ಪುನೀತ್ ರಾಜ್‌ಕುಮಾರ್ ಸಿನಿಮಾ ದೃಶ್ಯವನ್ನು ನೆನಪಿಸ್ತಿದೆ ಪಾಕಿಸ್ತಾನದಲ್ಲಿ ನಡೆದ ಈ ವಿಚಿತ್ರ ಘಟನೆ!
ಕೆಲವೊಮ್ಮೆ ಸಿನಿಮೀಯ ರೀತಿಯಲ್ಲಿ ಕೆಲ ಘಟನೆಗಳು ನಡೆಯುತ್ತವೆ. ಸಿನಿಮಾಗಳು ಕೂಡ ಜನಜೀವನದ ಪ್ರತಿಬಿಂಬವೇ ಆಗಿದೆ. ಒಂದ್ಕಾಲದಲ್ಲಿ ನಮ್ಮ ಜೀವನಕ್ಕೆ ಬಹಳ ಹತ್ತಿರ ಎನಿಸುವ ಸಿನಿಮಾಗಳು ನಿರ್ಮಾಣವಾಗುತ್ತಿದ್ದವು. ಬಳಿಕ ಕಮರ್ಷಿಯಲ್ ಅಂಶಗಳು ಹೆಚ್ಚಾಗಿ ಸಿನಿಮಾ ಅಂದರೆ ಕೇವಲ ಕಾಲ್ಪನಿಕ ಎನ್ನುವಂತಾಗಿಬಿಟ್ಟಿದೆ.
ನಿಜ ಜೀವನದಲ್ಲಿ ನಡೆಯುವುದೇ ಸಿನಿಮಾಗಳಲ್ಲಿ ಬರೋದು, ಅಥವಾ ಸಿನಿಮಾದಲ್ಲಿ ತೋರಿಸಿದಂತೆ ನಿಜವಾಗಿ ನಡೆಯುವುದನ್ನು ಆಗಾಗ್ಗೆ ನೋಡುತ್ತಿರುತ್ತೇವೆ. ಕೆಲವೊಮ್ಮೆ ಇದೆಲ್ಲಾ ಕಾಕತಾಳೀಯ ಎನಿಸಬಹುದು. ಅಂದಹಾಗೆ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದಿರುವ ವಿಚಿತ್ರ ಘಟನೆಯೊಂದು ಪುನೀತ್ ರಾಜ್‌ಕುಮಾರ್ ನಟನೆಯ ಸೂಪರ್ ಹಿಟ್ ಸಿನಿಮಾ ದೃಶ್ಯವನ್ನು ನೆನಪಿಸ್ತಿದೆ. ಸೇಮ್ ಟು ಸೇಮ್ ಅಲ್ಲದೇ ಇದ್ದರೂ ಕೊಂಚ ಸಾಮ್ಯತೆ ಅಂತೂ ಇದೆ.

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ವೈದ್ಯೆಯೊಬ್ಬರು ಉದ್ಯಮಿ ಒಬ್ಬರನ್ನು ಪ್ರೀತಿಸಿ ಮದುವೆ ಆಗಿದ್ದರು. ಅತ್ತೆ, ಮಾವ, ಗಂಡ ಮನೆಯಲ್ಲಿ ಇರುವುದು, ಐಷಾರಾಮಿ ಕಾರುಗಳಲ್ಲಿ ಓಡಾಡುವುದು ನೋಡಿ ಅವರೆಲ್ಲಾ ಬಹಳ ಶ್ರೀಮಂತರು, ಐಷಾರಾಮಿ ಜೀವನ ನಡೆಸುತ್ತಾರೆ, ಅವರ ಮನೆಗೆ ಹೋದರೆ ನಾನು ಕೂಡ ಹೀಗೆ ವಿಲಾಸಿ ಜೀವನ ನಡೆಸಬಹುದು ಎಂದು ಆಕೆ ಕನಸು ಕಂಡಿದ್ದರು. ಯಾವುದೇ ಸಮಸ್ಯೆ ಇಲ್ಲದೇ ಮದುವೆ ಕೂಡ ನಡೆದಿದೆ. ಆದರೆ 5 ತಿಂಗಳ ಬಳಿಕ ಅತ್ತೆ, ಮಾವ ಹಾಗೂ ಗಂಡನ ನಿಜಬಣ್ಣ ಗೊತ್ತಾಗಿ ವೈದ್ಯೆ ಶಾಕ್ ಆಗಿದ್ದಾರೆ.
ಗಂಡ, ಅತ್ತೆ, ಮಾವ ಹಾಗೂ ಇತರ ಸದಸ್ಯರೆಲ್ಲಾ ಭಿಕ್ಷುಕರು, ದಿನ ನಿತ್ಯ ಬೇರೆ ಬೇರೆ ಕಡೆಗಳಲ್ಲಿ ಭಿಕ್ಷೆ ಬೇಡುತ್ತಾರೆ ಎನ್ನುವುದು ಬಳಿಕ ವೈದ್ಯೆಗೆ ಗೊತ್ತಾಗಿದೆ. ಅನುಮಾನ ಬಂದು ಒಮ್ಮೆ ಅವರನ್ನು ಹಿಂಬಾಲಿಸಿದ್ದಾಗ ಅಸಲಿ ವಿಚಾರ ಬಯಲಾಗಿದೆ. ಲ್ಯಾಂಡ್ ರೋವರ್, ಫಾರ್ಚುನರ್ ರೀತಿಯ ದುಬಾರಿ ಕಾರುಗಳಲ್ಲಿ ಮನೆಯಿಂದ ಹೊರಡುತ್ತಿದ್ದ ಅವರು ಬಳಿಕ ವೇಷ ಬದಲಿಸಿ ಭಿಕ್ಷೆ ಬೇಡುತ್ತಿದ್ದದ್ದು ನೋಡಿ ಬೆಸ್ತು ಬಿದ್ದಿದ್ದಾರೆ. ಸದ್ಯ ವೈದ್ಯೆ ಗಂಡನ ಮನೆ ಬಿಟ್ಟು ತಾಯಿ ಮನೆ ಸೇರಿದ್ದಾರೆ ಎಂದು ವರದಿಯಾಗಿದೆ.

ಪಾಕಿಸ್ತಾನಿ ಯೂಟ್ಯೂಬರ್, ಸೈಯದ್ ಬಸಿತ್ ಅಲಿ 2 ವರ್ಷದ ಹಿಂದೆ ಆ ವೈದ್ಯೆಯ ಸಂದರ್ಶನ ನಡೆಸಿ ವೀಡಿಯೋ ಹಂಚಿಕೊಂಡಿದ್ದರು. ಆ ವೀಡಿಯೋ ಈಗ ಮತ್ತೆ ವೈರಲ್ ಆಗುತ್ತಿದೆ. ಒಮ್ಮೆ ಮನೆಯಲ್ಲಿ ಯಾರು ಇಲ್ಲದೇ ಇದ್ದಾಗ ಮನೆಯ ಬೇಸ್‌ಮೆಂಟ್‌ಗೆ ಹೋಗಿ ಪರಿಶೀಲನೆ ನಡೆಸಿದ್ದೆ. ಆಗ ಅಲ್ಲಿ ಹರಿದ ಬಟ್ಟೆ, ಭಿಕ್ಷುಕರಂತೆ ವೇಷ ಬದಲಿಸಲು ಬೇಕಾದ ಮೇಕಪ್ ವಸ್ತುಗಳು ಕಣ್ಣಿಗೆ ಬಿತ್ತು. ಆಗ ಅನುಮಾನ ಬಂದಿತ್ತು ಎಂದು ವೈದ್ಯೆ ವೀಡಿಯೋದಲ್ಲಿ ಹೇಳಿದ್ದಾರೆ.
ಸದ್ಯ ಈ ಅಚ್ಚರಿಯ ಘಟನೆ ಕನ್ನಡದ ಸೂಪರ್ ಹಿಟ್ 'ಮಿಲನಾ' ಚಿತ್ರದ ಹಾಸ್ಯ ಸನ್ನಿವೇಶವನ್ನು ನೆನಪಿಸುತ್ತಿದೆ. ಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಹಾಗೂ ಪಾರ್ವತಿ ತಿರುವೋತ್ತು ನಾಯಕ ನಾಯಕಿಯಾಗಿ ನಟಿಸಿದ್ದರು. ಚಿತ್ರದಲ್ಲಿ ರಂಗಾಯಣ ರಘು ಹಾಗೂ ಸಿಹಿ ಕಹಿ ಚಂದ್ರು ಫ್ಯಾಮಿಲಿಯ ಕಾಮೆಡಿ ಟ್ರ್ಯಾಕ್ ಇದೆ.
ನಾಯಕ ಆಕಾಶ್(ಪುನೀತ್ ರಾಜ್‌ಕುಮಾರ್) ಹಾಗೂ ನಾಯಕಿ ಅಂಜಲಿ(ಪಾರ್ವತಿ) ವಾಸವಿರುವ ಅದೇ ಅಪಾರ್ಮ್‌ಮೆಂಟ್‌ಗೆ ಕುಬೇರಪ್ಪ(ರಂಗಾಯಣ ರಘು) ಮತ್ತವರ ಕುಟುಂಬ ಬಾಡಿಗೆಗೆ ಬರ್ತಾರೆ. ಅಪಾರ್ಟ್‌ಮೆಂಟ್ ಮ್ಯಾನೇಜರ್ ಸಿಹಿಕಹಿ ಚಂದ್ರು ಫ್ಲಾಟ್ ಬಾಡಿಗೆಗೆ ಕೊಡುತ್ತಾರೆ. ಕುಬೇರಪ್ಪ ತಾನು ದೊಡ್ಡ ಶ್ರೀಮಂತ, ಬಿಬಿ ಗ್ರೂಪ್ ಎಂಬ ಕಂಪನಿ ಮಾಲೀಕ ಎಂದು ಸುಳ್ಳು ಹೇಳಿ ಮನೆ ಬಾಡಿಗೆಗೆ ಪಡೆಯುತ್ತಾನೆ.
ಮೇಲ್ನೋಟಕ್ಕೆ ಶ್ರೀಮಂತನಂತೆ ಬಿಂಬಿಸಿಕೊಳ್ಳುವ ಕುಬೇರಪ್ಪ ದೇವಸ್ಥಾನಗಳ ಮುಂದೆ ಭಿಕ್ಷೆ ಬೇಡುತ್ತಿರುತ್ತಾನೆ. ಪತ್ನಿ, ಮಗನದ್ದು ಕೂಡ ಅದೇ ಕಾಯಕ. ಕುಬೇರಪ್ಪ ಕಾರಿನಿಂದ ವೇಷ ಬದಲಿಸಿಕೊಂಡು ಭಿಕ್ಷೆ ಬೇಡಲು ಹೋಗುವುದನ್ನು ಒಮ್ಮೆ ಅಪಾರ್ಟ್‌ಮೆಂಟ್ ಮ್ಯಾನೇಜರ್ ನೋಡಿಬಿಡುತ್ತಾನೆ. ಸತ್ಯ ಬಯಲಾದ ಮೇಲೆ ಬಿಬಿ ಗ್ರೂಪ್ ಅಂದ್ರೆ ಭವತಿ ಭಿಕ್ಷಾಂದೇಹಿ ಗ್ರೂಪ್ ಎಂದು ಹೇಳುತ್ತಾನೆ. ಇದು ಸಿನಿಮಾದಲ್ಲಿ ತಮಾಷೆಗಾಗಿ ಚಿತ್ರಿಸಿದ ಸನ್ನಿವೇಶವೇ ಇರಬಹುದು. ಆದರೆ ಕೆಲವರು ನಿಜವಾಗಿಯೂ ಹೀಗೆ ಮೋಸ ಮಾಡುತ್ತಾರೆ ಎನ್ನುವುದಕ್ಕೆ ಪಾಕಿಸ್ತಾನದ ವೈದ್ಯೆಯ ಕಥೆ ನಿದರ್ಶನ.


Click it and Unblock the Notifications











