31 ವರ್ಷದ ವ್ಯಕ್ತಿ ಜೊತೆ 16ನೇ ವರ್ಷದಲ್ಲೇ ಮದುವೆ ; ಗರ್ಭಿಣಿಯಾಗಿದ್ದಾಗಲೇ ಆಶಾ ಭೋಸ್ಲೆನ ಮನೆಯಿಂದ ಬೀದಿಗೆ ತಳ್ಳಿದ್ದ ಗಂಡ
ಜನಸಾಮಾನ್ಯರ ದೃಷ್ಟಿಯಲ್ಲಿ ಚಿತ್ರರಂಗ ಅಂದ ಕೂಡಲೇ ಕಣ್ತುಂಬ ಬಣ್ಣ ತುಂಬಿಕೊಳ್ಳುತ್ತವೆ. ಆದರೆ, ವಾಸ್ತವದಲ್ಲಿ.. ಬಣ್ಣದ ಬದುಕಿನಲ್ಲಿ ಬದುಕು ಕಟ್ಟಿಕೊಂಡವರಿಗೆ ಕೂಡ ಕಷ್ಟ ಇರುತ್ತೆ. ಅವರದ್ದೇ ಆದ ದು:ಖ ಸಂಕಟಗಳಿರುತ್ತವೆ. ವ್ಯೆಯಕ್ತಿಕ ಜೀವನದಲ್ಲಿ ಎಷ್ಟೇ ಪ್ರಯತ್ನ ಮಾಡಿದರು ಕೂಡ ಇವರಿಗೆ ನೆಮ್ಮದಿ ಸಿಗುವುದಿಲ್ಲ. ಹಲವು ರೀತಿಯಲ್ಲಿ ಹಲವರು ಇಲ್ಲಿ ಒಳಗೊಳಗೆ ನೋವು ಅನುಭವಿಸುತ್ತಿರುತ್ತಾರೆ.
ಇನ್ನೂ ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ ಹಣ, ಅಂತಸ್ತು, ಕೀರ್ತಿ, ಎಲ್ಲವೂ ಇರುವ ಕೆಲ ಸೆಲೆಬ್ರೆಟಿಗಳ ಬದುಕಿನಲ್ಲಿ ಒಮ್ಮೊಮ್ಮೆ ಪ್ರೀತಿ ಮರಿಚೀಕೆಯಾಗಿರುತ್ತೆ. ಯಾರನ್ನು ಇವರು ಹೆಚ್ಚು ಪ್ರೀತಿಸುತ್ತಾರೋ? ಅತಿಯಾಗಿ ಮೋಹಿಸುತ್ತಾರೋ? ಇನ್ನಿಲ್ಲದಂತೆ ಇಷ್ಟಪಡುತ್ತಾರೋ ? ಅವರೇ ಕಾಡಿಸಿ ಪೀಡಿಸಿ ನಿರಾಸೆಯನ್ನುಂಟು ಮಾಡುತ್ತಾರೆ. ಇಂತಹ ಪ್ರೀತಿಯ ವಿಚಾರದಲ್ಲಿ ಆಶಾ ಭೋಸ್ಲೆ ಅವರಿಗೆ ದಕ್ಕಿದ್ದು ಕೂಡ ಕೇವಲ ನಿರಾಸೆಯೇ ಎನ್ನುವುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ.

ಹೌದು, ಕೇವಲ 16ರ ಪ್ರಾಯದಲ್ಲಿ ಆಶಾ ಭೋಸ್ಲೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು. ವಿಶೇಷ ಅಂದರೆ ಆಶಾ ಹೃದಯ ಗೆದ್ದಿದ್ದ ಗಣಪತ್ ರಾವ್ ಭೋಸ್ಲೆ ಅವರಿಗೆ ಆಗ 31 ವರ್ಷವಾಗಿತ್ತು. ತನಗಿಂತ 15 ವರ್ಷ ದೊಡ್ಡವರಾದರು ಕೂಡ ಗಣಪತ್ ರಾವ್ ಅವರನ್ನೇ ಆಶಾ ಭೋಸ್ಲೆ ಮದುವೆಯಾದರು.
ಆಶಾ ಅವರ ಈ ನಿರ್ಧಾರ ಮನೆಯವರಿಗೆ ಸುತಾರಂ ಇಷ್ಟ ಇರಲಿಲ್ಲ. ಮನೆಯಲ್ಲಿ ವಿರೋಧ ಇತ್ತು. ಆದರೂ ಆಶಾ ಕೇಳಲಿಲ್ಲ. ಈ ಹಿನ್ನೆಲೆ ಕೋಪ ಮಾಡಿಕೊಂಡಿದ್ದ ಅಕ್ಕ ಲತಾ ಮಂಗೇಶ್ಕರ್ ಹಲವು ದಿನಗಳವರೆಗೆ ಆಶಾ ಭೋಸ್ಲೆ ಜೊತೆ ಮಾತನಾಡಿರಲಿಲ್ಲ.
ಮತ್ತೊಂದು ಕಡೆ ಆಶಾ ಗಾಯಕಿಯಾದ ಕಾರಣ ಗಣಪತ್ ರಾವ್ ಭೋಸ್ಲೆ ಮತ್ತು ಅವರ ಮನೆಯ ಸದಸ್ಯರ ಜೊತೆ ಹೊಂದಾಣಿಕೆ ಸಾಧ್ಯವಾಗಲಿಲ್ಲ. ಇನ್ನೂ ಆಶಾಗೆ ಕೇವಲ ಮಾನಸಿಕ ಹಿಂಸೆಯನ್ನು ಮಾತ್ರ ಗಣಪತ್ ರಾವ್ ಭೋಸ್ಲೆ ನೀಡುತ್ತಿರಲಿಲ್ಲ. ಬದಲಿಗೆ ದೈಹಿಕ ಹಲ್ಲೆ ಕೂಡ ಮಾಡುತ್ತಿದ್ದರು.
ಹೀಗಾಗಿ ದಿನದಿಂದ ದಿನಕ್ಕೆ ಸಂಬಂಧ ಹಳಿ ತಪ್ಪಲು ಶುರುವಾಗಿತ್ತು. ಎರಡನೇ ಬಾರಿ ಆಶಾ ಭೋಸ್ಲೆ ಗರ್ಭಿಣಿಯಾಗಿದ್ದಾಗ ಎಲ್ಲವೂ ಸರಿ ಹೋಗಬಹುದು ಎನ್ನುವ ಆಶಾಕಿರಣ ಮೂಡಿತ್ತಾದರೂ ಪರಿಸ್ಥಿತಿ ಆ ನಂತರ ಸುಧಾರಿಸಲಿಲ್ಲ. ತಮ್ಮ ಮೇಲಿನ ದೌರ್ಜನ್ಯನ್ನೆಲ್ಲ ಆಶಾ ಸಹಿಸಿಕೊಂಡರು. ಜೊತೆಗೂಡಿ ಬದುಕುವ ಪ್ರಯತ್ನ ಮಾಡಿದರು. ಆದರೂ ಕೂಡ ಸಂಬಂಧ ಉಳಿಯಲಿಲ್ಲ.

ಬದಲಿಗೆ ಮೂರನೇ ಬಾರಿ ಆಶಾ ಭೋಸ್ಲೆ ಗರ್ಭಿಣಿಯಾಗಿದ್ದಾಗ ಮನೆಯಿಂದ ಗಣಪತ್ ರಾವ್ ಭೋಸ್ಲೆ ಇವರನ್ನು ಹೊರ ಹಾಕಿದರು. ಆಗ ತುಂಬು ಗರ್ಭಿಣಿಯಾಗಿದ್ದ ಆಶಾಗೆ ನಿಂತ ನೆಲ ಕುಸಿದಂತಾಗಿತ್ತು. ತಮ್ಮ ತಾಯಿ ಮತ್ತು ಸಹೋದರಿಯರ ಬಳಿ ಮರಳಿ ಬಂದರು ಆಶಾ ಭೋಸ್ಲೆ.
ಹೀಗೆ ಮರಳಿ ಬಂದ ಆಶಾ ಆ ನಂತರ ಮತ್ತೆ ಆ ಕಡೆ ತಿರುಗಿ ನೋಡಲಿಲ್ಲ. ಆದರೆ, ಇಷ್ಟರಲ್ಲಿ ಪ್ರಖ್ಯಾತ ನಿರ್ದೇಶಕ ಆರ್ ಡಿ ಬರ್ಮನ್ ಅವರ ಪ್ರವೇಶ ಇವರ ಬದುಕಿನಲ್ಲಾಗಿತ್ತು. ''ಪಿಯಾ ತು ಅಬ್ ತೋ ಆಜಾ''.. ''ದಮ್ ಮಾರೋ ದಮ್''..''ಓ ಹಸೀನಾ ಜುಲ್ಫೋನ್ ವಾಲಿ''..''ಏ ಲಡ್ಕಾ ಹೈ ಅಲ್ಲಾ ಕೈಸಾ ಹೈ ದೀವಾನಾ''.. ''ಚುರಾ ಲಿಯಾ ಹೈ ತುಮ್ನೇ ಜೋ ದಿಲ್ ಕೋ''.. ''ಓ ಮರಿಯಾ''..''ಜಾನೇ ಜಾನಾ''.. ಹೀಗೆ 1960ರಿಂದ ಒಂದಾದ ಮೇಲೊಂದು ಚಾರ್ಟ್ ಬಸ್ಟರ್ ಹಾಡುಗಳನ್ನು ನೀಡಿದ ಈ ಜೋಡಿ ಆ ನಂತರ ನಿಜ ಜೀವನದಲ್ಲಿ ಕೂಡ ಒಂದಾಯ್ತು.
1980ರಲ್ಲಿ ಆರ್ ಡಿ ಬರ್ಮನ್ ಮತ್ತು ಆಶಾ ಭೋಸ್ಲೆ ಮದುವೆ ಆದರು. ಕೇವಲ ಆಶಾ ಅವರಿಗೆ ಮಾತ್ರವಲ್ಲ. ಆರ್ ಡಿ ಬರ್ಮನ್ ಅವರಿಗೆ ಕೂಡ ಇದು ಎರಡನೇ ಮದುವೆಯಾಗಿತ್ತು. ಆದರೆ ಈ ಸಂಬಂಧ ಕೂಡ 7-8 ವರ್ಷ ಮಾತ್ರ ಉಳಿಯಿತು. ಜೀವನ ಶೈಲಿ ಮತ್ತು ಭಿನ್ನಾಭಿಪ್ರಾಯಗಳಿಂದ 1988-1989ರ ಅವಧಿಯಲ್ಲಿ ಇಬ್ಬರು ಬೇರೆ ಆದರು. ಪ್ರತ್ಯೇಕವಾಗಿ ವಾಸ ಮಾಡಲು ಶುರು ಮಾಡಿದರು.
ಹಾಗಂಥ ಆರ್ ಡಿ ಬರ್ಮನ್ ಅವರ ಮೇಲೆ ಆಶಾ ಅವರಿಗೆ ಯಾವ ಬೇಸರವೂ ಇರಲಿಲ್ಲ. 1994ರಲ್ಲಿ ಆರ್ ಡಿ ಬರ್ಮನ್ ಅಗಲುವವರೆಗೆ ಆಶಾ ಅವರಿಗೆ ಬರ್ಮನ್ ಅವರ ಮೇಲೆ ಮೊದಲಿದ್ದ ಗೌರವ ಇತ್ತು. ಇನ್ನೂ ಮೊದಲ ಪತಿ ಗಣಪತ್ ರಾವ್ ಭೋಸ್ಲೆ ಅವರಿಂದ ಮಾನಸಿಕ ಮತ್ತು ದೈಹಿಕ ಹಿಂಸೆ ಅನುಭವಿಸಿದ್ದರು ಕೂಡ ಆಶಾ ಭೋಸ್ಲೆ ಯಾವತ್ತು ಗಣಪರ್ ರಾವ್ ಅವರನ್ನು ದೂರಲಿಲ್ಲ. ಬದಲಿಗೆ ನಾನು ಯಾರನ್ನೂ ದೂಷಿಸುವುದಿಲ್ಲ ಮತ್ತು ಯಾವುದೇ ದ್ವೇಷವಿಲ್ಲ. ನಾನು ಶ್ರೀ ಭೋಸ್ಲೆ ಅವರನ್ನು ಭೇಟಿ ಮಾಡದಿದ್ದರೆ, ನನಗೆ ಈ ಮೂವರು ಅದ್ಭುತ ಮಕ್ಕಳು ಸಿಗುತ್ತಿರಲಿಲ್ಲ ಎಂದು ಹೇಳಿದ್ದರು ಆಶಾ ಭೋಸ್ಲೆ.
ಅಂದ್ಹಾಗೇ ತಮ್ಮ ವೈಯಕ್ತಿಕ ಬದುಕಿನ ಈ ವಿಚಾರಗಳನ್ನು 2003-2004ರಲ್ಲಿ ಆಶಾ ಭೋಸ್ಲೆ ಹೆಸರಾಂತ ಪತ್ರಕರ್ತೆ, ಬರಹಗಾರ್ತಿ ಮತ್ತು ಸಂಪಾದಕಿಯಾದ ಕವಿತಾ ಛಿಬರ್ ಅವರಿಗೆ ನೀಡಿದ ಸಂದರ್ಶನದಲ್ಲಿ ವಿವರವಾಗಿ ಹೇಳಿದ್ದರು. ಸುದೀರ್ಘವಾದ ಮತ್ತು ಮುಕ್ತವಾದ ಸಂದರ್ಶನವನ್ನು ನೀಡಿದ್ದರು.


Click it and Unblock the Notifications











