ಯೂಟ್ಯೂಬ್‌ನಿಂದ ಅತಿ ಹೆಚ್ಚು ಹಣ ಗಳಿಸುತ್ತಿರುವ ಯೂಟ್ಯೂಬರ್ಸ್‌ಗಳ ಪಟ್ಟಿ
ವಿಶ್ವದಲ್ಲೇ ಅತಿ ಹೆಚ್ಚು ಸರ್ಚ್ ಆಗುವ ಎರಡನೇ ಜಾಲತಾಣ ಯೂಟ್ಯೂಬ್. ಅದರಲ್ಲಿಯೂ ಇತರೆ ಸಾಮಾಜಿಕ ಜಾಲತಾಣಗಳಿಗಿಂತಲೂ ದುಪ್ಪಟ್ಟು ವೇಗದಲ್ಲಿ ಯೂಟ್ಯೂಬ್ ತನ್ನ ಬಳಕೆದಾರರನ್ನು ವಿಸ್ತರಿಸಿಕೊಳ್ಳುತ್ತಾ ಸಾಗಿದೆ.
ಯೂಟ್ಯೂಬ್ ಅನ್ನು ಮನರಂಜನೆ, ಜ್ಞಾನ ವಿಸ್ತರಣೆ, ಶಿಕ್ಷಣ, ಕಲಿಕೆ ಇನ್ನೂ ಹಲವು ಕಾರಣಗಳಿಗಾಗಿ ಬಳಸಲಾಗುತ್ತಿದೆ. ಇದರ ಜೊತೆಗೆ ಯುಟ್ಯೂಬ್ ಅನ್ನು ಹಣ ಗಳಿಕೆಗಾಗಿಯೂ ಬಳಸಲಾಗುತ್ತದೆ. ವಿಶ್ವದಾದ್ಯಂತ ಕೋಟ್ಯಂತರ ಮಂದಿ ಯೂಟ್ಯೂಬ್ ಬಳಲಿ ಕೋಟ್ಯಂತರ ಹಣ ಗಳಿಸುತ್ತಾರೆ. ಭಾರತದಲ್ಲಿಯೂ ಅಷ್ಟೇ ಯೂಟ್ಯೂಬ್‌ನಿಂದಲೇ ಪ್ರತಿ ತಿಂಗಳ ಲಕ್ಷಾಂತರ ಹಣ ಗಳಿಸುವವರಿದ್ದಾರೆ.
ಯೂಟ್ಯೂಬ್‌ನಿಂದಾಗಿ ವಿಶ್ವದಲ್ಲಿ ಅತಿ ಹೆಚ್ಚು ಹಣ ಗಳಿಸುತ್ತಿರುವವರ ಪಟ್ಟಿ, ಎಷ್ಟು ಹಣಗಳಿಸುತ್ತಿದ್ದಾರೆ ಎಂಬ ಮಾಹಿತಿ ಈ ಲೇಖದಲ್ಲಿದೆ. ಬೇರೆ ಜಾಹೀರಾತುಗಳು, ಶೋಗಳಿಂದ ಬರುವ ಹಣ, ಬ್ರ್ಯಾಂಡಿಂಗ್‌ನಿಂದ ಬರುವ ಮೊತ್ತವನ್ನು ಬಿಟ್ಟು ಕೇವಲ ಯೂಟ್ಯೂಬ್‌ನಿಂದ ಗಳಿಸುವ ಮೊತ್ತವನ್ನಷ್ಟೆ ಇಲ್ಲಿ ನೀಡಲಾಗಿದೆ.

ಹತ್ತನೇ ಸ್ಥಾನದಲ್ಲಿ ಮೇಕಪ್ ಕಲಾವಿದ
ಹತ್ತನೇ ಸ್ಥಾನದಲ್ಲಿರುವುದು ಮೇಕಪ್ ಕಲಾವಿದ ಜೇಮ್ಸ್ ಚಾರ್ಲಸ್. ಈತನ ಮೇಕಪ್ ಟ್ಯೂಟರ್ ವಿಡಿಯೋಗಳು ವಿಶ್ವದಾದ್ಯಂತ ವೈರಲ್ ಆಗುತ್ತವೆ. ಕಳೆದ ವರ್ಷ ಈತ ಪೋಸ್ಟ್ ಮಾಡಿದ ಪ್ರತಿವಿಡಿಯೋದಿಂದ 58 ಲಕ್ಷ ರೂ. ಗಳಿಸಿದ್ದಾನೆ. ಈತನ ಮತ್ತೊಂದು ದಾಖಲೆಯೆಂದರೆ ಒಂದೇ ದಿನದಲ್ಲಿ 10 ಲಕ್ಷಕ್ಕೂ ಹೆಚ್ಚು ಸಬ್‌ಸ್ಕ್ರೈಬರ್ ಅನ್ನು ಕಳೆದುಕೊಂಡಿದ್ದಾನೆ.

ಪುಟ್ಟ ಹುಡುಗಿ ಗೇಬ್ರಿಯಲ್
ಒಂಬತ್ತನೇ ಸ್ಥಾನದಲ್ಲಿರುವುದು ಐದು ವರ್ಷ ವಯಸ್ಸಿನ ಗೇಬ್ರಿಯಲ್ ಳ 'ಟಾಯ್ಸ್ ಆಂಡ್ ಲಿಟಲ್ ಗ್ಯಾಬಿ' ಯೂಟ್ಯೂಬ್ ಚಾನೆಲ್. ಗ್ಯಾಬ್ರಿಯಲ್‌ಳ ತಾಯಿ ಮಾಡಿದ ಈ ಚಾನೆಲ್‌ನಿಂದ ಕಳೆದ ವರ್ಷ ಪೋಸ್ಟ್ ಆದ ಒಂದು ವಿಡಿಯೋಗೆ 64 ಲಕ್ಷ ರೂ ಸಂದಾಯ ಮಾಡಿದೆ ಯೂಟ್ಯೂಬ್. ಚಾನೆಲ್‌ನಲ್ಲಿ ಇಬ್ಬರು ಪುಟ್ಟ ಮಕ್ಕಳು ಬೊಂಬೆಗಳೊಂದಿಗೆ ಆಡುತ್ತಿರುತ್ತಾರೆ. ಅದನ್ನು ಕೋಟ್ಯಂತರ ಮಂದಿ ವೀಕ್ಷಿಸುತ್ತಾರೆ.

ಜಾದೂಗಾರ ಕಾಲೆನ್ಸ್ ಕೀ ಗೆ ಎಂಟನೇ ಸ್ಥಾನ
ಎಂಟನೇ ಸ್ಥಾನದಲ್ಲಿರುವುದು ಕಾಲೆನ್ಸ್ ಕೀ. ಈ ಸುಂದರ ಯುವಕ ಕಳೆದ ವರ್ಷ ಪೋಸ್ಟ್ ಮಾಡಿದ ತನ್ನ ಪ್ರತಿ ವಿಡಿಯೋದಿಂದ ಸರಾಸರಿ 88 ಲಕ್ಷಕ್ಕೂ ಹೆಚ್ಚು ಹಣ ಗಳಿಸಿದ್ದಾನೆ. ಅಮೆರಿಕ ಗಾಟ್ ಟ್ಯಾಲೆಂಟ್ ಶೋ ನಲ್ಲಿಯೂ ಭಾಗವಹಿಸಿದ್ದ ಈತ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮ್ಯಾಜಿಕ್ ಟ್ರಿಕ್, ತಮಾಷೆಯ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿರುತ್ತಾರೆ.

ಏಳನೇ ಸ್ಥಾನದಲ್ಲಿ ಪುಟ್ಟ ಹುಡುಗಿ ಡಯಾನಾ
ಏಳನೇ ಸ್ಥಾನದಲ್ಲಿರುವುದು 'ಕಿಡ್ಸ್ ಡಯಾನಾ ಶೋ' ಹೆಸರಿನ ಯೂಟ್ಯೂಬ್ ಚಾನೆಲ್. ಇಲ್ಲಿಯೂ ಸಹ ಐದು ವರ್ಷದ ತುಂಬ ಸಣ್ಣ ಹುಡುಗಿಯೊಬ್ಬಳು ಪ್ರತಿ ವಿಡಿಯೋಗೆ 94 ಲಕ್ಷ ಹಣ ಗಳಿಸುತ್ತಿದ್ದಾಳೆ. ಉಕ್ರೇನಿಯಾದ ಡಯಾನಾ ಹಾಗೂ ಆಕೆಯ ತಮ್ಮ ಆಟವಾಡುವ, ಮಾತನಾಡುವ, ಕತೆ ಹೇಳುವ ವಿಡಿಯೋಗಳು ಈ ಚಾನೆಲ್‌ನಿಂದ ಪೋಸ್ಟ್ ಆಗುತ್ತವೆ.

ಕಮಿಡಿಯನ್ ಆಗಿದ್ದ ಲೈಸಾ ಕೋಶಿ ಈಗ ಸೆಲೆಬ್ರಿಟಿ
ಆರನೇ ಸ್ಥಾನದಲ್ಲಿರುವುದು ಯುವತಿ ಲೈಸಾ ಕೋಶಿ. ಕಮಿಡಿಯನ್ ಆಗಿದ್ದ ಈಕೆ, ಯೂಟ್ಯೂಬ್‌ಗೆ ಬಂದ ನಂತರ ಸ್ಟಾರ್ ಆಗಿಬಿಟ್ಟಳು. ಪ್ರತಿವಿಡಿಯೋದಿಂದ ಈಕೆ 96 ಲಕ್ಷಕ್ಕೂ ಹೆಚ್ಚು ಹಣ ಗಳಿಸುತ್ತಾಳೆ. ಹಲವು ಟಿವಿ ಶೋ ಗಳಲ್ಲಿ ಭಾಗವಹಿಸಿರುವ ಈಕೆ ಸೆಲೆಬ್ರಿಟಿ ಸಹ ಆಗಿದ್ದಾಳೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲೂ ಈಕೆ ಸೆಲೆಬ್ರಿಟಿ, 'ಲೈಜಾ ಆನ್ ಡಿಮಾಂಡ್' ಹೆಸರಿನ ಶೋ ಸಹ ಮಾಡುತ್ತಿದ್ದಾಳೆ.

ಐದನೇ ಸ್ಥಾನದಲ್ಲಿ ಲೇಲೆ ಪಾನ್ಸ್
ಐದನೇ ಸ್ಥಾನದಲ್ಲಿರುವುದು ಲೇಲೇ ಪಾನ್ಸ್. ಈಕೆ ಅಪ್‌ಲೋಡ್ ಮಾಡುವ ಪ್ರತಿ ವಿಡಿಯೋಗೆ 1.10 ಕೋಟಿ ಸಂದಾಯ ಮಾಡಿದೆ ಯೂಟ್ಯೂಬ್. ಲೇಲೆ ಪಾನ್ಸ್ ಹಲವು ಥರಹದ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಾರೆ. ಕಾಮಿಡಿ, ತಮ್ಮ ವೈಯಕ್ತಿಕ ಸಂಕಷ್ಟಗಳು, ದೈನದಿಂದಿನ ದಿನಚರಿ ತೀರಾ ಸಾಮಾನ್ಯ ಎನ್ನುವಂತಹಾ ವಿಷಯಗಳನ್ನೇ ಹಾಕುತ್ತಾರೆ. ಆದರೂ ಇವರ ವಿಡಿಯೋಗಳು ಸಖತ್ ವೈರಲ್ ಆಗುತ್ತವೆ.

ನಾಲ್ಕನೇ ಸ್ಥಾನದಲ್ಲಿ ಕಾರ್ಟೂನಿಸ್ಟ್
ನಾಲ್ಕನೇ ಸ್ಥಾನದಲ್ಲಿರುವುದು 'ದಿ ಆಡ್ ಒನ್ಸ್ ಔಟ್'ಯೂಟ್ಯೂಬ್ ಚಾಲೆನ್. ಈ ಚಾನೆಲ್‌ನಲ್ಲಿ ಕಾರ್ಟೂನ್ ರಚಿಸುವ ವಿಡಿಯೋಗಳನ್ನು ಪ್ರಕಟಿಸಲಾಗುತ್ತದೆ. ಈ ಚಾನೆಲ್‌ನಿಂದ ಅಪ್‌ಲೋಡ್ ಮಾಡಲಾಗುವ ಪ್ರತಿ ವಿಡಿಯೋಗೆ 1.14 ಕೋಟಿ ನೀಡಿದೆ ಯೂಟ್ಯೂಬ್.

ಪುಟ್ಟ ಬಾಲಕಿ ನಾಸ್ಟಿಯಾಗೆ ಮೂರನೇ ಸ್ಥಾನ
ಅತಿ ಹೆಚ್ಚು ಹಣ ಗಳಿಸುವ ಮೂರನೇ ಯೂಟ್ಯೂಬರ್ 5 ವರ್ಷ ವಯಸ್ಸಿನ ನಾಸ್ಟಿಯಾ. ಹೌದು ಈ ರಷ್ಯನ್-ಅಮೆರಿಕನ್ ಪೋರಿಯ 'ನಾಸ್ಟಿಯಾ ವ್ಲಾಗ್' ಚಾನೆಲ್‌ನಿಂದ ಕಳೆದ ವರ್ಷ ಅಪ್‌ಲೋಡ್ ಆದ ಪ್ರತಿವಿಡಿಯೋಗೆ 1.8 ಕೋಟಿ ಹಣ ನೀಡಿದೆ ಯೂಟ್ಯೂಬ್. ಅಪ್ಪನ ಜೊತೆ ಸೇರಿಕೊಂಡು ಹಲವಾರು ವಿಡಿಯೋಗಳನ್ನು ಈ ಪುಟ್ಟ ಪೋರಿ ಯೂಟ್ಯೂಬ್‌ಗೆ ಹಾಕಿದ್ದಾಳೆ.

ಐದು ಮಂದಿ ಯುವಕರ ಗುಂಪು ಎರಡನೇ ಸ್ಥಾನದಲ್ಲಿ
ಅತಿ ಹೆಚ್ಚು ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನ 'ಡ್ಯೂಡ್ ಪರ್ಫೆಕ್ಟ್' ತಂಡದ್ದು. ಈ ತಂಡ ಕಳೆದ ವರ್ಷ ಪೋಸ್ಟ್ ಮಾಡಿರುವ ಪ್ರತಿ ವಿಡಿಯೋಗೆ ಯೂಟ್ಯೂಬ್‌ನವರು 2.19 ಕೋಟಿ ರೂ ಹಣ ನೀಡಿದ್ದಾರೆ. ಐದು ಜನರ ತಂಡ ಈ ಚಾನೆಲ್ ಅನ್ನು ನಡೆಸುತ್ತಿದ್ದು, ಇವರಿಗೆ ವಿಶ್ವದಾದ್ಯಂತ 5 ಕೋಟಿಗೂ ಹೆಚ್ಚು ಮಂದಿ ಸಬ್‌ಸ್ಕ್ರೈಬರ್‌ಗಳಿದ್ದಾರೆ.

ವಿಶ್ವದಲ್ಲೇ ಅತಿ ಹೆಚ್ಚು ಹಣ ಗಳಿಸುವುದು ಇಬ್ಬರು ಪುಟ್ಟ ಬಾಲಕರು
ಕಳೆದ ವರ್ಷ ಯೂಟ್ಯೂಬ್‌ನಿಂದ ವಿಶ್ವದಲ್ಲೇ ಅತಿ ಹೆಚ್ಚು ಹಣ ಗಳಿಸಿದ್ದು ಇಬ್ಬರು ಸಣ್ಣ ಬಾಲಕರು. ಹೌದು, ವ್ಲಾಡ್ ಆಂಡ್ ನಿಕ್ಕಿ ಹೆಸರಿನ ಯೂಟ್ಯೂಬ್ ಚಾಲೆನ್ ಹೊಂದಿರುವ ಈ ರಷ್ಯಾ ಬಾಲಕರು ಹಂಚಿಕೊಂಡ ಪ್ರತಿ ವಿಡಿಯೋಗೆ 2.20 ಕೋಟಿ ರೂ ಗೂ ಹೆಚ್ಚು ಹಣ ಕೊಟ್ಟಿದೆ ಯೂಟ್ಯೂಬ್. ಈ ಇಬ್ಬರು ಮಕ್ಕಳ ವಯಸ್ಸು 10 ದಾಟಿಲ್ಲ.


Click it and Unblock the Notifications











