Rajinikanth: ಚಿತ್ರತಂಡಕ್ಕೆ ಡಬಲ್ ಸಂಭಾವನೆ ಕೊಟ್ಟ ತಲೈವಾ: ರಾತ್ರೀಯಿಡಿ ಹಣ ಹಂಚಿದವ ಸುಸ್ತೋಸುಸ್ತು!
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಧೂಳೆಬ್ಬಿಸಿದೆ. ಇತ್ತೀಚೆಗೆ ರಜನಿಕಾಂತ್ ದಿಢೀರ್ ಬೆಂಗಳೂರಿಗೆ ಭೇಟಿ ಕೊಟ್ಟಿದ್ದಾರೆ. ತಾವು ಕೆಲಸ ಮಾಡಿದ ಜಯನಗರ ಬಿಎಂಟಿಸಿ ಬಸ್ ಡಿಪೋದಲ್ಲಿ ಅಡ್ಡಾಡಿದ್ದರು. ಅಲ್ಲಿನ ಸಿಬ್ಬಂದಿ ಜೊತೆ ಮಾತನಾಡಿ ಫೋಟೊ ಕ್ಲಿಕ್ಕಿಸಿಕೊಂಡಿದ್ದರು.
ತಲೈವಾ ಇಷ್ಟ ಆಗುವುದೇ ಇಂತಹ ಸರಳ, ಸಜ್ಜನ ವ್ಯಕ್ತಿತ್ವದಿಂದ. ಹಳೆಯದನ್ನು ಸೂಪರ್ ಸ್ಟಾರ್ ಎಂದು ಮರೆಯುವುದಿಲ್ಲ. ಕೊಡುಗೈ ದಾನಿ ಎನಿಸಿಕೊಂಡಿರುವ ರಜನಿಕಾಂತ್ ತಮ್ಮ ವಿಶಾಲ ಹೃದಯದಿಂದ ಸಾಕಷ್ಟು ಜನರಿಗೆ ಹತ್ತಿರವಾಗಿದ್ದಾರೆ. ತಮ್ಮ ಸಿನಿಮಾಗಳಿಂದ ನಿರ್ಮಾಪಕರು, ವಿತರಕರು, ಪ್ರದರ್ಶಕರು ನಷ್ಟ ಅನುಭವಿಸಿದಾಗ ಬೆಂಬಲಕ್ಕೆ ನಿಂತಿದ್ದಾರೆ. ಕಲಾವಿದರು, ಸಿನಿಮಾ ಕಾರ್ಮಿಕರು ಅಂದರೆ ತಲೈವಾಗೆ ಬಹಳ ಅಕ್ಕರೆ. ತಮ್ಮದೇ ಸಿನಿಮಾದಲ್ಲಿ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರಿಗೆ ರಜನಿಕಾಂತ್ ಡಬಲ್ ಸಂಭಾವನೆ ಕೊಟ್ಟಿರುವುದು ಇದೆ.

ರಜನಿಕಾಂತ್ ನಟನೆಯ ಸೂಪರ್ ಹಿಟ್ ಸಿನಿಮಾ 'ಪಡೆಯಪ್ಪ'. ಕೆ. ಎಸ್ ರವಿಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ರಮ್ಯಾಕೃಷ್ಣ, ಸೌಂದರ್ಯ, ಶಿವಾಜಿ ಗಣೇಶನ್ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ್ದರು. ತಮ್ಮದೇ ಅರುಣಾಚಲಂ ಸಿನಿಕ್ರಿಯೇಷನ್ಸ್ ಬ್ಯಾನರ್‌ನಲ್ಲಿ 'ಪಡೆಯಪ್ಪ' ಚಿತ್ರವನ್ನು ತಲೈವಾ ನಿರ್ಮಿಸಿದ್ದರು. ಹಲವು ಪ್ರಶಸ್ತಿಗಳನ್ನು ಸಿನಿಮಾ ಬಾಚಿಕೊಂಡಿತ್ತು. ಪಡೆಯಪ್ಪ ವರ್ಸಸ್ ನೀಲಾಂಬರಿ ಸನ್ನಿವೇಶಗಳು ಸಿನಿರಸಿಕರಿಗೆ ಸಖತ್ ಕಿಕ್ ಕೊಟ್ಟಿತ್ತು. ಇಂದಿಗೂ ಅಭಿಮಾನಿಗಳು ಆ ಸಿನಿಮಾವನ್ನು ಮರೆತ್ತಿಲ್ಲ.
ಅಂದಹಾಗೆ 'ಪಡೆಯಪ್ಪ' ಸಿನಿಮಾ ಸಂಭಾವನೆ ವಿಚಾರವಾಗಿ ಸಹ ನಿರ್ಮಾಪಕ ಪಿ. ಎಲ್ ತೇನಪ್ಪನ್ ಮಾತನಾಡಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ. ರಜನಿಕಾಂತ್ ಆ ನಿರ್ಧಾರವನ್ನು ಅವರು ಕೊಂಡಾಡಿದ್ದಾರೆ. 'ಪಡೆಯಪ್ಪ' ಸಿನಿಮಾ ಅಂದುಕೊಂಡ ಬಜೆಟ್‌ಗಿಂತ ಕಡಿಮೆ ಬಜೆಟ್‌ನಲ್ಲೇ ಚಿತ್ರೀಕರಣ ಮುಗಿಸಿತ್ತು. ಉಳಿದ ಹಣವನ್ನು ಸಂಭಾವನೆ ರೂಪದಲ್ಲಿ ಕಲಾವಿದರು ತಂತ್ರಜ್ಞರಿಗೆ ಹಂಚುವಂತೆ ರಜನಿಕಾಂತ್ ಹೇಳಿದ್ದಾಗಿ ವಿವರಿಸಿದ್ದಾರೆ. ಅದರಂತೆ ರಾತ್ರಿಯಿಡೀ ತಾನೇ ಖುದ್ದಾಗಿ ಮನೆ ಮನೆಗೂ ಹೋಗಿ ಸಂಭಾವನೆ ಕೊಟ್ಟುಬಂದೆ ಎಂದು ತನ್ನಪ್ಪನ್ ಹೇಳಿದ್ದಾರೆ.
"ಪಡೆಯಪ್ಪ ಚಿತ್ರಕ್ಕೆ ರಜನಿಕಾಂತ್ ಸರ್ ನಿರ್ಮಾಪಕರು. ಸಹ ನಿರ್ಮಾಪಕರಾಗಿ ನನ್ನನ್ನು ಸೇರಿಸಿಕೊಂಡರು. ನಾನು, ಕೆ. ಎಸ್ ರವಿಕುಮಾರ್ ಸೇರಿ ಚಿತ್ರಕ್ಕೆ ಒಂದು ಬಜೆಟ್ ಲೆಕ್ಕ ಹಾಕಿ ಹೇಳಿದ್ದೆವು. ಆದರೆ ನಾವು ಹೇಳಿದ್ದಕ್ಕಿಂತ ಕಡಿಮೆ 1.30 ಕೋಟಿ ರೂ. ಕಡಿಮೆ ಬಜೆಟ್‌ನಲ್ಲೇ ಸಿನಿಮಾ ಸಿದ್ಧವಾಗಿತ್ತು. ಒಂದು ಸಂಜೆ ನಾನು ಎಲ್ಲಿದ್ದೀನಿ ಎಂದು ಕೇಳಿದರು. 'ಪಡೆಯಪ್ಪ' ಚಿತ್ರದಲ್ಲಿ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರಿಗೆ ಸಂಭಾವನೆ ಎಷ್ಟು ಎನ್ನುವ ಮಾಹಿತಿ ತಗೊಂಡು ಬನ್ನಿ ಎಂದರು. ನಾನು ಬರೆದಿಟ್ಟಿಲ್ಲ, ಸರ್. ಎಲ್ಲಾ ತಲೆಯಲ್ಲೇ ಇದೆ. ಹೇಳ್ತೀನಿ ಎಂದೆ. ಕೂಡಲೇ ಬನ್ನಿ ಎಂದರು"
"ಮನೆಗೆ ಹೋದ ಕೂಡಲೇ ಟೆರೆಸ್ ಮೇಲೆ ಕರೆದುಕೊಂಡು ಹೋಗಿ ಪೆನ್ನಿ, ಪ್ಯಾಡ್ ಕೊಟ್ಟು ಎಲ್ಲರ ಸಂಭಾವನೆ ಲೆಕ್ಕ ಬರೆಯಲು ಹೇಳಿದರು. ರಮ್ಯಾಕೃಷ್ಣಗೆ ಎಷ್ಟು ಸಂಭಾವನೆ ಅಂದ್ರು. 5.50 ಲಕ್ಷ ರೂ. ಎಂದೆ. ಡಬಲ್ ಕೊಟ್ಟುಬಿಡಿ ಎಂದರು. ಹೀಗೆ ಸಿನಿಮಾದಲ್ಲಿ ನಟಿಸಿದ ಕಲಾವಿದರು, ತಂತ್ರಜ್ಞರು ಎಲ್ಲರಿಗೂ ಡಬಲ್ ಸಂಭಾವನೆ ಕೊಡು ಎಂದರು. 1.30 ಕೋಟಿ ರೂ. ಬಜೆಟ್ ಉಳಿದಿದೆ ಅಲ್ಲವೇ? ಅದನ್ನು ಈ ಸಿನಿಮಾಗಾಗಿ ತಾನೇ ನಾವು ಎತ್ತಿಟ್ಟಿದ್ದು. ಇಷ್ಟು ಹಣ ಉಳಿಸಿ ಕೊಟ್ಟಿದ್ದೀರಾ. ತಂಡವೆಲ್ಲಾ ಹಗಲು ರಾತ್ರಿ ಕೆಲಸ ಮಾಡಿದ್ದಕ್ಕೆ ಇದು ಸಾಧ್ಯವಾಯ್ತು ಅಲ್ಲವೇ? ನಾವು ಅಂದುಕೊಂಡಿದ್ದು ತೆರೆಮೇಲೆ ಬಂದಿದೆ ಅಲ್ಲವೇ? ಹಾಗಾಗಿ ಆ ಹಣವನ್ನು ಅವರಿಗೆ ಕೊಟ್ಟುಬಿಡಿ ಎಂದರು."
"ರಾತ್ರಿ 11 ಗಂಟೆಗೆ ನಾನೊಬ್ಬನೇ ಕಾರಿನಲ್ಲಿ ಹಣ ಇಟ್ಟುಕೊಂಡು ಊರೂರು ಸುತ್ತಿ ಚಿತ್ರದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಹಣ ಕೊಟ್ಟು ಬಂದೆ. ಇವತ್ತು ರಾತ್ರಿನೇ ಎಲ್ಲರಿಗೂ ಕೊಡಬೇಕು ಎಂದು ಆಜ್ಞೆ ಮಾಡಿದರು. ನಾನು ಎಲ್ಲರ ಮನೆ ಬಾಗಿಲು ಬಡಿದು ಮಲಗಿದ್ದವರನ್ನು ಎಬ್ಬಿಸಿ ಹಣ ಕೊಟ್ಟೆ."
"ಮನ್ಸೂರ್ ಅಲಿಖಾನ್‌ಗೆ ಒಂದು ದಿನಕ್ಕೆ 70 ಸಾವಿರ ರೂ. ಮಾತನಾಡಿದ್ದೆ. ಅವರಿಗೆ ಒಂದೂವರೆ ಲಕ್ಷ ಕೊಟ್ಟಾಗ ನಿದ್ದೆ ಕಣ್ಣಲ್ಲಿ ಕನಸಾ? ನನಸಾ? ಎಂದು ನಂಬಲೇಯಿಲ್ಲ. ಇಲ್ಲ ಸರ್, ನಿಜ ಎಂದು ಕೊಟ್ಟೆ. ರಜನಿಕಾಂತ್ ಗೋಲ್ಡನ್ ಹಾರ್ಟ್‌ಗೆ ಫಿದಾ ಆಗೋಗಿದ್ದೆ" ಎಂದಿದ್ದರು.
ಅಂದಹಾಗೆ 'ಪಡೆಯಪ್ಪ' ಚಿತ್ರಕ್ಕೆ 4 ಕೋಟಿ ರೂ. ಬಜೆಟ್ ಪ್ಲ್ಯಾನ್ ಮಾಡಿದ್ದರು. ಆದರೆ 2.70 ಕೋಟಿ ರೂ.ಗೆ ಸಿನಿಮಾ ನಿರ್ಮಾಣವಾಗಿತ್ತು ಎನ್ನಲಾಗುತ್ತದೆ. ಸಾಮಾನ್ಯವಾಗಿ ನಿರ್ಮಾಪಕರು ನಾವು ಸಿನಿಮಾ ಆರಂಭಕ್ಕೂ ಮುನ್ನ ಅಂದುಕೊಂಡ ಬಜೆಟ್ ಬೇರೆ. ಸಿನಿಮಾ ಮುಕ್ತಾಯದ ವೇಳೆಗೆ ಅದಕ್ಕಿಂತ ಹೆಚ್ಚು ಖರ್ಚಾಯಿತು ಎಂದು ಹೇಳುತ್ತಾರೆ. ಒಂದು ವೇಳೆ ಬಜೆಟ್ ಉಳಿದರೂ ಸುಮ್ಮನಾಗುತ್ತಾರೆ. ಆದರೆ ರಜನಿಕಾಂತ್ ಮಾತ್ರ ಆ ರೀತಿ ಮಾಡಲಿಲ್ಲ. ಚಿತ್ರದಲ್ಲೆ ಕೆಲಸ ಮಾಡಿದವರಿಗೆ ಅದನ್ನು ಹಂಚಿದ್ದಾರೆ, ದಟೀಸ್ ಸೂಪರ್ ಸ್ಟಾರ್ ಎಂದು ಅಭಿಮಾನಿಗಳು ಕಾಲರ್ ಎಗರಿಸುತ್ತಿದ್ದಾರೆ.


Click it and Unblock the Notifications











