For Quick Alerts
  ALLOW NOTIFICATIONS  
  For Daily Alerts

  80-90ರ ದಶಕದಲ್ಲಿ ಕನ್ನಡ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ ನಾಯಕನಟರು

  By ರವೀಂದ್ರ ಕೊಟಕಿ
  |

  ಸಿನಿಮಾರಂಗ ನಿಂತ ನೀರಲ್ಲ, ನಿರಂತರವಾಗಿ ಅದು ಹರಿಯುವ ಜೀವನದಿ ಇದ್ದಂತೆ. ದಿನಕಳೆದಂತೆ ಹೊಸ ಚಿತ್ರಗಳು,ಹೊಸ ನಟರು, ಹೊಸ ತಾಂತ್ರಿಕ ವರ್ಗದವರು ಜೊತೆಗೆ ಅದರಿಂದ ಚಿತ್ರರಂಗಕ್ಕೊಂದು ಹೊಸತನ ಮೂಡುತ್ತಲೇ ಇರುತ್ತದೆ. ಅಲ್ಲದೆ ಪ್ರತಿ ಹತ್ತು ವರ್ಷಕ್ಕೆ ಹೊಸದೊಂದು ಜನರೇಶನ್ ಪ್ರಬುದ್ಧಮಾನಕ್ಕೆ ಬರುತ್ತದೆ. ಆ ಯುವಜನಾಂಗದ ಆಸೆ-ಆಕಾಂಕ್ಷೆಗಳು, ಪ್ರೀತಿ-ಪ್ರೇಮ ನೋವು-ಯಾತನೆ ಇವೆ ಆ ಸಂದರ್ಭದ ಕಥಾ ವಸ್ತುಗಳಾಗುತ್ತವೆ. ಇಂಥ ಕಥಾ ವಸ್ತುಗಳಿಗೆ ಹೊಸ ನಟ-ನಟಿಯರು ಬೇಕಾಗುತ್ತಾರೆ.

  ಆರಂಭಿಕ ಹಂತದಲ್ಲಿ ಕನ್ನಡ ಸಿನೆಮಾ ರಂಗವನ್ನು ಅವಲೋಕಿಸಿದರೆ ಪೌರಾಣಿಕ ಹಿನ್ನೆಲೆಯ ಚಿತ್ರಗಳೇ ಹೆಚ್ಚಿಗೆ ನಿರ್ಮಾಣವಾಗುತ್ತಿದ್ದವು. ಆ ಸಂದರ್ಭದಲ್ಲಿ ಗುಬ್ಬಿವೀರಣ್ಣ, ಹೊನ್ನಪ್ಪ ಭಾಗವತರ್, ಕೆಂಪರಾಜ ಅರಸ್, ಅಂತ ಮಹನೀಯರು ನಾಯಕ ನಟರುಗಳಾಗಿ ಬಣ್ಣ ಹಚ್ಚುತ್ತಿದ್ದರು. ಆನಂತರ 50-60ದಶಕಗಳ ಸಂದರ್ಭ ಸಮಯದಲ್ಲಿ ಪೌರಾಣಿಕ, ಐತಿಹಾಸಿಕ ಚಿತ್ರಗಳ ಜೊತೆಜೊತೆಗೆ ಕೂಡು ಕುಟುಂಬಗಳ ಕಥೆಗಳು ಸಿನಿಮಾಗಳಾಗಿ ತೆರೆಗೆ ಬರಲು ಆರಂಭವಾದ ಕಾಲ. ಅದಕ್ಕೆ ತಕ್ಕಂತೆ ಹೊಸಪೀಳಿಗೆಯ ನಾಯಕ ನಟರುಗಳಾಗಿ ರಾಜ್ ಕುಮಾರ್, ಕಲ್ಯಾಣಕುಮಾರ್, ಉದಯಕುಮಾರ್, ಗಂಗಾಧರ್ ಇತ್ಯಾದಿ ನಾಯಕರುಗಳ ಆಗಮನವಾಯಿತು.

  70ರ ದಶಕಕ್ಕೆ ಹೊತ್ತಿಗೆ ಆಕ್ಷನ್ ಚಿತ್ರಗಳ ಯುಗ ಆರಂಭವಾಯಿತು. ಜೊತೆಗೆ ಹೆಚ್ಚು -ಹೆಚ್ಚು ಕಾದಂಬರಿ ಆಧಾರಿತ ಚಿತ್ರಗಳ ನಿರ್ಮಾಣ ಕೂಡ ನಡೆಯಿತು. ಈ ಹಂತದಲ್ಲಿ ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್, ಶಂಕರ್ ನಾಗ್, ಶ್ರೀನಾಥ್, ರಾಮಕೃಷ್ಣ, ಟೈಗರ್ ಪ್ರಭಾಕರ್ ರಂತಹ ಪ್ರತಿಭೆಗಳು ಬೆಳಕಿಗೆ ಬಂದವು. ಇನ್ನು 80ರ ದಶಕ ಅದರೊಟ್ಟಿಗೆ 90ರ ದಶಕವನ್ನು ನೋಡಿದಾಗ ನವಿರಾದ ಪ್ರೇಮಕಥೆಗಳು, ಜಾತಿ-ಧರ್ಮ-ಸಂಘರ್ಷಗಳ ಹಿನ್ನಲೆಯ ಕಥೆಗಳು, ಬಡ- ಶ್ರೀಮಂತಹುಡುಗ-ಹುಡುಗಿಯ ಪ್ರೇಮಕಥೆಗಳು ಹೆಚ್ಚಿಗೆ ತೆರೆಗೆ ಬಂದ ಸಮಯ. ಈ ಸಮಯದಲ್ಲೇ ಕನ್ನಡ ಚಿತ್ರರಂಗ ಹೊಸ ನಾಯಕ ನಟರನ್ನು ದೊಡ್ಡ ಪ್ರಮಾಣದಲ್ಲಿ ನೋಡಿತು. ಹೀಗೆ 80-90ರ ದಶಕದಲ್ಲಿ ಕನ್ನಡ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿ ದೊಡ್ಡ ಹೆಸರುಗಳಿಸಿದ ಟಾಪ್ ಟೆನ್ ಕನ್ನಡ ನಾಯಕನಟರನ್ನು ಫಿಲ್ಮಿಬೀಟ್ ಕನ್ನಡ ಆಯ್ಕೆ ಮಾಡಿದೆ. ಫಿಲ್ಮಿಬೀಟ್ ಕನ್ನಡ ಆಯ್ಕೆಮಾಡಿರುವ ಟಾಪ್ ಟೆನ್ ಆ ನಾಯಕ ನಟರ ವಿವರಗಳು ಹೀಗಿವೆ.

  ವೀರಸ್ವಾಮಿ ರವಿಚಂದ್ರನ್

  ವೀರಸ್ವಾಮಿ ರವಿಚಂದ್ರನ್

  ಕನ್ನಡದ ಕನಸುಗಾರ ರವಿಚಂದ್ರನ್ ಖ್ಯಾತ ನಿರ್ಮಾಪಕರಾದ ವೀರಸ್ವಾಮಿ ಅವರ ಮಗ. ಅವರ ಈಶ್ವರಿ ಪ್ರೊಡಕ್ಷನ್ಸ್ ಅಂದಿನ ಕಾಲದಲ್ಲಿ ಕನ್ನಡದ ಅತಿ ದೊಡ್ಡ ಪ್ರೊಡಕ್ಷನ್ ಹೌಸ್ ಆಗಿತ್ತು. ವಿ. ರವಿಚಂದ್ರನ್ ಆರಂಭದ ಹಂತದಲ್ಲಿ ತಂದೆ ವೀರಸ್ವಾಮಿಯವರಿಗೆ ಸಹಾಯಕರಾಗಿ ಚಿತ್ರ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಹಿರಿಯ ನಿರ್ಮಾಪಕನ ಮಗನಾದರೂ ಅವರ ಸಿನಿಮಾ ಅರಂಗ್ರೇಟಂ ಸಾದಾಸೀದಾ ರೀತಿಯಲ್ಲೇ ನಡೆಯಿತು. 1982 ರಲ್ಲಿ ಮುಖಕ್ಕೆ ಬಣ್ಣ ಹಚ್ಚಿದ ರವಿಚಂದ್ರನ್ ಮೊದಲಿಗೆ ಖಳ್ಳ ನಾಯಕನಾಗಿ 'ಖದೀಮ ಕಳ್ಳರು' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ತದನಂತರ ಅವರು 'ಸಾವಿರ ಸುಳ್ಳು', 'ಪ್ರಳಯಾಂತಕ', 'ಸ್ವಾಭಿಮಾನ' 'ನಾನು ನನ್ನ ಹೆಂಡತಿ' ಹೀಗೆ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಮೇಲೆ 1987 ರಲ್ಲಿ ಬಿಡುಗಡೆಯಾದ 'ಪ್ರೇಮಲೋಕ'ದ ಮೂಲಕ ಸ್ಟಾರ್ ನಟರಾದರು. ಪ್ರಸ್ತುತ ರವಿಚಂದ್ರನ್ ಅವರಿಗೆ 60 ವರ್ಷ, ಅವರ ಸ್ಟಾರ್ ವ್ಯಾಲ್ಯೂ ಇಂದಿಗೂ ಕೂಡ ಕುಂದಿಲ್ಲ. ಸಿನಿಮಾವನ್ನೇ ಉಸಿರಾಗಿಸಿಕೊಂಡಿರುವ ರವಿಚಂದ್ರನ್ ಇಂದಿಗೂ ಕೂಡ ಕನ್ನಡ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ.

  ಶಿವರಾಜ್ ಕುಮಾರ್

  ಶಿವರಾಜ್ ಕುಮಾರ್

  1986 ರಲ್ಲಿ ಬಿಡುಗಡೆಯಾದ 'ಆನಂದ್ 'ಸಿನಿಮಾ ಮೂಲಕ ಚಲನಚಿತ್ರ ರಂಗಕ್ಕೆ ಪದಾರ್ಪಣೆ ಮಾಡಿದಾಗ ಅವರು ಅಣ್ಣಾವ್ರ ಮಗ, ಆದರೆ ಇಂದು ಅವರು ಶಿವಣ್ಣ! 'ಆನಂದ್' 'ರಥಸಪ್ತಮಿ' 'ಮನಮೆಚ್ಚಿದ ಹುಡುಗಿ' ನಟಿಸಿದ ಮೊದಲ ಮೂರು ಚಿತ್ರಗಳು ಸೂಪರ್ ಹಿಟ್ ಆಗುವುದರ ಮೂಲಕ ಹ್ಯಾಟ್ರಿಕ್ ಹೀರೋ ಅಂತ ಕರೆಸಿಕೊಂಡರು. 'ಓಂ" 'ಜನುಮದ ಜೋಡಿ"ಅಂತ ಸರ್ವಕಾಲಿಕ ಸೂಪರ್ ಹಿಟ್ ಚಿತ್ರಗಳು 'ಚಿಗುರಿದ ಕನಸು' ಅಂತ ಪ್ರಯೋಗಾತ್ಮಕ ಚಿತ್ರಗಳಲ್ಲಿ ಕೂಡ ನಟಿಸಿ ಗೆದ್ದವರು ಶಿವಣ್ಣ. ಪ್ರಸ್ತುತ ಸಿನಿಮಾರಂಗದ ಯಾವುದೇ ಸಮಸ್ಯೆಗಳಿಗೆ, ಬಿಕ್ಕಟ್ಟುಗಳಿಗೆ ಸಿನಿಮಾರಂಗದವರು ಮುಖಮಾಡುವುದು ಶಿವಣ್ಣನ ಮನೆಯ ಕಡೆಗೆ. ರಾಜಕುಮಾರ್ ಅವರ ಮಗನೆಂಬ ಹಿರಿಮೆಯೊಂದಿಗೆ ತಮ್ಮ ಅಭಿನಯದ ಮೂಲಕ ತನ್ನದೇ ಆದ ಅಭಿಮಾನಿಗಳ ಬಳಗವನ್ನು ಸೃಷ್ಟಿಸಿಕೊಂಡರು ಶಿವಣ್ಣ. ಸತತ 35 ವರ್ಷಗಳಿಂದ ಒಬ್ಬ ನಟ ಅದೇ ಇಮೇಜ್ ಕಾಪಾಡಿಕೊಂಡು ಬಂದಿರುವುದು ಜೊತೆಗೆ ತನ್ನ 60ನೇ ವಯಸ್ಸಿನಲ್ಲಿ ಕೂಡ ಸತತ ಸಿನಿಮಾಗಳನ್ನು ಮಾಡುತ್ತಿರುವುದು ಸಾಮಾನ್ಯ ಸಂಗತಿಯೇನಲ್ಲ. ಇಂದಿಗೂ ಕೂಡ ಕನ್ನಡ ಸಿನಿಮಾ ರಂಗದ ಪ್ರತಿ ನಿರ್ಮಾಪಕನಿಗೂ ಒಂದು ಕನಸು ಕನಿಷ್ಠ ಒಂದು ಸಿನಿಮಾ ಆದರೂ ಶಿವಣ್ಣನ ಜೊತೆ ಮಾಡಬೇಕು ಅಂತ. ಹೀಗಾಗಿ ಇಂದಿಗೂ ಹತ್ತಾರು ನಿರ್ಮಾಪಕರು ಶಿವಣ್ಣನ ಕಾಲ್‌ಶೀಟ್‌ಗಾಗಿ ಸರದಿಸಾಲಿನಲ್ಲಿ ಕಾಯುತ್ತಿದ್ದಾರೆ. ಈಗ ಅವರ ವಯಸ್ಸು ಹೆಚ್ಚುಕಮ್ಮಿ 60ವರ್ಷ, ಕೈಯಲ್ಲಿ ಹತ್ತಾರು ಸಿನಿಮಾಗಳಿವೆ. ಬಹುಶಃ ಮುಂದಿನ ಅವರ ಐದು ವರ್ಷದಷ್ಟು ಕಾಲ್ ಶೀಟ್ ಬುಕಾಗಿದೆ. ಭಾರತೀಯ ಸಿನಿಮಾ ರಂಗದಲ್ಲಿ ಎಷ್ಟು ದೊಡ್ಡ ಮಟ್ಟದಲ್ಲಿ ನಿರ್ಮಾಪಕರು ಮತ್ತೊಬ್ಬ ನಟನೆಗಾಗಿ ಕಾಯುತ್ತಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು. ಅದು ಶಿವಣ್ಣ ಅವರ ಪವರ್.

  ರಮೇಶ್ ಅರವಿಂದ್

  ರಮೇಶ್ ಅರವಿಂದ್

  80ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮತ್ತೊಬ್ಬ ಪ್ರತಿಭಾವಂತ ನಟ ರಮೇಶ್ ಅರವಿಂದ್. ಮೂಲತಃ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ರಮೇಶ್ ಸಿನಿಮಾರಂಗಕ್ಕೆ ಬರುವುದಕ್ಕೆ ಮೊದಲು ನಿರೂಪಕನ ಪಾತ್ರ ಕೂಡ ಅನೇಕ ಸಿನಿಮಾ ವೇದಿಕೆಗಳಲ್ಲಿ ಮಾಡಿದ್ದರು. ಇವರ ಚುರುಕುತನ, ನಟನೆಯಲ್ಲಿ ಆಸಕ್ತಿ ಗಮನಿಸಿದ ಖ್ಯಾತ ತಮಿಳು ಚಿತ್ರ ನಿರ್ದೇಶಕ ಕೆ ಬಾಲಚಂದರ್ ಕನ್ನಡದಲ್ಲಿ ನಿರ್ಮಿಸಿ ನಿರ್ದೇಶಿಸಿದ 'ಸುಂದರ ಸ್ವಪ್ನಗಳು' ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಅರಂಗ್ರೇಟಂ ಮಾಡಿಸಿದರು. 1986 ರಲ್ಲಿ ಸಿನಿಮಾ ರಂಗಪ್ರವೇಶ ಮಾಡಿದ ರಮೇಶ್ ಅರವಿಂದ್ ಇದುವರೆಗೆ ಕನ್ನಡ ತಮಿಳು ತೆಲುಗು ಹಿಂದಿ ಭಾಷೆಯ 140ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಯಾವುದೇ ಒಂದು ಇಮೇಜಿಗೆ ಅಂಟಿಕೊಳ್ಳದೆ, ನಟನೆಗೆ ಪ್ರಾಮುಖ್ಯತೆ ಕೊಡುವ ಎಲ್ಲ ಬಗೆಯ ಪಾತ್ರಗಳನ್ನು ನಿರ್ವಹಿಸುವ ರಮೇಶ್ ಅರವಿಂದ್ ಒಬ್ಬ ಪರಿಪೂರ್ಣ ನಟನಾಗಿದ್ದಾರೆ. ಜೊತೆಗೆ ಇವರು ಜೀ ಕನ್ನಡ ವಾಹಿನಿಗೆ ನಡೆಸಿಕೊಟ್ಟ 'ವೀಕೆಂಡ್ ವಿತ್ ರಮೇಶ್' ಕನ್ನಡದ ಅತ್ಯಂತ ಜನಪ್ರಿಯ ಮತ್ತು ಜನಸಾಮಾನ್ಯರಿಗೆ ಅತಿ ಹತ್ತಿರವೆನಿಸಿದ ಕಾರ್ಯಕ್ರಮ. ಸಿನಿರಂಗದಲ್ಲಿ ಮೂವತ್ತೈದು ವರ್ಷಗಳ ಸಾಧನೆ ಮಾಡಿರುವ ರಮೇಶ್ ಅರವಿಂದ್ ಇಂದಿಗೂ ಜನಪ್ರಿಯ ನಾಯಕನಟನಾಗಿ ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

  ಕಾಶಿನಾಥ್

  ಕಾಶಿನಾಥ್

  ಸಣ್ಣ ಬಜೆಟ್‌ನಲ್ಲಿ ಹಾಸ್ಯಮಿಶ್ರಿತ ಬದುಕಿನ ಭಾವನೆಗಳಿಗೆ ಹತ್ತಿರವೆನಿಸುವ ಸಿನಿಮಾಗಳನ್ನು ಮಾಡಿ ಗೆದ್ದವರು ಕಾಶಿನಾಥ್. ಕಾಶಿನಾಥ್ ಮೂಲತಃ ಒಬ್ಬ ನಿರ್ದೇಶಕ. 1976 ರಲ್ಲಿ 'ಅಪರೂಪದ ಅತಿಥಿಗಳು' ಚಿತ್ರದ ಮೂಲಕ ನಿರ್ದೇಶಕರಾಗಿ ಸಿನಿಮಾ ರಂಗ ಪ್ರವೇಶ ಮಾಡಿದರು. 78 ರಲ್ಲಿ ಬಿಡುಗಡೆಯಾದ ಸಸ್ಪೆನ್ಸ್ ಥ್ರಿಲ್ಲರ್ 'ಅಪರಿಚಿತ' ಅವರಿಗೆ ದೊಡ್ಡ ಸಕ್ಸಸ್ ತಂದುಕೊಟ್ಟಿತು. 1984ರಲ್ಲಿ ಬಿಡುಗಡೆಯಾದ 'ಅನುಭವ' ಮೂಲಕ ಪೂರ್ಣ ಪ್ರಮಾಣದ ನಾಯಕ ನಟರಾದರು.ಕನ್ನಡದಲ್ಲಿ ಮೊದಲ ಬಾರಿಗೆ ಅಡಲ್ಟ್ ಕಾಮಿಡಿ ಸಿನಿಮಾಗಳ ಪರಂಪರೆ ಆರಂಭವಾಗಿದ್ದು ಕಾಶಿನಾಥ್ ಅವರಿಂದ. ಸಣ್ಣ ಬಜೆಟ್ಟಿನಲ್ಲಿ ಅದ್ದೂರಿ ಸಿನಿಮಾಗಳನ್ನು ತೆಗೆದ ಹೆಗ್ಗಳಿಕೆ ಕಾಶಿನಾಥ್ ಅವರದ್ದು. ನಟ -ನಿರ್ದೇಶಕ- ನಿರ್ಮಾಪಕರಾಗಿ ಸುಮಾರು ನಲವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿ ನಟಿಸಿದ ಕ್ರಾಫ್ಟ್ ಮೆನ್ ಕಾಶಿನಾಥ್. ವಿ ಮನೋಹರ್, ಉಪೇಂದ್ರ, ಸುನಿಲ್ ಕುಮಾರ್ ದೇಸಾಯಿ ಎಂತ ಪ್ರತಿಭಾವಂತ ಅನೇಕ ಶಿಷ್ಯರನ್ನು ತಯಾರಿಸಿ ಕನ್ನಡ ಸಿನಿಮಾರಂಗಕ್ಕೆ ನೀಡಿದ ಕೀರ್ತಿ ಕಾಶಿನಾಥ್ ಅವರಿಗೆ ಸಲ್ಲುತ್ತದೆ. ತರುಣ್ ಸುಧೀರ್ ನಿರ್ದೇಶನದ 'ಚೌಕ'ಚಿತ್ರದಲ್ಲಿ ಗಮನಾರ್ಹವಾದ ಪಾತ್ರ ನಿರ್ವಹಿಸಿದ ಕಾಶಿನಾಥ್ 18 ಜನವರಿ 2018 ರಂದು ನಿಧನ ಹೊಂದಿದರು. ಅವರು ನಟಿಸಿದ ಕೊನೆಯ ಚಿತ್ರ 'ಓಳು ಮುನಿಸ್ವಾಮಿ' ಅವರ ನಿಧನದ ಕೆಲವು ತಿಂಗಳ ನಂತರ ಬಿಡುಗಡೆಯಾಯಿತು. ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ಆದ ಒಂದು ಮಾರ್ಕ್ ಸಿನಿಮಾಗಳನ್ನು ಮಾಡಿ ಗೆದ್ದ ಕಾಶಿನಾಥ್ ಅವರ ಸಿನಿಮಾಗಳು ಕನ್ನಡ ಜನಮಾನಸದಲ್ಲಿ ಸದಾ ಸ್ಮರಣೀಯವಾಗಿರುತ್ತವೆ.

  ಜಗ್ಗೇಶ್

  ಜಗ್ಗೇಶ್

  ನಟನಾಗಲ್ಲೇಬೇಕೆಂಬ ಹಠ ತೊಟ್ಟು ಸಿನಿಮಾ ರಂಗಕ್ಕೆ ಬಂದು ಅನೇಕ ತರದ ಅವಮಾನಗಳನ್ನು ಎದುರಿಸಿ ಸಣ್ಣಪುಟ್ಟ ಪಾತ್ರಗಳಿಂದ ಸಿನಿಮಾ ಕೆರಿಯರ್ ಆರಂಭಿಸಿದ ಜಗ್ಗೇಶ್,ಇಂದಿನ ಕನ್ನಡ ಸಿನಿಮಾರಂಗದ ಸೀನಿಯರ್ ಮೋಸ್ಟ್ ಕಲಾವಿದರಲ್ಲಿ ಒಬ್ಬರು. 83 ರಲ್ಲಿ ಬಿಡುಗಡೆಯಾದ 'ಇಬ್ಬನಿ ಕರಗಿತು' ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಜಗ್ಗೇಶ್ ಇಲ್ಲಿಂದ ಮುಂದೆ ಅನೇಕ ಚಿತ್ರಗಳಲ್ಲಿ ಸೈಡ್ ಆರ್ಟಿಸ್ಟ್, ಕ್ಯಾರೆಕ್ಟರ್ ಆರ್ಟಿಸ್ಟ್, ಕಾಮಿಡಿ, ಕಾಮಿಡಿ ವಿಲನ್, ವಿಲನ್ ಹೀಗೆ ಎಲ್ಲಾ ತರದ ಪಾತ್ರಗಳಲ್ಲಿ ಮಿಂಚಿದವರು. 1991 ರಲ್ಲಿ ಬಿಡುಗಡೆಯಾದ 'ಭಂಡ ನನ್ನ ಗಂಡ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟರಾದರು. ಇದರ ನಂತರ ಬಿಡುಗಡೆಯಾದ 'ತರ್ಲೆ ನನ್ನ ಮಗ"ದೊಡ್ಡ ಯಶಸ್ಸು ಕೊಟ್ಟಿತು. ವಿಮರ್ಶಕರಿಂದ ಪ್ರಶಂಸೆ ಗೆ ಒಳಪಟ್ಟ "ಮಠ'ಅವರ ನೂರನೇ ಚಿತ್ರ. ಈಗಲೂ 'ರಂಗನಾಯಕ' 'ರಾಘವೇಂದ್ರ ಸ್ಟೋರ್ಸ್' ಇಂಥ ವಿಭಿನ್ನ ಬಗೆಯ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

  ಉಪೇಂದ್ರ

  ಉಪೇಂದ್ರ

  ಕನ್ನಡ ಸಿನಿಮಾರಂಗ ಕಂಡ ಅತ್ಯಂತ ಬುದ್ಧಿವಂತ ನಿರ್ದೇಶಕ ಜೊತೆಗೆ ನಟ ಉಪೇಂದ್ರ. 80ರ ದಶಕದಲ್ಲೇ ಅವರು ಕಾಶಿನಾಥ್ ಅವರ ಬಳಿ ಸಹಾಯಕ ನಿರ್ದೇಶಕನಾಗಿ, ಸ್ಕ್ರಿಪ್ಟ್ ರೈಟರ್ ಆಗಿ ಕೆಲಸಕ್ಕೆ ಸೇರಿದರು. ಜೊತೆಗೆ ಅದೇ ಸಮಯದಲ್ಲಿ ಕಾಶಿನಾಥ್ ಅವರ ಚಿತ್ರಗಳಲ್ಲಿ ಸಣ್ಣಪುಟ್ಟ ಕ್ಯಾರೆಕ್ಟರ್ ಗಳು ಕೂಡ ಮಾಡಿದರು. 'ಅನಂತನ ಅವಾಂತರ' (1989) ಚಿತ್ರದಲ್ಲಿ ಕಾಮದೇವನ ಪಾತ್ರದ ಮೂಲಕ ಬೆಳ್ಳಿತೆರೆಗೆ ಪರಿಚಿತರಾದರು. ಜಗ್ಗೇಶ್ ನಾಯಕ ನಟರಾಗಿ ನಟಿಸಿದ 'ತರ್ಲೆ ನನ್ ಮಗ' ಚಿತ್ರದ ಮೂಲಕ 1992 ರಲ್ಲಿ ಪೂರ್ಣಪ್ರಮಾಣದ ನಿರ್ದೇಶಕರಾದರು. ಶಿನಾಥ್ ಶೈಲಿಯ ಈ ಅಡಲ್ಟ್ ಕಾಮಿಡಿ ಚಿತ್ರ ಉಪೇಂದ್ರ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತು. ನಂತರ ಬಂದ 'ಶ್...!' 'ಓಂ' ಚಿತ್ರಗಳ ಮೂಲಕ ಸ್ಟಾರ್ ಡೈರೆಕ್ಟರ್ ಅನಿಸಿಕೊಂಡರು. 98ರಲ್ಲಿ ಬಿಡುಗಡೆಯಾದ 'A' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟರಾದರು. ಇದರ ಯಶಸ್ಸಿನ ನಂತರ ಅವರ ನಿರ್ದೇಶನದಲ್ಲಿ ಮೂಡಿ ಬಂದ 'ಉಪೇಂದ್ರ' ಮೂಲಕ ದಕ್ಷಿಣ ಭಾರತದಲ್ಲೇ ದೊಡ್ಡ ಹವಾ ಕ್ರಿಯೆಟ್ ಮಾಡಿಕೊಂಡರು. ನಟರಾಗಿ ಹೆಚ್ಚು ಸಕ್ರಿಯವಾದಂತೆ ನಿರ್ದೇಶಕನ ಪಟ್ಟದಿಂದ ನಿರ್ಗಮಿಸಿದರು. ಮತ್ತೆ 'ಸೂಪರ್' ಅಂತ ಕೆಲವು ಚಿತ್ರಗಳನ್ನು ನಿರ್ದೇಶಿಸಿದರು ಇಂದಿಗೂ ಸ್ಟಾರ್ ನಟನಾಗಿ ಉಪೇಂದ್ರ ಅವರು ಕನ್ನಡ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ.

  ಸುದೀಪ್

  ಸುದೀಪ್

  ಇವತ್ತು ಕನ್ನಡದ ಟಾಪ್ ನಟರಲ್ಲಿ ಒಬ್ಬರಾಗಿರುವ ಸುದೀಪ್ ಅವರ ಸಿನಿಮಾ ರಂಗಪ್ರವೇಶ 90ರ ದಶಕದಲ್ಲಿ ನಡೆಯಿತು. 1997 ರಲ್ಲಿ ಬಿಡುಗಡೆಯಾದ 'ತಾಯವ್ವ' ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶ ಮಾಡಿದರು. ಆನಂತರ 99ರಲ್ಲಿ ಬಿಡುಗಡೆಯಾದ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ 'ಪ್ರತ್ಯರ್ಥ' ಚಿತ್ರದಲ್ಲಿ ಕೂಡ ನಟಿಸಿದರು. ಮುಂದೆ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ 'ಸ್ಪರ್ಶ' ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕ ನಟನಾಗಿ ಕನ್ನಡ ಸಿನಿಮಾ ರಂಗದಲ್ಲಿ ನೆಲೆ ಕಂಡರು. ನಂತರ ಬಂದ 'ಹುಚ್ಚ' ಸಿನಿಮಾ ಇವರ ಕೆರಿಯರ್ ನಲ್ಲಿ ಅತಿ ದೊಡ್ಡ ಹಿಟ್ ಎನಿಸಿಕೊಂಡಿತ್ತು. ಕನ್ನಡದ ಜೊತೆಗೆ ತೆಲುಗು ತಮಿಳು ಹಿಂದಿ ಚಿತ್ರರಂಗದಲ್ಲೂ ಗುರುತಿಸಿಕೊಂಡಿರುವ ಸುದೀಪ್ ಪ್ರಸ್ತುತ ಕನ್ನಡದ ಸ್ಟಾರ್ ನಟರಲ್ಲಿ ಒಬ್ಬರಾಗಿದ್ದಾರೆ.

  ಶಶಿಕುಮಾರ್

  ಶಶಿಕುಮಾರ್

  ಕನ್ನಡ ಸಿನಿಮಾರಂಗ ಕಂಡ ಅತ್ಯಂತ ಸ್ಪುರದ್ರೂಪಿ ನಟರಲ್ಲೊಬ್ಬರು ಶಶಿಕುಮಾರ್. 1989ರಲ್ಲಿ ಬಿಡುಗಡೆಯಾದ ರಾಘವೇಂದ್ರ ರಾಜಕುಮಾರ್ ಅಭಿನಯದ 'ಚಿರಂಜೀವಿ ಸುಧಾಕರ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದರು ಶಶಿಕುಮಾರ್. ಆನಂತರ ರವಿಚಂದ್ರನ್-ಪೂನಂ ದಿಲೋನ್ ಅಭಿನಯದ 'ಯುದ್ಧಕಾಂಡ' ಚಿತ್ರದಲ್ಲಿನ ಅಭಿನಯ ಇವರಿಗೆ ಯಶಸ್ಸನ್ನು ತಂದುಕೊಟ್ಟಿತು.ಮಾಲಾಶ್ರೀ ಜೊತೆ ಇವರು ಅಭಿನಯಿಸಿದ 'ರಾಣಿ ಮಹಾರಾಣಿ' ಶಶಿಕುಮಾರ್ ಕೆರಿಯರ್ ನಲ್ಲಿ ದೊಡ್ಡ ಟರ್ನಿಂಗ್ ಪಾಯಿಂಟ್. ಇಲ್ಲಿಂದ ಮುಂದೆ ಶಶಿಕುಮಾರ್- ಮಾಲಾಶ್ರೀ ಕನ್ನಡದ ಅತ್ಯಂತ ಜನಪ್ರಿಯ ಜೋಡಿಯಾಗಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿತ್ತು. ಕೆರಿಯರ್ ಯಶಸ್ವಿಯಾಗಿ ಸಾಗುತ್ತಿರುವಾಗಲೇ ಕಾರ್ ಆಕ್ಸಿಡೆಂಟ್ ನಲ್ಲಿ ತೀವ್ರ ಗಾಯಗೊಂಡರು. ಇದರಿಂದ ಸುಮಾರು ಮೂರು ವರ್ಷ ಸಿನಿಮಾರಂಗದಿಂದ ದೂರ ಉಳಿಯಬೇಕಾಯಿತು. ಆನಂತರ ಕಂಬ್ಯಾಕ್ ಮಾಡಿದವರು 'ಹಬ್ಬ' 'ಸ್ನೇಹಲೋಕ' 'ಯಾರಿಗೆ ಸಾಲುತ್ತೆ ಸಂಬಳ' 'ಯಜಮಾನ' ಮುಂತಾದ ಚಿತ್ರಗಳಲ್ಲಿ ಸಪೋರ್ಟಿಂಗ್ ಆರ್ಟಿಸ್ಟ್ ಆಗಿ ಅಭಿನಯಿಸಿದರು. ರಾಜಕೀಯದಲ್ಲೂ ಸಕ್ರಿಯರಾಗಿವ ಶಶಿಕುಮಾರ್ ಚಿತ್ರದುರ್ಗ ಲೋಕಸಭಾ ಸದಸ್ಯರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.

  ಕುಮಾರ್ ಗೋವಿಂದ್

  ಕುಮಾರ್ ಗೋವಿಂದ್

  ಉಪೇಂದ್ರ ನಿರ್ದೇಶನದ 'ಶ್...!' ಚಿತ್ರದ ಮೂಲಕ 1993 ರಲ್ಲಿ ನಾಯಕನಟನಾಗಿ ಜೊತೆಗೆ ನಿರ್ಮಾಪಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 'ಶ್... !'ಚಿತ್ರದ ಭರ್ಜರಿ ಯಶಸ್ಸು ಆನಂತರ ಬಂದ 'ಅನುರಾಗ ಸಂಗಮ' ಕೂಡ ದೊಡ್ಡ ಮಟ್ಟದ ಯಶಸ್ಸನ್ನು ಅವರಿಗೆ ತಂದುಕೊಟ್ಟಿತು. ಇದರಿಂದ ಅವರು ಕನ್ನಡ ಸಿನಿಮಾರಂಗದಲ್ಲಿ ಯಶಸ್ವಿ ನಾಯಕನಟನಾಗಿ ಗುರುತಿಸಿಕೊಂಡರು 'ಶ್...!' 'ಅನುರಾಗ ಸಂಗಮ'ದಂತ ದೊಡ್ಡ ಯಶಸ್ಸನ್ನು ಮಾತ್ರ ಅವರು ಮತ್ತೆ ತಮ್ಮ ಸಿನಿ ಜೀವನದಲ್ಲಿ ನೋಡಲೇ ಇಲ್ಲ. ಮುಂದೆ ಹಲವಾರು ಚಿತ್ರಗಳಲ್ಲಿ ನಾಯಕನಟನಾಗಿ ಕ್ರಮೇಣ ಪೋಷಕನಟನಾಗಿ ಕುಮಾರ್ ಗೋವಿಂದ್ ನಟಿಸಿದ್ದಾರೆ.

  ಸುನೀಲ್

  ಸುನೀಲ್

  ದಿವಂಗತ ಸುನೀಲ್ ಕನ್ನಡ ಸಿನಿಮಾರಂಗದಲ್ಲಿ ದೊಡ್ಡ ನಟನಾಗಿ ಬೆಳೆಯುವ ಎಲ್ಲ ಅವಕಾಶಗಳನ್ನು ಹೊಂದಿದ್ದ ನಟ. ಸೌಮ್ಯ ಸ್ವಭಾವದ ಸುನೀಲ್ ಪ್ರೇಮಕಥೆಗಳು ಜೊತೆಗೆ ಸಾಂಸಾರಿಕ ಚಿತ್ರಗಳಿಗೆ ಹೇಳಿ ಮಾಡಿಸಿದ ನಟ. 1989ರಲ್ಲಿ ಸಿನಿಮಾ ರಂಗ ಪ್ರವೇಶಿಸಿದ ಸುನೀಲ್, 90 ರಲ್ಲಿ ಬಿಡುಗಡೆಯಾದ 'ಶೃತಿ' ಚಿತ್ರದ ಮೂಲಕ ಅತ್ಯಂತ ಜನಪ್ರಿಯತೆಯನ್ನು ಪಡೆದರು. 'ಮನ ಮೆಚ್ಚಿದ ಸೊಸೆ' 'ಬೆಳ್ಳಿಕಾಲುಂಗುರ' 'ಶಾಂಭವಿ' ಮುಂತಾದ ಚಿತ್ರಗಳಲ್ಲಿ ನಟಿಸಿ ಯಶಸ್ವಿ ನಟನಾಗಿ ಗುರುತಿಸಿಕೊಳ್ಳುತ್ತಿರುವ ಸಂದರ್ಭದಲ್ಲಿಯೇ ವಿಧಿವಶಾತ್ 94ರಲ್ಲಿ ಆಕ್ಸಿಡೆಂಟ್ ಒಂದರಲ್ಲಿ ನಿಧನರಾದರು. ಇವರ ಜೊತೆ ಪಯಣಿಸುತ್ತಿದ್ದ ನಟಿ ಮಾಲಾಶ್ರೀ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದರು. ಉಜ್ಜಲ ಭವಿಷ್ಯತ್ ಇದ್ದ ಒಬ್ಬ ನಾಯಕನ ದಾರುಣ ಅಂತ್ಯದಿಂದ ಕನ್ನಡ ಸಿನಿಮಾರಂಗ ಒಬ್ಬ ಉದಯೋನ್ಮುಖ ನಾಯಕ ನಟನನ್ನು ಕಳೆದುಕೊಂಡಿತು.

  ಇನ್ನೂ ಹಲವು ನಾಯಕ ನಟರು ಇದ್ದಾರೆ

  ಇನ್ನೂ ಹಲವು ನಾಯಕ ನಟರು ಇದ್ದಾರೆ

  80- 90 ರ ದಶಕದಲ್ಲಿ ಇವರಲ್ಲದೆ ಇನ್ನೂ ಅನೇಕ ನಟರು ಕನ್ನಡ ಸಿನಿಮಾ ರಂಗವನ್ನು ಪ್ರವೇಶಿಸಿದರು. ಮುರುಳಿ, ಅರ್ಜುನ್ ಸರ್ಜಾ, ವಿನೋದ್ ರಾಜ್, ರಾಘವೇಂದ್ರ ರಾಜಕುಮಾರ್, ವಿನೋದ್ ಆಳ್ವ, ಕುಮಾರ್ ಬಂಗಾರಪ್ಪ, ರಘುವೀರ್, ಪ್ರಕಾಶ್ ರೈ ಹೀಗೆ ಅನೇಕ ಪ್ರತಿಭಾವಂತರ ಪದಾರ್ಪಣೆ ಈ ಎರಡು ದಶಕಗಳಲ್ಲಿ ನಡೆದಿದೆ. ಇದರಲ್ಲಿ ಕೆಲವರು ತೆಲುಗು-ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿ ಕನ್ನಡ ಚಿತ್ರರಂಗದಿಂದ ದೂರಸರಿದರು. ಮತ್ತೆ ಕೆಲವರು ವಿವಿಧ ಕಾರಣಗಳಿಂದ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ ಅಥವಾ ಅಭಿನಯದಿಂದ ಶಾಶ್ವತವಾಗಿ ದೂರ ಸರಿದಿದ್ದಾರೆ. ಹೀಗಾಗಿ ಒಂದಷ್ಟು ಹೆಸರುಗಳನ್ನು ಇಲ್ಲಿ ಟಾಪ್ ಟೆನ್ ನಟರ ಪಟ್ಟಿಯಲ್ಲಿ ಹೆಸರಿಸಿಲ್ಲ. ಫಿಲ್ಮಿಬೀಟ್ ಕನ್ನಡ ಎಲ್ಲಾ ಕನ್ನಡ ಕಲಾವಿದರ ಬಗ್ಗೆ ಗೌರವ ಪೂರಕವಾದ ಅಭಿಮಾನವನ್ನು ಹೊಂದಿದ್ದು ಅವರ ಕಲಾಸೇವೆಯನ್ನು ಗೌರವಿಸುತ್ತದೆ.

  English summary
  Here is the Filmibeat Kannada top ten list of sandalwood heroes of 80-90. Many heroes still are acting as main lead and enjoying huge number of fan following till today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X