ಜೀವನಕ್ಕಾಗಿ ಸೊಳ್ಳೆ ಬ್ಯಾಟ್ ಮಾರುತ್ತಿದ್ದಾರೆ ಕನ್ನಡದ ಖ್ಯಾತ ಹಾಸ್ಯನಟನ ಮಗ
ಚಿತ್ರರಂಗದಲ್ಲಿ ವರ್ಷಗಳ ಕಾಲ ಇದ್ದವರು ಬಹಳ ಹಣ ಸಂಪಾದನೆ ಮಾಡಿರುತ್ತಾರೆ. ಹೆಚ್ಚು ಸಿನಿಮಾಗಳಲ್ಲಿ ನಟಿಸಿದವರ ಲೈಫ್ ಬಿಂದಾಸ್ ಆಗಿರುತ್ತದೆ ಎನ್ನುವ ಕಲ್ಪನೆ ಸಾಕಷ್ಟು ಜನರಲ್ಲಿ ಇದೆ. ಚಿತ್ರರಂಗದಲ್ಲಿ ಅದೃಷ್ಟ, ಪರಿಶ್ರಮ ಇದ್ದರೆ ನೇಮು, ಫೇಮು ಸಿಗುತ್ತದೆ ನಿಜ. ಆದರೆ ಇದೇ ಚಿತ್ರರಂಗದಲ್ಲಿ ಸೋತವರು ಇದ್ದಾರೆ.
ನೂರಾರು ಸಿನಿಮಾಗಳಲ್ಲಿ ನಟಿಸಿದವರು ಕೊನೆಗೆ ಒಂದೊತ್ತಿನ ಊಟಕ್ಕೂ ಪರಿತಪಿಸಿರುವ ಉದಾಹರಣೆಗಳಿವೆ. ಹತ್ತಾರು ಕೋಟಿ ಸಂಪಾದಿಸಿದವರು ಕೋಟಿಕೋಟಿ ಕಳೆದುಕೊಂಡವರು ಸಾಕಷ್ಟು ಜನ ಸಿಗ್ತಾರೆ. ತೆರೆಮೇಲೆ ಮೆರೆದವರು ದುರಂತ ಅಂತ್ಯ ಕಂಡಿರುವುದನ್ನು ನೋಡಿದ್ದೇವೆ. ಸದ್ಯ ಕನ್ನಡದ ಖ್ಯಾತ ಹಾಸ್ಯ ನಟರೊಬ್ಬರ ಪುತ್ರ ಜೀವನೋಪಾಯಕ್ಕಾಗಿ ಈಗ ಸೊಳ್ಳೆ ಬ್ಯಾಟ್ ಮಾರುತ್ತಿದ್ದಾರೆ.

ತಂದೆ 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಒಂದಷ್ಟು ಸಿನಿಮಾಗಳಿಗೆ ಫೈನಾನ್ಸ್ ಕೂಡ ಮಾಡಿದ್ದರು. ಆದರೆ ಬಳಿಕ ಒಂದೆರಡು ಚಿತ್ರಗಳಿಗೆ ಫೈನಾನ್ಸ್ ಮಾಡಿ ಕೈಸುಟ್ಟುಕೊಂಡಿದ್ದರು. ಕೂಡಿಟ್ಟಿದ್ದ ಹಣ, ಗಳಿಸಿದ ಆಸ್ತಿ ಮಾರಿಕೊಂಡರು. ಇವತ್ತಿಗೂ ಅವರ ಪತ್ನಿ ಹಾಗೂ ಪುತ್ರ ಬಾಡಿಗೆ ಮನೆಯಲ್ಲೇ ಇದ್ದಾರೆ. ವಿಸಿಡಿ ಕ್ಯಾಸೆಟ್ ಅಂಗಡಿ ಇಟ್ಟುಕೊಂಡಿದ್ದ ಆ ನಟ ಜೊತೆ ಜೊತೆಗೆ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದರು.
ಅಂಬರೀಶ್ ಅವರಿಗೂ ಆಪ್ತರಾಗಿದ್ದರು. ಅವರೊಟ್ಟಿಗೆ 'ಮಂಡ್ಯದ ಗಂಡು', 'ಬೇಟೆಗಾರ', 'ಮೈಸೂರು ಜಾಣ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ರೆಬಲ್ ಸ್ಟಾರ್ ಜೊತೆ ತೆರೆ ಹಂಚಿಕೊಂಡಿದ್ದರು. ಕಾಲ ಬದಲಾದಂತೆ ವಿಸಿಡಿ ಅಂಗಡಿಯಲ್ಲಿ ಸಿಡಿಗಳನ್ನು ಮಾರುವಂತಾಗಿತ್ತು. 4 ವರ್ಷಗಳ ಹಿಂದೆ ಶ್ವಾಸಕೋಶದ ಸೋಂಕಿನಿಂದ ಹಾಸ್ಯನಟ ನಿಧನರಾದ ಬಳಿಕ ಮಗ ಆ ಅಂಗಡಿಯನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಈಗ ಅಂಗಡಿಯಲ್ಲಿ ಸೊಳ್ಳೆ ಬ್ಯಾಟ್ ಸೇರಿ ಒಂದಷ್ಟು ಗೃಹೋಪಯೋಗಿ ವಿದ್ಯುತ್‌ಉಪಕರಣಗಳನ್ನು ಮಾರುತ್ತಿದ್ದಾರೆ.

ಅಂದಹಾಗೆ ಆ ಹಾಸ್ಯ ನಟನ ಹೆಸರು ಮೈಸೂರು ಶ್ರೀಕಂಠ. ನಟ ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಮೈಶ್ರೀ ಎಂದು ಹೆಸರಿಟ್ಟಿದ್ದರು. ಅವರ ಮಗ ಸಂತೋಷ್ ಈಗ ಮೈಸೂರಿನಲ್ಲಿ ತಂದೆಯ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದಾರೆ. ಅದೇ ಆದಾಯದಿಂದ ತಾಯಿ ಜೊತೆ ಜೀವನ ಸಾಗಿಸುತ್ತಿದ್ದಾರೆ. ಅಂಗಡಿಯಲ್ಲಿ ಸೊಳ್ಳೆ ಬ್ಯಾಟ್, ಶೇವಿಂಗ್ ಟ್ರಿಮ್ಮರ್, ಬ್ಯಾಟರಿ ಸೇರಿದಂತೆ ಸಾಕಷ್ಟು ವಿದ್ಯುತ್ ಉಪಕರಣಗಳನ್ನು ಮಾರಾಟ, ರಿಪೇರಿ ಮಾಡುತ್ತಾರೆ.
ಫಿಲ್ಮಿಬೀಟ್ ಕನ್ನಡ ಜೊತೆ ಸಂತೋಷ್ ಮಾತನಾಡಿದ್ದಾರೆ. ತಂದೆ ಮೈಸೂರು ಶ್ರೀಕಂಠ ಅವರ ನಿಧನದ ಬಳಿಕ ತಾವು ಅಂಗಡಿಯನ್ನು ಮುನ್ನಡೆಸುತ್ತಿರುವುದಾಗಿ ಹೇಳಿದ್ದಾರೆ. ತಂದೆ ಮೊದಲಿನಿಂದಲೂ ಚಿತ್ರರಂಗದ ಸಹವಾಸ ಬೇಡ ಎನ್ನುತ್ತಿದ್ದರು. ಹಾಗಾಗಿ ನಾನು ಬಣ್ಣದ ಲೋಕಕ್ಕೆ ಹೋಗುವ ಪ್ರಯತ್ನ ಮಾಡಲಿಲ್ಲ. ಒಳ್ಳೆ ಅವಕಾಶ ಸಿಕ್ಕರೆ ನೋಡೋಣ ಎಂದಿದ್ದಾರೆ. ಅಂಬಿ ಜೊತೆಗಿನ ತಮ್ಮ ತಂದೆಯವರ ಒಡನಾಟದ ಬಗ್ಗೆಯೂ ಮಾತನಾಡಿದ್ದಾರೆ.
ಪ್ರಜ್ವಲ್ ದೇವರಾಜ್ ನಟಿಸಿದ 'ಭುಜಂಗ' ಮೈಸೂರು ಶ್ರೀಕಂಠ ಅವರು ನಟಿಸಿದ ಕೊನೆಯ ಚಿತ್ರ. ತಂದೆ ನಟಿಸಿದ ಸಿನಿಮಾಗಳ ದೊಡ್ಡ ಪಟ್ಟಿಯನ್ನೇ ಸಂತೋಷ್ ನೀಡಿದ್ದಾರೆ. 'ಮಿಡಿದ ಹೃದಯಗಳು', 'ಶ್ರಾವಣ ಸಂಜೆ', 'ತುಂಗಭದ್ರ', 'ಜೈಲರ್ ಜಗನ್ನಾಥ್', 'ರ್ಯಾಂಬೋ ರಾಜ ರಿವಾಲ್ವರ್ ರಾಣಿ', 'ಕಾಮಣ್ಣದ ಮಕ್ಕಳು', 'ಚಿಂಗಾರಿ', 'ಕಂಠೀರವ', 'ರ್ಯಾಂಬೋ', 'ಹುಡುಗರು' ಹೀಗೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದರು.
ತಮ್ಮ ಹಾಸ್ಯ ಪಾತ್ರಗಳ ಮೂಲಕ ಮೈಸೂರು ಶ್ರೀಕಂಠ ಮೋಡಿ ಮಾಡಿದ್ದರು. ವಿಭಿನ್ನ ಮ್ಯಾನರಿಸಂ, ಡೈಲಾಗ್ ಡೆಲಿವರಿಯಿಂದ ಪ್ರೇಕ್ಷಕರು ನಗೆಗಡಲಿನಲ್ಲಿ ತೇಲುವಂತೆ ಮಾಡುತ್ತಿದ್ದರು. ಅಂಬರೀಶ್ ಮಾತ್ರವಲ್ಲದೇ ಟೈಗರ್ ಪ್ರಭಾಕರ್, ವಿಷ್ಣುವರ್ಧನ್, ಶಂಕರ್ ನಾಗ್, ದೇವರಾಜ್, ದರ್ಶನ್, ಶರಣ್, ಪ್ರಜ್ವಲ್ ದೇವರಾಜ್ ಹೀಗೆ ಹಲವು ನಟರ ಜೊತೆ ಮೈಸೂರು ಶ್ರೀಕಂಠು ತೆರೆ ಹಂಚಿಕೊಂಡಿದ್ದರು.

2020ರಲ್ಲಿ ಆಗಷ್ಟೆ ಕೊರೊನಾ ಹಾವಳಿ ಶುರುವಾಗಿತ್ತು. ನಮ್ಮ ತಂದೆ ಶ್ವಾಸಕೋಶದಲ್ಲಿ ಸೋಂಕು ತಗುಲಿತ್ತು. ವೈದ್ಯರು ಇದು ನ್ಯುಮೊನಿಯಾ ತರ ಇದೆ. ಆದರೆ ಏನು ಅಂತ ಗೊತ್ತಿಲ್ಲ. ನ್ಯುಮೊನಿಯಾಗೆ ನೀಡುವ ಚಿಕಿತ್ಸೆ ಕೊಡಬೇಕು ಎಂದರು. ನಾವು ಒಪ್ಪಿದೆವು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತೀರಿಕೊಂಡರು ಎಂದು ಸಂತೋಷ್ ನೆನಪಿಸಿಕೊಂಡಿದ್ದಾರೆ.
'ಕಾಳಿ' ಚಿತ್ರಕ್ಕೆ ನಮ್ ತಂದೆ ಫೈನಾನ್ಸ್ ಕೊಟ್ಟಿದ್ದರು. ಆದರೆ ಆ ಸಿನಿಮಾ ರಿಲೀಸ್ ಆಗಲೇ ಇಲ್ಲ. ಅದರಿಂದ ಸ್ವಲ್ಪ ನಷ್ಟವಾಯಿತು. ಆಗ ಇದ್ದ ಸೈಟ್ ಕೂಡ ಮಾರುವಂತಾಯಿತು ಎಂದು ಸಂತೋಷ್ ಹೇಳಿದ್ದಾರೆ. ನಮ್ಮ ತಂದೆ ಮೈಸೂರಿನಲ್ಲಿ ಇದ್ದ ಕಾರಣ ಅವಕಾಶಗಳು ಅಷ್ಟಾಗಿ ಸಿಗುತ್ತಿರಲಿಲ್ಲ. ಅಲ್ಲಿಂದ ಬೆಂಗಳೂರಿಗೆ ಹೋಗಿ ಬಂದು ನಟಿಸೋದು ಕಷ್ಟವಾಗುತ್ತಿತ್ತು. ಹಾಗಾಗಿ ಅವಕಾಶಗಳು ಬೇರೆಯವರ ಪಾಲಾಗುತ್ತಿತ್ತು ಎಂದು ವಿವರಿಸಿದ್ದಾರೆ.
ನೀವು ನೋಡಲು ನಿಮ್ಮ ಅಪ್ಪನ ರೀತಿಯೇ ಇದ್ದೀರಿ, ಸಿನಿಮಾಗಳಲ್ಲಿ ನಟಿಸಿ ಎಂದು ಸಂತೋಷ್‌ಗೆ ಕೆಲವರು ಸಲಹೆ ಕೊಡುತ್ತಿದ್ದಾರಂತೆ. ಸಂತೋಷ್ ಕೂಡ ಒಳ್ಳೆಯ ಅವಕಾಶ ಸಿಕ್ಕರೆ ನಟಿಸುವ ಲೆಕ್ಕಾಚಾರದಲ್ಲಿದ್ದಾರೆ.


Click it and Unblock the Notifications











