ಹರೆಯದ ಯೌವನದ ಹೊಚ್ಚ... ಸ್ವಚ್ಚ.... ಬೆಚ್ಚನೆಯ ಪ್ರೀತಿಯದು
ಹದಿನಾರರ ಆಸುಪಾಸಿನ ಹೈಸ್ಕೂಲು ಮುಗಿಸಿ ಆಗತಾನೇ ಕಾಲೇಜಿಗೆ ಕಾಲಿಟ್ಟಿದ್ದ ಹುಡುಗ, ಎಳೇ ಯೌವನ. ಪ್ರೀತಿ ಪ್ರೇಮವೆಂಬುದರ ಕಿಂಚಿತ್ತೂ ಅರಿವಿಲ್ಲದ ಹದಿಹರೆಯದ ವಯಸ್ಸು.
ಓದು, ತಿಂಡಿ, ಆಟ, ನಿದ್ದೆ, ಸ್ನೇಹ ಎಂದು ತನ್ನದೇ ಲೋಕದಲ್ಲಿದ್ದಂತವನು ಅವನ ಮನೆಯ ಎದುರಲ್ಲೇ ಒಂದು ಸ್ವಂತ ಮನೆಯ ಹುಡುಗಿ, ಸ್ವಭಾವದಲ್ಲೂ ಪ್ರಭಾವದಲ್ಲೂ ಸೌಮ್ಯತೆಯನ್ನು ಮೈ ಗೂಡಿಸಿಕೊಂಡಿದ್ದಂತಹ ರೂಪವಂತೆ. ಅದ್ಯಾವ ಘಳಿಗೆಯಲ್ಲಿ ಇಬ್ಬರ ನೋಟ ಬೆರೆಯಿತೋ, ಅವರಿಬ್ಬರಿಗೂ ಅರಿವಿಲ್ಲದಂತೆ ಅವರ ಮನದೊಳಗೆ ಪ್ರೇಮದ ಆಗಮನವಾಯಿತು. ಪರಿಚಯವಿದ್ದ ಪರಿಚಯವಾದರೂ ಅದೇನೋ ಹೊಸ ಸಂಕೋಚ. ಯಾವಾಗಲೂ ನೋಡುತ್ತಿದ್ದ ಮೊಗವೇ ಆದರೂ ವಿನೂತನವಾದ ಮನಸ್ಸಿಗೆ ತುಂಬಾನೇ ಆಪ್ತವೆನಿಸುವ ನೋಟ. ಕಣ್ಣಲ್ಲೇ ಗಂಟಗಟ್ಟಲೆ ಮಾತು.
ಮನಸ್ಸು ಕೊಡಬೇಕಾ ಪಡೆಯಬೇಕಾ ಎನ್ನುವ ಘನ ಗೊಂದಲ, ನಗಲೂ ಚೌಕಾಸಿ. ಸ್ಕೂಲು ಮುಗಿಸಿ ಬಿಳೀ ಬಣ್ಣದ ಷರ್ಟು ಕಡುನೀಲಿ ಸ್ಕರ್ಟಿನ ಯೂನಿಫಾರಂ ಧರಿಸಿ BSA SLR ಬೈಸಿಕಲ್ ಮೇಲೆ ಬರುತ್ತಿದ್ದ ಅವಳನ್ನು ನೋಡುತ್ತಿದ್ದರೆ ಇವನೊಳಗೆ ಸಣ್ಣ ಭಯ , ಒಳಗೆ ಬಲು ದೊಡ್ಡ ಖುಷಿ . ಕಣ್ಣುಮಿಟಿಕಿಸಿದರೆ ಅವಳು ಮನೆ ಹೊಕ್ಕಿಬಿಡುತ್ತಾಳೆ , ಪುನಃ ಹೊರಗೆ ಬರುತ್ತಾಳೋ ಇಲ್ಲವೋ ಎಂಬ ಜಾತಕ ಜಿಜ್ಞಾಸೆ.

ಒಮ್ಮೆ ಅವಳು ನೋಡಲಿ ಎನ್ನುವ ಕೇರು ಮತ್ತೆ ಇದನ್ನು ಇನ್ಯಾರೇ ನೋಡಿದರೂ ನನಗೇನು ಎಂಬ ಕೇರ್ಲೆಸ್ಸು. ಅಕಸ್ಮಾತ್ ನೋಡಿ ಯಾರಾದರು ಕೇಳಿಬಿಟ್ಟರೆ ಏನು ಹೇಳಲಿ ಎಂಬ ಭ್ರಮಾ ಭಯ. ಒಟ್ಟಿನಲಿ ಹರೆಯದ ಯೌವನದ ಹೊಚ್ಚ... ಸ್ವಚ್ಚ.... ಬೆಚ್ಚನೆಯ ಪ್ರೀತಿಯದು. ಅವಳ ಕಣ್ಣೋಟಕ್ಕೇ ಕಾಯೋ ನಿತ್ಯ ನಿರಂತರ ಕಾಯಕ ಅವನದ್ದು. ಆಟ ಆಡುತ್ತಿರುವಾಗ ಊಟ ಮಾಡುತ್ತಿರುವಾಗ ಪಾಠ ಓದುತ್ತಿರುವಾಗ ರಪ್ ಅಂತ ನೆನಪಾಗುತ್ತಿದ್ದಳು. ರೈತನಿಗೆ ಮಳೆಯಂತೆ, ಯೋಧನಿಗೆ ಆಯುಧದಂತೆ, ಹಕ್ಕಿಗೆ ಕಾಳಿನಂತೆ, ಇರುವೆಗೆ ಬೆಲ್ಲದಂತೆ ಪ್ರತಿಕ್ಷಣ ಕಾಡತೊಡಗಿದಳು.
ಶುದ್ಧ ಪ್ರೀತಿಗೆ ಸಾಕ್ಷಿ ಅವಳು, ಪರಿಶುದ್ಧ ಪ್ರೀತಿಗೆ ಅರ್ಥ ಅವಳು. ಅರ್ಥವಾಗದ ಪ್ರೀತಿಯ ವ್ಯಾಕರಣಕ್ಕೆ ನಿಘಂಟವಳು. ಒಂದು ಕ್ಷಣ ಅವಳು ಕಾಣಲಿಲ್ಲವೆಂದರೂ ಕಂಗಾಲಾಗುವಂಥ ಮನಸ್ಥಿತಿ ಅವನದ್ದಾಗಿತ್ತು. ಇಬ್ಬರಿಗೂ ಇಬ್ಬನಿಯಂತಹ ಪ್ರೀತಿ. ಅವರ ದೃಷ್ಟಿಯಲ್ಲಿ ದುಂಡಗಿದ್ದ ಪ್ರಪಂಚ ಹೃದಯಾಕಾರದಲ್ಲಿ ಗೋಚರಿಸುತ್ತಿತ್ತು. ಅವಳಿಗೆ ತನ್ನ ಮೇಲೆ ಪ್ರೀತಿ ಇದೆಯಾ ? ಗೊತ್ತಿಲ್ಲ, ಒಮ್ಮೆಯೂ ಅವಳನ್ನು ಅವನು ಕೇಳಿ ತಿಳಿದುಕೊಳ್ಳುವ ಗೋಜಿಗೇ ಹೋಗಲಿಲ್ಲ.

ಅವಳೂ ಅಷ್ಟೇ... ತುಂಬಾ ಶ್ರದ್ಧೆಯಿಂದ ಅವನಿಗಾಗಿ ಕಾಯುತ್ತಿದ್ದಳು . ಪದೇ ಪದೇ ನೆಪವೊಡ್ಡಿ ಮನೆ ಅಂಗಳದ ಕೆಲಸಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಳು. ಬರೋಬ್ಬರಿ ಒಂದು ನೂರು ಪ್ರೆಶ್ನೆಗಳನ್ನು ಕಣ್ಣಲ್ಲೇ ಕೇಳುತ್ತಿದ್ದಳು ಸಾವಿರದಷ್ಟು ಉತ್ತರಗಳನ್ನು ಮೌನವಾಗೇ ಉತ್ತರಿಸುತ್ತಿದ್ದಳು. ಅವನು ಕಾಣದಿದ್ದಾಗ ವಿಚಲಿತಳಾಗುತ್ತಿದ್ದಳು, ಕಂಡಾಗ ಹರ್ಷಿಸುತ್ತಿದ್ದಳು.
ಪರಸ್ಪರ ಇವರುಗಳು ಎದುರೆದುರು ನಿಂತರೇ ಹೊರತು ಕಾಲ ಇವರುಗಳ ಜೊತೆ ನಿಲ್ಲಲ್ಲಿಲ್ಲ. ಬೇರೂರುವುದಕ್ಕೂ ಮುಂಚೆಯೇ ಬೇರಾದರು. ನಮ್ಮ ಕೈಯಾರೆ ನೆಟ್ಟ ಸಸಿಯೇ ಒಮ್ಮೊಮ್ಮೆ ವೃದ್ಧಿಸುವುದಿಲ್ಲ ಇನ್ನು ಅದಾಗದೇ ಮೊಳಕೆಯೊಡೆದ ಸಸಿಯನ್ನು ಪೋಷಿಸದಿದ್ದರೆ ಬೆಳೆಯುತ್ತದೆಯೇ.


Click it and Unblock the Notifications











