"ಹೆಂಡ ಇಳಿಸೋನು ಈ ಪಾತ್ರ ಮಾಡಬಾರ್ದು" ಎಂದು ವಿರೋಧ, ಅಣ್ಣಾವ್ರ ಆಸೆ ಈಡೇರಲೇಯಿಲ್ಲ!
ನಟಸಾರ್ವಭೌಮ ರಾಜ್‌ಕುಮಾರ್ ತೆರೆಮೇಲೆ ಹಾಕದ ವೇಷಗಳಿಲ್ಲ, ಮಾಡದ ಪಾತ್ರಗಳಿಲ್ಲ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ತರಹೇವಾರಿ ಪಾತ್ರಗಳನ್ನು ನಿಭಾಯಿಸಿ ಅಣ್ಣಾವ್ರು ಪ್ರೇಕ್ಷಕರನ್ನು ರಂಜಿಸಿದ್ದರು. ನಿಮಗೆ ಗೊತ್ತಾ ವರನಟ ಆಸೆಪಟ್ಟು ನಟಿಸಬೇಕು ಎಂದುಕೊಂಡಿದ್ದ ಸಾಕಷ್ಟು ಚಿತ್ರಗಳು ತೆರೆಗೆ ಬರಲೇಯಿಲ್ಲ.
ಕೆಲ ಸಿನಿಮಾಗಳು ಮಾತುಕತೆ ಹಂತದಲ್ಲೇ ನಿಂತರೆ ಇನ್ನು ಕೆಲವು ಒಂದೆರಡು ದಿನ ಚಿತ್ರೀಕರಣ ಮಾಡಿದ ಬಳಿಕ ನಿಂತು ಹೋಗಿರುವ ಉದಾಹರಣೆಯಿದೆ. ಆದರೆ ಅದೊಂದು ಪಾತ್ರ ಮಾಡಬೇಕು ಎಂದು ರಾಜ್‌ಕುಮಾರ್ ಬಹಳ ಇಷ್ಟಪಟ್ಟಿದ್ದರು. ಪಾರ್ವತಮ್ಮ ಹಾಗೂ ಅವರ ತಂದೆ ಅಪ್ಪಾಜಿ ಗೌಡ ಅವರ ಮಹದಾಸೆ ಕೂಡ ಅದಾಗಿತ್ತು. ನಾಟಕಗಳಲ್ಲಿ ಆ ಪಾತ್ರ ಮಾಡಿದ್ದರೂ ಸಿನಿಮಾದಲ್ಲಿ ನಟಿಸೋ ಅವಕಾಶ ಮುತ್ತುರಾಜನಿಗೆ ಸಿಗಲಿಲ್ಲ.

ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ಮುತ್ತುರಾಜ ಎಲ್ಲಾ ತರಹದ ಪಾತ್ರಗಳಲ್ಲಿ ಲೀಲಾಜಾಲವಾಗಿ ನಟಿಸುತ್ತಿದ್ದರು. ಆದರೆ ಕೆಲ ಪಾತ್ರಗಳನ್ನು ಅವರು ಮಾಡುವುದು ಬೇಡ ಎಂದು ವಿರೋಧ ವ್ಯಕ್ತವಾಗಿದ್ದಿದ್ದು ಇದೆ. 'ಮಂತ್ರಾಲಯ ಮಹಾತ್ಮೆ' ಚಿತ್ರದಲ್ಲಿ ಅಣ್ಣಾವ್ರು ರಾಯರ ಪಾತ್ರ ಮಾಡುವುದು ಬೇಡ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಯಾರು ಆ ಪಾತ್ರ ಮಾಡಬೇಕು ಎಂದು ಚೀಟಿ ಬರೆದು ಹಾಕಿ, ಅದರಲ್ಲಿ ರಾಜ್ ಹೆಸರು ಬಂದು ಅವರು ನಟಿಸುವಂತಾಗಿತ್ತು.
ತಿಂಗಳುಗಳ ಕಾಲ ಮಾಂಸಹಾರ ತ್ಯಜಿಸಿ ಅಣ್ಣಾವ್ರು ರಾಯರ ಧ್ಯಾನ ಮಾಡಿದ್ದರು. ಶ್ರದ್ಧಾ ಭಕ್ತಿಯಿಂದ ಆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದರು. ಆ ಬಳಿಕ ಕೂಡ ಆ ಕತೆಯನ್ನು ಸಿನಿಮಾ ಮಾಡುವ ಪ್ರಯತ್ನ ನಡೀತು. ಆದರೆ 'ಮಂತ್ರಾಲಯ ಮಹಾತ್ಮೆ' ಮಾಸ್ಟರ್ ಪೀಸ್ ಸಿನಿಮಾ ಎನಿಸಿಕೊಂಡುಬಿಟ್ಟಿತ್ತು. ಸಾಮಾಜಿಕ ಕ್ರಾಂತಿಯ ಹರಿಹಾರ ಬಸವಣ್ಣನವರ ಪಾತ್ರದಲ್ಲಿ ನಟಿಸಬೇಕು ಎನ್ನುವುದು ವರನಟನ ಕನಸ್ಸಾಗಿತ್ತು. ಎರಡ್ಮೂರು ಬಾರಿ ಪ್ರಯತ್ನಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ.
ಬಸವಣ್ಣನ ಪಾತ್ರದಲ್ಲಿ ರಾಜ್ ನಟಿಸಬೇಕು ಎನ್ನುವುದು ಪಾರ್ವತಮ್ಮ ಹಾಗೂ ತಂದೆ ಅಪ್ಪಾಜಿ ಗೌಡ ಅವರ ಆಸೆಯೂ ಆಗಿತ್ತಂತೆ. ಈ ಬಗ್ಗೆ ಹಾಲು ಜೇನು ರಾಮ್‌ಕುಮಾರ್ ಟೋಟಲ್ ಕನ್ನಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಯಾಕೆ ಅಣ್ಣಾವ್ರು ಆ ಸಿನಿಮಾ ಮಾಡೋಕೆ ಸಾಧ್ಯವಾಗಲಿಲ್ಲ ಎಂದು ನೆನಪಿಸಿಕೊಂಡಿದ್ದಾರೆ.
ಅಪ್ಪಾಜಿ ಗೌಡರಿಗೆ ರಾಜ್‌ಕುಮಾರ್ ಬಸವಣ್ಣನ ಪಾತ್ರ ಮಾಡಬೇಕು ಎನ್ನುವ ಆಸೆಯಿತ್ತು. ಯಾಕಂದರೆ ನಾಟಕಗಳಲ್ಲಿ ಅಣ್ಣಾವ್ರು ಆ ಪಾತ್ರವನ್ನು ಬಹಳ ಸೊಗಸಾಗಿ ಮಾಡುತ್ತಿದ್ದರು. ಆ ಪಾತ್ರವೇ ತಾವಾಗಿಬಿಡುತ್ತಿದ್ದರು. ಆದರೆ ಸಿನಿಮಾ ಮಾಡಲು ಮುಂದಾದಾಗ ಉತ್ತರಕರ್ನಾಟದಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರಂತೆ. ತಮ್ಮ ಮಠದ ಸ್ವಾಮಿಜಿ ಬಳಿ ಈ ಬಗ್ಗೆ ದೂರು ಕೊಟ್ಟಿದ್ದರು. ಹೆಂಡ ಇಳಿಸುವವನು ಬಸವಣ್ಣನ ಪಾತ್ರ ಮಾಡ್ತಿದ್ದಾನೆ. ಇದನ್ನು ವಿರೋಧಿಸಬೇಕು ಎಂದು ಮನವಿ ಮಾಡಿಕೊಂಡಿದ್ದರಂತೆ.

ಅಣ್ಣಾವ್ರು ಮಾಡುತ್ತಿದ್ದ ಬಸವಣ್ಣನ ನಾಟಕ ನೋಡಿ ತಮ್ಮ ನಿರ್ಧಾರ ತಿಳಿಸುವುದಾಗಿ ಸ್ವಾಮಿಜಿ ಹೇಳಿದ್ದರಂತೆ. ರಾಜ್‌ಕುಮಾರ್ ಮಾಡಿದ ಬಸವಣ್ಣನ ಪಾತ್ರ ನೋಡಿ ಸ್ವಾಮಿಜಿ ಬೆರಗಾಗಿದ್ದರಂತೆ. "ತೆರೆಮೇಲೆ ಬರೋವರ್ಗೂ, ಮುತ್ತುರಾಜ ಹೆಂಡ ಇಳಿಸೋನು, ತೆರೆಮೇಲೆ ಬಂದರೆ ಆತ ಬಸವಣ್ಣ. ಆ ರೀತಿ ಯಾರು ಮಾಡೋಕೆ ಆಗೊಲ್ಲ" ಎಂದು ತಮ್ಮ ಬಳಿ ದೂರು ತಂದವರಿಗೆ ಹೇಳಿದ್ದರಂತೆ. ಈ ವಿಚಾರವನ್ನು ಹಾಲು ಜೇನು ರಾಮ್‌ಕುಮಾರ್ ವಿವರಿಸಿದ್ದಾರೆ.
ಒಮ್ಮೆ ಹೊನ್ನಪ್ಪ ಭಾಗವತರ್, ಬಳಿಕ ಅಶೋಕ್ ಬಸವಣ್ಣನ ಜೀವನಾಧರಿತ ಚಿತ್ರಗಳಿಂದ ನಟಿಸಿದ್ದರು. ಆದರೆ ಪಾರ್ವತಮ್ಮನವರಿಗೆ ಹೇಗಾದರೂ ಮಾಡಿ ಚಿತ್ರ ಮಾಡಬೇಕು ಎನ್ನುವ ಆಸೆ ಇತ್ತು. ಆಗ ಅಣ್ಣಾವ್ರು ಬೇಡ ಪುರಂದರ ದಾಸ ಚಿತ್ರವನ್ನು ಇಬ್ಬರು ಮಾಡಿದರು. ಇದನ್ನು ಬಸವಣ್ಣ ಚಿತ್ರ ಬೇರೆಯವರು ಮಾಡುವಾಗ ಪೈಪೋಟಿ ಬೇಡ ಎಂದುಬಿಟ್ಟರಂತೆ. ಅಪ್ಪಾಜಿ ಗೌಡರು ಸಾಯುವ ಮುನ್ನ ಅಳಿಯನನ್ನು ಕರೆಸಿ ಬಸವಣ್ಣನ ವಚನ ಹೇಳುವಂತೆ ಕೇಳಿದ್ದರಂತೆ. ಕೊನೆಪಕ್ಷ ಒಂದು ಧಾರಾವಾಹಿಯಲ್ಲಿ ಆದರೂ ಅಣ್ಣಾವ್ರನ್ನು ಬಸವಣ್ಣನ ಪಾತ್ರದಲ್ಲಿ ನೋಡಬೇಕು ಎನ್ನುವುದು ಪಾರ್ವತಮ್ಮ ಆಸೆಯಾಗಿತ್ತಂತೆ. ಇದು ನನ್ನ ಆಸೆ ಕೂಡ ಎಂದು ಅಣ್ಣಾವ್ರು ಹೇಳುತ್ತಿದ್ದರಂತೆ.


Click it and Unblock the Notifications











