ವೆಟ್ರಿಮಾರನ್ ಬರೆದಿದ್ದೇ ಒಂದು, ವಿಧಿ ಬರೆದಿದ್ದೇ ಮತ್ತೊಂದು - ಮಾಸ್ತಿ ಹೇಳಿದ ಅಪರೂಪದ ಅಪ್ಪು ಕಥೆ
ಪುನೀತ್ ರಾಜ್‌ಕುಮಾರ್ ಅವರ ವ್ಯಕ್ತಿತ್ವವನ್ನ ಕೇವಲ ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ.ಯಾಕಂದರೆ .. ಪುನೀತ್ ಅವರದ್ದು ನಿಲುಕದ ವ್ಯಕ್ತಿತ್ವ. ಬದುಕಿದ್ದಷ್ಟು ದಿನ ಪ್ರೀತಿಯನ್ನೇ ಹಂಚಿ.. ಅಭಿಮಾನದ ಹೂಗಳನ್ನೆಲ್ಲ ತನ್ನ ಹೃದಯದಲ್ಲಿ ತುಂಬಿಸಿಕೊಂಡು ಬಾರದ ಲೋಕಕ್ಕೆ ಹೋದ ಅಸಂಖ್ಯಾತ ಜನರ ಪರಮಾತ್ಮ ಪುನೀತ್ ರಾಜ್‌ಕುಮಾರ್ ಅಂದರೆ ಕೇವಲ ಕನ್ನಡಿಗರಿಗೆ ಮಾತ್ರವಲ್ಲ ಅಕ್ಕ-ಪಕ್ಕದ ರಾಜ್ಯದವರಿಗೆ ಕೂಡ ಅಚ್ಚು ಮೆಚ್ಚು.
ಕೇವಲ ಜನ ಸಾಮಾನ್ಯರಿಗೆ ಮಾತ್ರವಲ್ಲ ಚಿತ್ರರಂಗದ ಅನೇಕ ತಾರೆಯರ ಫೇವರೆಟ್ ವ್ಯಕ್ತಿ ಅಂದರೆ ಅಪ್ಪು. ಹಲವಾರು ನಾಯಕಿಯರು, ಯುವ ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಪುನೀತ್ ರಾಜ್ ಕುಮಾರ್ ಅವರ ಜೊತೆ ಕೆಲಸ ಮಾಡಲು ಹಾತೊರೆಯುತ್ತಿದ್ದರು. ಒಂದೇ ಒಂದು ಅವಕಾಶಕ್ಕೆ ಎದುರು ನೋಡುತ್ತಿದ್ದರು. ಆ ಪೈಕಿ ಒಬ್ಬರು ಕನ್ನಡ ಚಿತ್ರರಂಗದ ಪ್ರಖ್ಯಾತ ಸಂಭಾಷಣೆಗಾರ-ಬರಹಗಾರ ''ಮಾಸ್ತಿ'' ಒಬ್ಬರಾದರೆ ಮತ್ತೊಬ್ಬರು ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ''ವೆಟ್ರಿಮಾರನ್'' ಎನ್ನುವುದು ವಿಶೇಷ.

ಆದರೆ ದುರಾದೃಷ್ಟ.. ವೆಟ್ರಿ ಬರೆದಿದ್ದ ಕಥೆಯೇ ಒಂದು. ಆ ವಿಧಿ ಬರೆದಿದ್ದೆ ಮತ್ತೊಂದು. ಈ ಅಪರೂಪದ ಸಂಗಮಕ್ಕೆ ಸಾಕ್ಷಿಯಾಗಬೇಕಿದ್ದ ಚಿತ್ರವನ್ನು ನೋಡಲು ಸಾಧ್ಯವಾಗಲೇ ಇಲ್ಲ. ಶುರುವಾಗುವ ಮುನ್ನವೇ ನಿಂತು ಹೋದ ಈ ಚಿತ್ರದ ಕುರಿತು ಕೆಲ ಆಸಕ್ತಿಕರ ವಿಚಾರಗಳನ್ನು ನಿಮ್ಮ ಮಾಸ್ತಿ ''ಫಿಲ್ಮಿಬೀಟ್ ಕನ್ನಡ''ದ ಜೊತೆ ಹಂಚಿಕೊಂಡಿದ್ದಾರೆ.
ಈ ಕುರಿತು ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿರುವ ಮಾಸ್ತಿ, ''ಎಲ್ಲರಂತೆ ಪುನೀತ್ ರಾಜ್ ಕುಮಾರ್ ಅವರ ಜೊತೆ ಕೆಲಸ ಮಾಡಬೇಕೆನ್ನುವುದು ನನ್ನ ಬಹುದೊಡ್ಡ ಕನಸಾಗಿತ್ತು. ''ಕಡ್ಡಿಪುಡಿ'' ಮತ್ತು ''ಟಗರು'' ಚಿತ್ರದಲ್ಲಿ ನಾನು ಶಿವಣ್ಣ ಅವರ ಜೊತೆ ಕೆಲಸ ಮಾಡಿದ್ದೆ. ಆದರೂ ಕೂಡ ಬರಹಗಾರನಾಗಿ ನನಗೆ ಅಪ್ಪು ಸರ್‌ಗೆ ಡೈಲಾಗ್ ಬರೆಯಬೇಕೆನ್ನುವ ಆಸೆ ತುಂಬಾ ಇತ್ತು. ಯಾಕೆಂದರೆ ಅವರಿಗೆ ಬಹುದೊಡ್ಡ ಅಭಿಮಾನಿ ವರ್ಗ ಇದೆ. ಅಣ್ಣಾವ್ರ ಲೆಗೆಸಿಯನ್ನು ಮುಂದುವರೆಸಿಕೊಂಡು ಬಂದವರು ಅವರು. ನಮ್ಮ ಪಾಲಿಗೆ ಅಣ್ಣಾವ್ರು ರಾಜನಾದರೆ ಅಪ್ಪು ಸರ್ ಯುವರಾಜ. ಹೀಗಾಗಿ ನಾನು ಬರೆಯುವ ಡೈಲಾಗ್ ಅವರ ಬಾಯಲ್ಲಿ ಕೇಳಬೇಕೆನ್ನುವ ಮಹದಾಸೆ'' ನನಗಿತ್ತು ಎಂದು ಹೇಳಿದ್ದಾರೆ.

ಮುಂದುವರೆದು ''ಸಂತೋಷ್ ಆನಂದ್ ರಾಮ್ ಅವರಾಗಲಿ, ರಘು ನಿಡುವಳ್ಳಿ ಅವರಾಗಲಿ, ನಾವೆಲ್ಲಾ ಜೊತೆಯಲ್ಲಿ ಚಿತ್ರರಂಗಕ್ಕೆ ಬಂದವರು. ಇವರೆಲ್ಲಾ ಅಪ್ಪು ಸರ್‌ಗೆ ಡೈಲಾಗ್ ಬರೆಯುತ್ತಿದ್ದರು. ಆಗ ನನಗೆ ಇನ್ನೂ ಆಸೆ ಹೆಚ್ಚಾಗುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಪುನೀತ್ ರಾಜ್ ಕುಮಾರ್ ಅವರು ಅವರ ತಂದೆಯಂತೆ ಮತ್ತು ಶಿವಣ್ಣನಂತೆ ನಿರ್ದೇಶಕರ ನಟನಾಗಿದ್ದರು. ಇನ್ನು ಕಥೆಯ ವಿಚಾರದಲ್ಲಾಗಲಿ.. ಸಂಭಾಷಣೆಯ ವಿಚಾರದಲ್ಲಾಗಲಿ.. ಅವರು ಮೂಗು ತೂರಿಸುವುದಿಲ್ಲ ಎನ್ನುವ ವಿಷಯ ನಾನು ಕೇಳಿದ್ದೇ, ಹೀಗಾಗಿ ನಾನು ಬರೆದ ಡೈಲಾಗ್ ಅವರ ಬಾಯಲ್ಲಿ ಯಾವತ್ತು ಬರುತ್ತೆ ಎಂದು ನಾನು ಕಾದಿದ್ದೇ'' ಎಂದು ಮಾಸ್ತಿ ''ಫಿಲ್ಮಿಬೀಟ್ ಕನ್ನಡ''ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ''ಟಗರು ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ಉಡುಪಿಗೆ ಅವರು ಬಂದಾಗ ನನಗೆ ತುಂಬಾ ಖುಷಿಯಾಗಿತ್ತು'' ಎಂದು ಆ ದಿನಗಳನ್ನು ಮೆಲುಕು ಹಾಕಿದ್ದಾರೆ.
ವೆಟ್ರಿಮಾರನ್ ಜೊತೆ ಸಿನಿಮಾ
ತಮಿಳಿನ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾದ, ಧನುಶ್ ಅಭಿನಯದ ''ಪೊಲ್ಲಾದವನ್''.. ''ಆಡುಕುಲಂ''.. ''ವಿಸಾರಣೈ''.. ''ವಡಾ ಚೆನ್ನೈ''.. ''ಅಸುರನ್'' ಅಂತಹ ಚಿತ್ರಗಳನ್ನ ನಿರ್ದೇಶನ ಮಾಡಿರುವ ವೆಟ್ರಿಮಾರನ್ ಸರ್ ಅವರು ಪುನೀತ್ ರಾಜ್ ಕುಮಾರ್ ಸರ್‌ಗೆ ಚಿತ್ರವೊಂದನ್ನು ನಿರ್ದೇಶನ ಮಾಡಬೇಕಿತ್ತು. ಇದೇ ಸಿನಿಮಾದ ವಿಚಾರವಾಗಿ ನನ್ನನ್ನ ತಮ್ಮ ಮನೆಗೆ ಕೂಡ ಅಪ್ಪು ಸರ್ ಕರೆಸಿಕೊಂಡಿದ್ದರು. ನಿಮ್ಮ ಬರವಣಿಗೆ ಸ್ವಾಭಾವಿಕವಾಗಿರುತ್ತೆ. ಆಡು ಭಾಷೆಯಲ್ಲಿರುತ್ತೆ. ಜನರ ಮಾತುಗಳನ್ನೇ ನೀವು ನಿಮ್ಮ ಶೈಲಿಯಲ್ಲಿ ಸೊಗಸಾಗಿ ಬರೆಯುತ್ತೀರಾ ಎನ್ನುವ ವಿಚಾರ ನನಗೆ ''ಟಗರು'' ನೋಡಿದ ಮೇಲೆ ಗೊತ್ತಾಯ್ತು. ಹೀಗಾಗಿ ವೆಟ್ರಿಮಾರನ್ ಅವರು ಮಣ್ಣಿನ ನೆಲದ ಸಿನಿಮಾ ಮಾಡಲು ಹೆಸರುವಾಸಿ, ಅವರ ಕಥೆಗೆ ನೀವು ನಿಮ್ಮ ಸಂಭಾಷಣೆ ಮೂಲಕ ಇನ್ನಷ್ಟು ಜೀವ ತುಂಬಬೇಕು ಎಂದು ನಿಮ್ಮನ್ನು ಇಲ್ಲಿ ಕರೆಸಿದ್ದು ಎಂದು ಅಪ್ಪು ಸರ್ ನನಗೆ ಹೇಳಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವೆಟ್ರಿಮಾರನ್ ಸರ್ ಮತ್ತು ಅಪ್ಪು ಸರ್ ಜೊತೆ ಒಂದು ಮೀಟಿಂಗ್ ಕೂಡ ಆಗಿತ್ತು ಎಂದು ಆ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ ಮಾಸ್ತಿ.
ಆದರೆ.. ''ಕಾರಣಾಂತರಗಳಿಂದ ಆ ಸಿನಿಮಾ ಆಗಲಿಲ್ಲ. ಯಾಕೆಂದರೆ.. ಆಗ ವೆಟ್ರಿಮಾರನ್ ಅವರು ವಡಾ ಚೆನ್ನೈ ಚಿತ್ರೀಕರಣ ಮಾಡುತ್ತಿದ್ದರು. '' ಅಸುರನ್'' ಮಾಡಬೇಕೆಂದು ಒನ್ ಲೈನ್ ಕಥೆ ಕೂಡ ಅವರು ಆಗ ಮಾಡಿಕೊಂಡಿದ್ದರು. ಇನ್ನು ಈ ಕಡೆ ಅಪ್ಪು ಸರ್ ಕೂಡ ಆಗ ತುಂಬಾ ಬ್ಯುಸಿಯಾಗಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ದೊಡ್ಡ ನಿರ್ದೇಶಕ ಮತ್ತು ದೊಡ್ಡ ನಟ ಬಿಡುವಿನ ಸಮಯದಲ್ಲಿ ಸಿನಿಮಾ ಮಾಡಲು ಸಾಧ್ಯ ಇಲ್ಲ. ಸಿನಿಮಾಗೋಸ್ಕರನೇ ಅವರು ಇಬ್ಬರು ಬಿಡುವು ಮಾಡ್ಕೋಬೇಕಿತ್ತು. ಈ ಹಿನ್ನೆಲೆ ಮುಂದೆ ಮಾಡೋಣ ಎಂದು ಇಬ್ಬರು ಮಾತನಾಡಿಕೊಂಡಿದ್ದರು. ಆದರೆ ಆ ದಿನ ಕೊನೆಗೂ ಬರಲೇ ಇಲ್ಲ. ನನ್ನ ಕನಸು ನನಸಾಗಲೇ ಇಲ್ಲ ಎಂದು ಭಾವುಕರಾಗಿದ್ದಾರೆ ಮಾಸ್ತಿ.


Click it and Unblock the Notifications











