2022 ರಲ್ಲಿ ಹಿಂದಿ ಬೆಲ್ಟ್‌ನಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಸೌತ್ ಸಿನಿಮಾಗಳಿವು
ಒಂದೆಡೆ ಬಾಲಿವುಡ್‌ನಲ್ಲಿ ಈಗ ರಿಮೇಕ್ ಗಳದ್ದೇ ಕಾರುಬಾರು. ಬಹುತೇಕ ಬಾಲಿವುಡ್ ನಟರು ಈಗ ರಿಮೇಕ್‌ಗಳ ಹಿಂದೆ ಬಿದ್ದಿದ್ದಾರೆ. ಈ ಹಿಂದೆ 'ವಾಂಟೆಡ್', 'ರೆಡಿ', 'ದೃಶ್ಯಂ', 'ಕಬೀರ್ ಸಿಂಗ್', 'ಭೂಲ್ ಭುಲೈಯಾ' ಮುಂತಾದ ಸೂಪರ್ ಹಿಟ್ ಚಿತ್ರಗಳೆಲ್ಲಾ ಸೌತ್ ರಿಮೇಕ್ ಗಳೇ ಆಗಿತ್ತು. ಈಗ ಇದೇ ಸಾಲಿನಲ್ಲಿ 'ಜರ್ಸಿ', 'ವಿಕ್ರಮ್ ವೇದ', 'ಅನಿಯನ್' ನಂತಹ ರಿಮೇಕ್ ಚಿತ್ರಗಳು ಬಿಡುಗಡೆಗಾಗಿ ಸಿದ್ಧವಾಗಿವೆ. ಆದರೆ ಕಳೆದ ಕೆಲವು ವರ್ಷಗಳಿಂದ ಹಿಂದಿ ಆಡಿಯನ್ಸ್ ರಿಮೇಕ್ ಚಿತ್ರಗಳನ್ನು ನೋಡುವುದರ ಬದಲು ಅದರ ಮೂಲ ಆವೃತ್ತಿಯ ಚಿತ್ರಗಳ ಡಬ್ಬಿಂಗ್ ವರ್ಷನ್ ನೋಡುವುದಕ್ಕೆ ಹೆಚ್ಚು ಆದ್ಯತೆ ಕೊಡುತ್ತಿದ್ದಾರೆ. ಹೀಗಾಗಿಯೇ ಈಗ ಪ್ರಭಾಸ್, ಮಹೇಶ್ ಬಾಬು, ವಿಜಯ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ಯಶ್, ದರ್ಶನ್, ಸುದೀಪ್, ಅಜಿತ್ ನಂತರ ಸೂಪರ್ ಸ್ಟಾರ್ ಗಳ ಚಿತ್ರಗಳನ್ನು ಹಿಂದಿಯಲ್ಲಿ ನೋಡಲು ಇಷ್ಟಪಡುತ್ತಿದ್ದಾರೆ.
ದಕ್ಷಿಣದ ನಟರು ತಮ್ಮ ಕ್ಲಾಸ್ ಆಕ್ಟ್, ಡೈಲಾಗ್ ಮತ್ತು ನೃತ್ಯ ಕೌಶಲಗಳ ಮೂಲಕ ಹಿಂದಿ ಪ್ರೇಕ್ಷಕರ ನಡುವೆ ತಮ್ಮ ಅಭಿಮಾನಿಗಳನ್ನು ಹೊಂದಿದ್ದಾರೆ, ಇವರ ಚಿತ್ರಗಳನ್ನು ನೋಡಲು ಬಾಲಿವುಡ್ ವೀಕ್ಷಕರು ಇಷ್ಟಪಡುತ್ತಾರೆ. ಹಾಗಾಗಿ, ಡಬ್ಬಿಂಗ್ ಚಿತ್ರಗಳು ಯೂಟ್ಯೂಬ್ ಅಥವಾ ಸ್ಯಾಟಲೈಟ್ ನಲ್ಲಿ ಅಲ್ಲದೆ ನೇರವಾಗಿ ಇನ್ನು ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. 2022 ರಲ್ಲಿ ನೇರವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿರುವ ಟಾಪ್ ಟೆನ್ ಸೌತ್ ಸಿನಿಮಾಗಳ ವಿವರಗಳು ಹೀಗಿದೆ.

ರಾಜಮೌಳಿಯ 'ಆರ್‌ಆರ್‌ಆರ್'
ಎಸ್ಎಸ್ ರಾಜಮೌಳಿ ಅವರ ಬಹುನಿರೀಕ್ಷಿತ ಚಿತ್ರ ಆರ್ ಆರ್ ಆರ್. ಜೂನಿಯರ್ ಎನ್. ಟಿ. ಆರ್, ರಾಮ್ ಚರಣ್ ತೇಜ, ಆಲಿಯಾ ಭಟ್, ಅಜಯ್ ದೇವಗನ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಟ್ರೇಲರ್ ಡಿಸೆಂಬರ್ 9 ರಂದು ಬಿಡುಗಡೆಯಾಗಿದ್ದು. ತೆಲುಗು ಹಿಂದಿ, ತಮಿಳು, , ಮಲಯಾಳಂ ಮತ್ತು ಕನ್ನಡದಲ್ಲಿ ಸುಮಾರು ಹತ್ತು ಸಾವಿರ ಚಿತ್ರಮಂದಿರಗಳಲ್ಲಿ ಚಿತ್ರ ಜನವರಿ ಏಳರಂದು ಬಿಡುಗಡೆಯಾಗಬೇಕಿತ್ತು. ಆದರೆ ಲಾಕ್ಡೌನ್ ಕಾರಣದಿಂದ ಚಿತ್ರವನ್ನು ಮುಂದೂಡಲಾಗಿದ್ದು ಏಪ್ರಿಲ್ 29ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಹಿಂದಿ ಪ್ರೇಕ್ಷಕರು ಹೆಚ್ಚು ಕಾತರದಿಂದ ನೋಡುತ್ತಿರುವ ಚಿತ್ರಗಳಲ್ಲಿ ಆರ್‌ಆರ್‌ಆರ್ ಮುಖ್ಯವಾದ ಚಿತ್ರ.

'K.G.F: ಚಾಪ್ಟರ್ 2'
ಯಶ್, ಸಂಜಯ್ ದತ್, ರವೀನ್ ಟಂಡನ್, ಪ್ರಕಾಶ್ ರಾಜ್ ಪ್ರಧಾನ ಪಾತ್ರಧಾರಿಗಳಾಗಿರುವ ಬಹುನಿರೀಕ್ಷಿತ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಹೊಂಬಾಳೆ ಫಿಲಂಸ್ ನಿರ್ಮಿಸಿರುವ ಕೆಜಿಎಫ್ 2 ಚಿತ್ರ ಏಪ್ರಿಲ್ 14ರಂದು ದೊಡ್ಡ ಪರದೆಯ ಮೇಲೆ ದೊಡ್ಡಮಟ್ಟದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಈಗ ಹಿಂದಿ ಬೆಲ್ಟ್ ನಲ್ಲಿ ಅಪಾರವಾದ ಅಭಿಮಾನಿಗಳಿದ್ದಾರೆ. ಹಿಂದಿ ಪ್ರಾಂತ್ಯಗಳ ಯಾವುದೇ ಭಾಗಗಳಿಗೆ ಹೋದರು ಪ್ರತಿಯೊಬ್ಬರ ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಪವರ್‌ಫುಲ್ ಡೈಲಾಗ್ 'ದುನಿಯಾ ಕಾ ಸಬ್ಸೇ ಬಡಾ ಯೋಧ ಮಾ ಹೋತಿ ಹೈ' ಇದು ಹೆಚ್ಚು ಸದ್ದು ಮಾಡಿದ್ದು, ಇನ್ನು ಕೆಜಿಎಫ್ 2 ಚಿತ್ರದ ಮತ್ತಷ್ಟು ಪವರ್ ಫುಲ್ ಡೈಲಾಗ್ ಗಳಿಗಾಗಿ ಹಿಂದಿ ಜನ ಕೂಡ ಎದುರುನೋಡುತ್ತಿದ್ದಾರೆ.

ಪ್ರಭಾಸ್ ನಟನೆಯ 'ರಾಧೆ ಶ್ಯಾಮ್'
ಪ್ರಭಾಸ್, ಪೂಜಾ ಹೆಗ್ಡೆ, ಕುನಾಲ್ ರಾಯ್ ಕಪೂರ್, ಭಾಗ್ಯಶ್ರೀ ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರವನ್ನು ರಾಧಾ ಕೃಷ್ಣ ಕುಮಾರ್ ನಿರ್ದೇಶನ ಮಾಡಿದ್ದಾರೆ. 350 ಕೋಟಿ ವೆಚ್ಚದಲ್ಲಿ ಪ್ರಮುಖ ನಿರ್ಮಾಣ ಸಂಸ್ಥೆಗಳಾದ UV ಕ್ರಿಯೇಷನ್ಸ್, T-ಸರಣಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿವೆ. ಜನವರಿ 14ರಂದು ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಬೇಕಿದ್ದ ಈ ಚಿತ್ರವು ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಬಾಹುಬಲಿ ನಂತರ ಉತ್ತರ ಭಾರತದಲ್ಲಿ ಪ್ರಭಾಸ್ ಜನಪ್ರಿಯತೆಯನ್ನು ಗಮನಿಸಿದರೆ, ನಿರ್ಮಾಪಕರು ಚಿತ್ರವನ್ನು ಹಿಂದಿ ಮತ್ತು ತೆಲುಗು ಎರಡರಲ್ಲೂ ಏಕಕಾಲದಲ್ಲಿ ಚಿತ್ರೀಕರಿಸಿದ್ದಾರೆ. ಇನ್ನುಳಿದಂತೆ ತಮಿಳು ಕನ್ನಡ ಮತ್ತು ಮಲಯಾಳಂನಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.

ವಿಜಯ್ ದೇವರಕೊಂಡ ನಟನೆಯ 'ಲೈಗರ್'
ವಿಜಯ್ ದೇವರಕೊಂಡ, ಅನನ್ಯ ಪಾಂಡೆ, ರಮ್ಯಾ ಕೃಷ್ಣ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದು ಕರಣ್ ಜೋಹರ್ ಹಿಂದಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಲೈಗರ್ ಹಿಂದಿ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡಿದೆ. ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟ ವಿಜಯ್ ದೇವರಕೊಂಡ ಈ ಚಿತ್ರದಲ್ಲಿ ಕಿಕ್ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅನನ್ಯ ಪಾಂಡೆ, ರೋನಿತ್ ರಾಯ್, ರಮ್ಯಾ ಕೃಷ್ಣನ್ ಕೂಡ ನಟಿಸಿದ್ದಾರೆ. ಇದು ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳ ಡಬ್ಬಿಂಗ್ ಆವೃತ್ತಿಗಳೊಂದಿಗೆ ಹಿಂದಿ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಆಗಸ್ಟ್ ಮಾಸದಲ್ಲಿ ಬಿಡುಗಡೆಯಾಗಲಿದೆ. ಸದ್ಯ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಜಾನ್ವಿ ಕಪೂರ್ ಅವರು ಚಿತ್ರಕ್ಕಾಗಿ ತಯಾರಕರ ಮೊದಲ ಆಯ್ಕೆಯಾಗಿದ್ದರು ಆದರೆ ಅವರ ದಿನಾಂಕದ ಸಮಸ್ಯೆಗಳಿಂದಾಗಿ, ಅನನ್ಯ ಪಾಂಡೆ ಅವರಿಗೆ ಈ ಸಿನಿಮಾದಲ್ಲಿ ನಟಿಸುವ ಅದೃಷ್ಟ ಖುಲಾಯಿಸಿದೆ.

ಪ್ರಭಾಸ್ ನಟನೆಯ 'ಸಲಾರ್'
ಸಾಲಾರ್ ಕೆಜಿಎಫ್ 2 ಚಿತ್ರದ ನಂತರ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ. ಪ್ರಭಾಸ್, ಶ್ರುತಿ ಹಾಸನ್, ಜಗಪತಿ ಬಾಬು ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಬಜೆಟ್ 200 ಕೋಟಿ. ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸಿದೆ.ಈ ದಕ್ಷಿಣ ಭಾರತದ ಆಕ್ಷನ್ ಥ್ರಿಲ್ಲರ್ ಚಿತ್ರವು ಇದೇ ವರ್ಷದ ಮಧ್ಯಭಾಗದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮೂಲ ಇದು ತೆಲುಗಿನಲ್ಲಿ ಚಿತ್ರೀಕರಣವಾಗಿರುವ ಚಿತ್ರವಾಗಿದ್ದು ಇದು ಕನ್ನಡ ಅವತರಣಿಕೆಯ ಜೊತೆಗೆ ಹಿಂದಿ ತಮಿಳು ಮತ್ತು ಮಲಯಾಳಂ ನಲ್ಲಿ ಕೂಡ ಬಿಡುಗಡೆಯಾಗಲಿದೆ.

ವಿಜಯ್ ನಟನೆಯ 'ಬೀಸ್ಟ್'
ಕಾಲಿವುಡ್ ಸೂಪರ್‌ಸ್ಟಾರ್ ವಿಜಯ್ -ಪೂಜಾ ಹೆಗಡೆ ಜೋಡಿಯಾಗಿ ನಟಿಸುತ್ತಿರುವ ಈ ಚಿತ್ರವನ್ನು ಸನ್ ಪಿಚ್ಚರ್ಸ್ ನಿರ್ಮಿಸುತ್ತಿದೆ. ಇನ್ನು ಈ ಚಿತ್ರದ ನಿರ್ದೇಶನವನ್ನು ನೆಲ್ಸನ್ ದಿಲೀಪ್‌ಕುಮಾರ್ ಮಾಡುತ್ತಿದ್ದಾರೆ. ನೆಲ್ಸನ್ ಅವರ ಇತ್ತೀಚಿನ ಬಿಡುಗಡೆಯಾದ 'ಡಾಕ್ಟರ್ 'ಚಿತ್ರ 25 ದಿನಗಳಲ್ಲಿ 100 ಕೋಟಿ ರೂ ಗಳಿಸಿತು, ಅವರ ಹಿಂದಿನ ಚಿತ್ರ 'ಕೊಲಮಾವು ಕೋಕಿಲಾ '(2018) ಗಲ್ಲಾಪೆಟ್ಟಿಗೆಯಲ್ಲಿ ವಾಣಿಜ್ಯಿಕವಾಗಿ ಯಶಸ್ವಿಯಾಗಿದೆ,ಹೀಗಾಗಿ ಈ ಚಿತ್ರದ ಬಗ್ಗೆ ಕೂಡ ಭಾರಿ ನಿರೀಕ್ಷೆಗಳಿದ್ದು.ಅಲ್ಲದೆ ವಿಜಯ್ ಚಿತ್ರಗಳಿಗೆ ಹಿಂದಿ ಬೆಲ್ಟ್ ನಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವುದರಿಂದ ಈ ಚಿತ್ರವನ್ನು ನೇರವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಬಹುಶಃ ಚಿತ್ರ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಐತಿಹಾಸಿಕ ಕತೆಯುಳ್ಳ 'ಹರಿ ಹರ ವೀರ ಮಲ್ಲು'
ಪವನ್ ಕಲ್ಯಾಣ್, ನಿಧಿ ಅಗರ್ವಾಲ್, ಅರ್ಜುನ್ ರಾಂಪಾಲ್, ಜಾಕ್ವೆಲಿನ್ ಫರ್ನಾಂಡೀಸ್ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ಕ್ರಿಶ್ ಜಗರ್ಲಮುಡಿ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಬಜೆಟ್ 150 ಕೋಟಿಗಳಾಗಿದ್ದು ಈ ಚಿತ್ರವನ್ನು ಮೆಗಾ ಸೂರ್ಯ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. 'ವಕೀಲ್ ಸಾಬ್ 'ಮೂಲಕ ಯಶಸ್ಸಿನ ಲಯಕ್ಕೆ ಮರಳಿರುವ ಪವನ್ ಕಲ್ಯಾಣ್ ಅಕಾ ಪವರ್ ಸ್ಟಾರ್ 2022 ರಲ್ಲಿ ಪೀರಿಯಡ್-ಆಕ್ಷನ್ ಸಾಹಸದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ನಿಧಿ ಅಗರ್ವಾಲ್, ಅರ್ಜುನ್ ರಾಂಪಾಲ್ ಒಳಗೊಂಡ ಪ್ಯಾನ್-ಇಂಡಿಯಾ ಚಲನಚಿತ್ರವಾಗಿದೆ. ಇನ್ನು ಈ ಚಿತ್ರದ ಬಿಡುಗಡೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಇಲ್ಲ ಆದರೆ ಇದಕ್ಕೆ ಮೊದಲು 'ಭೀಮ್ಲಾ ನಾಯಕ್' ಬಿಡುಗಡೆಯಾಗಲಿದ್ದು ಆನಂತರವೇ ಈ ಚಿತ್ರವು 2022 ರ ಮಧ್ಯದಲ್ಲಿ ಚಿತ್ರಮಂದಿರಗಳಿಗೆ ಬರಲಿದೆ ಎಂದು ವರದಿಯಾಗಿದೆ.ಹರಿಹರ ವೀರ ಮಲ್ಲು ಚಿತ್ರವನ್ನು ಗಬ್ಬರ್ ಈಸ್ ಬ್ಯಾಕ್ (2015) ನಿರ್ದೇಶಕ ಕ್ರಿಶ್ ಜಗರ್ಲಮುಡಿ ನಿರ್ದೇಶಿಸುತ್ತಿದ್ದಾರೆ. ಎ .ಎಂ. ರತ್ನಂ ಜೊತೆಗೆ ಎ ದಯಾಕರ್ ರಾವ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಅಜಿತ್ ನಟನೆಯ 'ವಲಿಮೈ'
ಅಜಿತ್ ಕುಮಾರ್, ಹುಮಾ ಖುರೇಷಿ, ಯೋಗಿ ಬಾಬು ಅಭಿನಯದ ಬಹುನಿರೀಕ್ಷಿತ ತಮಿಳು ಚಿತ್ರ. ಹೆಚ್ ವಿನೋದ್ ನಿರ್ದೇಶನ ಮಾಡಿರುವ ಈ ಚಿತ್ರ ಜನವರಿ 14ರಂದು ಸಂಕ್ರಾಂತಿಯ ಆಗಬೇಕಾಗಿತ್ತು. ಕಾಲಿವುಡ್ ಸ್ಟಾರ್ ನಟ ದಳಪತಿ ಅಜಿತ್ ಅಕಾ ಅಜಿತ್ ಕುಮಾರ್ ಅವರ 'ವಲಿಮೈ' ಅವರ ಬಹುನಿರೀಕ್ಷಿತ ಪ್ರಾಜೆಕ್ಟ್ ಗಳಲ್ಲಿ ಒಂದಾಗಿದೆ. ಬಾಲಿವುಡ್ ನಟಿ ಹುಮಾ ಖುರೇಷಿ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಝೀ ಸ್ಟುಡಿಯೋಸ್ ಸಹಯೋಗದೊಂದಿಗೆ ಬೇವ್ಯೂ ಪ್ರಾಜೆಕ್ಟ್ಸ್ ಎಲ್ಎಲ್ಪಿ ಬ್ಯಾನರ್ ಅಡಿಯಲ್ಲಿ ಬೋನಿ ಕಪೂರ್ ಅವರು ವಲಿಮೈ ಅನ್ನು ಬ್ಯಾಂಕ್ರೊಲ್ ಮಾಡಿದ್ದಾರೆ. ಯುವನ್ ಶಂಕರ್ ರಾಜಾ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಆರಂಭದಲ್ಲಿ ಇದನ್ನು ಕೇವಲ ತಮಿಳಿನಲ್ಲಿ ಮಾತ್ರ ಬಿಡುಗಡೆ ಮಾಡಲು ಯೋಚಿಸಿದರು, ಆದರೆ ಈಗ ಇದನ್ನು ತಮಿಳು ಜೊತೆಗೆ ತೆಲುಗು ಮತ್ತು ಹಿಂದಿಯಲ್ಲಿ ಕೂಡ ನೇರವಾಗಿ ಬಿಡುಗಡೆ ಮಾಡಲು ನಿರ್ಮಾಪಕರು ಕಸರತ್ತು ಮಾಡುತ್ತಿದ್ದಾರೆ.

ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ
ಸುದೀಪ್, ಜಾಕ್ವೆಲಿನ್ ಫರ್ನಾಂಡೀಸ್ ಪ್ರಧಾನ ಪಾತ್ರಧಾರಿಗಳಾಗಿರುವ ಈ ಚಿತ್ರಕ್ಕೆ ಅನುಪ್ ಭಂಡಾರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೀ ಸ್ಟುಡಿಯೋಸ್, ಕಿಚ್ಚ ಕ್ರಿಯೇಷನ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದೆ. ಸ್ಯಾಂಡಲ್‌ವುಡ್ ಸ್ಟಾರ್ ಕಿಚ್ಚ ಸುದೀಪ್ ಅವರು ವೃತ್ತಿಜೀವನದಲ್ಲಿ ಅತಿಹೆಚ್ಚಿನ ಬಜೆಟ್ (ನೂರು ಕೋಟಿ) ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವಿದು.ಜೀ ಸ್ಟುಡಿಯೋಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಶಾಲಿನಿ, ಜಾಕ್ ಮಂಜು ಮತ್ತು ಅಲಂಕಾರ್ ಪಾಂಡಿಯನ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಚಿತ್ರಕ್ಕೆ ಛಾಯಾಗ್ರಹಣ ಮತ್ತು ಸಂಕಲನವನ್ನು ಕ್ರಮವಾಗಿ ವಿಲಿಯಂ ಡೇವಿಡ್ ಮತ್ತು ಆಶಿಕ್ ಕುಸುಗೊಳ್ಳಿ ನಿರ್ವಹಿಸಿದ್ದಾರೆ. ಬಿ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಚಿತ್ರ ಅತಿಶೀಘ್ರದಲ್ಲೇ ಜನರ ಮುಂದೆ ಬರುವ ನಿರೀಕ್ಷೆ ಇದೆ.

ಅಲ್ಲು ಅರ್ಜುನ್ ನಟನೆಯ 'ಪುಷ್ಪ-2'
2021ರ ಭಾರತೀಯ ಸಿನಿಮಾ ರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಹೆಗ್ಗಳಿಕೆ 'ಪುಷ್ಪ-1'ಚಿತ್ರಕ್ಕೆ ಸಲ್ಲುತ್ತದೆ. ಚಿತ್ರ ಸುಮಾರು 350 ಕೋಟಿ ಗಳಿಕೆ ಕಂಡಿದೆ. ಇದರಲ್ಲಿ ಹಿಂದಿ ಆವೃತ್ತಿ ಸುಮಾರು 90 ಕೋಟಿ ಗಳಿಕೆ ಮಾಡಿದೆ. ಮಾಸ್ ಎಂಟರ್ಟೈನ್ಮೆಂಟ್ ಹೊಂದಿರುವ ಪುಷ್ಪ ಚಿತ್ರದ ಗಳಿಕೆಯಿಂದ ಬಾಲಿವುಡ್ ದಂಗಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಸಿನಿಮಾಗಳು ಸೌತ್ ಸಿನಿಮಾಗಳು ನೇರವಾಗಿ ಹಿಂದಿ ಬೆಲ್ಟ್ ನಲ್ಲಿ ಬಿಡುಗಡೆ ಮಾಡಲು ಪುಷ್ಪ ಚಿತ್ರದ ಯಶಸ್ಸು ಸಹಕಾರಿಯಾಗಿದೆ. ಪುಷ್ಪದ ಮೊದಲನೇ ಭಾಗದ ಭಾರಿ ಯಶಸ್ವಿನಿಂದ ಉತ್ತೇಜನಗೊಂಡಿರುವ ನಿರ್ಮಾಪಕರು 'ಪುಷ್ಪ-2' ಚಿತ್ರವನ್ನು ಭಾರಿ ಸ್ಕೇಲ್ ನಲ್ಲಿ ಹಿಂದಿ ಬೆಲ್ಟ್ ನಲ್ಲಿ ಬಿಡುಗಡೆ ಮಾಡಲು ಚಿತ್ರೀಕರಣದ ಸಮಯದಲ್ಲಿ ಪ್ಲಾನಿಂಗ್ ಮಾಡುತ್ತಿದ್ದಾರೆ.


Click it and Unblock the Notifications











