Sridevi Birth Anniversary: ಶ್ರೀದೇವಿ ನಟಿಸಿದ 5 ಕನ್ನಡ ಚಿತ್ರಗಳ ಪಟ್ಟಿ
ತಮಿಳುನಾಡು ಮೂಲದ ಶ್ರೀದೇವಿ ಎಂದೇ ಖ್ಯಾತಿಯನ್ನು ಹೊಂದಿರುವ ನಟಿ ಶ್ರೀ ಅಮ್ಮ ಯಾಂಗೆರ್ ಅಯ್ಯಪ್ಪನ್ ಅವರ 60ನೇ ಜನ್ಮದಿನವಿಂದು. ಹೌದು, 1963ರ ಆಗಸ್ಟ್ 13ರಂದು ಜನಿಸಿದ ಶ್ರೀದೇವಿ ಮೂಲತಃ ತಮಿಳುನಾಡಿನ ಮೂಲಂಪಟ್ಟಿಯವರು. ಹೀಗೆ ದಕ್ಷಿಣದ ತಮಿಳುನಾಡಿನಲ್ಲಿ ಜನಿಸಿದ್ದ ಶ್ರೀ ಅಮ್ಮ ಯಾಂಗೆರ್ ಅಯ್ಯಪ್ಪನ್ ನಂತರದ ದಿನಗಳಲ್ಲಿ ಬಾಲಿವುಡ್‌ನಲ್ಲಿ ಶ್ರೀದೇವಿ ಎಂಬ ಲೆಜೆಂಡ್ ಆಗಿ, ಸಿನಿ ರಸಿಕರು ಎಂದೂ ಮರೆಯದ ಕಲಾವಿದೆಯಾಗಿ ಉಳಿದುಕೊಂಡಿದ್ದಾರೆ.
ಹೌದು, ತಮಿಳು ನಾಡು ಮೂಲದ ನಟಿ ಶ್ರೀದೇವಿ ಬಾಲಿವುಡ್ ಚಿತ್ರರಂಗವನ್ನು ಆಳಿ ಸದ್ಯ ಎವರ್ ಗ್ರೀನ್ ಸ್ಟಾರ್ ಆಗಿ ಉಳಿದುಕೊಂಡಿರುವ ಕಲಾವಿದೆ. 1967ರಲ್ಲಿ ಬಿಡುಗಡೆಗೊಂಡ ಕಂದನ್ ಕರುಣೈ ಎಂಬ ತಮಿಳು ಚಿತ್ರದಲ್ಲಿ ಬಣ್ಣ ಹಚ್ಚುವ ಮೂಲಕ ಬಾಲ ನಟಿಯಾಗಿ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಶ್ರೀದೇವಿ 1969ರಲ್ಲಿ ತೆರೆಗೆ ಬಂದ ತುನೈವನ್ ಎಂಬ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ಬಾಲ ನಟಿಯಾಗಿ ಲೀಡ್ ರೋಲ್‌ನಲ್ಲಿ ನಟಿಸಲು ಆರಂಭಿಸಿದರು.

ತಮಿಳು ಭಾಷೆಯ ಚಿತ್ರಗಳು ಮಾತ್ರವಲ್ಲದೇ ಕನ್ನಡ, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿಯೂ ಸಹ ಬಾಲ ನಟಿಯಾಗಿ ನಟಿಸಿದ ಶ್ರೀದೇವಿ ತನ್ನ ಒಂಬತ್ತನೇ ವಯಸ್ಸಿಗೆ ಬಾಲಿವುಡ್‌ಗೂ ಸಹ ಕಾಲಿಟ್ಟರು. 1972ರಲ್ಲಿ ತೆರೆಗೆ ಬಂದ ರಾಣಿ ಮೇರಾ ನಾಮ್ ಚಿತ್ರದ ಮೂಲಕ ಶ್ರೀದೇವಿ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. 1976ರಲ್ಲಿ ತೆರೆಗೆ ಬಂದ ತಮಿಳಿನ ಮೂಂಡ್ರು ಮುಡಿಚ್ಚು ಎಂಬ ಸಿನಿಮಾದ ಮೂಲಕ ತನ್ನ ಹದಿಮೂರನೇ ವಯಸ್ಸಿಗೆ ಪೂರ್ಣ ಪ್ರಮಾಣದ ನಾಯಕಿಯಾದ ಶ್ರೀದೇವಿ ಬಹು ಬೇಗನೆ ಸೌತ್ ಚಿತ್ರರಂಗದ ಸ್ಟಾರ್ ನಟಿಯಾಗಿ ನೆಲೆ ನಿಂತರು.
1979ರಲ್ಲಿ ಬಿಡುಗಡೆಗೊಂಡ ಸೊಲ್ವ ಸಾವನ್ ಎಂಬ ಹಿಂದಿ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಬಾಲಿವುಡ್ ಪ್ರವೇಶಿಸಿದ ಶ್ರೀದೇವಿ ಬಳಿಕ ಬಾಲಿವುಡ್‌ನ ಬಹು ದೊಡ್ಡ ನಟರ ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದರ ಮೂಲಕ ಸ್ಟಾರ್ ನಟಿಯಾಗಿ ಗಟ್ಟಿಯಾಗಿ ನೆಲೆ ನಿಂತರು. ಇನ್ನು ಶ್ರೀದೇವಿ ಐದು ಕನ್ನಡ ಚಿತ್ರಗಳಲ್ಲಿಯೂ ಸಹ ನಟಿಸಿದ್ದು, ರಾಜ್‌ಕುಮಾರ್ ನಟನೆಯ ಭಕ್ತ ಕುಂಬಾರ ಸೇರಿದಂತೆ ಹಲವು ಚಿತ್ರಗಳಿಗಾಗಿ ಬಣ್ಣ ಹಚ್ಚಿದ್ದಾರೆ.
ಹೌದು, ಮೊದಲಿಗೆ ಭಕ್ತ ಕುಂಬಾರ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ಶ್ರೀದೇವಿ ಬಳಿಕ ಹೆಣ್ಣು ಸಂಸಾರದ ಕಣ್ಣು ಎಂಬ ಚಿತ್ರದಲ್ಲಿ ಪೋಷಕ ಪಾತ್ರ ನಿರ್ವಹಿಸಿದ್ದರು. ಅಲ್ಲದೇ ಬಾಲ ಭಾರತ ಹಾಗೂ ಯಶೋಧ ಕೃಷ್ಣ ಚಿತ್ರಗಳಲ್ಲಿ ನಟಿಸಿದ ಶ್ರೀದೇವಿ ರಜನಿಕಾಂತ್ ನಟನೆಯ ತಮಿಳು ಹಾಗೂ ಕನ್ನಡ ಭಾಷೆಗಳಲ್ಲಿ ಏಕ ಕಾಲಕ್ಕೆ ತೆರೆ ಕಂಡಿದ್ದ ಪ್ರಿಯಾ ಚಿತ್ರದಲ್ಲಿಯೂ ಸಹ ನಟಿಸಿದ್ದರು. ಹೀಗೆ ಶ್ರೀದೇವಿ ಒಟ್ಟು ಐದು ಕನ್ನಡ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.


Click it and Unblock the Notifications