Chiranjeevi: 'ಸಿಪಾಯಿ' ಜೊತೆ ಸ್ನೇಹಕ್ಕೆ ಸ್ನೇಹ ಎಂದು ಹಾಡಿದ್ದ ಮೆಗಾಸ್ಟಾರ್ ಚಿರಂಜೀವಿ ಸ್ಯಾಂಡಲ್‌ವುಡ್ ನಂಟು
ಟಾಲಿವುಡ್ ಮೆಗಾಸ್ಟಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ದಶಕಗಳಿಂದ ತೆಲುಗು ಚಿತ್ರರಂಗದ ನಂಬರ್ ವನ್ ಹೀರೊ ಆಗಿ ಚಿರು ದರ್ಬಾರ್ ನಡೆಸುತ್ತಿದ್ದಾರೆ. 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಸಿನಿರಸಿಕರನ್ನು ರಂಜಿಸಿದ್ದಾರೆ. ತಮ್ಮ ಡ್ಯಾನ್ಸ್ ಮೂಲಕ ಪ್ರೇಕ್ಷಕರನ್ನು ಕುಣಿಸಿದ್ದಾರೆ. ಜಬರ್ದಸ್ತ್ ಪಾತ್ರಗಳಿಂದ ಕಮಾಲ್ ಮಾಡಿದ್ದಾರೆ.
ಚಿರಂಜೀವಿ ತೆಲುಗು ಮಾತ್ರವಲ್ಲ ಹಿಂದಿ ಹಾಗೂ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ದಶಕಗಳ ಹಿಂದೆಯೇ ಟಾಲಿವುಡ್ ಮೆಗಾಸ್ಟಾರ್‌ನ ಕನ್ನಡ ಕ್ರೇಜಿಸ್ಟಾರ್ ಸ್ಯಾಂಡಲ್‌ವುಡ್‌ಗೆ ಕರೆ ತಂದಿದ್ದರು. 'ಸಿಪಾಯಿ' ಚಿತ್ರದಲ್ಲಿ ರವಿಚಂದ್ರನ್ ಸ್ನೇಹಿತನ ಪಾತ್ರದಲ್ಲಿ ಚಿರು ನಟಿಸಿದ್ದರು. ಹಲವು ದಶಕಗಳಿಂದ ಕರ್ನಾಟದಲ್ಲಿ ತೆಲುಗು ಸಿನಿಮಾಗಳು ಸದ್ದು ಮಾಡುತ್ತಿವೆ. ಚಿರಂಜೀವಿ ಸಿನಿಮಾಗಳಿಗೂ ಇಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ.

'ಗ್ಯಾಂಡ್ ಲೀಡರ್', 'ಮುಠ್ಠಾಮೇಸ್ತ್ರಿ', 'ಹಿಟ್ಲರ್' ಸೇರಿದಂತೆ ಚಿರು ನಟನೆಯ ಹಲವು ಸಿನಿಮಾಗಳು ಕರ್ನಾಟಕದಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು. ಇದೇ ಕ್ರೇಜ್ ನೋಡಿ ರವಿಚಂದ್ರನ್ 'ಸಿಪಾಯಿ' ಚಿತ್ರಕ್ಕೆ ಟಾಲಿವುಡ್ ಮೆಗಾಸ್ಟಾರ್‌ನ ಆಹ್ವಾನಿಸಿದ್ದರು. ಚಿತ್ರದಲ್ಲಿ ಮೇಜರ್ ಚಂದ್ರಕಾಂತ್ ಎನ್ನುವ ಪಾತ್ರದಲ್ಲಿ ಚಿರು ಗಮನ ಸೆಳೆದಿದ್ದರು.
ಚಿರು- ರವಿ ಒಟ್ಟಾಗಿ ಹೆಜ್ಜೆ ಹಾಕಿದ್ದ 'ಸಿಪಾಯಿ' ಚಿತ್ರದ 'ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ' ಹಾಡು ಕನ್ನಡದ ಜನಪ್ರಿಯ ಹಾಡುಗಳ ಪಟ್ಟಿ ಸೇರಿದೆ. 'ಸಿಪಾಯಿ' ಬಳಿಕ 'ಶ್ರೀಮಂಜುನಾಥ' ಚಿತ್ರದಲ್ಲಿ ಮೆಗಾಸ್ಟಾರ್ ಬಣ್ಣ ಹಚ್ಚಿದ್ದರು. ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾ ಏಕಕಾಲಕ್ಕೆ ನಿರ್ಮಾಣವಾಗಿತ್ತು. ಚಿತ್ರದಲ್ಲಿ ಪರಮಶಿವನಾಗಿ ಮೆಗಾಸ್ಟಾರ್ ಕಾಣಿಸಿಕೊಂಡಿದ್ದರು. ಪಾರ್ವತಿಯಾಗಿ ಮೀನಾ ಸಾಥ್ ಕೊಟ್ಟಿದ್ದರು. ಚಿತ್ರದಲ್ಲಿ ಅಂಬರೀಶ್, ಚಿರು ಒಟ್ಟಾಗಿ ನಟಿಸಿದ್ದು ವಿಶೇಷ.
ಡಾ. ರಾಜ್‌ಕುಮಾರ್ ಕುಟುಂಬದ ಜೊತೆ ಚಿರಂಜೀವಿ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದಾರೆ. ಚಿರಂಜೀವಿ ಅವರ ಡ್ಯಾನ್ಸ್‌ಗೆ ಪುನೀತ್ ರಾಜ್‌ಕುಮಾರ್ ಅಭಿಮಾನಿಯಾಗಿದ್ದರು. ಇನ್ನು ಅಣ್ಣಾವ್ರ ನಟನೆ, ಸರಳ, ಸಜ್ಜನಿಕೆಗೆ ಚಿರು ಅಭಿಮಾನಿ ಆಗಿದ್ದರು. ಇದನ್ನು ಸಾಕಷ್ಟು ಬಾರ ಹೇಳಿದ್ದಾರೆ. ಇತ್ತೀಚಿನ ವರ್ಷಗಳ ಪ್ಯಾನ್ ಇಂಡಿಯಾ ಸಿನಿಮಾಗಳ ಆರ್ಭಟ ನಡೀತಿದೆ. ಚಿರಂಜೀವಿ ನಟನೆಯ 'ಸೈರಾ ನರಸಿಂಹ ರೆಡ್ಡಿ' ಸಿನಿಮಾ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಿತ್ತು. ಚಿತ್ರದಲ್ಲಿ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳು ಕಂಡ ಚಿರು ಇವತ್ತಿಗೂ ಹೊಸ ಹೀರೊಗಳಿಗೆ ಪೈಪೋಟಿ ಕೊಡುತ್ತಿದ್ದಾರೆ.

ಬೆಂಗಳೂರಿನ ದೇವನಹಳ್ಳಿ ಸಮೀಪ ಚಿರಂಜೀವಿಗೆ ಒಂದು ಫಾರ್ಮ್ ಹೌಸ್ ಕೂಡ ಇದೆ. ಆಗಾಗ್ಗೆ ಚಿರು ಅಲ್ಲಿಗೆ ಭೇಟಿ ಕೊಡುತ್ತಾರೆ. ಕೆಲವೊಮ್ಮೆ ಮನೆಯ ಶುಭ ಸಮಾರಂಭಗಳನ್ನು ಅಲ್ಲಿಯೇ ನೆರವೇರಿಸುತ್ತಾರೆ. ಕೆಲ ವರ್ಷಗಳ ಹಿಂದೆ ಚಿರು ಚಿತ್ರರಂಗ ಬಿಟ್ಟು ಸ್ವಂತ ಪಕ್ಷ ಕಟ್ಟಿ ರಾಜಕೀಯರಂಗ ಪ್ರವೇಶಿಸಿದ್ದರು. ಆದರೆ ಅಲ್ಲಿ ಸೋಲುಂಡ ಬಳಿಕ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗಿದ್ದರು. 10 ವರ್ಷಗಳ ಬಳಿಕ 'ಕೈದಿ ನಂ 150' ಚಿತ್ರದ ಮೂಲಕ ಚಿತ್ರರಂಗಕ್ಕೆ ಭರ್ಜರಿ ಕಂಬ್ಯಾಕ್ ಮಾಡಿದ್ದರು.
ಸಿನಿಮಾಗಳು ಮಾತ್ರವಲ್ಲದೇ ತಮ್ಮ ಸಾಮಾಜಿಕ ಕಾರ್ಯಕ್ರಮಗಳಿಂದಲೂ ಚಿರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಬ್ಲಡ್‌ಬ್ಯಾಂಕ್, ಐಬ್ಯಾಂಕ್ ಸ್ಥಾಪಿಸಿ ಆ ಮೂಲಕ ರಕ್ತದಾನ, ನೇತ್ರದಾನವನ್ನು ಪ್ರೋತ್ಸಾಹಿಸುತ್ತಿದ್ದಾರೆ. ಚಿರಂಜೀವಿ ನಟನೆಯ 'ಭೋಳಾ ಶಂಕರ್' ಇತ್ತೀಚೆಗೆ ತೆರೆಕಂಡು ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲುಂಡಿತ್ತು. ಅದಕ್ಕು ಮುನ್ನು ಸಂಕ್ರಾಂತಿ ಸಂಭ್ರಮದಲ್ಲಿ ಬಂದ ವಾಲ್ತೇರು ವೀರಯ್ಯ ಸಿನಿಮಾ ಗೆದ್ದಿತ್ತು. ಹುಟ್ಟುಹಬ್ಬದ ಸಂಭ್ರಮದಲ್ಲಿ ಮೆಗಾಸ್ಟಾರ್ 157ನೇ ಸಿನಿಮಾ ಘೋಷಣೆ ಆಗಿದೆ.


Click it and Unblock the Notifications











