ಅಭಿಮಾನಿಗಳ ಪ್ರೀತಿಯ ಸಹಜ ನಟಿ ಸೌಂದರ್ಯ ಇನ್ನು ಅಲ್ಲಿ ಜೀವಂತ!
ಅಪರೂಪದ ಸುಂದರಿ ಸೌಂದರ್ಯ ಇಹಲೋಕ ತ್ಯಜಿಸಿ 19 ವರ್ಷ ಕಳೆದಿದೆ. ಪಂಚಭಾಷೆ ತಾರೆಯಾಗಿ ಮಿನುಗಿದ ಸೌಂದರ್ಯ ಬಹಳ ಚಿಕ್ಕ ವಯಸ್ಸಿನಲ್ಲೇ ಅಕಾಲಿಕ ಸಾವಿನ್ನಪ್ಪಿದ್ದರು. 2004ರ ಏಪ್ರಿಲ್ 17ರಂದು ಆಕೆ ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ದಿಢೀರನೆ ನೆಲಕ್ಕೆ ಅಪ್ಪಳಿಸಿ ಕೊನೆಯುಸಿರೆಳೆದರು. ಸ್ನಿಗ್ಧ ಸುಂದರಿ ಅಗಲಿ 2 ದಶಕ ಕಳರಯುತ್ತಾ ಬಂದರೂ ಅಭಿಮಾನಿಗಳ ಮನಸ್ಸಿನಿಂದ ಆಕೆ ದೂರಾಗಿಲ್ಲ.
ಕೇವಲ 13 ವರ್ಷಗಳ ಸಿನಿಕರಿಯರ್‌ನಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿ ಸೌಂದರ್ಯ ಮನೆ ಮಾತಾಗಿದ್ದರು. ನಮ್ಮ ಪಕ್ಕದ ಮನೆ ಹುಡುಗಿ ಎನ್ನುವ ಮಟ್ಟಿಗೆ ದಕ್ಷಿಣ ಭಾರತದಲ್ಲಿ ಜನಪ್ರಿಯರಾಗಿದ್ದರು. 1992ರಲ್ಲಿ ಕನ್ನಡದ 'ಗಂಧರ್ವ' ಚಿತ್ರದ ಮೂಲಕ ಚಿತ್ರರಂಗಕ್ಕೆ ಸೌಂದರ್ಯಾ ಪಾದಾರ್ಪಣೆ ಮಾಡಿದ್ದರು. ಆನಂತರ ನಿಧಾನವಾಗಿ ಪರಭಾಷೆಗೂ ಕಾಲಿಟ್ಟರು. ನೋಡ ನೋಡುತ್ತಲೇ ತಮಿಳು, ತೆಲುಗು ಕೊನೆಗೆ ಬಾಲಿವುಡ್ ಸಿನಿಮಾಗಳಲ್ಲೂ ಮಿಂಚಿ ಗಮನ ಸೆಳೆದರು. ರಜನಿಕಾಂತ್, ಅಮಿತಾಬ್ ಬಚ್ಚನ್, ವಿಷ್ಣುವರ್ಧನ್‌ರಂತಹ ದಿಗ್ಗಜರ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

ನಟಿಯಾಗಿ ಮಾತ್ರವಲ್ಲದೇ ನಿರ್ಮಾಪಕಿಯಾಗಿ 'ದ್ವೀಪ' ಸಿನಿಮಾ ನಿರ್ಮಿಸಿ ಸೌಂದರ್ಯ ಸಕ್ಸಸ್ ಕಂಡಿದ್ದರು. ಕನ್ನಡ ನಟಿಯಾದರೂ ಸೌಂದರ್ಯ ತೆಲುಗಿನಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರು. 1976, ಜುಲೈ 18ರಂದು ಸೌಮ್ಯ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಗಂಜಿಗುಂಟೆ ಗ್ರಾಮ ಹುಟ್ಟಿದರು. ಅಂದರೆ ಸೌಂದರ್ಯ ಜೀವಂತವಾಗಿ ಇದ್ದಿದ್ದರೆ ನಾಳೆ(ಜುಲೈ 18) 47ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು.

2004 ರಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿ ಸೌಂದರ್ಯ ಪಕ್ಷದ ಪರ ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿದ್ದರು. ಅಂದು ಕರೀಂನಗರದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಸಹೋದರನ ಜೊತೆ ಹೆಲಿಕ್ಯಾಪ್ಟರ್ ಏರಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಹೆಲೆಕ್ಯಾಪ್ಟರ್ ನೆಲಕ್ಕೆ ಅಪ್ಪಳಿಸಿತ್ತು. ಈ ದುರಂತ ನಡೆದ ಕೇವಲ 6 ತಿಂಗಳಿನಲ್ಲಿ ಅಮರನಾಥ್ ಅವರ ಪತ್ನಿ ನಿರ್ಮಲಾ ಅಮರನಾಥ್ 'ಅಮರ ಸೌಂದರ್ಯ ಫೌಂಡೇಶನ್' ಎಂಬ ಹೆಸರಿನಲ್ಲಿ ಶಾಲೆಯೊಂದನ್ನು ಆರಂಭಿಸಿದ್ದರು.
ವಿಶೇಷ ಚೇತನ ಮಕ್ಕಳ ನಗುವಲ್ಲಿ ಸೌಂದರ್ಯ
ಮೊದಲಿನಿಂದಲೂ ಸೌಂದರ್ಯ ಹಾಗೂ ಅಮರನಾಥ್ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಒಂದು ಶಾಲೆಯನ್ನು ಆರಂಭಿಸುವ ಬಗ್ಗೆ ನಿರ್ಮಲಾ ಸೇರಿದಂತೆ ಮೂವರು ಸದಾ ಚರ್ಚಿಸುತ್ತಿದ್ದರಂತೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ, ಕಲಿಕೆಯ ಸಾಮರ್ಥ್ಯವಿಲ್ಲದ ಮಕ್ಕಳನ್ನು ಎಲ್ಲರಂತೇ ಬದುಕಲು ಸಿದ್ಧಗೊಳಿಸುವ ಉದ್ದೇಶ ಈ ಶಾಲೆಯದ್ದು. ಈ ವಿಶೇಷ ಮಕ್ಕಳ ಸಾರ್ಥಕತೆಯ ನಗುವಿನಲ್ಲೇ ಪತಿ ಅಮರನಾಥ್ ಮತ್ತು ಅತ್ತಿಗೆ ಸೌಂದರ್ಯರನ್ನು ನಿರ್ಮಲಾ ಅವರು ಬದುಕಿಸಿಕೊಂಡಿದ್ದಾರೆ. ಈ ವಿಚಾರವನ್ನು ಕೆಲ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
ಇಬ್ಬರು ಅಗಲಿದ 6 ತಿಂಗಳಿಗೆ ಶಾಲೆ ಶುರು
ನಿರ್ದೇಶಕ ರಘುರಾಮ್ ಯೂಟ್ಯೂಬ್ ಸಂದರ್ಶನದಲ್ಲೂ ನಿರ್ಮಲಾ ಈ ಬಗ್ಗೆ ಮಾತನಾಡಿದ್ದರು. ಆ ದುರಂತ ನಡೆದ ನಂತರ ಅವರು ನಮ್ಮೊಟ್ಟಿಗೆ ಇಲ್ಲ ಎಂದು ನಮಗೆ ಅನ್ನಿಸಬಾರದು ಎನಿಸಿ ತಮ್ಮ ಮನೆಯ ಕೆಲ ಭಾಗದಲ್ಲೇ ವಿಶೇಷ ಶಾಲೆ ಆರಂಭಿಸಿದರು. ಗಿರೀಶ್ ಕಾರ್ನಾಡ್, ಹಿರಿಯ ನಟ ಶಿವರಾಂ ಶಾಲೆಯ ಬೋರ್ಡ್ ಮೆಂಬರ್ ಆಗಿದ್ದರು. ದುಃಖದ ಸಮಯದಲ್ಲಿ ತಾವು ತಮ್ಮನ್ನು ಶಾಲೆಯಲ್ಲಿ ತೊಡಗಿಸಿಕೊಂಡರು. ಮಗನಿಗೂ ಇದರಿಂದ ಧೈರ್ಯ ಬಂದಿತ್ತು.
ವಿಶೇಷ ಶಿಕ್ಷಣ ಪಡೆದ ನಿರ್ಮಲಾ
ಆಟಿಸಂ, ಕಲಿಕೆಯ ಸಾಮರ್ಥ್ಯವಿಲ್ಲದ ಮಕ್ಕಳು, ನಿಧಾನವಾಗಿ ಕಲಿಯುವ ಮಕ್ಕಳು ಇತ್ಯಾದಿ ಮಾನಸಿಕ ದೌರ್ಬಲ್ಯದಿಂದ ಬಳಲುತ್ತಿರುವ ಮಕ್ಕಳಿಗೆ ಈ ಶಾಲೆಯಲ್ಲಿ ಜೀವನಕ್ಕೆ ಬೇಕಾದ ಪಾಠಗಳನ್ನು ಕಲಿಸಲಾಗುತ್ತಿದೆ. ಶಾಲೆ ಆರಂಭಿಸಿದ ಬಳಿಕ ಇಂತಹ ಮಕ್ಕಳಿಗೆ ಪಾಠ ಮಾಡಲು ನಿರ್ಮಲಾ ಮತ್ತಷ್ಟು ಶಿಕ್ಷಣ ಪಡೆದುಕೊಂಡಿದ್ದಾರೆ. ಅಂತಹ ವಿಶೇಷ ಚೇತನ ಮಕ್ಕಳಲ್ಲಿ ನಿರ್ಮಾಲಾ ತಮ್ಮ ಪತಿ ಹಾಗೂ ಸೌಂದರ್ಯ ಅವರನ್ನು ನೋಡುತ್ತಿದ್ದಾರೆ.


Click it and Unblock the Notifications











