twitter
    For Quick Alerts
    ALLOW NOTIFICATIONS  
    For Daily Alerts

    'ಮಾಲ್ಗುಡಿ ಡೇಸ್' ಕನ್ನಡದಲ್ಲಿ ಸಿದ್ಧವಾಗುವ ಹಿಂದಿನ ಶ್ರಮವೇನು?: ಹತ್ತು ವರ್ಷದ ಹೋರಾಟ ಹೇಗಿತ್ತು?

    By ಗಣೇಶ್ ಚೇತನ್
    |

    ಶಂಕರ್ ನಾಗ್ ನಿರ್ದೇಶಿಸಿದ್ದ ಕನ್ನಡಿಗರ ಹೆಮ್ಮೆಯ 'ಮಾಲ್ಗುಡಿ ಡೇಸ್' ಕೊನೆಗೂ ಕನ್ನಡಕ್ಕೆ ಡಬ್ ಆಗುವ ಮೂಲಕ ಕನ್ನಡಿಗರಿಗೆ ತಲುಪುತ್ತಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದು ಮೊದಲೇ ಆಗಬೇಕಾದ ಕೆಲಸ ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಆದರೆ ಅದರ ಹಿಂದಿನ ಪ್ರಯತ್ನ ಬಹಳ ಸುದೀರ್ಘವಾಗಿತ್ತು. ಈ ಹೋರಾಟದ ಪರಿಶ್ರಮದ ಕುರಿತು ಗಣೇಶ್ ಚೇತನ್ ಅವರು ನೀಡಿರುವ ಮಾಹಿತಿ ಇಲ್ಲಿದೆ.

    2008 ರಿಂದ ಬನವಾಸಿ ಬಳಗ / ಕನ್ನಡ ಗ್ರಾಹಕ ಕೂಟದಿಂದ ಎದ್ದ ಡಬ್ಬಿಂಗ್ ಪರವಾದ ಕೂಗು ಹಾಗೂ ಜನ ಜಾಗೃತಿ, 2012 ರಲ್ಲಿ ಕೋರ್ಟ್ ಮೆಟ್ಟಿಲೇರಿತ್ತು. ಡಬ್ಬಿಂಗ್ ತಡೆಯುತ್ತಿರುವ ಹತೋಟಿ ಕೂಟಗಳ ನಡೆಯನ್ನು ಪ್ರಶ್ನಿಸಿ ಕನ್ನಡ ಗ್ರಾಹಕ ಕೂಟವು ಸಿಸಿಐನಲ್ಲಿ ಕೇಸನ್ನು ದಾಖಲಿಸಿತ್ತು. ಅದು ಮುಂದುವರೆದು, 2015 ರಲ್ಲಿ ಸಿಸಿಐನಿಂದ ಡಬ್ಬಿಂಗ್ ಪರವಾದ ತೀರ್ಪು ಬಂದು, ಹತೋಟಿ ಕೂಟಗಳಿಗೆ ದಂಡವನ್ನು ವಿಧಿಸಿತ್ತು. ಅದಾದ ಮೇಲೆ, ಡಬ್ಬಿಂಗ್ ಚಿತ್ರಗಳನ್ನು ಹೊರತರಲು, ಡಬ್ಬಿಂಗ್ ಪರವಾದವರು ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದ್ದರು. ಮುಂದೆ ಓದಿ...

    ಡಬ್ಬಿಂಗ್ ಹೋರಾಟಕ್ಕೆ ಮತ್ತೊಂದು ಜಯ: ಕನ್ನಡದಲ್ಲಿ 'ಮಹಾಭಾರತ' ಪ್ರಸಾರ ಖಚಿತಡಬ್ಬಿಂಗ್ ಹೋರಾಟಕ್ಕೆ ಮತ್ತೊಂದು ಜಯ: ಕನ್ನಡದಲ್ಲಿ 'ಮಹಾಭಾರತ' ಪ್ರಸಾರ ಖಚಿತ

    ಡಬ್ಬಿಂಗ್ ಕಾರ್ಯಕ್ರಮಗಳ ಪ್ರಯತ್ನ

    ಡಬ್ಬಿಂಗ್ ಕಾರ್ಯಕ್ರಮಗಳ ಪ್ರಯತ್ನ

    2016ರ ಹೊತ್ತಿಗೆ ಸಮಾನ ಮನಸ್ಕರೆಲ್ಲಾ ಸೇರಿ, ಹಣ ಹೂಡಿ ಡಬ್ಬಿಂಗ್ ಚಿತ್ರಗಳನ್ನು ಮಾಡುವ ಕೆಲಸ ನಡೆಯುತ್ತಿತ್ತು. ಹೀಗೆ ಕೆಲಸ ಮಾಡುತ್ತಿರುವವರಿಗೆ, ಶಂಕರ್ ನಾಗ್ ಅವರ ಮೇರುಕೃತಿ ಮಾಲ್ಗುಡಿ ಡೇಸ್ ಅನ್ನು ಕನ್ನಡಕ್ಕೆ ತರಬೇಕು ಎಂಬ ತುಡಿತ ಹೆಚ್ಚಿತ್ತು. ಡಬ್ಬಿಂಗ್ ವಿರೋಧದಿಂದಾಗಿ ಕನ್ನಡಿಗರೇ ನಿರ್ಮಿಸಿದ್ದ ಈ ಧಾರಾವಾಹಿ ಕನ್ನಡದಲ್ಲಿ ಬರದಂತೆ ನೋಡಿಕೊಳ್ಳಲಾಗಿತ್ತು. ಆಗಲೇ ಹರಿವು ಕ್ರಿಯೇಷನ್ಸ್ ತಂಡದ ಸದಸ್ಯರು, ಕನ್ನಡ ಗ್ರಾಹಕ ಕೂಟ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ನೆರವಿನೊಂದಿಗೆ ಹಲವು ಡಬ್ಬಿಂಗ್ ಚಿತ್ರಗಳನ್ನು ಹೊರತರುವುದಕ್ಕಾಗಿ ಪ್ರಯತ್ನ ನಡೆಸುತ್ತಿತ್ತು. ಡಬ್ಬಿಂಗ್‌ನಿಂದ ಆಗುವ ಒಳಿತುಗಳನ್ನು ಅರಿತು, ಗಾಂಧಿನಗರದಲ್ಲಿ ಮೊತ್ತ ಮೊದಲ ಬಾರಿಗೆ ಡಬ್ಬಿಂಗ್ ಮಾಡಲು ಮುಂದೆ ಬಂದವರು ದರ್ಶನ್ ಎಂಟರ್‌ಪ್ರೈಸೆಸ್‌ನ ಕೃಷ್ಣ ಮೂರ್ತಿಯವರು. ಅವರ ಜೊತೆಗೂಡಿ ಸಿನೆಮಾಗಳನ್ನು ಡಬ್ ಮಾಡುವ ಕೆಲಸ ಒಂದೆಡೆ ಸಾಗುತ್ತಿತ್ತು.

    ಮಾಲ್ಗುಡಿ ಡೇಸ್ ಹಕ್ಕುಗಳ ಹುಡುಕಾಟ

    ಮಾಲ್ಗುಡಿ ಡೇಸ್ ಹಕ್ಕುಗಳ ಹುಡುಕಾಟ

    ಇತ್ತ, ಹರಿವು ತಂಡದವರು ಮಾಲ್ಗುಡಿ ಡೇಸ್‌ನ ಮೂಲವನ್ನು ಹುಡುಕುತ್ತಾ ಹೊರಟರು. ಮೊದಲಿಗೆ ಇದು, ಡಿಡಿ ನ್ಯಾಶನಲ್ ಚಾನೆಲ್ ಅವರ ಬಳಿ ಇರಬಹುದೆಂದು ತಿಳಿದು, ಅಲ್ಲಿ ವಿಚಾರಿಸಲಾಯಿತು. ಆದರೆ ಅದರ ಹಕ್ಕುಗಳು ಮೂಲ ನಿರ್ಮಾಪಕರ ಬಳಿಯೆ ಉಳಿದುಕೊಂಡಿದೆ ಎಂದು ತಿಳಿದರು. ಆದರೆ 2013ರಲ್ಲಿ ಅವರು ತೀರಿಹೋಗಿದ್ದರು. ಅವರಿಂದ ಮುಂದೆ ಆ ಹಕ್ಕುಗಳು ಯಾರಿಗೆ ಹೋಗಿದೆ ಎಂಬ ಮಾಹಿತಿ ಇರಲಿಲ್ಲ. ಅದರ ಹುಡುಕಾಟದಲ್ಲಿದ್ದ ತಂಡಕ್ಕೆ, ಮೂಲ ನಿರ್ಮಾಪಕರ ಮಗನನ್ನು ತಲುಪಲು ಸಾಧ್ಯವಾಯಿತು. ಕೊನೆಗೆ, ಅವರ ಮಗನಿಂದ ಒಬ್ಬ ಸಿನಿಮಾ ವ್ಯಾಪಾರಿಗೆ ಅದರ ಹಕ್ಕುಗಳು ಹೋಗಿವೆ ಎಂದು ತಿಳಿಯಿತು. ಅಷ್ಟರಲ್ಲಿ, ಕರ್ನಾಟಕದಲ್ಲಿ ಸತ್ಯದೇವ್ ಐಪಿಎಸ್ ಹಾಗೂ ಧೀರ ಚಿತ್ರಗಳು ತೆರೆಕಂಡು ಡಬ್ಬಿಂಗ್ ಪರವಾದ ಕೆಲಸದಲ್ಲಿ ಮುನ್ನಡೆ ಸಾಧಿಸಲಾಗಿತ್ತು.

    ಧಾರಾವಾಹಿಗಳ ಚಿತ್ರೀಕರಣಕ್ಕೆ ಸರ್ಕಾರ ವಿಧಿಸಿರುವ ಷರತ್ತುಗಳೇನು?: ಇಲ್ಲಿದೆ ವಿವರಧಾರಾವಾಹಿಗಳ ಚಿತ್ರೀಕರಣಕ್ಕೆ ಸರ್ಕಾರ ವಿಧಿಸಿರುವ ಷರತ್ತುಗಳೇನು?: ಇಲ್ಲಿದೆ ವಿವರ

    ಕಮಾಂಡೋ ಡಬ್ಬಿಂಗ್

    ಕಮಾಂಡೋ ಡಬ್ಬಿಂಗ್

    ಹರಿವು ತಂಡದವರು, 2017 ರಲ್ಲಿ ಹರಿವು ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನಲ್ಲಿ ಕಂಪನಿಯನ್ನು ಸ್ಥಾಪಿಸಿ, ಡಬ್ಬಿಂಗ್ ಚಿತ್ರಗಳನ್ನು ನಿರ್ಮಿಸುವ ಕೆಲಸಕ್ಕೆ ಕೈಹಾಕಿದರು. ಹರಿವು ಕ್ರಿಯೇಷನ್ಸ್ ಕಂಪನಿಯ ಮೊಟ್ಟ ಮೊದಲ ಪ್ರಾಜೆಕ್ಟ್ 'ಮಾಲ್ಗುಡಿ ಡೇಸ್' ಆಗಬೇಕು ಎಂಬ ಕನಸು ಅವರದಾಗಿತ್ತು. ಅದಕ್ಕಾಗಿ ಮತ್ತೊಮ್ಮೆ ಹುಡುಕಾಟ ಆರಂಭವಾಯಿತು. ಆದರೆ ಹಕ್ಕುಗಳ ಬಗ್ಗೆ ಸರಿಯಾದ ಮಾಹಿತಿ ಸಿಗಲಿಲ್ಲ, ಡಬ್ಬಿಂಗ್ ಚಿತ್ರಗಳ ಹರಿವು ನಿಲ್ಲಬಾರದು ಎಂಬ ಕಾರಣಕ್ಕೆ ಕೂಡಲೇ ಹಾಲಿವುಡ್ ಮಾದರಿಯ 'ಕಮಾಂಡೋ' ಚಿತ್ರವನ್ನು ಆರಿಸಿ ಡಬ್ ಮಾಡಿ, ಗಾಂಧಿನಗರದಿಂದ ಹಿಡಿದು ಕರ್ನಾಟಕದ ಉದ್ದಗಲಕ್ಕೂ ಬಿಡುಗಡೆ ಮಾಡಿದ್ದು ಈಗ ಇತಿಹಾಸ.

    ಸರಿ, 'ಕಮಾಂಡೊ' ಕೆಲಸ ಮುಗಿದ ಮೇಲೆ, ಮತ್ತೊಮ್ಮೆ 'ಮಾಲ್ಗುಡಿ ಡೇಸ್' ಹಿಂದೆ ಬಿದ್ದಿತು ಹರಿವು ತಂಡ. ಮುಂಬೈನ ಹಲವು ಪ್ರಯಾಣಗಳ ಬಳಿಕ, ಹಕ್ಕುಗಳು ನನ್ನ ಬಳಿ ಇವೆ ಎಂದು ಹೆಸರಾಂತ ಸಿನಿಮಾ ವ್ಯಾಪಾರಿಯೊಬ್ಬರು ಸಿಕ್ಕರು. ಸರಿ ಹಾಗಾದರೆ, ಮಾಡಿಯೇ ಬಿಡೋಣ ಎಂದು ಅವರೊಡನೆ ಮಾತುಕತೆ ಮಾಡಿ, ಎಪಿಸೋಡ್‌ಗೆ ಇಷ್ಟು ಹಣ ಎಂದು ನಿಗದಿ ಮಾಡಿ, ಐದು ವರ್ಷಗಳ ಮೊದಲ ಹಂತದ ಒಪ್ಪಂದವೂ ತಯಾರಿಯಾಯಿತು. ಈ ಪ್ರಾಜೆಕ್ಟ್‌ಗಾಗಿ ಹರಿವು ಕ್ರಿಯೇಷನ್ಸ್, ವಿಕ್ರಂ ಟೆಲ್ಲಿಸ್ ಎಂಬ ಆಪ್ತರೊಡನೆ ಸೇರಿ, ಒಟ್ಟಿಗೆ ಪ್ರಾಜೆಕ್ಟ್ ಮಾಡುವುದೆಂದು ತೀರ್ಮಾನಿಸಿ, ಅದರ ಜಾಹಿರಾತನ್ನು ಕೂಡ ಹೊರಹಾಕಿತ್ತು. ಮುಂಬೈ ತಿರುಗಾಟ, ಒಪ್ಪಂದ, ಜಾಹಿರಾತುಗಳಿಗಾಗಿ ಆಗಲೇ ಲಕ್ಷಾಂತರ ಹಣ ಖರ್ಚಾಗಿತ್ತು.

    ಡಬ್ಬಿಂಗ್‌ಗೆ ಅವಕಾಶವಿಲ್ಲ

    ಡಬ್ಬಿಂಗ್‌ಗೆ ಅವಕಾಶವಿಲ್ಲ

    ಆದರೆ ಆ ಸಿನಿಮಾ ವ್ಯಾಪಾರಿ, ಮಾಲ್ಗುಡಿ ಡೇಸ್ ಒಪ್ಪಂದದ ಮುಂದಿನ ಹಂತಗಳಿಗೆ ಬರಲೇ ಇಲ್ಲ. ಕರ್ನಾಟಕದಲ್ಲಿ ಡಬ್ಬಿಂಗ್ ಮಾಡುವ ಹಾಗಿಲ್ಲ, ತೊಂದರೆ ಆಗುವುದು ಅದಕ್ಕೆ ಇದನ್ನು ಕೊಡುವುದಿಲ್ಲ ಎಂದು ತಗಾದೆ ತೆಗೆದರು. ಅದರ ನಡುವೆಯೇ ವಿದೇಶ ಪ್ರಯಾಣಕ್ಕೆ ಹೋದವರು ತಿಂಗಳುಗಟ್ಟಲೆ ಕಾಲ ಕೈಗೆ ಸಿಗಲೇ ಇಲ್ಲ. ಇತ್ತ, ಜಗಮಲ್ಲ ಚಿತ್ರ ಮಾಡುವಲ್ಲಿ ಹರಿವು ತಂಡಕ್ಕೆ ಬಿಡುವಿಲ್ಲದಂತಾಯಿತು. ಅದು ಮುಗಿದ ಕೂಡಲೇ, ಮಾಲ್ಗುಡಿ ಡೇಸ್ ಬೆನ್ನತ್ತಿ, ಮತ್ತೊಮ್ಮೆ ಮುಂಬೈ ಪ್ರಯಾಣ ಮಾಡಿತು. ಮಾಲ್ಗುಡಿ ಡೇಸ್‌ಗಾಗಿ ಇಷ್ಟೊಂದು ಹುಡುಕಾಟ ಮಾಡುತ್ತಿರುವ ಈ ತಂಡದವರ ಪ್ರಯತ್ನ ಕಂಡು, ಒಂದು ಸನ್ನಿವೇಶದಲ್ಲಿ ಹಿಂದಿ ಚಿತ್ರರಂಗದ ದೊಡ್ಡ ಕಂಪನಿಯೊಂದು ನೆರವಿಗೆ ಬಂದಿತು. ಇದರ ಹಕ್ಕುಗಳ ಮೂಲ ಬೇರೆಲ್ಲೂ ಇಲ್ಲ, ಅಲ್ಟ್ರಾದವರ ಬಳಿ ಇದೆ ಎಂದು, ಅದರ ಸಿಇಓ ಫೋನ್‌ ನಂಬರನ್ನೇ ಒದಗಿಸಿತು.

    ಡಬ್ಬಿಂಗ್ ಮಾಡಲು ಸವಾಲು

    ಡಬ್ಬಿಂಗ್ ಮಾಡಲು ಸವಾಲು

    ಹಕ್ಕುಗಳ ಮೂಲವೇನೋ ಸಿಕ್ಕಿತು, ಇನ್ನು ಮುಂದಿದ್ದ ಸವಾಲೆಂದರೆ ಮಾಲ್ಗುಡಿ ಡೇಸ್‌ ಅನ್ನು ಕನ್ನಡಕ್ಕೆ ಡಬ್ ಮಾಡಲು ಅವರನ್ನು ಒಪ್ಪಿಸುವುದು. ಅದಕ್ಕಾಗಿ, ಇಡೀ ಮಾಲ್ಗುಡಿ ಡೇಸ್‌ನ ಹಿನ್ನಲೆ, #MalgudiDaysInKannada ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಆಗುತ್ತಿರುವ ಟ್ವಿಟರ್ ಟ್ರೆಂಡ್, ಈ ಟ್ರೆಂಡ್ ಕುರಿತು ಪತ್ರಿಕೆಗಳಲ್ಲಿ ಮೂಡಿಬಂದ ವರದಿ, ಮಾಲ್ಗುಡಿ ಡೇಸ್ ಶೂಟಿಂಗ್ ಆದ ಶಿವಮೊಗ್ಗದ ಅರಸಾಳು ರೈಲ್ವೇ ಸ್ಟೇಷನ್ ಅನ್ನು ಮಾಲ್ಗುಡಿ ಸ್ಟೇಷನ್ ಎಂದು ಬದಲಾಯಿಸಲು ಹೊರಟಿರುವ ವರದಿ, ಶಂಕರ್ ನಾಗ್ ಅವರಿಗೆ ಈಗಲೂ ಇರುವ ಬೇಡಿಕೆ ತಿಳಿಸಲು ಅವರ ಹೆಸರಲ್ಲಿರುವ ಆಟೋ ಸಂಘಗಳು, ಅಭಿಮಾನಿ ಬಳಗದ ಮಾಹಿತಿ, ಮಾಲ್ಗುಡಿಯಲ್ಲಿ ವಿಷ್ಣುವರ್ಧನ್, ಗಿರೀಶ್ ಕಾರ್ನಾಡ್, ರಮೇಶ್ ಭಟ್, ವೈಶಾಲಿ ಕಾಸರವಳ್ಳಿ, ಹೀಗೆ ಕನ್ನಡದ ಮೇರು ನಟರು ನಟಿಸಿದ್ದಾರೆ ಎಂಬ ವಿವರ, ಮಾಲ್ಗುಡಿ ಡೇಸ್ ಶೂಟಿಂಗ್ ಆಗಿದ್ದ ಕರ್ನಾಟಕದ ಜಾಗಗಳ ವಿವರ, ಹೀಗೆ ಮಾಲ್ಗುಡಿಯ ಇಂಚಿಂಚನ್ನು ಕಲೆಹಾಕಿ, ಅಲ್ಟ್ರಾ ಸಿಇಓ ಮುಂದೆ ಇಟ್ಟರು. ಇದನ್ನು ಕನ್ನಡದಲ್ಲಿ ಡಬ್ ಮಾಡಿ ಕೊಟ್ಟರೆ ಕರ್ನಾಟಕದ ಮಂದಿಗೆ ಆಗುವ ಉಪಯೋಗ ಹಾಗೂ ವ್ಯಾಪಾರದಲ್ಲಿ ಅವರಿಗಾಗುವ ಲಾಭವನ್ನು ತಿಳಿಸಿಕೊಡಲಾಯಿತು.

    ಈ ಎಲ್ಲಾ ವಿವರಗಳನ್ನು ಪಡೆದು, ಆಳವಾಗಿ ಅರಿತು, ಡಬ್ಬಿಂಗ್ ಹಕ್ಕುಗಳನ್ನು ಕೊಡುವುದಿಲ್ಲ, ಬದಲಾಗಿ ನಾವೇ ಡಬ್ ಮಾಡಿಸುತ್ತೇವೆ! ಎಂದು ತುಂಬು ಮನದಿಂದ ಅವರು ಮುಂದೆ ಬಂದರು. ನೀವೇ ಡಬ್ಬಿಂಗ್ ಸೇವೆ ಕೊಡಿ ಎಂದು ಅಲ್ಟ್ರಾದವರು ಹರಿವುಗೆ ಹೇಳಿದರು.

     ಎರಡು ಪುಟದ ಡೈಲಾಗ್‌ನ ದೃಶ್ಯವನ್ನು ಒಂದೇ ಶಾಟ್‌ನಲ್ಲಿ ಮುಗಿಸಿದ್ದರು ಈ 'ಪುಟ್ಟ ಗೌರಿ' ಎರಡು ಪುಟದ ಡೈಲಾಗ್‌ನ ದೃಶ್ಯವನ್ನು ಒಂದೇ ಶಾಟ್‌ನಲ್ಲಿ ಮುಗಿಸಿದ್ದರು ಈ 'ಪುಟ್ಟ ಗೌರಿ'

    ಡಬ್ಬಿಂಗ್ ದನಿಗಾಗಿ ಹುಡುಕಾಟ

    ಡಬ್ಬಿಂಗ್ ದನಿಗಾಗಿ ಹುಡುಕಾಟ

    ಅಂತೂ ಇನ್ನೊಂದು ಹೆಜ್ಜೆ ಮುಂದೆ ಹೋಗಲಾಗಿತ್ತು. ಡಬ್ ಮಾಡಿಸುವ ದೊಡ್ಡ ಜವಾಬ್ದಾರಿ ಹರಿವು ತಂಡದ ಮೇಲಿತ್ತು. ಕನ್ನಡ ಚಲನಚಿತ್ರರಂಗ ಕಂಡ ಮೇರು ಡಬ್ಬಿಂಗ್ ಕಲಾವಿದ ಅಂದರೆ ಸುದರ್ಶನ್ ಅವರು. ಅದಾಗಲೇ ಸತ್ಯದೇವ್ ಐಪಿಎಸ್ ಹಾಗೂ ಧೀರ ಚಿತ್ರಗಳನ್ನು ಡಬ್ ಮಾಡಿಕೊಟ್ಟಿದ್ದರು. ಸುದರ್ಶನ್ ಅವರೇ ಮಾಲ್ಗುಡಿಯನ್ನು ಕನ್ನಡಕ್ಕೆ ತರುವ ತಂತ್ರಜ್ಞರಾಗಲಿ ಎಂದು ತೀರ್ಮಾನಿಸಿ ಕೆಲಸ ಆರಂಭಿಸಲಾಯಿತು. ಅಬ್ಬಾ, ಮಾಸ್ಟರ್ ಮಂಜುನಾಥ್ ಅವರ ದನಿಗಾಗಿ ನಡೆದು ಹುಡುಕಾಟ ಅಷ್ಟಿಷ್ಟಲ್ಲ, ಹಲವಾರು ಹುಡುಗರ ದನಿಯನ್ನು ಒರೆಹಚ್ಚಿ ನೋಡಿದ ಮೇಲೆ, ಒಂದು ದನಿ ಆಯ್ಕೆಯಾಯಿತು. ಗಿರೀಶ್ ಕಾರ್ನಾಡ್, ಅನಂತ್ ನಾಗ್, ವಿಷ್ಣುವರ್ಧನ್, ಶಂಕರ್‌ನಾಗ್ ಎಲ್ಲರ ದನಿಗಳು ಮತ್ತೊಮ್ಮೆ ಕನ್ನಡದಲ್ಲಿ ಮೊಳಗಿದವು. ದನಿ ಕಲಾವಿದರ ಕೈಚಳಕ ಕೆಲಸಮಾಡಿತು. ಹಗಲಿರುಳು ಎನ್ನದೇ ಕೆಲಸ ಸಾಗಿತು. ಎಲ್ಲಾ 54 ಎಪಿಸೋಡ್‌ಗಳ ಕೆಲಸ ಮುಗಿದು ಅಮೆಜಾನ್‌ ಪ್ರೈಮ್‌ನಲ್ಲಿ ಮಾಲ್ಗುಡಿ ಡೇಸ್ ಕನ್ನಡ ಕಂಡಾಗ ಒಂದು ನಿಟ್ಟುಸಿರು ಬಿಟ್ಟಾಗಿತ್ತು.

    ಕನ್ನಡಿಗರು ಕನಸು ನನಸಾದ ಸಂದರ್ಭ

    ಕನ್ನಡಿಗರು ಕನಸು ನನಸಾದ ಸಂದರ್ಭ

    ನಮ್ಮ ಕೆಲಸ ಇಷ್ಟೇ ಅಲ್ಲ ಎಂಬುದು ಕನ್ನಡ ಗ್ರಾಹಕ ಕೂಟ ಹಾಗೂ ಹರಿವು ತಂಡಕ್ಕೆ ತಿಳಿದಿತ್ತು. ಮುಂದಿನದು ಟೀವಿಯಲ್ಲಿ ಬರುವ ಹಾಗೆ ಮಾಡುವುದು. ಅಲ್ಟ್ರಾದವರೊಡನೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದ ಹರಿವು ತಂಡ, ಯಾವುದೇ ಫಲಾಪೇಕ್ಷೆ ಇಲ್ಲದೇ ಟೀವಿಯಲ್ಲಿ ಇದನ್ನು ಮಾರಲು ಪ್ರಯತ್ನಿಸುವುದಾಗಿ ಹೇಳಿತ್ತು. ಸುಮಾರು ಒಂದು ವರ್ಷದಿಂದ ಕನ್ನಡ ಟೀವಿ ಚಾನೆಲ್‌ಗಳ ಬಾಗಿಲನ್ನು ಹಲವಾರು ಬಾರಿ ಬಡಿದಿತ್ತು. ಹೆಚ್ಚು ಕಡಿಮೆ ಎಲ್ಲಾ ಟೀವಿ ಚಾನೆಲ್‌ಗಳಿಗೂ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಅವರ ಮನವೊಲಿಸುವ ಹಲವು ಪ್ರಯತ್ನಗಳು ನಡೆದಿದ್ದವು. ಇತ್ತ ಕನ್ನಡಿಗರೂ ಕೂಡ ಟ್ವಿಟರ್‌ನಲ್ಲಿ ಎಡೆಬಿಡದೇ ಬೇಡಿಕೆ ಇಡುತ್ತಿದ್ದರು.

    ಅಂದೊಮ್ಮೆ, ಕೊರೊನಾ ಲಾಕ್‌ಡೌನ್ ಸಮಯದಲ್ಲಿ, ಮಾಲ್ಗುಡಿ ಡೇಸ್ ಕುರಿತು ಕನ್ನಡ ಗ್ರಾಹಕ ಕೂಟದವರು ಮಾಡಿದ್ದ ಟ್ವೀಟ್‌ ನೋಡಿದ ಜೀ ಕನ್ನಡದ ಮುಖ್ಯಸ್ಥರು ಇದರ ಮೇಲೆ ಆಸಕ್ತಿ ತೋರಿದರು. ಅದಾದ ಮೇಲೆ, ಹರಿವು ತಂಡದವರು ಬೇಕಾದ ಮಾಹಿತಿ ಒದಗಿಸಿ, ಮುಂಬೈನಲ್ಲಿ ಲಾಕ್‌ಡೌನ್ ಕಟ್ಟುನಿಟ್ಟಾಗಿರುವ ಕಾರಣ, ಬೇಕಾದ ಡಬ್ಬಿಂಗ್ ಫೈಲ್‌ಗಳನ್ನು ಕೂಡ ಒದಗಿಸಿ. ಮಾಲ್ಗುಡಿ ಡೇಸ್‌ಗೆ ಇನ್ಯಾವ ಅಡ್ಡಿ ಆತಂಕ ಬರದಿರಲಿ ಎಂದು ನೋಡಿಕೊಳ್ಳಲಾಯಿತು. ಕೊನೆಗೂ ಮೇ 11 ರಂದು, ಕನ್ನಡಿಗರ ಕನಸು ನೆನಸಾಯಿತು. ಇದಕ್ಕಾಗಿ ಎಡೆಬಿಡದೇ ದುಡಿದದ್ದು ಕನ್ನಡ ಗ್ರಾಹಕರ ಕೂಟ ಹಾಗೂ ಹರಿವು ಕ್ರಿಯೇಷನ್ಸ್ ತಂಡ. ಜೊತೆಗೆ ಕರ್ನಾಟಕ ರಕ್ಷಣಾ ವೇದಿಕೆಯವರ ಬೆಂಬಲ.

    English summary
    Kannada activist explaines the story and struggles behind Kannada dubbing process of Malgudi Days serial.
    Wednesday, May 13, 2020, 11:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X