'ಟ್ರೋಲ್' ಸಾಂಗ್‌ನಲ್ಲಿ ಮೋಡಿ ಮಾಡಿದ ಚೆಲುವೆ; ಟಾಲಿವುಡ್, ಕಾಲಿವುಡ್ ಕಣ್ಣು ಬೀಳದಿರಲಿ!
ಮೂರು ದಿನಗಳಿಂದ 'ಯುಐ' ಚಿತ್ರದ 'ಟ್ರೋಲ್' ಸಾಂಗ್ ಭಾರೀ ಸದ್ದು ಮಾಡ್ತಿದೆ. ನಿಂತ್ರು ಕುಂತ್ರು ಇದೇ ಸಾಂಗ್ ಗುಂಯ್‌ಗುಡುತ್ತಿದೆ. ಉಪ್ಪಿ ಅಭಿಮಾನಿಗಳಂತೂ ಮುಗಿಬಿದ್ದು ಸಾಂಗ್ ನೋಡುತ್ತಿದ್ದಾರೆ, ಕೇಳುತ್ತಿದ್ದಾರೆ. ಜನಪ್ರಿಯ ಟ್ರೋಲ್ ಪದಗಳನ್ನೆಲ್ಲಾ ಬಳಸಿಕೊಂಡು ಬಹಳ ಕ್ರಿಯೇಟಿವ್ ಆಗಿ ಈ ಸಾಂಗ್ ಕಟ್ಟಿಕೊಡಲಾಗಿದೆ.
ಯಾವುದೇ ಪ್ರಚಾರದ ಗಿಮಿಕ್ ಮಾಡಲು ನಾವು 'ಟ್ರೋಲ್' ಸಾಂಗ್ ಮಾಡಿಲ್ಲ. ಅದು ಚಿತ್ರದ ಕಥೆಗೆ, ಸನ್ನಿವೇಶಕ್ಕೆ ಅವಶ್ಯವಾಗಿ ಬೇಕಾಗಿತ್ತು. ಅದಕ್ಕೆ ಇಂತಹ ಸಾಂಗ್ ಮಾಡಿದ್ದೇವೆ. ಯಾರ ಮನಸ್ಸನ್ನು ನೋಯಿಸುವ ಉದ್ದೇಶ ಇಲ್ಲ. ಈ ಹಾಡನ್ನು ಎಲ್ಲಾ ಟ್ರೋಲ್ ಪೇಜ್‌ಗಳಿಗೆ ಅರ್ಪಿಸುತ್ತೇವೆ ಎಂದು ಉಪೇಂದ್ರ ಹೇಳಿದ್ದಾರೆ. ಕನ್ನಡ ಮಾತ್ರವಲ್ಲ ತೆಲುಗಿನಲ್ಲಿ ಕೂಡ 'ಟ್ರೋಲ್' ಸಾಂಗ್ ಸಖತ್ ಸದ್ದು ಮಾಡ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಮುಳುಗಿಹೋದ ನಾಯಕಿ ಸ್ನೇಹಿತೆಯ ಮಾತು ಕೇಳದೇ ಟ್ರೆಂಡ್ ಆಗಿ, ಪ್ರಿಯಕರನ್ನು ಹುಡುಕುವ ಪ್ರಯತ್ನವನ್ನು ಹಾಡಿನಲ್ಲಿ ತೋರಿಸಲಾಗಿದೆ. ಜ್ವಲಂತ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ಸದಾ ಟ್ರೋಲ್, ಮೀಮ್, ರೀಲ್ಸ್ ನೋಡ್ತಾ ಮೈಮರೆತ ಜನರನ್ನು ವಿಡಂಬನೆ ಮಾಡುವಂತೆ ಸಾಂಗ್ ಮೂಡಿ ಬಂದಿದೆ. ನಾಯಕಿ ರೀಷ್ಮಾ ನಾಣಯ್ಯ ಬಿಂದಾಸ್ ಆಗಿ ಲುಕ್‌ನಲ್ಲಿ ಹಾಡಿಗೆ ತಕ್ಕ ಎಕ್ಸ್‌ಪ್ರೆಷನ್ ಕೊಟ್ಟು ಗಮನ ಸೆಳೆದಿದ್ದಾರೆ. ಆಕೆಯ ಎನರ್ಜಿ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇಮ್ರಾನ್ ಸರ್ದಾರಿಯ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ 'ಯುಐ' ಚಿತ್ರದಲ್ಲಿ ರೀಷ್ಮಾ ನಾಯಕಿಯಾಗಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಟ್ರೋಲ್ ಸಾಂಗ್‌ನಿಂದಲೇ ಸಿನಿರಸಿಕರ ಮನಗೆದ್ದಿರುವುದು ಸುಳ್ಳಲ್ಲ. ಈಗಾಗಲೇ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿರುವ ರೀಷ್ಮಾಗೆ ಇದು ದೊಡ್ಡ ಅವಕಾಶ ಎನ್ನಬಹುದು. ಈ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರೇಕ್ಷಕರಿಗೆ ಪರಿಚಿತರಾಗುತ್ತಿದ್ದಾರೆ.

'ಟ್ರೋಲ್' ಸಾಂಗ್‌ನಲ್ಲಿ ಆಕೆಯ ಅಪಿಯರೆನ್ಸ್ ನೋಡಿದವರು ಸ್ಯಾಂಡಲ್‌ವುಡ್‌ನಲ್ಲಿ ಭರವಸೆಯ ನಟಿಯಾಗುತ್ತಾರೆ. ಆಕೆ ಪರಭಾಷೆಗೆ ಹೋಗದಿದ್ದರೆ ಸಾಕು. ಕಾಲಿವುಡ್, ಟಾಲಿವುಡ್ ಮಂದಿ ಕಣ್ಣು ಆಕೆಯ ಮೇಲೆ ಬೀಳದಿರಲಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕನ್ನಡದ ಒಂದೆರಡು ಸಿನಿಮಾಳಲ್ಲಿ ನಟಿಸಿ ಮೋಡಿ ಮಾಡಿದವರು ಬಳಿಕ ತೆಲುಗು, ತಮಿಳು ಸಿನಿಮಾಗಳತ್ತ ಮುಖ ಮಾಡುತ್ತಾರೆ. ಬಳಿಕ ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸುವುದಕ್ಕೆ ಹಿಂದು ಮುಂದು ನೋಡುತ್ತಾರೆ.
ರಶ್ಮಿಕಾ ಮಂದಣ್ಣ, ಶ್ರೀಲೀಲಾ ಈಗಾಗಲೇ ಟಾಲಿವುಡ್, ಕಾಲಿವುಡ್ ಎಂದು ಬ್ಯುಸಿಯಾಗಿಬಿಟ್ಟಿದ್ದಾರೆ. ಕನ್ನಡ ಸಿನಿಮಾಗಳನ್ನು ಒಪ್ಪಿಕೊಳ್ಳುವ ಮನಸ್ಸು ಮಾಡುತ್ತಿಲ್ಲ. ಸಪ್ತಮಿ ಗೌಡ, ರುಕ್ಮಿಣಿ ವಸಂತ್ ಹೀಗೆ ಹಲವರು ಪರಭಾಷೆಗಳಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ರೀಷ್ಮಾ ಕೂಡ ಪರಭಾಷೆಗೆ ಹೋದರೆ ಕಷ್ಟ ಎನ್ನುತ್ತಿದ್ದಾರೆ.
ಜೋಡಿ ಪ್ರೇಮ್ ನಿರ್ದೇಶನದ 'ಏಕ್ ಲವ್‌ಯಾ' ಸಿನಿಮಾದಲ್ಲಿ ರೀಷ್ಮಾ ನಾಣಯ್ಯ ಮೊದಲಿಗೆ ನಟಿಸಿದ್ದರು. ಬಳಿಕ ರಾಣಾ, ಸ್ಪೂಕಿ ಕಾಲೇಜ್, ಬಾನ ದಾರಿಯಲ್ಲಿ ಹಾಗೂ ವಾಮನ ಸಿನಿಮಾಗಲ್ಲಿ ರೀಷ್ಮಾ ಬಣ್ಣ ಹಚ್ಚಿದ್ದರು. 'ಯುಐ' ಆಕೆಯ 6ನೇ ಸಿನಿಮಾ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರೀಷ್ಮಾ ಮಾಡೆಲಿಂಗ್ ಆರಂಭಿಸಿದ್ದರು. ಬಳಿಕ ಪ್ರೇಮ್ ಕಣ್ಣಿಗೆ ಬಿದ್ದು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.
'ಯುಐ' ಚಿತ್ರದಲ್ಲಿ ರೀಷ್ಮಾ ನಾಣಯ್ಯ ಅಭಿನಯವನ್ನು ಉಪೇಂದ್ರ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಟ್ರೋಲ್ ಸಾಂಗ್ ರಿಲೀಸ್ ವೇಳೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. "ಹಾಡು ನೋಡಿದರೆ ಸಣ್ಣ ಸಣ್ಣ ಶಾರ್ಟ್‌ನಲ್ಲಿ ಆಕೆಯ ಎಕ್ಸ್‌ಪ್ರೆಷನ್ ತುಂಬಾ ಚೆನ್ನಾಗಿದೆ. ಕೊರಿಯೋಗ್ರಫರ್ ಕೂಡ ಸರ್, ಯಾರು ಈ ಹುಡುಗಿ ಎಂದು ಕೇಳುತ್ತಿದ್ದರು. ಆಕೆ ಮೂರ್ನಾಲ್ಕು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಆಕೆ ಹೊಸ ನಟಿ. ಆಕೆ ಒಳ್ಳೆ ನಟಿ. ಮುಂದೆ ಬಹಳ ಸ್ಕೋಪ್ ಇದೆ" ಎಂದು ಉಪೇಂದ್ರ ಹೇಳಿದ್ದಾರೆ.


Click it and Unblock the Notifications











