ರಾಧಿಕಾ ನನ್ನ ಆದಾಯ, ಸಂಭಾವನೆ ಕೇಳಲ್ಲ, ಆಕೆ ಕೇಳೋದು ಒಂದೇ ಪ್ರಶ್ನೆ
ರಾಕಿಂಗ್ ಸ್ಟಾರ್ ಯಶ್ ಕನಸುಗಳೇ ದೊಡ್ಡವು. ಕಂಡ ಕನಸುಗಳನ್ನು ನನಸು ಮಾಡಿಕೊಳ್ಳಬೇಕು ಎನ್ನುವ ತುಡಿತ ಅವರಲ್ಲಿ ಸದಾ ಇರುತ್ತದೆ. ಮುಂದಿನ 5 ವರ್ಷಗಳಲ್ಲಿ ನಾನು ಯಾವ ಹಂತಕ್ಕೆ ಏರಿರಬೇಕು ಎಂದು ಈಗಿನಿಂದಲೇ ಯೋಚಿಸುತ್ತಾರೆ. ಅದಕ್ಕೆ ಏನು ಮಾಡಬೇಕೋ ಆ ದಿಶೆಯಲ್ಲಿ ಮುಂದುವರೆಯುತ್ತಾರೆ.
'KGF' ಸರಣಿ ಸಿನಿಮಾಗಳಿಂದ ದಿಢೀರ್ ಜನಪ್ರಿಯತೆ ಹೆಚ್ಚಿಸಿಕೊಂಡ ಯಶ್ ಬಳಿಕ ಸೈಲೆಂಟ್ ಆಗಿಬಿಟ್ಟರು. ನಂತರ ರಾಕಿಂಗ್ ಸ್ಟಾರ್ ನಟಿಸಿದ ಯಾವುದೇ ಚಿತ್ರ ತೆರೆಗೆ ಬರಲಿಲ್ಲ. 'ಟಾಕ್ಸಿಕ್' ಸಿನಿಮಾ ಯಾವಾಗ ರಿಲೀಸ್ ಎನ್ನುವ ಬಗ್ಗೆ ಖುದ್ದು ಯಶ್‌ಗೂ ಅಂದಾಜಿಲ್ಲ. ಇದನ್ನೆಲ್ಲಾ ಪಕ್ಕಕ್ಕಿಟ್ಟರೆ ಯಶ್ ಎರಡ್ಮೂರು ಜಾಹೀರಾತುಗಳಲ್ಲಿ ಮಿಂಚಿದರು. ಅದಕ್ಕಾಗಿ ಭರ್ಜರಿ ಸಂಭಾವನೆಯೇ ಸಿಕ್ಕಿತ್ತು.

'ಟಾಕ್ಸಿಕ್' ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ಮಾಪಕರಾಗಿ ಹಣ ಹೂಡುತ್ತಿದ್ದಾರೆ. ಮಾನ್‌ಸ್ಟರ್ ಮೈಂಡ್ಸ್ ಎನ್ನುವ ಸಿನಿಮಾ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದ್ದಾರೆ. ಇದೇ ಸಂಸ್ಥೆಯಲ್ಲಿ 'ರಾಮಾಯಣ' ಚಿತ್ರವನ್ನು ನಿರ್ಮಿಸಲು ನಿಮಿತ್ ಮಲ್ಹೋತ್ರ ಜೊತೆ ಕೈ ಜೋಡಿಸಿದ್ದಾರೆ. ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ನಟಿಸೋಕು ಒಪ್ಪಿದ್ದಾರೆ. 'ರಾಮಾಯಣ' ಚಿತ್ರವನ್ನು ನಿರ್ಮಿಸಿ ನಟಿಸುವ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ.
ಯಶ್ ಮೊದಲಿನಿಂದಲೂ ತಮ್ಮ ಸಿನಿಮಾಗಳ ವಿಚಾರದಲ್ಲಿ ಬಹಳ ಚೂಸಿ ಆಗಿದ್ದಾರೆ. ನಿರ್ದೇಶಕರು ಬಂದು ಕಥೆ ಹೇಳಿದ ತಕ್ಷಣ ಒಪ್ಪಿ ಪ್ರತಿದಿನ ಚಿತ್ರೀಕರಣಕ್ಕೆ ಹೋಗಿ ಬರುವ ಆಸಾಮಿ ಅವರಲ್ಲ. ಒಂದು ಚಿತ್ರ ಉತ್ತಮವಾಗಿ ಮೂಡಿ ಬರಲು ಏನೆಲ್ಲಾ ಬೇಕೋ ಅದೆಲ್ಲವನ್ನು ಹೊಂದಿಸುವ ಪ್ರಯತ್ನ ಮಾಡುತ್ತಾರೆ. ಕಥೆಯ ವಿಚಾರದಲ್ಲಿ ಬಹಳ ಕೇರ್ ತೆಗೆದುಕೊಳ್ಳುತ್ತಾರೆ. 'KGF' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆಲ್ಲಲು ಯಶ್ ಕಾರಣ ಎಂದು ನಿರ್ಮಾಪಕ ವಿಜಯ್ ಕಿರಗಂದೂರ್ ಹಾಗೂ ಪ್ರಶಾಂತ್ ನೀಲ್ ಸಹ ಹೇಳಿದ್ದಾರೆ.

'KGF' ಎರಡು ಭಾಗಗಳಲ್ಲಿ ಕೆಲ ಸನ್ನಿವೇಶಗಳನ್ನು, ಡೈಲಾಗ್‌ಗಳಿಗೆ ಯಶ್‌ಗೆ ಪ್ರಶಾಂತ್ ನೀಲ್ ಕ್ರೆಡಿಟ್ ಕೊಟ್ಟಿದ್ದಾರೆ. ಇನ್ನು 'ಟಾಕ್ಸಿಕ್' ಚಿತ್ರದ ವಿಚಾರದಲ್ಲೂ ಇದೇ ರೀತಿ ಕೇರ್ ತೆಗೆದುಕೊಳ್ಳುತ್ತಿದ್ದಾರೆ. ಜೊತೆಗೆ ನಿರ್ಮಾಪಕರಲ್ಲಿ ಒಬ್ಬರಾಗಿರುವುದರಿಂದ ಜವಾಬ್ದಾರಿ ಹೆಚ್ಚಾಗಿದೆ. ನೂರಾರು ಕೋಟಿ ಸುರಿದು ಮಾಡುತ್ತಿರುವ 'ರಾಮಾಯಣ' ಚಿತ್ರದ ಬಗ್ಗೆಯೂ ಯಶ್ ಬಹಳ ತಲೆಕೆಡಿಸಿಕೊಂಡಿದ್ದಾರೆ.
ಸಿನಿಮಾ ಕೆಲಸಗಳಲ್ಲಿ ಇಷ್ಟೆಲ್ಲಾ ಬ್ಯುಸಿಯಾಗಿರುವ ಯಶ್, ಫ್ಯಾಮಿಲಿಗೂ ಟೈಮ್ ಕೊಡುತ್ತಾರೆ. ಯಾವುದೇ ಮೀಟಿಂಗ್, ಶೂಟಿಂಗ್ ಎಂದು ಮನೆಯಿಂದ ಹೊರಗೆ ಇದ್ದರೂ ಆಗಾಗ್ಗೆ ಮನೆಗೆ ಭೇಟಿ ಕೊಟ್ಟು ಮಡದಿ ಮಕ್ಕಳ ಜೊತೆ ಕಾಲ ಕಳೆಯುತ್ತಾರೆ. ಫ್ಯಾಮಿಲಿ ಜೊತೆ ಹಬ್ಬ ಹರಿದಿನಗಳಲ್ಲಿ ಸಂಭ್ರಮಿಸುತ್ತಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ರಾಧಿಕಾ ಪಂಡಿತ್ ಆಗಾಗ್ಗೆ ಹಂಚಿಕೊಂಡಿದ್ದಾರೆ.
ಸದ್ಯ 'ದಿ ಹಾಲಿವುಡ್ ರಿಪೋರ್ಟರ್' ಮ್ಯಾಗಜೀನ್ ಸಂದರ್ಶನದಲ್ಲಿ ಭಾಗಿ ಆಗಿರುವುದು ಗೊತ್ತೇಯಿದೆ. ಅನುಪಮಾ ಚೋಪ್ರಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ತಮ್ಮ ಮಡದಿ ರಾಧಿಕಾ ಸಹಕಾರದ ಬಗ್ಗೆಯೂ ಯಶ್ ಮಾತನಾಡಿದ್ದಾರೆ. "ನನಗೆ ರಾಧಿಕಾ ರೀತಿಯ ಪತ್ನಿ ಸಿಕ್ಕಿದ್ದು ನನ್ನ ಅದೃಷ್ಟ. ಆಕೆ ಸದಾ ನನ್ನ ಬೆಂಬಲಕ್ಕೆ ನಿಲ್ಲುತ್ತಾಳೆ. ಕೆಲ ವರ್ಷಗಳಿಂದ ನನ್ನ ಜೀವನ ಬಹಳ ಕ್ರೇಜಿಯಾಗಿದೆ. 'KGF' ಚಿತ್ರಗಳಿಗೆ ಹೆಚ್ಚು ಸಮಯ ವ್ಯಯಿಸಿದೆ. ರಾಧಿಕಾ ನನ್ನ ಬಲ. ಆಕೆ ಯಾವಾಗಲೂ ನನಗೆ ಬೆಂಬಲವಾಗಿರುತ್ತಾಳೆ" ಎಂದು ಯಶ್ ಹೇಳಿದ್ದಾರೆ.
"ರಾಧಿಕಾ ನನ್ನನ್ನು ಚೆನ್ನಾಗಿ ಅರಿತ್ತಿದ್ದಾಳೆ. ನಾವಿಬ್ಬರು ಒಟ್ಟೊಟ್ಟಿಗೆ ಬೆಳೆದವರು. ಅದು ಸರಿಯಾಗಿಯಾಗಿದೆ. ಆಕೆ ನನಗೆ ಮೊದಲು ಸ್ನೇಹಿತೆ. ಬಳಿಕ ಪತ್ನಿ ಆಗಿದ್ದು. ಲೈಫ್ ಪಾರ್ಟ್ನರ್ ಆಗಿ ನನಗೆ ಏನು ಇಷ್ಟ, ಯಾವುದು ಸಂತೋಷ ಕೊಡುತ್ತದೆ ಎನ್ನುವುದು ಅವಳಿಗೆ ಗೊತ್ತು. ನೀನು ಎಷ್ಟು ಹಣ ಸಂಪಾದಿಸಿದ್ದೀಯಾ> ಈ ಚಿತ್ರದಿಂದ ಎಷ್ಟು ಹಣ ಬರುತ್ತದೆ ಎಂದು ಯಾವತ್ತು ಆಕೆ ಕೇಳುವುದಿಲ್ಲ. ನನ್ನ ಆಯ್ಕೆ ಸರೀನಾ? ತಪ್ಪಾ? ಎಂದು ಸಹ ಕೇಳುವುದಿಲ್ಲ. ಆಕೆ ಕೇಳುವುದು ನೀವು ಖುಷಿಯಾಗಿದ್ದೀರಾ? ಅಂತ ಮಾತ್ರ" ಎಂದು ಯಶ್ ತಿಳಿಸಿದ್ದಾರೆ.
"ಆಕೆ ಯಾವಾಗಲೂ ನನ್ನ ಅಟೆಂಕ್ಷನ್ ಹಾಗೂ ಟೈಮ್ ಮಾತ್ರ ಕೇಳುತ್ತಾಳೆ. ಅದೇ ನನಗೆ ಬಹಳ ಕಷ್ಟ. ಆದರೆ ಅದು ನನ್ನ ಜವಾಬ್ದಾರಿ. ನನ್ನ ಗುರಿ ಸಾಧನೆಗೆ ನಾನು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧ. ಅದಕ್ಕೆ ನನ್ನ ಫ್ಯಾಮಿಲಿ ಬೆಂಬಲವಿದೆ. ರಾಧಿಕಾ ಕೇಳುವುದು ಎಷ್ಟು ದಿನ ಶೂಟಿಂಗ್, ಯಾವಾಗ ಮತ್ತೆ ಸಿಗ್ತೀರಾ? ಈ ಪ್ರಾಜೆಕ್ಟ್ ಎಷ್ಟು ದಿನ ಅಂತ ಕೇಳ್ತಾರೆ. ಹಾಗಾಗಿ ನಾನು ನಿಜಕ್ಕೂ ಅದೃಷ್ಟವಂತ" ಎಂದು ಯಶ್ ವಿವರಿಸಿದ್ದಾರೆ.


Click it and Unblock the Notifications











