಸ್ ಆಗುತ್ತಿವೆ. ಚಂದ್ರು ಹೇಳುವಂತೆ "ನಮ್ಮ ಮನೆ ಹುಡುಗರಿಗೋಸ್ಕರ, ಕೆಲಸದಿಂದ ರಾತ್ರಿ ಬರುತ್ತಾರೆ. ಏನೋ ಒಂದು ಚಿಕನ್ ಮಾಡಬೇಕು. ಅರ್ಜೆಂಟ್ ಆಗಿ ಮಾಡೋದು. ಹೇಗೆ ಮಾಡೋದು? ನೋಡ್ತಾ ಇರಬೇಕು. ಕಲೀತಾ ಇರಬೇಕು. ಆಮೇಲೆ ಹೇಳ್ತಾ ಇರಬೇಕು. ಫಟಾ ಫಟ್ ಚಿಕನ್ ಮಾಡುವ ವಿಧಾನ." ಇಲ್ಲಿದೆ ನೋಡಿ.
ಚಂದ್ರು ಚಿಕನ್ ಫ್ರೈ ಮಾಡುವ ವಿಧಾನ
ಮೊದಲಿಗೆ ಒಂದು ಪಾತ್ರೆಯನ್ನು ತೆಗೆದುಕೊಳ್ಳುವುದು. ಅದಕ್ಕೆ ಎರಡು ಸ್ಪೂನ್ ಮೆಣಸಿನ ಪುಡಿ ಹಾಕಿಕೊಳ್ಳುವುದು. ಅದಕ್ಕೆ ಎರಡು ಸ್ಪೂನ್ ಧನಿಯಾ ಪುಡಿ. ಸ್ವಲ್ಪ ಅರಿಶಿಣ ಪುಡಿ. ರುಚಿಗೆ ತಕ್ಕಷ್ಟು ಉಪ್ಪು. ಗರಂ ಮಸಾಲಾ (ಚಂದ್ರು ಸ್ಪೆಷಲ್). ಮೂರು ಸ್ಪೂನ್ ಶುಂಠಿ, ಬೆಳ್ಳುಳ್ಳಿ ಪೇಸ್ಟ್. ಸ್ವಲ್ಪ ಪೆಪ್ಪರ್ ಪೌಡರ್. ಈಗ ಒಂದು ಕೆಜಿ ಚಿಕನ್ ಜೊತೆ ಇದೆಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಬೇಕು. ಆ ಮೇಲೆ ಒಂದು ಕಪ್ ಮೊಸರು ಹಾಕಬೇಕು. ಬಳಿಕ ಸ್ವಲ್ಪ ಪುದೀನ ಹಾಕಿಕೊಳ್ಳಬೇಕು. ಸ್ವಲ್ಪ ಕೊತ್ತಂಬರಿ ಸೊಪ್ಪು, ಎರಡು ಟಮೆಟೋ, ಎರಡು ಈರುಳ್ಳಿ, ಸ್ವಲ್ಪ ಕರಿಬೇವು, ಎಲ್ಲವನ್ನೂ ಸೇರಿ ಮಿಕ್ಸ್ ಮಾಡಬೇಕು. ಆನಂತರ ಸ್ವಲ್ಪ ನಿಂಬೆ ಹಣ್ಣಿನ ರಸ ಸೇರಿಸಬೇಕು.

ಇಷ್ಟೆಲ್ಲ ಆದ ಬಳಿಕ ದೊಡ್ಡ ಬಾಣಲೆಗೆ ಎಣ್ಣೆ ಹಾಕಿಕೊಳ್ಳಬೇಕು. ಅದಕ್ಕೆ ಎರಡು ಪಲಾವ್ ಎಲೆ, ಸ್ವಲ್ಪ ಸೋಂಪು ಹಾಕಿ ಸೌಟಿನಿಂದ ಕೈಯಾಡಿಸಬೇಕು. ಬಳಿಕ ಮ್ಯಾರಿನೇಟ್ ಮಾಡಲು ಇಟ್ಟಿದ್ದ ಚಿಕನ್ ಅನ್ನು ಬಾಣಲೆಗೆ ಹಾಕಬೇಕು. ಸ್ವಲ್ಪ ನೀರನ್ನು ಹಾಕಿ ಹದವಾದ ಉರಿಯಲ್ಲಿ ಬೇಯಿಸಬೇಕು.
ಫೈನಲ್ ಟಚ್
ಎರಡು ಚಕ್ಕೆ, ಎರಡು ಲವಂಗ, ಒಂದು ಐದು ಏಲಕ್ಕಿ, ಎರಡು ಹಸಿ ಮೆಣಸಿನ ಕಾಯಿ, ಸ್ವಲ್ಪ ತೆಂಗಿನ ತುರಿ, 6 ಗೋಡಂಬಿ, 6 ಬಾದಾಮಿ ಹಾಕಿ ರುಬ್ಬಿಕೊಳ್ಳಬೇಕು. ರುಬ್ಬಿದ ಬಳಿಕ ಬೇಯುತ್ತಿರುವ ಚಿಕನ್ ಫ್ರೈಗೆ ಹಾಕಬೇಕು. ಆನಂತ್ರ ಚೆನ್ನಾಗಿ ಮಿಕ್ಸ್ ಮಾಡಬೇಕು. ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು, ನಾಲ್ಕೈದು ಗೋಡಂಬಿ ಪೀಸ್‌ಗಳನ್ನು ಹಾಕಿದರೆ ಚಿಕನ್ ಫ್ರೈ ರೆಡಿಯಾಗುತ್ತೆ.
ಅಂದ್ಹಾಗೆ ಬೆಳ್ಳುಳ್ಳಿ ಕಬಾಬ್ ಚಂದ್ರು ಹೋಟೆಲ್ ಇಂಡಸ್ಟ್ರಿಗೆ ಬಂದು 31 ವರ್ಷ ಆಗಿದೆ. ಇವರು ಮಾಡುವ ಅಡುಗೆ ಪುನೀತ್ ರಾಜ್‌ಕುಮಾರ್, ಅಂಬರೀಶ್ ಅವರಿಗೆ ಫೇವರಿಟ್. ಇತ್ತೀಚೆಗೆ
ಯೂಟ್ಯೂಬ್‌ನಲ್ಲಿ ಇವರ ಅಡುಗೆ ನೋಡಿರುವುದರಿಂದ ಜನರು ಖುಷಿ ಪಡ್ತಿದ್ದಾರೆ. "ಜನರು ಒಂದೊಂದು ಮಾತು ಹೇಳಿದಾಗ, ಖುಷಿನೂ ಆಗುತ್ತೆ. ದು:ಖನೂ ಆಗುತ್ತೆ. ಇವತ್ತು ನನಗೆ ಅಡುಗೆ ಅನ್ನೋದು ಸರಸ್ವತಿ. ನನಗೆ ಅಡುಗೆ ಮಾಡಬೇಕು ಅಂದರೆ ಆಟ. ಇನ್ನೊಬ್ಬರಿಗೆ ತೋರಿಸಿಕೊಡಬೇಕು ಅಂದರೂ ಆಟ." ಎಂದು ಚಂದ್ರು ಹೇಳಿಕೊಂಡಿದ್ದಾರೆ.


Click it and Unblock the Notifications











