ಅವತ್ತು ಚಿತ್ರೀಕರಣಕ್ಕೆ ಹೋಗದೇ ಇದ್ದಿದ್ದರೆ ಚೆನ್ನಾಗಿರ್ತಿತ್ತು.. ಸುಂದರಕೃಷ್ಣ ಅರಸ್ ಸಾವಿಗೆ ಕಾರಣವೇನು?
ಸುಂದರ್ ಕೃಷ್ಣ ಅರಸ್. ಈ ಹೆಸರು ಕೇಳಿದಾಕ್ಷಣ ಖಡಕ್ ವಿಲನ್ ಚಿತ್ರ ಕನ್ನಡ ಸಿನಿರಸಿಕರ ಕಣ್ಮುಂದೆ ಬರುತ್ತದೆ. ನೋಡಲು ಸೌಮ್ಯ ವ್ಯಕ್ತಿಯಂತೆ ಕಂಡರೂ ಅವರ ಕಂಚಿನ ಕಂಠ ಎಂಥಹವರ ಎದೆಯಲ್ಲೂ ನಡುಕ ಹುಟ್ಟಿಸುತ್ತಿತ್ತು. 180ಕ್ಕೂ ಅಧಿಕ ಸಿನಿಮಾಗಳಲ್ಲಿ ಖಳನಟನಾಗಿ ಪೋಷಕ ನಟರಾಗಿ ಅವರು ಬಣ್ಣ ಹಚ್ಚಿದ್ದರು.
ನಟನೆ ಮಾತ್ರವಲ್ಲದೇ ನಿರ್ಮಾಪಕ, ನಿರ್ದೇಶಕ , ಕಂಠದಾನ ಕಲಾವಿದ , ಸಂಕಲನಕಾರ ,
ವಾದ್ಯ ಸಂಯೋಜಕರಾಗಿಯೂ ಸುಂದರಕೃಷ್ಣ ಅರಸ್ ಗಮನ ಸೆಳೆದಿದ್ದರು. ಭಾರತೀಯ ಸೈನ್ಯ ಸೇರುವ ಕನಸು ಕಂಡಿದ್ದರು. ಆದರೆ ತಾಯಿ ಅದಕ್ಕೆ ಒಪ್ಪಲಿಲ್ಲ. ಇನ್ನು ಕಾಲೇಜು ದಿನಗಳಲ್ಲೇ ನಾಟಕಗಳಲ್ಲಿ ನಟಿಸಲು ಆರಂಭಿಸಿದ ಸುಂದರಕೃಷ್ಣ ಅರಸ್ ಮುಂದೆ ಪುಟ್ಟಣ್ಣ ಕಣಗಾಲ್ ತಂಡ ಸೇರಿಕೊಂಡಿದ್ದರು.

ಆರಂಭದಲ್ಲಿ ಪುಟ್ಟಣ್ಣದ ಬಳಿ 'ಸಾಕ್ಷ್ಯಾತ್ಕಾರ', 'ಮಲ್ಲಮ್ಮನ ಪವಾಡ' ಹಾಗೂ 'ಕರುಳಿನ ಕರೆ'
ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಬಳಿಕ ನಟನೆಯತ್ತ ವಾಲಿದ್ದರು. ಮುಂದೆ ಬಹಳ ಬ್ಯುಸಿಯಾಗಿಬಿಟ್ಟಿದ್ದರು. ಒಟ್ಟೊಟ್ಟಿಗೆ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಕೆಲ ಸಿನಿಮಾಗಳಿಗೆ ಕಂಠದಾನ ಕಲಾವಿದರಾಗಿಯೂ ಕೆಲಸ ಮಾಡಿದ್ದರು. 'ಸಿಂಹದ ಮರಿಸೈನ್ಯ' ಚಿತ್ರದಲ್ಲಿ ಒಂದೊಳ್ಳೆ ಪಾತ್ರದಲ್ಲಿ ನಟಿಸಿದ್ದರು. ಅಷ್ಟೇ ಅಲ್ಲ ಅದೇ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ಅಮರೀಶ್ ಪುರಿಗೆ ವಾಯ್ಸ್ ಡಬ್ ಮಾಡಿದ್ದರು.
'ಒಂದಾನೊಂದು ಕಾಲದಲ್ಲಿ' ಚಿತ್ರದ ನಟನೆಗಾಗಿ ಅತ್ತ್ಯುತ್ತಮ ಪೋಷಕ ನಟ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. 'ಸೂಪರ್ ನೋವಾ' ಹಾಗೂ 'ಸಂಗ್ಯಾ ಬಾಳ್ಯ' ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದರು. 'ಅಂತ', 'ಋಣ ಮುಕ್ತಳು', 'ಸೀತಾರಾಮು', 'ಆಟೋ ರಾಜ' , 'ಮೂಗನ ಸೇಡು', 'ಗಂಡ ಭೇರುಂಡ', 'ಗಣೇಶ ಮಹಿಮೆ' , 'ಏಟು ಎದಿರೇಟು' ಚಿತ್ರಗಳಲ್ಲಿ ತಮ್ಮ ಖಡಕ್ ನಟನೆಯಿಂದ ಸುಂದರಕೃಷ್ಣ ಅರಸ್ ಸದ್ದು ಮಾಡಿದ್ದರು.

ಹೀಗೆ ಅದ್ಭುತ ಸಿನಿಮಾಗಳಲ್ಲಿ ನಟಿಸಿ ಕನ್ನಡ ರಸಿಕರ ಮನಗೆದ್ದ ನಟ ಸುಂದರಕೃಷ್ಣ ಅರಸ್ ತಮ್ಮ 52ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ತೆರೆಮೇಲೆ ಮಾತ್ರ ವಿಲನ್ ಆಗಿ ಅಬ್ಬರಿಸುತ್ತದ್ದ ಅರಸ್ ನಿಜ ಜೀವನದಲ್ಲಿ ಸಾಧು ಸ್ವಭಾವದವರಾಗಿದ್ದರು. ಯಾವುದೇ ಕೆಟ್ಟ ಚಟಗಳ ಇರಲಿಲ್ಲ. ಒಮ್ಮೆ ಟೈಫಾಯಿಡ್ ಜ್ವರ ಬಂದಿತ್ತು. ಆ ಸಮಯದಲ್ಲಿ ಚಿತ್ರೀಕರಣಕ್ಕೆ ಹೋಗುವುದು ಬೇಡ ಎಂದು ವೈದ್ಯರು ಹೇಳಿದರೂ ಕೇಳದೇ ಹೋಗಿದ್ದರು. ಅದೇ ಅವರ ಜೀವಕ್ಕೆ ಕುತ್ತು ತಂದಿತ್ತು.
ಸುಧಾರಾಣಿ ಹಾಗೂ ಶಶಿಕುಮಾರ್ ನಟನೆಯ 'ಸ್ವಾತಿ' ಚಿತ್ರದಲ್ಲಿ ಸುಂದರ್‌ಕೃಷ್ಣ ಅರಸ್ ಒಂದೊಳ್ಳೆ ಪಾತ್ರ ಮಾಡಿದ್ದರು. ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ. ನಿರ್ಮಾಪಕರು ಫೋನ್ ಮಾಡಿ ಕರೆದಾಗ ಹುಷಾರಿಲ್ಲ ಬರೋಕೆ ಸಾಧ್ಯವಿಲ್ಲ ಎಂದೇ ಹೇಳಿದ್ದರಂತೆ. ಆದರೆ ಕ್ಲೈಮ್ಯಾಕ್ಸ್ ಚಿತ್ರೀಕರಣ ಬನ್ನಿ ಎಂದು ಕರೆದಿದ್ದರಂತೆ. ತಮ್ಮಿಂದ ನಿರ್ಮಾಪಕರಿಗೆ ನಷ್ಟವಾಗುವುದು ಬೇಡ ಎಂದು ಅಂದು ಚಿತ್ರೀಕರಣಕ್ಕೆ ಹೋಗಿದ್ದರು.
ಚಿತ್ರೀಕರಣಕ್ಕೆ ಹೋಗಿ ಬಂದಮೇಲೆ ಚಳಿಯಿಂದ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಐದಾರು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸುಧಾರಿಸಿಕೊಂಡಿದ್ದರು. ಆದರೆ ಇದ್ದಕ್ಕಿದಂತೆ ಹಾರ್ಟ್ ಅಟ್ಯಾಕ್ ಆಗಿತ್ತು. ಕೂಡಲೇ ಮೆದುಳಿನ ಪಾರ್ಶ್ವವಾಯು ತಗುಲಿ ಕಂಚಿನ ಕಂಠದ ನಟ ಕೊನೆಯುಸಿರೆಳೆದಿದ್ದರು. 1993, ನವೆಂಬರ್ 8ರಂದು ಬಾರದಲೋಕಕ್ಕೆ ಪಯಣ ಬೆಳೆಸಿಬಿಟ್ಟರು.
ಸುಂದರಕೃಷ್ಣ ಸಹೋದರ ಸುರೇಶ್ ಅರಸ್ ಸಂಕನಕಾರಗಾಗಿ ಗುರ್ತಿಸಿಕೊಂಡಿದ್ದಾರೆ. ಪುತ್ರ ನಾಗೇಂದ್ರ ಅರಸ್ ಕೂಡ ಸಂಕಲನ ಕಲಿತು ಹಲವು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ತಂದೆ ದಿಢೀರ್ ನಿಧನದಿಂದ ಕುಟುಂಬದ ಜವಾಬ್ದಾರಿ ನಾಗೇಂದ್ರ ಹೆಗಲೇರಿತ್ತು. ಫಸ್ಟ್ ಪಿಯುಸಿ ಮುಗಿಸಿ ಸಂಕಲನ ಕಲಿಯುವತ್ತ ಮುಖ ಮಾಡಿದ ಅವರು ಅದನ್ನೇ ಮುಂದುವರೆಸಿಕೊಂಡು ಬರುತ್ತಿದ್ದಾರೆ.
ವಜ್ರಮುನಿ, ತೂಗುದೀಪ ಶ್ರೀನಿವಾಸ್, ಸುಧೀರ್, ಧೀರೇಂದ್ರ ಗೋಪಾಲ್ ಹೀಗೆ ಕನ್ನಡ ಚಿತ್ರರಂಗದ ಖ್ಯಾತ ಖಳನಟರ ಸಾಲಿನಲ್ಲಿ ಸುಂದರಕೃಷ್ಣ ಅರಸ್ ಸಹ ನಿಲ್ಲುತ್ತಾರೆ. ಅವರು ಇಂದು ನಮ್ಮೊಂದಿಗೆ ಇಲ್ಲದೇ ಇದ್ದರೂ ತಮ್ಮ ಅದ್ಭುತ ನಟನೆಯ ಪಾತ್ರಗಳಿಂದ ಸಿನಿರಸಿಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ.


Click it and Unblock the Notifications











