83 ವರ್ಷ ವಯಸ್ಸಿನ ಹಿರಿಯ ವ್ಯಕ್ತಿಯನ್ನು ತಂದೆಯಾಗಿ ದತ್ತು ಪಡೆದ ರಜನಿಕಾಂತ್; ಆದ್ರೆ..
ರೀಲ್ ಮಾತ್ರವಲ್ಲ ರಿಯಲ್ ಲೈಫ್‌ನಲ್ಲಿ ರಜನಿಕಾಂತ್ ಹೀರೊ. ತಮ್ಮ ಸರಳ ಸಜ್ಜನ ವ್ಯಕ್ತಿತ್ವ ಹಾಗೂ ಸೇವಾಗುಣದಿಂದ ತಲೈವಾ ಎಲ್ಲರಿಗೂ ಮಾದರಿ ಆಗಿದ್ದಾರೆ. ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಬಸ್ ಕಂಡೆಕ್ಟರ್ ಆಗಿದ್ದ ಶಿವಾಜಿರಾವ್ ಗಾಯಕ್‌ವಾಡ್ ಮುಂದೆ ರಜನಿಕಾಂತ್ ಆಗಿ ಕೀರ್ತಿಯ ಶಿಖರವೇರಿದರು.
ಎಷ್ಟೇ ಎತ್ತರಕ್ಕೆ ಏರಿದರೂ ರಜನಿಕಾಂತ್ ಹಳೆಯದನ್ನು ಮರೆತವರಲ್ಲ. ಬಡ ಕುಟುಂಬದಿಂದ ಬಂದ ತಲೈವಾ ಅಸಹಾಯಕರನ್ನು ಕಂಡರೆ ಮರಗುತ್ತಾರೆ. ಕೈಲಾದಷ್ಟು ಸಹಾಯ ಮಾಡುತ್ತಾರೆ. ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡ ಶಿವಾಜಿರಾವ್ ಬಳಿಕ ಸಹೋದರನ ಆರೈಕೆಯಲ್ಲಿ ಬೆಳೆದವರು. ಹಾಗಾಗಿ ತಂದೆ-ತಾಯಿ ಆಪ್ತರು, ಸ್ನೇಹಿತರ ಬಗ್ಗೆ ರಜನಿಗೆ ಬಹಳ ಕಾಳಜಿ, ಪ್ರೀತಿ.

ಹಿರಿಯ ವ್ಯಕ್ತಿಯೊಬ್ಬರನ್ನು ರಜನಿಕಾಂತ್ ದತ್ತು ಪಡೆದುಕೊಂಡಿದ್ದಾರೆ ಎಂದರೆ ನೀವು ನಂಬುತ್ತೀರಾ? ಅಚ್ಚರಿ ಎನಿಸಿದರು ಇದು ನಿಜ. ಸಾಮಾನ್ಯವಾಗಿ ಮಕ್ಕಳನ್ನು ದತ್ತು ಪಡೆಯುತ್ತಾರೆ. ಆದರೆ ರಜನಿಕಾಂತ್ ಮಾತ್ರ ಪಿ. ಕಲ್ಯಾಣಸುಂದರಂ ಎಂಬ ಮಹಾನ್ ವ್ಯಕ್ತಿಯನ್ನು ತಂದೆ ಎಂದು ಸ್ವೀಕರಿಸಿದ್ದರು. 12 ವರ್ಷಗಳ ಹಿಂದೆ ಪಿ. ಕಲ್ಯಾಣಸುಂದರಂ ಅವರನ್ನು ನಮ್ಮ ಮನೆಗೆ ಬಂದು ನಮಗೆಲ್ಲಾ ಹಿರಿಯರಾಗಿ ಇರಿ ಎಂದು ಕೇಳಿಕೊಂಡಿದ್ದರು.
ಅಷ್ಟಕ್ಕೂ ಪಿ. ಕಲ್ಯಾಣಸುಂದರಂ ಯಾರು ಎನ್ನುವ ಪ್ರಶ್ನೆ ಮೂಡುವುದು ಸಹಜ. ನಿಜ ಹೇಳಬೇಕು ಅಂದ್ರೆ ತಲೈವಾಗಿಂತ ದೊಡ್ಡ ದಾನಿ ಈತ. ತಾನು ಜೀವನದಲ್ಲಿ ದುಡಿದ ಅಷ್ಟು ಹಣವನ್ನು ಬಡವರಿಗಾಗಿ ದಾನ ಮಾಡಿದ ಮಹಾನ್ ವ್ಯಕ್ತಿ. ಗ್ರಂಥಪಾಲಕರಾಗಿ ಹಲವು ವರ್ಷ ಸೇವೆ ಸಲ್ಲಿಸಿದ ಕಲ್ಯಾಣಸುಂದರಂ ತಮ್ಮ 30 ವರ್ಷಗಳ ದುಡಿದ ಹಣವನ್ನು ನಿರ್ಗತಿಕರಿಗೆ ನೀಡಿದ್ದರು.

10 ವರ್ಷಗಳ ಕಾಲ ಹೋಟೆಲ್‌ನಲ್ಲಿ ಸರ್ವರ್ ಆಗಿ ಕೆಲಸ ಮಾಡಿದ್ದ ಪಿ. ಕಲ್ಯಾಣಸುಂದರಂ 10 ವರ್ಷಗಳ ತಮ್ಮ ಪಿಂಚಣಿ ಹಣವನ್ನು ಕೂಡ ಚಾರಿಟಿವೊಂದಕ್ಕೆ ನೀಡಿದ್ದರು. ಮದುವೆ, ಮಕ್ಕಳು ಯಾರು ಇಲ್ಲದ ಅವರು ಒಬ್ಬೊಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಅಮೆರಿಕದ ಸಂಸ್ಥೆಯೊಂದು ಇವರಿಗೆ 'ಮ್ಯಾನ್ ಆಫ್ ದಿ ಮಿಲೇನಿಯಂ' ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿಯ ಭಾಗವಾಗಿ 30 ಕೋಟಿ ರೂ. ಪಡೆದಿದ್ದರು. ಅದನ್ನು ಕೂಡ ಬಡವರಿಗೆ ಕೊಟ್ಟಿದ್ದರು.
ಹಿಂದೆ ರಜನಿಕಾಂತ್ ಒಡೆತನದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಪಿ. ಕಲ್ಯಾಣಸುಂದರಂ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆದಿತ್ತು. ಕಲ್ಯಾಣಸುಂದರಂ ಅವರನ್ನು ತಂದೆ ಎಂದು ದತ್ತು ಪಡೆಯುವುದಾಗಿ ಹೇಳಿದ್ದಾರೆ. ಪ್ರಪಂಚದಲ್ಲಿ ಯಾರು ಕೂಡ ತಮ್ಮ ಜೀವನದ ಅಷ್ಟು ಸಂಪಾದನೆಯನ್ನು ಬಡವರಿಗೆ ನೀಡಿದ ಉದಾಹರಣೆಯಿಲ್ಲ. ಇದೇ ಕಾರಣಕ್ಕೆ ಬೇರೆ ಬೇರೆ ದೇಶದವರು ಇವರ ಸಾಧನೆ ಗುರ್ತಿಸಿ ಸನ್ಮಾನಿಸಿದ್ದಾರೆ. ಪಾಲಂ ಎನ್ನುವ ಎನ್‌ಜಿಓ ಕೂಡ ನಡೆಸುತ್ತಿದ್ದಾರೆ.
ಪಿ. ಕಲ್ಯಾಣಸುಂದರಂ ಅವರ ಸೇವಾಗುಣ ಹಾಗೂ ಅವರಿಗೆ ಯಾರು ಇಲ್ಲ ಎನ್ನುವುದನ್ನು ಗಮನಿಸಿ ರಜನಿಕಾಂತ್ ದತ್ತು ಪಡೆಯುವುದಾಗಿ ಹೇಳಿದ್ದರು. ನನಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಆದರೆ ತಂದೆ ಇಲ್ಲ. ನೀವು ನಮಗೆ ಹಿರಿಯರಾಗಿ ನಮ್ಮೊಟ್ಟಿಗೆ ಇರಿ ಎಂದಿದ್ದರಂತೆ. ಪತ್ನಿ ಲತಾ ಕೂಡ ಅದಕ್ಕೆ ದನಿ ಗೂಡಿಸಿದ್ದರಂತೆ. ಆದರೆ ಅದಕ್ಕೆ ಪಾಲಂ ಕಲ್ಯಾಣಸುಂದರಂ ಒಪ್ಪಲಿಲ್ಲ. ಇವತ್ತಿಗೂ ಸಣ್ಣದೊಂದು ಮನೆಯಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ಆದರೆ ರಜನಿಕಾಂತ್ ಹಾಗೂ ಪತ್ನಿ ಲತಾ ಅವರ ಒಳ್ಳೆ ಮನಸ್ಸಿನ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ.


Click it and Unblock the Notifications










