ಸಾಮಾನು.. ತುಂಬಿದ ಕೊಡಗಳು.. ಹಣ್ಣು ಮಾಗಿದೆ.. ಅಣ್ಣಾವ್ರ 3 ಹಾಡುಗಳಲ್ಲಿತ್ತು ಡಬಲ್‌ ಮೀನಿಂಗ್ ಸಾಹಿತ್ಯ!

ವರನಟ ರಾಜ್‌ಕುಮಾರ್ ಚಿತ್ರಪ್ರಪಂಚ ಕಂಡ ಅದ್ಭುತ ಪ್ರತಿಭೆ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ಮುತ್ತುರಾಜ್ ನಟಿಸಿ ಗೆದ್ದಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಅಣ್ಣಾವ್ರು ಮಾಡದೇ ಬಿಟ್ಟ ಪಾತ್ರಗಳಿಲ್ಲ. ರಾಜನಾಗಿ ಕೂಲಿಯಾಲಿ ಮಾಲಿಯಾಗಿ ಪೊಲೀಸ್ ಆಫೀಸರ್‌ ಆಗಿ ಕುರಿಗಾಯಿಯಾಗಿ ಸಿಐಡಿ ಏಜೆಂಟ್ ಆಗಿ ಕವಿಯಾಗಿ ಸ್ವಾಮಿಜಿಯಾಗಿ ಕೃಷ್ಣ ರಾಮ ಹೀಗೆ ಎಲ್ಲಾ ತರಹದ ಪಾತ್ರಗಳಲ್ಲಿ ಅವರು ನಟಿಸಿದ್ದರು.

ಅಣ್ಣಾವ್ರು ಇಂದು ನಮ್ಮೊಂದಿಗೆ ಇಲ್ಲದೇ ಇದ್ದರೂ ತಮ್ಮ ಸಿನಿಮಾಗಳು ಆದರ್ಶ ವ್ಯಕ್ತಿತ್ವದ ಮೂಲಕ ಅಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಬರೀ ನಟನಾಗಿ ಮಾತ್ರ ಇರದೇ ಎಲ್ಲರೊಳಗೆ ಒಬ್ಬರಾಗಿ ಕನ್ನಡ ನಾಡು ನುಡಿ ಜಲದ ವಿಚಾರ ಬಂದಾಗ ಮುಂದೆ ನಿಲ್ಲುತ್ತಿದ್ದರು. ಕನ್ನಡ ಅಂದರೆ ರಾಜ್‌ಕುಮಾರ್, ರಾಜ್‌ಕುಮಾರ್ ಅಂದರೆ ಕನ್ನಡ. ಅಣ್ಣಾವ್ರು ನಟಿಸಿದ ಬಹುತೇಕ ಸಿನಿಮಾಗಳು ಯಶಸ್ಸು ಗಳಿಸಿತ್ತು.

Timeless Icon Dr Rajkumar Legacy of Clean Cinema and the Controversies Around double meaning Lyrics songs

ಮುತ್ತುರಾಜನ ಸಿನಿಮಾ ಅಂದರೆ ಮನೆಮಂದಿ ಎಲ್ಲಾ ಕೂತು ನೋಡುತ್ತಿದ್ದ ಸದಭಿರುಚಿಯ ಚಿತ್ರಗಳಾಗಿರುತ್ತಿದ್ದವು. ಯಾವುದೇ ಅಶ್ಲೀಲ ಸನ್ನಿವೇಶಗಳಿಲ್ಲದೇ, ಸಿಗರೇಟ್, ಮದ್ಯ ಸೇವನೆ ದೃಶ್ಯಗಳು ಇರುತ್ತಿರಲಿಲ್ಲ. ಒಂದೆರಡು ಸಿನಿಮಾಗಳಲ್ಲಿ ಅಣ್ಣಾವ್ರು ಸಿಗರೇಟ್ ಸೇದುವ ದೃಶ್ಯ ಇತ್ತು, ಆದರೆ ಬಳಿಕ ಅದನ್ನು ಮುತ್ತುರಾಜ್ ಬಿಟ್ಟು ಬಿಟ್ಟರು. ವರದಪ್ಪ, ಪಾರ್ವತಮ್ಮ, ಚಿ. ಉದಯ್ ಶಂಕರ್ ಅಣ್ಣಾವ್ರು ನಟಿಸುತ್ತಿದ್ದ ಸಿನಿಮಾ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಎಲ್ಲವನ್ನು ನೋಡಿಕೊಳ್ಳುತ್ತಿದ್ದರು. ಹಾಗಾಗಿ ಉತ್ತಮ ಚಿತ್ರಗಳಲ್ಲಿ ಅವರು ನಟಿಸುವಂತಾಯಿತು. ಈ ಮೂರು ಜನ ಅಣ್ಣಾವ್ರ ಚಿತ್ರಬದುಕಿಗೆ ಆಧಾರಸ್ತಂಭಗಳಾಗಿದ್ದರು.

ರಾಜ್‌ಕುಮಾರ್ ನಟಿಸುವ ಸಿನಿಮಾಗಳಲ್ಲಿ ಅಶ್ಲೀಲ ಸನ್ನಿವೇಶಗಳು ಮಾತ್ರವಲ್ಲ, ಅಶ್ಲೀಲ ಅಥವಾ ದ್ವಂದ್ವಾರ್ಥದ ಸಂಭಾಷಣೆ, ಸಾಹಿತ್ಯಕೂ ಅವಕಾಶ ಇರಲಿಲ್ಲ. ಅಣ್ಣಾವ್ರ ಸಿನಿಮಾಗಳು ಅಂದರೆ ಮನೆಮಂದಿ ಎಲ್ಲಾ ಕೂತು ನೋಡುವಂತಹ ಸಿನಿಮಾಗಳಾಗಿದ್ದವು, ಹಳ್ಳಿಯಿಂದ ಪಟ್ಟಣದವರೆ ಎಲ್ಲಾ ತರಹದ ಜನರನ್ನು ಸಿನಿಮಾಗಳು ರಂಜಿಸುತ್ತಿತ್ತು. ವರ್ಷಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿತ್ತು.

Timeless Icon Dr Rajkumar Legacy of Clean Cinema and the Controversies Around double meaning Lyrics songs

ಜೂಜು, ಕುಡಿತ, ಸಿಗರೇಟ್, ತಂಬಾಕು ಎಲ್ಲದರ ವಿರುದ್ಧ ಇದ್ದವರು ರಾಜ್‌ಕುಮಾರ್. ಸಾಧ್ಯವಾದಷ್ಟು ತಮ್ಮ ಪಾತ್ರಗಳಲ್ಲಿ, ಕಥೆಯಲ್ಲಿ ಅದೆಲ್ಲದರ ವಿರುದ್ಧ ಸಮಾಜಕ್ಕೆ ಸಂದೇಶ ಕೊಡುತ್ತಿದ್ದರು. ಬಾಂಡ್ ಶೈಲಿಯ ಸಿನಿಮಾಗಳನ್ನು ಮಾಡಿದಾಗ ಅದಕ್ಕೆ ತಕ್ಕಂತೆ ನಟಿಯರು ಸ್ವಿಮ್‌ಸೂಟ್ ಧರಿಸಿದ್ದು ರಾಜ್‌ಕುಮಾರ್ ಸಿಗರೇಟ್ ಸೇದುವಂತಹ ದೃಶ್ಯಗಳು ಇತ್ತು. ಬಳಿಕ ಅಂತಹ ಸಿನಿಮಾಗಳೇ ಬೇಡ ಎಂದು ಬಿಟ್ಟುಬಿಡುವಂತಾಯಿತು.

ತಮ್ಮ ಸಿನಿಮಾಗಳ ಕಥೆ, ಸಂಭಾಷಣೆ, ಸಾಹಿತ್ಯದ ವಿಚಾರದಲ್ಲಿ ರಾಜ್‌ಕುಮಾರ್ ಇಷ್ಟೆಲ್ಲಾ ಮುತುವರ್ಜಿ ವಹಿಸುತ್ತಿದ್ದರು. ತಮ್ಮ ಸಿನಿಮಾಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಬಾರದು ಎಂದು ಭಾವಿಸುತ್ತಿದ್ದಾರೆ. ಆದರೂ ಅಣ್ಣಾವ್ರು ಸಿನಿಮಾಗಳಲ್ಲಿ ಒಂದೆರಡು ಹಾಡುಗಳ ಬಗ್ಗೆ ಟೀಕೆ, ಆಕ್ಷೇಪ ವ್ಯಕ್ತವಾಗಿತ್ತು. ಅದಕ್ಕೆ ಕಾರಣ ಆ ಹಾಡುಗಳಲ್ಲಿ ಇದ್ದ ದ್ವಂದ್ವಾರ್ಥ. ಕೆಲ ವರ್ಷಗಳ ಹಿಂದೆ ಕೆಲ ಸಿನಿಮಾಗಳಲ್ಲಿ ಡಬಲ್ ಮೀನಿಂಗ್ ಡೈಲಾಗ್ಸ್, ಡಬಲ್ ಮೀನಿಂಗ್ ಸಾಹಿತ್ಯದ ಹಾಡುಗಳಲ್ಲಿ ಬರುತ್ತಿದ್ದವು.

ಹಂಸಲೇಖ ಬರೆದ ಒಂದೆರಡು ಹಾಡುಗಳ ಬಗ್ಗೆ ಕೂಡ ಇದೇ ರೀತಿಯ ಟೀಕೆ, ಆರೋಪಗಳು ಕೇಳಿಬಂದಿತ್ತು. ಆದರೆ ರಾಜ್‌ಕುಮಾರ್ ಚಿತ್ರಗಳಿಗೆ ಸ್ವತಃ ಚಿ. ಉದಯ್‌ ಶಂಕರ್ ದ್ವಂದ್ವಾರ್ಥದ ಸಾಹಿತ್ಯ ಇರುವ ಹಾಡುಗಳನ್ನು ಬರೆದಿದ್ದರು. ಮೇಲ್ನೋಟಕ್ಕೆ ಅದು ಡಬಲ್ ಮೀನಿಂಗ್ ಅನ್ನಿಸದೇ ಇದ್ದರೂ ಕೆಲವರಿಗೆ ಆ ರೀತಿ ಭಾಸವಾಗಿದ್ದು ನಿಜ. ಅವತ್ತಿನ ಕಾಲಕ್ಕೆ ಪತ್ರಿಕೆಗಳಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಪ್ರೇಕ್ಷಕರಲ್ಲಿ ಕೂಡ ಈ ಬಗ್ಗೆ ಚರ್ಚೆ ನಡೆದಿತ್ತು. ಅಷ್ಟಕ್ಕೂ ಆ ಹಾಡುಗಳು ಯಾವುವು ಬನ್ನಿ ನೋಡೋಣ.

1970ರಲ್ಲಿ 'ಮಿ. ರಾಜ್‌ಕುಮಾರ್' ಎಂಬ ಸಿನಿಮಾ ತೆರೆಗೆ ಬಂದಿತ್ತು. ಬಿ. ಎಸ್ ರಂಗಾ ನಿರ್ದೇಶನದ ಈ ಚಿತ್ರದಲ್ಲಿ ರಾಜ್‌ಕುಮಾರ್, ದ್ವಾರಕೀಶ್, ರಾಜಾಶ್ರೀ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ರಾಜೇಶ್ವರ ರಾವ್ ಸಂಗೀತದ ಚಿತ್ರದ ಹಾಡುಗಳಿಗೆ ಚಿ. ಉದಯ ಶಂಕರ್ ಸಾಹಿತ್ಯ ಬರೆದಿದ್ದರು. ಚಿತ್ರಕ್ಕಾಗಿ "ಬಳ್ಳಿಯೊಂದು ಬಳುಕುತ್ತಿದೆ" ಎಂಬ ಹಾಡನ್ನು ಪಿ.ಬಿ ಶ್ರೀನಿವಾಸ್ ಹಾಡಿದ್ದರು. ನಾಯಕಿ ಎರಡು ಕೊಡಗಳಲ್ಲಿ ನೀರು ತುಂಬಿಕೊಂಡು ಬರುವಾಗ ಆಕೆಯನ್ನು ಬಣ್ಣಿಸುತ್ತಾ ನಾಯಕ ಹಾಡುವ ಹಾಡಿದು.

ಹಾಡಿನಲ್ಲಿ "ತುಂಬಿದ ಕೊಡವೆರಡು, ಜೇನಿನ ತುಟಿ ಎರಡು ಮನವನ್ನು ಕೆರಳಿಸುತ್ತದೆ, ತನುವನ್ನು ಸೆಳೆಯುತ್ತಿದೆ" ಎಂದು ಬರುವ ಸಾಹಿತ್ಯದ ಬಗ್ಗೆ ಆಗ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಪತ್ರಿಕೆಗಳಿಗೆ ಈ ಬಗ್ಗೆ ವಿಮರ್ಶಾತ್ಮಕ ಲೇಖನಗಳು ಬಂದಿತ್ತು.

ಅದೇ ವರ್ಷ 'ದೇವರ ಮಕ್ಕಳು' ಎಂಬ ಮತ್ತೊಂದು ಚಿತ್ರ ತೆರೆಗೆ ಬಂದಿತ್ತು. ವೈ. ಆರ್ ಸ್ವಾಮಿ ನಿರ್ದೇಶನದ ಚಿತ್ರವನ್ನು ಜಿ. ಎನ್ ಲಕ್ಷ್ಮಿಪತಿ ನಿರ್ಮಾಣ ಮಾಡಿದ್ದರು. ಜಯಂತಿ ಹಾಗೂ ಕಲ್ಪನಾ ನಾಯಕಿಯರಾಗಿ ನಟಿಸಿದ್ದರು. ಜಿ. ಕೆ ವೆಂಕಟೇಶ್ ಸಂಗೀತದ ಹಾಡುಗಳಿಗೆ ಚಿ. ಉದಯ್ ಶಂಕರ್ ಸಾಹಿತ್ಯ ಪೋಣಿಸಿದ್ದರು. 'ಬೇಕೇನು ಸಾಮಾನು ನೋಡು ನೋಡು' ಎಂದು ಶುರುವಾಗುವ ಹಾಡನ್ನು ಪಿ. ಸುಶೀಲ ಹಾಡಿದ್ದರು.

ಚಿತ್ರದಲ್ಲಿ ನಟಿ ಜಯಂತಿ ಆಟದ ಸಾಮಾನು ಮಾರುವ ಹುಡುಗಿಯ ಪಾತ್ರದಲ್ಲಿ ನಟಿಸಿದ್ದರು. ಆಕೆಯ ಪಾತ್ರ ಪರಿಚಯಿಸುವ ಸನ್ನಿವೇಶದಲ್ಲಿ ಈ ಹಾಡು ಬರುತ್ತದೆ. ಬಂಡಿಯಲ್ಲಿ ಮಕ್ಕಳು ಆಡುವ ಆಟದ ಸಾಮಾನುಗಳನ್ನು ಮಾರುತ್ತಾ ಬೀದಿಗಳಲ್ಲಿ ಗೌರಿ ಹಾಡಿ ಕುಣಿಯುವ ಸನ್ನಿವೇಶದಲ್ಲಿ ಹಾಡನ್ನು ಕಟ್ಟಿಕೊಡಲಾಗಿತ್ತು. ಹಾಡು ಕೇಳಲು ಸಹಜವಾಗಿಯೇ ಇದ್ದರೂ ಅದನ್ನು ಚಿತ್ರೀಕರಿಸಿದ ಪರಿ, ಜಯಂತಿ ಭಾವಾಭಿನಯ ನೋಡಿದರೆ ಡಬಲ್ ಮೀನಿಂಗ್ ಎನಿಸುವಂತಿತ್ತು.

ಆಕಾಶವಾಣಿಯಲ್ಲಿ ಈ ಹಾಡನ್ನು ಪ್ರಸಾರ ಮಾಡಲು ಆಗ ಹಿಂದೇಟು ಹಾಕಿದ್ದರು ಎನ್ನುವ ಊಹಾಪೋಹ ಕೂಡ ಇತ್ತು. ಒಟ್ಟಾರೆ 'ದೇವರ ಮಕ್ಕಳು' ಚಿತ್ರದ ಈ ಹಾಡು ಕೂಡ ದ್ವಂದ್ವಾರ್ಥದ ಕಾರಣಕ್ಕೆ ಆ ಕಾಲದಲ್ಲಿ ಬಹಳ ಸುದ್ದಿಯಾಗಿತ್ತು. ಅಣ್ಣಾವ್ರ ಸಿನಿಮಾಗಳು ಅಂದರೆ ಬಹಳ ಸಭ್ಯ, ಪರ್ಫೆಕ್ಟ್ ಎನ್ನುವ ಸಮಯದಲ್ಲಿ ಇಂತಹದ್ದು ಸಿಕ್ಕಾಗ ಬೆಂಕಿ ಹಚ್ಚಿ ಕೆಲವರು ಬಿಸಿ ಕಾಯಿಸಿಕೊಳ್ಳುತ್ತಿದ್ದರು.

'ತ್ರಿಮೂರ್ತಿ' ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣದ ಮೊದಲ ಸಿನಿಮಾ. ಜಿ. ಕೆ ವೆಂಕಟೇಶ್ ಚಿತ್ರಕ್ಕೆ ಸಂಗೀತ ನೀಡಿದ್ದರು. ಚಿ. ಉದಯಶಂಕರ್ ಸಾಹಿತ್ಯ ಬರೆದಿದ್ದರು. ರಾಜ್‌ಕುಮಾರ್ ಹಾಗೂ ಜಯಮಾಲಾ ಹೆಜ್ಜೆ ಹಾಕಿದ್ದ 'ಹಣ್ಣು ಮಾಗಿದೆ' ಹಾಡು ಸದ್ದು ಮಾಡಿತ್ತು. ಈ ಹಾಡಿನ ಕೆಲ ಸಾಲುಗಳು ಕೂಡ ಅದೇ ರೀತಿ ದ್ವಂದ್ವಾರ್ಥದ ಕಾರಣಕ್ಕೆ ಚರ್ಚೆ ಹುಟ್ಟುಹಾಕಿತ್ತು. ರಾಜ್‌ಕುಮಾರ್ ಹಾಗೂ ಎಸ್. ಜಾನಕಿ ಹಾಡಿಗೆ ದನಿಯಾಗಿದ್ದರು. ಕಲರ್‌ಫುಲ್ ಸೆಟ್‌ನಲ್ಲಿ ಹಾಡನ್ನು ಸೆರೆಹಿಡಿಯಲಾಗಿತ್ತು.

ಅಂದಹಾಗೆ ದ್ವಂದ್ವಾರ್ಥದ ಕಾರಣಕ್ಕೆ ಸುದ್ದಿಯಾಗಿದ್ದ ಈ ಮೂರು ಹಾಡುಗಳಿಗೆ ಚಿ. ಉದಯಶಂಕರ್ ಸಾಹಿತ್ಯ ಬರೆದಿದ್ದರು. ಈ ಬಗ್ಗೆ ಅವರನ್ನು ಒಮ್ಮೆ ಯಾರೋ ಕೇಳಿದಾಗ ಅರೇ ಸಾಹಿತ್ಯದಲ್ಲಿ ಯಾವುದೇ ದ್ವಂದ್ವಾರ್ಥ ಇಲ್ಲ, ಕೇಳಿಸಿಕೊಳ್ಳುವವರ ಮನಸ್ಸಿನಲ್ಲಿ ಇರುವುದು. ಅವರವರು ಹೇಗೆ ಅರ್ಥ ಮಾಡಿಕೊಳ್ಳುತ್ತಾರೋ ಹಾಗೆ ಅದು ಅನ್ನಿಸುತ್ತದೆ. ನನಗೇನು ದ್ವಂದ್ವಾರ್ಥ ಇದೆ ಅನ್ನಿಸಲ್ಲ ಎಂದಿದ್ದರಂತೆ.

ಅಣ್ಣಾವ್ರ ಯಶಸ್ಸನನ್ನು ಸಹಿಸಲಾರದೇ ಕೆಲವರು ಇಂತಹ ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದರು. ಬೇಕಂತಲೇ ಇಂತಹ ಸೂಕ್ಷ್ಮ ವಿಚಾರಗಳನ್ನು ದೊಡ್ಡದು ಮಾಡಲು ಪ್ರತ್ನಿಸುತ್ತಿದ್ದರು. ಕೆಲವರು ಸುದ್ದಿ ಮಾಡುತ್ತಿದ್ದರು. ಪ್ರೇಕ್ಷಕರು ಮಾತ್ರ ಸಿನಿಮಾ ನೋಡಿ ಸುಮ್ಮನಾಗುತ್ತಿದ್ದರು.

More from Filmibeat

English summary
Explore the cinematic journey of Kannada legend Dr. Rajkumar, his dedication to clean family entertainment, and the rare controversies surrounding double meaning lyrics in a 3 of his songs;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X