ಸವಿ ಸವಿ ನೆನಪು, ಸಾವಿರ ನೆನಪು, ಬೆಂಗಳೂರಿನ ತಮ್ಮ ಶಾಲಾ ದಿನಗಳನ್ನು ನೆನೆದ ರಜನಿಕಾಂತ್, ಕನ್ನಡದಲ್ಲಿ ಹೇಳಿದ್ದೇನು ?
ರಜನಿಕಾಂತ್ ಭಾರತದ ಸೂಪರ್ ಸ್ಟಾರ್. ಇಡೀ ವಿಶ್ವಕ್ಕೆ ಗೊತ್ತಿರುವ ಮಹಾನಾಯಕ. ಚೆನ್ನೈ-ಬೆಂಗಳೂರು ಸೇರಿದಂತೆ ಭಾರತದ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ರಜನಿ ಒಡೆತನದ ಆಸ್ತಿಗಳಿವೆ. ಇಡೀ ಜಗತ್ತಿನಲ್ಲಿ ರಜನಿಗೆ ಹೊಂದಿರುವ ಅಗಣಿತ ಆಸ್ತಿಯ ಬಗ್ಗೆ ಸ್ವತಃ ಅವರಿಗೇ ಲೆಕ್ಕ ಗೊತ್ತಿದೆಯೋ ಇಲ್ಲವೋ? ಗೊತ್ತಿಲ್ಲ
ಆದರೆ ಇಂತಹ ರಜನಿಕಾಂತ್ ಮನಸ್ಸು ಮಾತ್ರ ಹುಟ್ಟೂರಿನ, ತಾನು ಓಡಾಡಿದ, ಕಷ್ಟದ ನಡುವೆಯೇ ನೆಮ್ಮದಿ ಕಂಡುಕೊಂಡಿದ್ದ ಜಾಗಗಳೆಡೆಗೇ ಜಾರುತ್ತಿರುತ್ತದೆ. ಇದಕ್ಕೆ ಕೈಗನ್ನಡಿ ಎಂಬಂತೆ ಮಾರುವೇಷದಲ್ಲಿ ರಜನಿಕಾಂತ್ ಬೆಂಗಳೂರಿಗೆ ಅನೇಕ ಬಾರಿ ಬಂದು ಹೋಗಿದ್ದಾರೆ. ಆ ದಿನಗಳಲ್ಲಿ ಓಡಾಡಿದ್ದ ಜಾಗದಲ್ಲೆಲ್ಲ ಸಾಮಾನ್ಯ ವ್ಯಕ್ತಿಯಂತೆ ಓಡಾಡಿ ತೆರಳಿದ್ದಾರೆ. ಇಂಥಾ ರಜನಿಕಾಂತ್ ಈಗ ತಮಗೆ ಅಕ್ಷರಾಭ್ಯಾಸವನ್ನು ಮಾಡಿಸಿದ ತಮ್ಮ ಶಾಲೆಯ ಕುರಿತು ತುಂಬಾ ಹೆಮ್ಮೆಯಿಂದ ಮಾತನಾಡಿದ್ದಾರೆ. ಬ್ಯಾಂಕಾಕ್‌ನಲ್ಲಿ ಕುಳಿತು ಎಪಿಎಸ್ ಶಾಲೆಯಲ್ಲಿ ತಾವು ಕಳೆದ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಹೌದು, ತಾವು ಕಲಿತ ಎಪಿಎಸ್ ಶಾಲೆಯ ಅಲುಮಿನಿ ಕಾರ್ಯಕ್ರಮದ ಪ್ರಯುಕ್ತ, ವಿಡಿಯೋ ಮೂಲಕ ಸಂದೇಶವನ್ನು ರವಾನೆ ಮಾಡಿರುವ ರಜನಿಕಾಂತ್, ಬೆಂಗಳೂರಿನ ಎಪಿಎಸ್ ಸ್ಕೂಲ್ ಮತ್ತು ಕಾಲೇಜ್‌ನಲ್ಲಿ ಓದಿದ್ದಕ್ಕೆ ನನಗೆ ಇವತ್ತು ಕೂಡ ತುಂಬಾ ಹೆಮ್ಮೆ ಇದೆ ಎಂದು ಹೇಳಿದ್ದಾರೆ. ಗವಿಪುರದ ಗಂಗಾಧರೇಶ್ವರ ದೇವಸ್ಥಾನದ ಬಳಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾನು ಕನ್ನಡ ಮಾಧ್ಯಮದಲ್ಲಿ ಓದಿದ್ದೇ ಎಂದಿರುವ ರಜಿನಿ ಆಗೆಲ್ಲ ನಾನೇ ಕ್ಲಾಸ್‌ಗೆ ಫಸ್ಟ್ ಎಂದು ಹೇಳಿದ್ದಾರೆ. ಶಾಲೆಯ ಬೆಸ್ಟ್ ಸ್ಟುಡೆಂಟ್ ಎಂದು ಹೇಳಿದ್ದಾರೆ. ಇನ್ನು ನಾನೇ ಕ್ಲಾಸ್‌ಗೆ ಮಾನಿಟರ್ ಕೂಡ ಆಗಿದ್ದೆ ಮಿಡ್ಲ್ ಸ್ಕೂಲ್‌ನಲ್ಲಿ 98 % ಮಾರ್ಕ್ಸ್ ಪಡೆದಿದ್ದೆ ಎಂದು ಕೂಡ ರಜನಿ ತುಂಬಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಮುಂದುವರೆದು ಆ ನಂತರ ನಮ್ಮ ಅಣ್ಣ ನನ್ನನ್ನು ಎಪಿಎಸ್ ಹೈಸ್ಕೂಲ್‌ನಲ್ಲಿ ಇಂಗ್ಲೀಷ್ ಮೀಡಿಯಂಗೆ ಸೇರಿಸಿದರು, ಇದರಿಂದ ನಾನು ವಿಚಲಿತನಾದೆ, ಮೊದಲ ಬೆಂಚ್‌ನಲ್ಲಿದ್ದ ನಾನು ಆ ನಂತರ ಕೊನೆಯ ಬೆಂಚ್ ಸ್ಟೂಡೆಂಟ್ ಆದೆ ಎಂದು ಹೇಳಿದ್ದಾರೆ. ಈ ಕಾರಣಕ್ಕೆ ಖಿನ್ನತೆಗೆ ಕೂಡ ಒಳಗಾಗಿದ್ದೆ, ಆದರೆ ಎಪಿಎಸ್ ಶಾಲೆಯ ಶಿಕ್ಷಕರು ನನ್ನ ಕಷ್ಟವನ್ನು ಅರ್ಥ ಮಾಡಿಕೊಂಡರು ನನಗೆ ಸಹಾಯವನ್ನು ಮಾಡಿದರು ತುಂಬಾನೇ ಕಾಳಜಿ ವಹಿಸಿ ನನಗೆ ಪಾಠವನ್ನು ಹೇಳಿ ಕೊಟ್ಟರು ಎಂದಿರುವ ರಜನಿ ಈ ಕಾರಣಕ್ಕೆ ನಾನು 8,9ನೇ ತರಗತಿಯಲ್ಲಿ ಪಾಸ್ ಆದೆ ಆದರೆ ಪಬ್ಲಿಕ್ ಎಕ್ಸಾಂ { ಹತ್ತನೇ ತರಗತಿ } ನಲ್ಲಿ ಪಿಸಿಎಂ ವಿಷಯದಲ್ಲಿ ನಾನು ತುಂಬಾ ವೀಕ್ ಇದ್ದ ಕಾರಣ ಫೇಲ್ ಆದೆ ಎಂದಿದ್ದಾರೆ. ಆಗಲೂ ನಮ್ಮ ಕೆಮೆಸ್ಟ್ರೀ ಟೀಚರ್ ಮನೆಗೆ ಬಂದು ಆರು ಗಂಟೆಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು, ಅವರು ಉಚಿತವಾಗಿ ನೀಡಿದ ಈ ಸ್ಪೆಷಲ್ ಕ್ಲಾಸ್‌ನಿಂದ ನಾನು ಹತ್ತನೇ ಕ್ಲಾಸ್ ಪಾಸ್ ಮಾಡಿದೆ ಆ ನಂತರ ಅಲ್ಲೇ ಎಪಿಎಸ್ ಕಾಲೇಜ್‌ಗೆ ಸೇರಿಕೊಂಡೆ ಎಂದು ಹೇಳಿರುವ ರಜನಿ ಆ ನಂತರ ಕೆಲ ಕಾರಣಗಳಿಂದ ಕಾಲೇಜ್ ಕಂಟಿನ್ಯೂ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಇನ್ನು ನಾನು ಶಾಲೆಯಲ್ಲಿದ್ದಾಗ ಇಂಟರ್ ಸ್ಕೂಲ್ ಕಾಂಪಿಟೇಷನ್‌ನಲ್ಲಿ ಭಾಗವಹಿಸುತ್ತಿದ್ದೆ, ಅದಕ್ಕೂ ಮೊದಲು ನಾನು ಕ್ಲಾಸ್‌ನಲ್ಲಿ ಬಗೆಬಗೆಯ ಕಥೆ ಹೇಳುತ್ತಿದ್ದೆ ನೋಡಿದ ಸಿನಿಮಾಗಳನ್ನು ಗೆಳೆಯರ ಮುಂದೆ ನಟಿಸಿ ತೋರಿಸುತ್ತಿದ್ದೆ ಅದು ನಮ್ಮ ಶಿಕ್ಷಕರಿಗೆ ಗೊತ್ತಾಗಿತ್ತು ಎಂದಿರುವ ರಜನಿಕಾಂತ್, ಆಗ ನನಗೆ ನಾಟಕಗಳಲ್ಲಿ ಅಭಿನಯಿಸಲು ಅವರು ಅವಕಾಶ ಮಾಡಿ ಕೊಟ್ಟರು ಆದಿ ಶಂಕರ ಚಂಡಾಲನ ನಾಟಕದಲ್ಲಿ ನಾನು ಚಂಡಾಲನಂತೆ ಕಂಡಿದ್ದಕ್ಕೋ ಏನೋ ಚಂಡಾಲನ ಪಾತ್ರವನ್ನು ನನಗೆ ನೀಡಿದರು ಎಂದು ಹೇಳಿದ್ದಾರೆ.
ನಮ್ಮ ಈ ಡ್ರಾಮಾಗೆ ಪ್ರಶಸ್ತಿ ಬಂತು ನನಗೆ ಬೆಸ್ಟ್ ಆಕ್ಟರ್ ಎಂದು ಕಪ್ ಕೂಡ ನೀಡಿದ್ದರು ಎಂದು ಆ ದಿನಗಳನ್ನು ಮೆಲುಕು ಹಾಕಿರುವ ರಜನಿ ಅಲ್ಲಿಂದ ಇದೇ ನನಗೆ ಫ್ರೊಫೆಷನ್ ಆಗಿ ಈಗ ಸಾಧ್ಯವಾದಷ್ಟು ನಟನೆ ಮಾಡಿ ಎಲ್ಲರನ್ನು ರಂಜಿಸುತ್ತಿದ್ದೇನೆ ಇದಕ್ಕೆಲ್ಲ ಪ್ರಮುಖ ಕಾರಣ ಎಪಿಎಸ್ ಹೈಸ್ಕೂಲ್ ಎಂದಿದ್ದಾರೆ. ಆ ಶಾಲೆ.. ಆ ಮೈದಾನ ಅಲ್ಲಿ ನಾವು ಆಡಿದ ಆಟ ಎಲ್ಲವನ್ನೂ ಮರೆಯಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ. ದೊಡ್ಡ ಗಣೇಶ, ಬಸವನಗುಡಿ ಮನೆಯಿಂದ ಶಾಲೆಗೆ ಹೋಗಬೇಕಾದರೆ ಅಲ್ಲಿ ಓಡಾಡಿದ್ದೆಲ್ಲ ನನ್ನ ಮನಸಿನಲ್ಲಿ ಈಗಲೂ ಹಸಿರಾಗಿದೆ ಎಂದಿರುವ ರಜಿನಿಕಾಂತ್ ಎಪಿಎಸ್ ಶಾಲೆಯ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಎಂದು ಹೇಳಿರುವ ರಜಿನಿಕಾಂತ್ ಮುಂದಿನ ಬಾರಿ ಬಂದಾಗ ನಿಮ್ಮೆಲ್ಲರನ್ನೂ ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ.


Click it and Unblock the Notifications











