ನಾಯಕ- ನಾಯಕಿ ಅಪ್ಪ, ಅಮ್ಮ ಅದಲು ಬದಲು ಮಾಡಿಬಿಟ್ಟಿದ್ರು ಶಶಾಂಕ್; 'ಬಚ್ಚನ್' ಚಿತ್ರದ ಫನ್ನಿ ಪ್ರಸಂಗ
ನಿಜ ಜೀವನಕ್ಕೆ ಹತ್ತಿರ ಎನ್ನುವಂತೆ ಸಿನಿಮಾಗಳನ್ನು ಕಟ್ಟಿಕೊಡುತ್ತಾರೆ. ಊಹೆಗೆ ನಿಲುಕದ ಒಂದಷ್ಟು ವಿಚಾರಗಲೂ ಇರುತ್ತವೆ. ಕೆಲವೊಮ್ಮೆ ಲಾಜಿಕ್ ಪಕ್ಕಕ್ಕಿಟ್ಟು ನೋಡಬೇಕಾಗುತ್ತದೆ. ಇನ್ನು ಫಿಲ್ಮ್ ಮೇಕರ್ಸ್ ಕೂಡ ಸಾಕಷ್ಟು ಚೀಟ್ ಮಾಡುತ್ತಿರುತ್ತಾರೆ. ಕೆಲ ತಪ್ಪುಗಳನ್ನು ಪ್ರೇಕ್ಷಕರು ಬಹಳ ಬೇಗ ಗುರ್ತಿಸಿಬಿಡುತ್ತಾರೆ. ಮತ್ತೆ ಕೆಲವು ಅಷ್ಟು ಸುಲಭಕ್ಕೆ ಗೊತ್ತಾಗಲ್ಲ.
13 ವರ್ಷಗಳ ಹಿಂದೆ ಸುದೀಪ್ ನಟನೆಯ 'ಬಚ್ಚನ್' ಸಿನಿಮಾ ತೆರೆಗೆ ಬಂದಿತ್ತು. ಶಶಾಂಕ್ ನಿರ್ದೇಶನದ ಚಿತ್ರವನ್ನು ಉದಯ್ ಕೆ. ಮೆಹ್ತಾ ನಿರ್ಮಿಸಿದ್ದರು. ಪಾರುಲ್ ಯಾದವ್, ಜಗಪತಿ ಬಾಬು, ಜೈ ಜಗದೀಶ್, ಸುಧಾ ಬೆಳವಾಡಿ, ರಾಮಕೃಷ್ಣ ಪದ್ಮಜಾ ರಾವ್, ಆಶಿಶ್ ವಿದ್ಯಾರ್ಥಿ, ನಾಸರ್ ಹೀಗೆ ದೊಡ್ಡ ತಾರಾಗಣವೇ ಚಿತ್ರದಲ್ಲಿತ್ತು. ಚಿತ್ರದಲ್ಲಿ ನಾಯಕ ಭರತ್(ಸುದೀಪ್) ತಂದೆ ಪಾತ್ರದಲ್ಲಿ ಜೈಜಗದೀಶ್, ತಾಯಿ ಪಾತ್ರದಲ್ಲಿ ಸುಧಾ ಬೆಳವಾಡಿ ನಟಿಸಿದ್ದರು. ನಾಯಕಿ ಅಂಜಲಿ (ಪಾರುಲ್ ಯಾದವ್) ಪೋಷಕರಾಗಿ ರಾಮಕೃಷ್ಣ ಹಾಗೂ ಪದ್ಮಜಾ ರಾವ್ ಬಣ್ಣ ಹಚ್ಚಿದ್ದರು.

ಸನ್ನಿವೇಶವೊಂದರಲ್ಲಿ ರಾಮಕೃಷ್ಣ ಪತ್ನಿ ಸುಧಾ ಬೆಳವಾಡಿ ಹಾಗೂ ಜೈಜಗದೀಶ್ ಪತ್ನಿ ಪದ್ಮಜಾ ರಾವ್ ಎನ್ನುವಂತೆ ಚಿತ್ರಿಸಿಬಿಟ್ಟಿದ್ದರು. ಸಿನಿಮಾ ನೋಡುವಾಗ ಈ ಬಗ್ಗೆ ಅಷ್ಟು ಸುಲಭವಾಗಿ ಯಾರಿಗೂ ಗೊತ್ತಾಗಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಹೌದಲ್ವಾ ಎನಿಸದೇ ಇರದು. ಈ ತಮಾಷೆಯ ಘಟನೆಯನ್ನು ಸ್ವತಃ ಹಿರಿಯ ನಟಿಯರಾದ ಸುಧಾ ಬೆಳವಾಡಿ ಹಾಗೂ ಪದ್ಮಜಾ ರಾವ್ 'ಗೋಲ್ಡ್‌ಕ್ಲಾಸ್ ವಿತ್ ಮಯೂರ' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.
ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಸುಧಾ ಹಾಗೂ ಪದ್ಮಜಾ ಈ ವಿಶೇಷ ಸಂದರ್ಶನದಲ್ಲಿ ಭಾಗಿ ಆಗಿದ್ದರು. ಇಬ್ಬರೂ ತಮ್ಮ ಸಿನಿ ಜೀವನವನ್ನು ಮೆಲುಕು ಹಾಕಿದ್ದಾರೆ. ಸಾಕಷ್ಟು ಸಿನಿಮಾಗಳ ಮೇಕಿಂಗ್ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇದೇ ವೇಳೆ 'ಬಚ್ಚನ್' ಚಿತ್ರದ ಈ ತಮಾಷೆ ಪ್ರಸಂಗವನ್ನು ನೆನಪಿಸಿಕೊಂಡು ನಕ್ಕಿದ್ದಾರೆ. ವಿಡಿಯೋ ಫುಲ್ ವೈರಲ್ ಆಗುತ್ತಿದೆ.
ಸುಧಾ ಬೆಳವಾಡಿ ಮಾತನಾಡಿ "ಬಚ್ಚನ್ ಚಿತ್ರದ ಚಿತ್ರೀಕರಣದಲ್ಲಿ ಒಂದು ಫನ್ನಿ ಇನ್ಸಿಡೆಂಟ್ ಆಗಿತ್ತು. ನಾಯಕಿ ಪಾರುಲ್ ಯಾದವ್ ಮೈಯೆಲ್ಲಾ ಸುಟ್ಟು ಹೋಗಿ ಆಸ್ಪತ್ರೆಗೆ ಕರೆದುಕೊಂಡು ಬರುವ ಸನ್ನಿವೇಶ ಇದೆ. ಆಕೆಯನ್ನು ಸ್ಟ್ರೆಚರ್‌ನಲ್ಲಿ ತಳ್ಳಿಕೊಂಡು ಹೋಗುವ ಸನ್ನಿವೇಶ. ನಾನು-ರಾಮಕೃಷ್ಣ ಹಾಗೂ ಪದ್ಮಜಾ ಹಾಗೂ ಜೈ ಜಗದೀಶ್ ನೆರಹೊರೆ ಮನೆಯವರು. ನಾನು ಪಾರುಲ್ ಅಮ್ಮನ ಪಾತ್ರ ಮಾಡ್ತಿದ್ದೆ. ಗಾಬರಿಯಲ್ಲಿ ತಳ್ಳಿಕೊಂಡು ಹೋಗುವ ಸನ್ನಿವೇಶ. ಕೊಂಚ ಹೊತ್ತಿನ ಬಳಿಕ ಬ್ರೇಕ್ ಅಂದ್ರು. ಮುಗೀತು" ಎಂದು ಆ ಘಟನೆ ಬಗ್ಗೆ ಮಾತನಾಡಿದ್ದಾರೆ.
ಬ್ರೇಕ್ ಮುಗಿಸಿ ಮತ್ತೆ ಚಿತ್ರೀಕರಣ ಆರಂಭವಾದಾಗ ಏನಾಯ್ತು ಎಂದು ಹೇಳಿ ಇಬ್ಬರೂ ನಕ್ಕಿದ್ದಾರೆ. "ಮತ್ತೆ ಚಿತ್ರೀಕರಣ ಶುರವಾದಾಗ ನಿರ್ದೇಶಕ ಶಶಾಂಕ್ ಮೈಕ್ ಹಿಡಿದು ನೀವು ಪಾರುಲ್ ಅಮ್ಮ, ಅವ್ರು ಸುದೀಪ್ ಅಮ್ಮ, ನಿಮ್ಮ ಜೋಡಿ ರಾಮಕೃಷ್ಣ ಎಂದು ಬದಲಿಸಿಬಿಟ್ರು. ಅಲ್ಲ ಸರ್, ನಾನು ರಾಮಕೃಷ್ಣ ಅವರ ಜೊತೆ ಬಂದ್ರೆ ತಪ್ಪಾಗುತ್ತಲ್ಲ ಅಂದೆ, ಇರಲಿ ಬಿಡ್ರಿ, ನೆರೆಹೊರೆ ಮನೆಯವರು ತಾನೇ, ಏನು ಗೊತ್ತಾಗಲ್ಲ ಎಂದು ಹೇಳಿದ್ದಾಗಿ" ತಿಳಿಸಿ ನಕ್ಕಿದ್ದಾರೆ.
ಈ ಸಂದರ್ಶನ ವೈರಲ್ ಆಗುತ್ತಿದ್ದಂತೆ ಕೆಲವರು ಯೂಟ್ಯೂಬ್‌ನಲ್ಲಿ 'ಬಚ್ಚನ್' ಚಿತ್ರದ ಆ ದೃಶ್ಯವನ್ನು ಮತ್ತೊಮ್ಮೆ ನೋಡುತ್ತಿದ್ದಾರೆ. ಅರೇ, ಹೌದಲ್ವಾ.. ಇದು ಸಿನಿಮಾ ನೋಡುವಾಗ ಗಮನಿಸಿರಲಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 2013ರಲ್ಲಿ ತೆರೆಗೆ ಬಂದಿದ್ದ ಸಿನಿಮಾ ಸುದೀಪ್ ಅಭಿಮಾನಿಗಳ ಮನಗೆದ್ದಿತ್ತು. ಆದರೆ ದೊಡ್ಡಮಟ್ಟದಲ್ಲಿ ಯಶಸ್ಸು ಸಿಕ್ಕಿರಲಿಲ್ಲ.


Click it and Unblock the Notifications











