ಆ ನಟನ ಋಣ ಮರೆಯೋಕೆ ಆಗಲ್ಲ, ಅದಕ್ಕೆ ನನ್ನ ಮಗನಿಗೆ ಅವ್ರ ಹೆಸ್ರು ಇಟ್ಟಿದ್ದೀನಿ; ರವಿವರ್ಮಾ
ಕನ್ನಡದ ಖ್ಯಾತ ಸ್ಟಂಟ್ ಮಾಸ್ಟರ್ ರವಿವರ್ಮಾ ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್ ಸಿನಿಮಾಗಳಿಗೆ ಆಕ್ಷನ್ ಕಂಪೋಸ್ ಮಾಡುತ್ತಿದ್ದಾರೆ. ಭಾರತೀಯ ಚಿತ್ರರಂಗದ ದೊಡ್ಡ ದೊಡ್ಡ ಕಲಾವಿದರು ರವಿವರ್ಮಾ ಡೇಟ್ಸ್‌ಗಾಗಿ ಕಾಯುವಂತಾಗಿದೆ. ಆದರೆ ಇವತ್ತಿಗೂ ಕನ್ನಡ ಚಿತ್ರರಂಗ, ಕನ್ನಡ ಸಿನಿಮಾಗಳನ್ನು ರವಿವರ್ಮಾ ಮರೆತ್ತಿಲ್ಲ.
ಒಂದ್ಕಾಲದಲ್ಲಿ ಜೀವನೋಪಾಯಕ್ಕಾಗಿ ಆಟೋ ಡ್ರೈವರ್ ಆಗಿದ್ದ ರವಿವರ್ಮಾ ಇವತ್ತು ಪ್ಯಾನ್ ಇಂಡಿಯಾ ಸ್ಟಾರ್ ಮಾಸ್ಟರ್. ಅಕ್ಷರಶಃ ಬೆವರು, ರಕ್ತ ಸುರಿಸಿ ಈ ಹಂತಕ್ಕೆ ಬೆಳೆದು ಬಂದಿದ್ದಾರೆ. ಈ ಹಾದಿಯಲ್ಲಿ ಸಾಕಷ್ಟು ಏಳುಬೇಳು ಕಂಡಿದ್ದಾರೆ. 'ಮಾಸ್ತಿಗುಡಿ' ದುರಂತದಿಂದ ಎಲ್ಲವೂ ಮುಗಿದೇ ಹೋಯಿತು ಎಂದುಕೊಂಡಿದ್ದ ರವಿ ಮತ್ತೆ ಎದ್ದು ಬಂದರು. ಸ್ಟಂಟ್ ಮಾಸ್ಟರ್ ಅಷ್ಟೇ ಅಲ್ಲದೇ ನಿರ್ದೇಶಕರಾಗಿ ನಿರ್ಮಾಪಕರಾಗಿ ಕೂಡ ರವಿವರ್ಮಾ ಗುರ್ತಿಸಿಕೊಂಡಿದ್ದಾರೆ.

ದರ್ಶನ್, ಸುದೀಪ್, ಪುನೀತ್ ರಾಜ್‌ಕುಮಾರ್, ಶಿವಣ್ಣ ಹೀಗೆ ಕನ್ನಡದ ಎಲ್ಲಾ ಸ್ಟಾರ್ ನಟರ ಜೊತೆಗೆ ಹೊಸ ಕಲಾವಿದರ ಜೊತೆ ರವಿವರ್ಮಾ ಕೆಲಸ ಮಾಡಿದ್ದಾರೆ. ಸಾಮಾನ್ಯ ಫೈಟರ್ ಆಗಿ ಚಿತ್ರರಂಗಕ್ಕೆ ಬಂದ ಅವರು ಹಂತ ಹಂತವಾಗಿ ಬೆಳೆದು ಕೊನೆಗೆ ಸ್ಟಂಟ್ ಮಾಸ್ಟರ್ ಆಗಿಬಿಟ್ಟರು. ಪ್ರಭುದೇವ ನಿರ್ದೇಶನದ 'R.. ರಾಜ್‌ಕುಮಾರ್' ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದರು. ಬಳಿಕ ಸಲ್ಮಾನ್ ಖಾನ್, ಶಾರುಖ್ ಖಾನ್, ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಸೇರಿದಂತೆ ಘಟಾನುಘಟಿ ಕಲಾವಿದರಿಗೆ ಆಕ್ಷನ್ ಕಂಪೋಸ್ ಮಾಡಿ ಗೆದ್ದಿದ್ದಾರೆ. ಆದರೆ ದರ್ಶನ್ ಋಣವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ರವಿವರ್ಮಾ ಹೇಳಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಸದ್ಯ ಜೈಲಿನಲ್ಲಿದ್ದಾರೆ. ಆದರೆ ಅವರ ಸಹಾಯವನ್ನು ಸಾಕಷ್ಟು ಜನ ಮರೆತ್ತಿಲ್ಲ. Kadakk Talks ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ರವಿವರ್ಮಾ ಮಾತನಾಡಿದ್ದಾರೆ. ಈ ವೇಳೆ ದರ್ಶನ್ ಅಂದು ಮಾಡಿದ್ದ ಸಹಾಯವನ್ನು ಮೆಲುಕು ಹಾಕಿದ್ದಾರೆ. ಅದೇ ಕಾರಣಕ್ಕೆ ನನ್ನ ಮಗನಿಗೆ ಅವರ ಹೆಸರು ಇಟ್ಟಿದ್ದೀನಿ ಎಂದು ತಿಳಿಸಿದ್ದಾರೆ. 'ಬ್ರಹ್ಮ' ಚಿತ್ರದಲ್ಲಿ ಮೊದಲ ಬಾರಿ ನಟಿಸಿದ್ದು. ಬಳಿಕ 'ಹಾಯ್ ಬೆಂಗಳೂರ್' ಚಿತ್ರದಲ್ಲಿ 500 ರೂ.ಗೆ ಕೆಲಸ ಮಾಡಿದ್ದೆ. ಮೂರು ಅಂತಸ್ತಿನ ಕಟ್ಟಡದ ಮೇಲಿಂದ ಕೆಳಗೆ ಬೀಳುವ ಸ್ಟಂಟ್ ಮಾಡ್ದೆ. ಆರಂಭದಲ್ಲಿ ಕೆಡಿ ವೆಂಕಟೇಶ್ ಅವ್ರು ನನಗೆ ಅವಕಾಶ ಕೊಟ್ಟರು ಎಂದು ರವಿವರ್ಮಾ ನೆನಪಿಸಿಕೊಂಡಿದ್ದಾರೆ.

ಫೈಟರ್ ಆಗಿ ಏಳೆಂಟು ವರ್ಷ ಕೆಲಸ ಮಾಡಿದ ಮೇಲೆ ಮಾಸ್ಟರ್ ಆಗಿ ರವಿವರ್ಮಾ ಅವರಿಗೆ ಅವಕಾಶ ಸಿಕ್ಕಿತ್ತು. ಫೈಟರ್ ಆಗಿದ್ದಾಗಲೂ ಮಾಸ್ಟರ್ ಆಗಿ ಅವಕಾಶ ಸಿಕ್ಕ ಬಳಿಕ ಕೂಡ ಆಟೋ ಓಡಿಸುವುದು ಬಿಟ್ಟಿರಲಿಲ್ಲ. 'ದಾಸ' ಸಿನಿಮಾ ಸೆಟ್‌ಗೆ ಹೋಗಿ ದರ್ಶನ್ ಅವರ ಬಳಿ ಮಾತನಾಡಿಬಂದೆ. 'ಮಹಾಭಾರತ' ಸಿನಿಮಾ ಸಮಯದಿಂದ ದರ್ಶನ್ ಸರ್ ಗೊತ್ತು. ಆಕ್ಷನ್ ವಿಚಾರದಲ್ಲಿ ಸಾಕಷ್ಟು ಸಲಹೆ ಸೂಚನೆ ಕೊಡ್ತಿದ್ದೆ. ಅದೆಲ್ಲಾ ಅವ್ರು ನೋಡಿದ್ರು. 6 ತಿಂಗಳ ಬಳಿಕ 'ಧರ್ಮ' ಚಿತ್ರಕ್ಕಾಗಿ ನನ್ನನ್ನು ಕರೆದ್ರು ಎಂದು ರವಿವರ್ಮಾ ಹೇಳಿದ್ದಾರೆ.
'ಧರ್ಮ' ಚಿತ್ರಕ್ಕೆ ಸುಂದರ್‌ನಾಥ್ ಸುವರ್ಣ. ಸ್ಟಂಟ್ ಮಾಸ್ಟರ್ ಅವಕಾಶ ಸಿಕ್ಕಿಬಿಡ್ತು. ಆದರೆ ಕ್ಯಾಮರಾ ಆಂಗಲ್ ಬಗ್ಗೆ ಗೊತ್ತಿರಲಿಲ್ಲ. ಆಗ ಸುಂದರ್‌ನಾಥ್ ಸರ್ ಬಹಳ ಸಹಾಯ ಮಾಡಿದ್ರು. ಅವರನ್ನು ಮರೆಯುವುದಿಲ್ಲ. 'ಧರ್ಮ' ಚಿತ್ರದ ಹೀರೊ ಇಂಟ್ರೊಡಕ್ಷನ್ ಫೈಟ್ ಕಂಪೋಸ್ ಮಾಡಿದ್ದೆ. ಅಲ್ಲಿಂದ ಇಲ್ಲಿಯವರೆಗೆ ನಡೆದು ಬಂದಿದ್ದೀನಿ. ಆ ಬಳಿಕ ಯಾವುದೇ ಸಿನಿಮಾ ಮಾಡಿದ್ರು, ಎಲ್ಲಾ ಫೈಟ್ಸ್ ಅಥವಾ ಒಂದೆರಡು ಫೈಟ್ ನಾನೇ ಕಂಪೋಸ್ ಮಾಡಬೇಕು ಎಂದು ದರ್ಶನ್ ಸರ್ ಅವಕಾಶ ಕೊಟ್ರು. ಅದೇ ಕೃತಜ್ಞತೆಗೆ ನನ್ನ ಮಗನಿಗೆ ಅವರ ಹೆಸರು ಇಟ್ಟಿದ್ದೀನಿ ಎಂದು ರವಿವರ್ಮಾ ತಿಳಿಸಿದ್ದಾರೆ.
ಕಷ್ಟಕಾಲದಲ್ಲಿ ಕೈಹಿಡಿದ ವ್ಯಕ್ತಿ.. ಯಾವುದೇ ಕಾರಣಕ್ಕೂ ಮರೆಯಬಾರದು.. ಬೇರೆ ಹೇಗೆ ಕೃತಜ್ಞತೆ ಸಲ್ಲಿಸುವುದು. ಟ್ಯಾಟೂ ಹಾಕಿಸಿಕೊಳ್ಳುವುದು, ಮನೆ ಕಟ್ಟಿಸಿ ಅವರ ಹೆಸರು ಇಡುವುದು ಎಲ್ಲಾ ನಾನು ಮಾಡಲ್ಲ. ಅದೇ ಸಮಯದಲ್ಲಿ ನನ್ನ ಮಗ ಹುಟ್ಟಿದ್ದ. 'A' ಅಕ್ಷರದಿಂದ ಹೆಸರು ಇಡಬೇಕು ಅಂದ್ರು.. ಆ ಸಮಯದಲ್ಲಿ 'ಆಕಾಶ್' ಸಿನಿಮಾ ರಿಲೀಸ್ ಆಗಿತ್ತು. ಹಾಗಾಗಿ 'ಆಕಾಶ್' ಅಂತ ಹೆಸರಿಡೋಣ ಎಂದು ಮನೆಯಲ್ಲಿ ಹೇಳಿದ್ರು. ನಾನು ಮಾತ್ರ ಪಟ್ಟು ಬಿಡಲಿಲ್ಲ. ದರ್ಶನ್ ಅಂತ ಹೆಸರಿಡ್ತೀನಿ. ಕಷ್ಟದ ಕಾಲದಲ್ಲಿ ಅವ್ರು ಕೈಹಿಡಿದ್ರು.. ನಾನು ಇರಲಿ ಇರದೇ ಇರಲಿ, ಮನೆಯಲ್ಲಿ ಅವರ ಹೆಸರು ಇದ್ರೆ ಸಾಕು.. ಈ ವಿಚಾರವನ್ನು ದರ್ಶನ್ ಅವರ ಬಳಿಕ ಕೂಡ ನಾನು ಹೇಳಿಕೊಂಡಿಲ್ಲ ಎಂದು ರವಿವರ್ಮಾ ಹೇಳಿರುವುದು ವೈರಲ್ ಆಗ್ತಿದೆ.
ನಾನು ಹೇಳಿಕೊಂಡಿಲ್ಲ. ಆದ್ರೆ ಇಂಡಸ್ಟ್ರಿಯಲ್ಲಿ ಕೆಲವರಿಗೆ ಗೊತ್ತು. ಬೇರೆಯವರಿಂದ ಈ ವಿಚಾರ ದರ್ಶನ್ ಅವರಿಗೂ ಗೊತ್ತಾಗಿರಬಹುದು. ಆದರೆ ಈ ಬಗ್ಗೆ ಚರ್ಚೆ ಎಂದು ಮಾಡಿಲ್ಲ ಎಂದು ರವಿವರ್ಮಾ ವಿವರಿಸಿದ್ದಾರೆ. ದರ್ಶನ್ ಸರ್ ಸಿನಿಮಾಗಾಗಿ ಪರಭಾಷೆಯ ಕೆಲ ಸಿನಿಮಾಗಳನ್ನು ಬಿಟ್ಟಿದ್ದೀನಿ. 'ಸಂಗೊಳ್ಳಿ ರಾಯಣ್ಣ' ಸಿನಿಮಾ ಸಮಯದಲ್ಲೇ ತೆಲುಗಿನ 'ಶಕ್ತಿ' ಸಿನಿಮಾ ಅವಕಾಶ ಸಿಕ್ಕಿತ್ತು. ಆದರೂ ಹೋಗಲಿಲ್ಲ ಎಂದು ವಿವರಿಸಿದ್ದಾರೆ.


Click it and Unblock the Notifications