ಕನ್ನಡದಿಂದ ದೂರವಾದರು ಮಲೆಯಾಳಂನ ಈ ನಟಿಯರು
ಒಂದು ಕಾಲದಲ್ಲಿ ಮಲೆಯಾಳಂ ಚಿತ್ರರಂಗದ ಅನೇಕ ನಟಿಯರು ಕನ್ನಡಕ್ಕೆ ಬರುತ್ತಿದ್ದರು. ಕೆಲವರು ಕನ್ನಡದವರೇ ಎನ್ನುವ ಮಟ್ಟಿಗೆ ಪ್ರೇಕ್ಷಕರಿಗೆ ಹತ್ತಿರ ಆಗಿದ್ದರು. ಆದರೆ, ಇತ್ತೀಚಿಗೆ ಆ ನಟಿಯರು ಕಡಿಮೆ ಆಗಿದ್ದಾರೆ.
ನಟಿ ಪಾರ್ವತಿ, ಭಾಮಾ, ನವ್ಯ ನಾಯರ್, ಭಾವನ, ಅಮಲಾ ಪೌಲ್ ಹೀಗೆ ಅನೇಕರು ಕನ್ನಡ ಸಿನಿಮಾ ಮಾಡಿದ್ದಾರೆ. ಪಾರ್ವತಿ, ಭಾಮಾ ಅನೇಕ ಒಳ್ಳೆ ಒಳ್ಳೆಯ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ನಟಿಯರು ಈಗ ಸ್ಯಾಂಡಲ್ ವುಡ್ ನ ಯಾವ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಮಾಲಿವುಡ್ ನಿಂದ ಬಂದ ಅಮಲಾ ಪೌಲ್ ಕೂಡ ಒಂದೇ ಸಿನಿಮಾಗೆ ಸುಸ್ತಾಗಿದ್ದಾರೆ.
ಮಲೆಯಾಳಂ ನಟಿಯರು ಕನ್ನಡ ಸಿನಿಮಾ ಮಾಡುತ್ತಿಲ್ಲವೋ, ಅಥವಾ ಚಿತ್ರತಂಡಗಳು ಅವರ ಅಗತ್ಯ ಇಲ್ಲವೋ ಆದರೆ, ಕನ್ನಡ ಇಂಡಸ್ಟ್ರಿಯಿಂದ ಮಲೆಯಾಳಂನ ಅನೇಕ ನಟಿಯರು ದೂರ ಆಗಿದ್ದಾರೆ.

4 ವರ್ಷದಿಂದ ಪಾರ್ವತಿ ಕನ್ನಡ ಚಿತ್ರ ಮಾಡಿಲ್ಲ
'ಮಿಲನ', 'ಮಳೆ ಬರಲಿ ಮಂಜು ಇರಲಿ', 'ಅಂದರ್ ಬಾಹರ್', 'ಪೃಥ್ವಿ' ಪಾರ್ವತಿ ಕನ್ನಡದಲ್ಲಿ ನಟಿಸಿದ ಸಿನಿಮಾಗಳು. ಈ ಪೈಕಿ ಪುನೀತ್ ಜೊತೆಗೆ ನಟಿಸಿದ್ದ 'ಮಿಲನ' ಸಿನಿಮಾ ದೊಡ್ಡ ಹಿಟ್ ಆಯ್ತು. 'ಪೃಥ್ವಿ' ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಬಂತು. ಈ ಸಿನಿಮಾಗಳ ನಂತರ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಪಾರ್ವತಿ ನಟಿಸುತ್ತಿದ್ದಾರೆ. 2013ರ ನಂತರ ಪಾರ್ವತಿ ಕನ್ನಡದ ಕಡೆ ತಿರುಗಿ ನೋಡಿಲ್ಲ.

ಎರಡು ವರ್ಷ ಆದರೂ ಭಾಮಾ ಬರಲಿಲ್ಲ
ಮಲೆಯಾಳಂನಲ್ಲಿ ಅನೇಕ ಸಿನಿಮಾಗಳ ಮೂಲಕ ಗುರುತಿಸಿಕೊಂಡ ಭಾಮಾ 'ಮೊದಲ ಸಲ' ಸಿನಿಮಾದ ಮೂಲಕ ಮೊದಲ ಬಾರಿಗೆ ಕನ್ನಡಕ್ಕೆ ಬಂದರು. ಯಶ್ ಗೆ ಭಾಮಾ ಜೋಡಿ ಆಗಿದ್ದರು. ಆ ಸಿನಿಮಾದ ನಂತರ 'ಶೈಲೂ', 'ಆಟೋ ರಾಜ', 'ಅರ್ಜುನ', 'ರಾಗ' ಸಿನಿಮಾಗಳಲ್ಲಿ ನಟಿಸಿದರು. ಕಳೆದ ಎರಡು ವರ್ಷಗಳಿಂದ ಭಾಮಾ ಯಾವುದೇ ಕನ್ನಡ ಸಿನಿಮಾಗಳಲ್ಲಿ ನಟಿಸಿಲ್ಲ.

ಒಂದೇ ಸಿನಿಮಾ ಮಾಡಿದ್ದಾರೆ ಅಮಲಾ ಪೌಲ್
ಮಲೆಯಾಳಂ, ತೆಲುಗು, ತಮಿಳಿನಲ್ಲಿ ಫೇಮಸ್ ಆಗಿದ್ದ ಅಮಲಾ ಪೌಲ್ 2017 ರಲ್ಲಿ ಕನ್ನಡಕ್ಕೆ ಬಂದರು. ಕಿಚ್ಚ ಸುದೀಪ್ ಗೆ 'ಹೆಬ್ಬುಲಿ' ಸಿನಿಮಾದಲ್ಲಿ ಜೋಡಿಯಾದರು. ಆ ಸಿನಿಮಾ ಹಿಟ್ ಆಯ್ತು. ಆ ಸಿನಿಮಾದ ನಂತರ ಅಮಲಾ ಯಾವುದೇ ಕನ್ನಡ ಸಿನಿಮಾ ಮಾಡಿಲ್ಲ. ಯಾರು ಅವರನ್ನು ಮತ್ತೆ ಈ ಕಡೆ ಕರೆ ತಂದಿಲ್ಲ. ಸದ್ಯ, ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಅವರು ಬ್ಯುಸಿ ಇದ್ದಾರೆ.

ಇದು ಪ್ರಿಯಾ ವಾರಿಯರ್ ಕಾಲ
ಮಲೆಯಾಳಂನ ಈ ನಟಿಯರು ಕನ್ನಡದಿಂದ ದೂರ ಆಗಿದ್ದಾರೆ. ಆದರೆ, ಇತ್ತ ನಟಿ ಪ್ರಿಯಾ ವಾರಿಯರ್ ಕನ್ನಡದಲ್ಲಿ ನಟಿಸುತ್ತಿದ್ದಾರೆ. ನಿರ್ಮಾಪಕ ಕೆ ಮಂಜು ತಮ್ಮ ಮಗನ ಸಿನಿಮಾಗಾಗಿ ಅವರನ್ನು ಕನ್ನಡಕ್ಕೆ ಕರೆ ತಂದಿದ್ದಾರೆ. 'ವಿಷ್ಣು ಪ್ರಿಯಾ' ಸಿನಿಮಾಗೆ ಪ್ರಿಯಾ ವಾರಿಯರ್ ನಾಯಕಿ ಆಗಿದ್ದಾರೆ. ಇದರೊಂದಿಗೆ ಅವರ ಮತ್ತೊಂದು ಹೊಸ ಸಿನಿಮಾ ಕೆಲ ದಿನಗಳ ಹಿಂದೆ ಲಾಂಚ್ ಆಗಿದೆ.


Click it and Unblock the Notifications











