'ಕಾಂತಾರ' ಆರ್ಭಟದಿಂದ ನಮ್ಮ ಸಿನ್ಮಾ ಕಲೆಕ್ಷನ್ ಕಮ್ಮಿ ಆಗಿತ್ತು- ತರುಣ್ ಸುಧೀರ್
ದೊಡ್ಡ ಸಿನಿಮಾಗಳ ನಡುವೆ ಸಣ್ಣ ಸಿನಿಮಾಗಳು ಕೆಲವೊಮ್ಮೆ ಸೋತು ಬಿಡುತ್ತದೆ. ಸಿನಿಮಾ ಚೆನ್ನಾಗಿದ್ದರೂ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕರೂ ಅದೇ ಸಮಯದಲ್ಲಿ ದೊಡ್ಡ ಸಿನಿಮಾ ಬಂದು ಮತ್ತೊಂದು ಚಿತ್ರಕ್ಕೆ ಹಿನ್ನಡೆ ಆಗುವುದು ಸರ್ವೇ ಸಾಮಾನ್ಯ. ತರುಣ್ ಸುಧೀರ್ ನಿರ್ಮಾಣದ 'ಗುರು-ಶಿಷ್ಯರು' ಚಿತ್ರಕ್ಕೂ ಇದೇ ಸಮಸ್ಯೆ ಎದುರಾಗಿತ್ತು.
ಜಡೇಶ್ ಹಂಪಿ ನಿರ್ದೇಶನದ 'ಗುರು-ಶಿಷ್ಯರು' ಚಿತ್ರದಲ್ಲಿ ಶರಣ್ ಹೀರೊ ಆಗಿ ನಟಿಸಿದ್ದರು. ಬೆಟ್ಟದಪುರದ ಶಾಲೆಯ ಪೀಟಿ ಮಾಸ್ಟರ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. 2022, ಸೆಪ್ಟೆಂಬರ್ 23ರಂದು ಸಿನಿಮಾ ತೆರೆಗಪ್ಪಳಿಸಿತ್ತು. ಪ್ರೇಕ್ಷಕರು ಚಿತ್ರತಂಡದ ಪ್ರಯತ್ನಕ್ಕೆ ಬಹುಪರಾಕ್ ಎಂದಿದ್ದರು. ಆದರೆ ಸೆಪ್ಟೆಂಬರ್ 30ರಂದು ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ 'ಕಾಂತಾರ' ಸಿನಿಮಾ ಬಂದು ದಾಖಲೆ ಬರೆಯಿತು. ಈ ಸಿನಿಮಾ ಆರ್ಭಟದ ಮುಂದೆ ಗುರು-ಶಿಷ್ಯರ ಆಟ ಡಲ್ಲಾಗಿ ಬಿಟ್ಟಿತ್ತು. ಈ ವಿಚಾರವನ್ನು ತರುಣ್ ನೆನಪು ಮಾಡಿಕೊಂಡಿದ್ದಾರೆ.

ತರುಣ್ ಸುಧೀರ್ ನಿರ್ಮಾಣದ 'ಏಳುಮಲೆ' ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಈ ವಾರ ಸಿನಿಮಾ ತೆರೆಗೆ ಬಂದು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಲವ್ ಜೊತೆಗೆ ಥ್ರಿಲ್ಲರ್ ಅಂಶಗಳನ್ನು ಸೇರಿಸಿ ಕಟ್ಟಿಕೊಟ್ಟಿರುವ ಸಿನಿಮಾ ಪ್ರೇಕ್ಷಕರ ಮನಸೂರೆಗೊಂಡಿದೆ. ಮುಂದಿನ ದಿನಗಳಲ್ಲಿ ದೊಡ್ಡದಾಗಿ ಸದ್ದು ಮಾಡುವ ಸುಳಿವು ಸಿಗುತ್ತಿದೆ. ಸಿನಿಮಾ ಪ್ರಚಾರದ ಭಾಗವಾಗಿ 'ದಿ ಹಿಂದೂ' ಪತ್ರಿಕೆ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ತರುಣ್ ಭಾಗಿ ಆಗಿದ್ದಾರೆ. 'ಗುರು-ಶಿಷ್ಯರು' ಸಿನಿಮಾ ಫಲಿತಾಂಶದ ಬಗ್ಗೆ ಮಾತನಾಡಿದ್ದಾರೆ.
"ಸೆಪ್ಟೆಂಬರ್ 23ರಂದು 'ಗುರು-ಶಿಷ್ಯರು' ಸಿನಿಮಾ ರಿಲೀಸ್ ಮಾಡಿದ್ವಿ. ಮೊದಲ ವಾರ ಸಾಮಾನ್ಯ ಪ್ರೇಕ್ಷಕರು ನೋಡಿದ್ರೆ, 2ನೇ ವಾರ ಶಾಲಾ ಮಕ್ಕಳಿಗೆ ದಸರಾ ರಜೆ ಇರುತ್ತೆ. ಮಕ್ಕಳಿಗೆ ಕನೆಕ್ಟ್ ಆಗುವ ಸಿನಿಮಾ. ಹಾಗಾಗಿ 2ನೇ ವಾರ ಮಕ್ಕಳು ಬರ್ತಾರೆ ಎಂದು ಪ್ಲ್ಯಾನ್ ಮಾಡಿದ್ವಿ. ಮೊದಲ ವಾರ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಕಲೆಕ್ಷನ್, ಪ್ರಶಂಸೆ ಎಲ್ಲವೂ ಸೂಪರ್ ಆಗಿತ್ತು. ತುಂಬಾ ಜನ ಫೋನ್ ಮಾಡಿ ಮೆಚ್ಚುಗೆ ಮಾತನಾಡಿದ್ರು. ಮೊದಲ 154 ಸ್ಕ್ರೀನ್‌ಗಳಲ್ಲಿ ಸಿನಿಮಾ ಹಾಕಿದ್ವಿ, 2ನೇ ವಾರಕ್ಕೆ 190 ಸ್ಕ್ರೀನ್‌ಗಳಿಗೆ ಹೆಚ್ಚಿಸಿದ್ವಿ. ಅಷ್ಟು ಡಿಮ್ಯಾಂಡ್ ಇತ್ತು. ಶುಕ್ರವಾರ ಸೂಪರ್ ಆಗಿತ್ತು, ಭಾನುವಾರಕ್ಕೆ ಸ್ಕ್ರೀನ್‌ಗಳ ಸಂಖ್ಯೆ ಕಮ್ಮಿ ಆಯ್ತು. ಕಾರಣ 'ಕಾಂತಾರ' ಸಿನಿಮಾ" ಎಂದು ತರುಣ್ ಹೇಳಿದ್ದಾರೆ.
ಮಾತು ಮುಂದುವರೆಸಿರುವ ತರುಣ್ " ಯಾರು ಅದನ್ನು ನಿರೀಕ್ಷಿರಲಿಲ್ಲ. ಬಹಳ ಅದ್ಭುತ ಸಿನಿಮಾ 'ಕಾಂತಾರ'. ಹಾಗಾಗಿ ಆ ಆರ್ಭಟದ ಮುಂದೆ 'ಗುರು-ಶಿಷ್ಯರು' ಚಿತ್ರಕ್ಕೆ ಹಿನ್ನಡೆ ಆಗಿತ್ತು. ಆದರೂ ನಮ್ಮ ಸಿನಿಮಾ ಬಗ್ಗೆ ಹೆಮ್ಮೆಯಿದೆ. 'ಕಾಂತಾರ' ಅಬ್ಬರದ ನಡುವೆಯೂ 2ನೇ ವಾರ ನನಗೆ ಒಳ್ಳೆ ಶೇರ್ ಬಂದಿತ್ತು. ಕೊನೆವರೆಗೂ ಒಳ್ಳೆ ಆದಾಯ ಬಂತು. 'ಕಾಂತಾರ' ಬರದೇ ಇದ್ದಿದ್ದರೆ ಅದರ ಎರಡರಷ್ಟು ಗಳಿಕೆ ಆಗ್ತಿತ್ತು" ಎಂದು ವಿವರಿಸಿದ್ದಾರೆ.
ನಿಜಕ್ಕೂ 'ಕಾಂತಾರ' ಸುನಾಮಿ ಜೋರಾಗಿತ್ತು. ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದ ಸಿನಿಮಾ ನೋಡ ನೋಡುತ್ತಲೇ ಬೇರೆ ಭಾಷೆಗಳಿಗೆ ಡಬ್ ಆಗಿ ಹಿಟ್ ಆಗಿತ್ತು. ಸ್ವತಃ ರಿಷಬ್ ಹಾಗೂ ಹೊಂಬಾಳೆ ಕೂಡ ಅದನ್ನು ನಿರೀಕ್ಷಿರಲಿಲ್ಲ. ಅಷ್ಟರಮಟ್ಟಿಗೆ ಸಿನಿಮಾ ಸಂಚಲನ ಸೃಷ್ಟಿಸಿತ್ತು. ವಿದೇಶಗಳಲ್ಲಿ ಪ್ರೇಕ್ಷಕರು ಕ್ಯೂ ನಿಂತು ಟಿಕೆಟ್ ಖರೀದಿಸಿ ಸಿನಿಮಾ ವೀಕ್ಷಿಸಿದ್ದರು.
ಸದ್ಯ 'ಕಾಂತಾರ' ಪ್ರೀಕ್ವೆಲ್ ಚಿತ್ರಕ್ಕಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಚಿತ್ರದ ಪ್ರೀ- ರಿಲೀಸ್ ಬ್ಯುಸಿನೆಸ್ ಜೋರಾಗಿದೆ. ಈ ಬಾರಿ ಕೂಡ ದಸರಾ ಸಂಭ್ರಮದಲ್ಲೇ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಶೀಘ್ರದಲ್ಲೇ ಪ್ರಮೋಷನ್ ಶುರುವಾಗಲಿದೆ.


Click it and Unblock the Notifications











