ದೊಡ್ಮನೆ ನೋಡಿ ಸೂಪರ್ ಸ್ಟಾರ್ ಮಹೇಶ್ ಬಾಬು ಕಲಿತ್ತಿದ್ದೇನು?
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು. ಬ್ಲಾಕ್‌ಬಸ್ಟರ್ ಸಿನಿಮಾಗಳ ಸರದಾರ. ಒಂದಕ್ಕಿಂತ ಒಂದು ಅದ್ಭುತ ಸಿನಿಮಾಗಳನ್ನು ಕೊಟ್ಟು ಅಭಿಮಾನಿಗಳ ಮನಗೆದ್ದ 'ಶ್ರೀಮಂತ'. ಸಾವಿರಾರು ಕೋಟಿಯ ಒಡೆಯ. ಸದ್ಯ ರಾಜಮೌಳಿ ನಿರ್ದೇಶನದ ಚಿತ್ರಕ್ಕೆ ಮಹೇಶ್ ಸಿದ್ಧತೆ ನಡೆಸುತ್ತಿದ್ದಾರೆ.
ಹ್ಯಾಂಡ್‌ಸಮ್ ಹಂಕ್ ಮಹೇಶ್ ಬಾಬು ಅಂದ್ರೆ ಮಹಿಳಾ ಅಭಿಮಾನಿಗಳಿಗೂ ಅಚ್ಚುಮೆಚ್ಚು. ಹಾಲಿವುಡ್ ಹೀರೊ ರೀತಿ ಸ್ಟೈಲಿಶ್ ಆಗಿ ಕಾಣುವ ಮಹೇಶ್ ತಮ್ಮ ವಿಭಿನ್ನ ನಟನೆಯಿಂದ ಮೋಡಿ ಮಾಡುತ್ತಾ ಬರ್ತಿದ್ದಾರೆ. 25 ಚಿತ್ರಗಳಿಗೆ 100 ಸಿನಿಮಾಗಳಿಗಾಗುವಷ್ಟು ನೇಮು ಫೇಮು ಸಂಪಾದಿಸಿದ್ದಾರೆ. ತಂದೆ ಕೃಷ್ಣ ವಾರಸ್ದಾರನಾಗಿ ಚಿತ್ರರಂಗದಲ್ಲಿ ಮೆರೆಯುತ್ತಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸೂಪರ್ ಸ್ಟಾರ್ ಮಹೇಶ್ ಬಾಬು ಶುಭಾಶಯಗಳ ಮಹಾಪೂರವೇ ಹರಿದುಬರ್ತಿದೆ. ಕನ್ನಡ ಚಿತ್ರರಂಗದ ಜೊತೆಗೂ ಘಟ್ಟಮನೇನಿ ಫ್ಯಾಮಿಲಿ ಆತ್ಮೀಯ ಒಡನಾಟ ಇಟ್ಟುಕೊಂಡಿದೆ. ಬಹಳ ಹಿಂದೆ ಮಹೇಶ್ ಬಾಬು ತಂದೆ ಕೃಷ್ಣ ಕನ್ನಡದಲ್ಲಿ ಒಂದು ಸಿನಿಮಾ ನಿರ್ಮಿಸಿದ್ದರು. ಡಾ. ರಾಜ್‌ಕುಮಾರ್ ಹೀರೊ ಆಗಿ 'ಲವ-ಕುಶ' ಸಿನಿಮಾ ಶುರುವಾಗಿತ್ತು. ಬಳಿಕ ಕಾರಣಾಂತರಗಳಿಂದ ಆ ಸಿನಿಮಾ ನಿಂತಿತ್ತು.
'ಲವ-ಕುಶ' ಸಿನಿಮಾ ಮುಹೂರ್ತ ಸಮಾರಂಭ ಫೋಟೊಗಳು ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಗುತ್ತವೆ. ಇನ್ನು ಮಹೇಶ್ ಬಾಬು ಕೂಡ ಅಣ್ಣಾವ್ರ ಕುಟುಂಬದ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಈ ಹಿಂದೆ ಪುನೀತ್ ರಾಜ್‌ಕುಮಾರ್ ನಟನೆಯ 'ಪವರ್' ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ತೆಲುಗಿನಲ್ಲಿ ಮಹೇಶ್ ಬಾಬು ನಟಿಸಿದ 'ದೂಕುಡು' ಸಿನಿಮಾ ರೀಮೆಕ್ 'ಪವರ್' ಆಗಿತ್ತು. ಅಂದು ವೇದಿಕೆ ಏರಿ ಮಹೇಶ್ ಬಾಬು ಕನ್ನಡ ಚಿತ್ರರಂಗದ ದೊಡ್ಮನೆ ಬಗ್ಗೆ ಮಾತನಾಡಿದ್ದರು. 'ಪೋಕಿರಿ' ಸಿನಿಮಾ ಸಮಯದಲ್ಲಿ ನಾನು ಬೆಂಗಳೂರಿಗೆ ಹೋಗಿದ್ದೆ. ಆಗ ಪುನೀತ್ ರಾಜ್‌ಕುಮಾರ್ ಮನೆಗೆ ಭೇಟಿ ನೀಡಿದ್ದೆ. ಅವರು ಅಪ್ಪ, ಅವರ ಸಹೋದರ, ಅವರ ತಾಯಿಯನ್ನು ಭೇಟಿ ಮಾಡಿದ್ದೆ. ಅವತ್ತು ನನಗೆ ಬಹಳ ಅಚ್ಚರಿ ಎನಿಸಿತ್ತು.
ಗ್ರೇಟ್ ರಾಜ್‌ಕುಮಾರ್ ಅವರ ಫ್ಯಾಮಿಲಿ. ಅಷ್ಟು ಸಿಂಪಲ್ ಆಗಿ ಅಷ್ಟು ಡೌನ್ ಟು ಅರ್ಥ್ ಹೇಗಿರುತ್ತಾರೆ ಎನಿಸಿತು. ನಿಜಕ್ಕೂ ನಂಬಲು ಸಾಧ್ಯವಾಗಲಿಲ್ಲ. ಬಹಳ ಕಲಿತುಕೊಂಡೆ ಆ ದಿನ. ಅದನ್ನು ನಾನು ಎಂದಿಗೂ ಮರೆಯೋಕೆ ಸಾಧ್ಯವಿಲ್ಲ ಎಂದು ಮಹೇಶ್ ಬಾಬು ಹೇಳಿದ್ದರು. ಇದೇ ಮಾತನ್ನು ಮತ್ತೊಮ್ಮೆ ಅವರು ಪುನರುಚ್ಚರಿಸಿದ್ದರು. ವೀಡಿಯೋ ಬೈಟ್‌ವೊಂದರಲ್ಲಿ ಮಾತನಾಡಿದ್ದರು.
ದೊಡ್ಮನೆ ಸರಳತೆ, ಸಜ್ಜನಿಕೆ ಬಗ್ಗೆ ಈ ಹಿಂದೆ ಹಲವರು ಮಾತನಾಡಿದ್ದಾರೆ. ಡಾ. ರಾಜ್‌ಕುಮಾರ್ ಫ್ಯಾಮಿಲಿ ಇದ್ದಿದ್ದೇ ಹಾಗೆ, ಇರೋದೇ ಹಾಗೆ. ಮುಂದೆ ಕೂಡ ಇದು ಮುಂದುವರೆಯುತ್ತದೆ. ಇನ್ನು ಮಹೇಶ್ ಬಾಬು ಹುಟ್ಟುಹಬ್ಬದ ಸಂಭ್ರಮದಲ್ಲಿ ಹೊಸ ಸಿನಿಮಾ ಶುರುವಾಗುತ್ತದೆ ಎಂದು ಅಭಿಮಾನಿಗಳು ಕಾದಿದ್ದರು. ಆದರೆ ಅದು ಸುಳ್ಳಾಗಿದೆ.
'RRR' ಸಕ್ಸಸ್ ಬಳಿಕ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ರಾಜಮೌಳಿ ಮುಂದಿನ ಸಿನಿಮಾ ಘೋಷಿಸಿದ್ದಾರೆ. ಈ ಬಾರಿ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಜಕ್ಕಣ್ಣ ಸಿನಿಮಾ ಮಾಡಲು ಮುಂದಾಗಿದ್ದಾರೆ. ಹಾಗಾಗಿ ಅಭಿಮಾನಿಗಳು ಹಾಲಿವುಡ್ ಹೀರೊ ಎಂದು ಕರೆಯುವ ಮಹೇಶ್ ಬಾಬು ಲೀಡ್ ರೋಲ್‌ನಲ್ಲಿ ನಟಿಸಲಿದ್ದಾರೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರುವ ನಿರೀಕ್ಷೆಯಿದೆ.


Click it and Unblock the Notifications











