Rajinikanth: ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ಕೆಲಸ ಮಾಡಲು 4 ಬಾರಿ 'ನೋ' ಎಂದಿದ್ದರು ಈ ಬಾಲಿವುಡ್ ನಟಿ!
ತಲೈವಾ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ನಟ ರಜನಿಕಾಂತ್ ಚಿತ್ರರಂಗದ ಅತ್ಯಂತ ಗೌರವಾನ್ವಿತ ನಟರಲ್ಲಿ ಒಬ್ಬರು. ಇವರ ಅಭಿಮಾನಿಗಳ ಸಂಖ್ಯೆ ಹೊಂದಿದ್ದಾರೆ. ನಟ ರಜನಿಕಾಂತ್ ಈಗ 73ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ದಶಕಗಳಿಂದ ಸಿನಿಮಾರಂಗದಲ್ಲಿ ರಾಜನಾಗಿ ಮೆರೆಯುತ್ತಿರುವ ಅವರ ಜೊತೆಗೆ ಕೆಲಸ ಮಾಡಲು ಎಲ್ಲರು ಬಯಸುತ್ತಾರೆ. ಆದರೆ, ಸತತ ನಾಲ್ಕು ಬಾರಿ ರಜನಿಕಾಂತ್ ಅವರೊಂದಿಗೆ ಕೆಲಸ ಮಾಡಲು ನಿರಾಕರಿಸಿದ್ದರು ಒಬ್ಬ ಬಾಲಿವುಡ್ ನಟಿ!
ಹೌದು, ಬಾಲಿವುಡ್‌ನಲ್ಲಿ ತಮ್ಮದೇ ಸ್ಥಾನ ಪಡೆದಿರುವ ಬಚ್ಚನ್ ಕುಟುಂಬದ ಸೊಸೆ, ಕರಾವಳಿ ಬೆಡಗಿ ನಟಿ ಐಶ್ವರ್ಯಾ ರೈ ಬಚ್ಚನ್ ರಜನಿಕಾಂತ್ ಅವರ ಸತತ ನಾಲ್ಕು ಆಫರ್‌ಗಳನ್ನು ತಿರಸ್ಕರಿಸಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಸತತವಾಗಿ ಬಂದ ಆಫರ್‌ಗಳನ್ನು ತಿರಸ್ಕರಿಸಿದ್ದ ಈ ನಟಿ ಕೊನೆಗೂ ರಜನಿಕಾಂತ್ ಜೊತೆಗೆ ತೆರೆ ಹಂಚಿಕೊಂಡಿದ್ದರು.

ರಜನಿಕಾಂತ್ ಸಿನಿಮಾ ಆಫರ್ ತಿರಸ್ಕರಿಸಿದ್ದ ಐಶ್ವರ್ಯಾ ರೈ!
ನಟಿ ಐಶ್ವರ್ಯಾ ರೈ ಬಚ್ಚನ್ ರಜನಿಕಾಂತ್ ಅವರ ಸಿನಿಮಾದಲ್ಲಿ ನಟಿಸುವ ಸತತ ನಾಲ್ಕು ಆಫರ್‌ಗಳನ್ನು ತಿರಸ್ಕರಿಸಿದ್ದರು. ನಟಿ ರಮ್ಯಾ ಕೃಷ್ಣನ್ ಮತ್ತು ಸೌಂದರ್ಯ ನಟಿಸಿದ ರಜನಿಕಾಂತ್ ಅವರ ಸೂಪರ್ ಹಿಟ್ ಚಿತ್ರ 'ಪಡಯಪ್ಪ'ದಲ್ಲಿ ನಟಿಸಲು ಅವರಿಗೆ ಮೊದಲು ಆಫರ್ ನೀಡಲಾಗಿತ್ತು. ಆದರೆ, ಅವರು ಅದನ್ನು ರಿಜೆಕ್ಟ್ ಮಾಡಿದ್ದರು.
ಇದಾದ ನಂತರ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಮತ್ತೆ ರಜನಿಕಾಂತ್ ಜೊತೆಗೆ ನಟಿಸಲು ಅವರ 'ಬಾಬಾ', 'ಚಂದ್ರಮುಖಿ' ಮತ್ತು 'ಶಿವಾಜಿ: ದಿ ಬಾಸ್' ಸಿನಿಮಾಗಳಿಗೂ ಆಫರ್ ನೀಡಲಾಗಿತ್ತು. ಆದರೆ ಈ ಎಲ್ಲಾ ಅವಕಾಶಗಳನ್ನು ನಟಿ ಐಶ್ವರ್ಯಾ ರೈ ಬಚ್ಚನ್ ತಿರಸ್ಕರಿಸಿದ್ದರು ಎಂದು ವರದಿಯಾಗಿದೆ. ಇನ್ನು, ನಟಿ ವಿದ್ಯಾ ಬಾಲನ್ ಅವರು ಕೂಡ ರಜನಿಕಾಂತ್ ಸಿನಿಮಾಗಳಲ್ಲಿ ನಟಿಸಲು ಹಲವು ಬಾರಿ ಒಪ್ಪಿಲ್ಲ ಎಂಬ ವರದಿಗಳಿವೆ.
ಕೊನೆಗೂ ರಜನಿ ಜೊತೆಗೆ ಸಿನಿಮಾಗೆ ಒಪ್ಪಿದ್ದ ಐಶ್ವರ್ಯಾ ರೈ ಬಚ್ಚನ್
ನಟ ರಜನಿಕಾಂತ್ ಮತ್ತು ಐಶ್ವರ್ಯಾ ರೈ ಬಚ್ಚನ್ ಕೊನೆಗೆ ಶಂಕರ್ ನಿರ್ದೇಶನದ 'ಎಂಥಿರಾನ್' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಇ ಚಿತ್ರವನ್ನು ರೋಬೋಟ್ ಎಂದೂ ಕರೆಯುತ್ತಾರೆ. ವಿಭಿನ್ನ ಕಾನ್ಸೆಪ್ಟ್‌ನ ಈ ಸಿನಿಮಾಕ್ಕೆ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೂಡ ಲಭಿಸಿತ್ತು. ಆದರೆ, ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ರೋಬೋಟ್ 2.0 ಚಿತ್ರದ ಸೀಕ್ವೆಲ್‌ನಲ್ಲಿ ಐಶ್ವರ್ಯಾ ರೈ ಬಚ್ಚನ್ ನಟಿಸಿರಲಿಲ್ಲ.

ತಮಿಳು ಸಿನಿರಂಗ ಮತ್ತು ಐಶ್ವರ್ಯಾ ರೈ ಬಚ್ಚನ್
ಬಾಲಿವುಡ್ ನಟಿ ಎಂದು ಕರೆಸಿಕೊಳ್ಳುವ ಐಶ್ವರ್ಯಾ ರೈ ಅವರು 1997 ರಲ್ಲಿ ತಮಿಳು ಚಲನಚಿತ್ರ ಇರುವರ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದವರು. ಇರುವರ್ ಸಿನಿಮಾಕ್ಕೆ ಖ್ಯಾತ ನಿರ್ದೇಶಕ ಮಣಿರತ್ನಂ ಆಕ್ಷನ್ ಕಟ್ ಹೇಳಿದ್ದರು. ಇದು ಎಂ ಕರುಣಾನಿಧಿ, ಎಂ ಜಿ ರಾಮಚಂದ್ರನ್ ಮತ್ತು ಜೆ ಜಯಲಲಿತಾ ಅವರ ಜೀವನದಿಂದ ಸ್ಫೂರ್ತಿ ಪಡೆದಿತ್ತು. ಚಿತ್ರದಲ್ಲಿ ಮೋಹನ್ ಲಾಲ್, ಪ್ರಕಾಶ್ ರಾಜ್, ಐಶ್ವರ್ಯಾ ರೈ, ರೇವತಿ, ಗೌತಮಿ, ಟಬು ಮತ್ತು ನಾಸರ್ ನಟಿಸಿದ್ದರು. ಇದು ಪ್ಲಾಪ್ ಸಿನಿಮಾವಾಗಿತ್ತು. ಮಣಿರತ್ನಂ ಈ ಸಿನಿಮಾದಿಂದ ಸುಮಾರು 1.2 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ ಎನ್ನಲಾಗುತ್ತದೆ. ಚಿತ್ರವು ನಂತರ ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿದೆ.


Click it and Unblock the Notifications











