"ಅನಾಥಾಶ್ರಮಕ್ಕೆ ದವಸ, ಧಾನ್ಯ ತಮ್ಮ ದುಡ್ಡಲ್ಲಿ ಕೊಡ್ಬೇಕು, ಅಭಿಮಾನಿಗಳ ದುಡ್ಡಲ್ಲಿ ಅಲ್ಲ": ಉಮಾಪತಿ
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ದೇಶ್ಯಾದ್ಯಂತ ಈ ಪ್ರಕರಣ ಭಾರೀ ಸದ್ದು ಮಾಡ್ತಿದೆ. ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದ ಕಾರಣಕ್ಕೆ ರೇಣುಕಾಸ್ವಾಮಿ ಎಂಬುವವರನ್ನು ಅಪಹರಿಸಿ, ಥಳಿಸಿದ್ದು ಈ ವೇಳೆ ಆತನ ಜೀವವೇ ಹೋಗಿದೆ. ಈ ಪ್ರಕರಣದಲ್ಲಿ ದರ್ಶನ್ ಎ2 ಆಗಿದ್ದಾರೆ.
ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿ ಬರುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ ಮಾದರಿಯಾಗಿ ಇರಬೇಕು. ಹೀಗೆಲ್ಲಾ ಮಾಡೋದು ಎಷ್ಟು ಸರಿ ಎಂದು ಬೇಸರ ವ್ಯಕ್ತವಾಗುತ್ತಿದೆ. ಕೆಲ ಅಭಿಮಾನಿಗಳು ಮಾತ್ರ ನೆಚ್ಚಿನ ನಟನ ಬೆಂಬಲಕ್ಕೆ ನಿಂತಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಳಿಕ ದರ್ಶನ್ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬರ್ತಿದೆ.

ದರ್ಶನ್ ಬಿಹೇವಿಯರ್ ಬಗ್ಗೆ ಸಾಕಷ್ಟು ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದರಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮುಂದಿದ್ದಾರೆ. ಹಲವು ಮಾಧ್ಯಮಗಳಲ್ಲಿ ದರ್ಶನ್ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಹಾಗೂ ಅಭಿಮಾನಿಗಳ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ನಟ ದರ್ಶನ್ ಕೆಲ ವರ್ಷಗಳಿಂದ ಅದ್ಧೂರಿ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ತಮ್ಮ ಹುಟ್ಟುಹಬ್ಬಕ್ಕೆ ಕೇಕ್, ಹೂ, ಹಾರ, ಉಡುಗೊರೆ ತರಬೇಡಿ. ದವಸ ಧಾನ್ಯ ತಂದು ಕೊಡಿ. ಅದನ್ನು ಅವಶ್ಯಕತೆ ಇರುವವವರಗೆ ತಲುಪಿಸುತ್ತೇನೆ ಎಂದಿದ್ದಾರೆ. ಇದನ್ನು ಅಭಿಮಾನಿಗಳು ಪಾಲಿಸಿಕೊಂಡು ಬರುತ್ತಿದ್ದಾರೆ. ದರ್ಶನ್ ಅರ್ಥಪೂರ್ಣ ಕೆಲಸಕ್ಕೆ ಮೆಚ್ಚುಗೆ ಸಹ ವ್ಯಕ್ತವಾಗಿತ್ತು. ಈ ಬಗ್ಗೆ ಉಮಾಪತಿ ಶ್ರೀನಿವಾಸ್ ವ್ಯಂಗ್ಯವಾಡಿದ್ದಾರೆ. ಕರ್ನಾಟಕ ಟಿವಿ ಯೂಟ್ಯೂಬ್ ಚಾನಲ್‌ಗೆ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

"ಮನುಷ್ಯ ಎಂದಮೇಲೆ ಒಳ್ಳೆಯದು, ಕೆಟ್ಟದು ಎರಡೂ ಇರುತ್ತದೆ. ನಾವು ಯಾವುದು ಆಯ್ಕೆ ಮಾಡಿಕೊಳ್ತೀವಿ ಎನ್ನುವುದು ಮುಖ್ಯ. ಸಮಸ್ಯೆಗಳು ಬಂದೇ ಬರುತ್ತವೆ. ಅದನ್ನು ಹ್ಯಾಂಡಲ್ ಮಾಡುವುದು ಗೊತ್ತಿರಬೇಕು. ಹುಟ್ಟುಹಬ್ಬಕ್ಕೆ ಕೇಕ್, ಹಾರ ಬೇಡ ದವಸ ಧಾನ್ಯ ತಂದು ಕೊಡಿ ಎಂದು ಹೇಳಿದ ಮಾತ್ರಕ್ಕೆ ದೇವ್ರ? ಎಂದು ಪ್ರಶ್ನಿಸಿದ್ದಾರೆ.
"ದವಸ ಧಾನ್ಯ ಕೊಡಿ ಮತ್ತೊಂದು ಕೊಡಿ ಎನ್ನುವವರು ತಾವೇ ಕೊಡಬೇಕು, ಕೊಟ್ಯಂತರ ರೂಪಾಯಿ ಸಂಪಾದಿಸುವವರು ಅಭಿಮಾನಿಗಳ ಬಳಿ ಯಾಕೆ ತಗೋಬೇಕು. ಅಭಿಮಾನಿಗಳಿಗ ನೋಡ್ರಪ್ಪ ನಿಮ್ ಅಪ್ಪ-ಅಮ್ಮನ ನೋಡ್ಕೊಳಿ ಎಂದು ಹೇಳಬೇಕು. ಅವರ ದುಡ್ಡಲ್ಲಿ ಯಾಕೆ ಅಕ್ಕಿ ಬೇಳೆ ತರಿಸಿಕೊಳ್ಳಬೇಕು, ಇವರ ದುಡ್ಡಲ್ಲಿ ಕೊಡಿಸಬಹುದಲ್ಲ, ಕೋಟ್ಯಂತರ ರೂಪಾಯಿ ಕಾರಲ್ಲಿ ಓಡಾಡುತ್ತಾರೆ. ಇವರ ದುಡ್ಡಲ್ಲಿ ಕೊಡೋಕೆ ಆಗೊಲ್ವಾ?"
"ನಿರ್ಮಾಪಕರ ಬಳಿ ಬಾಚಿ ಕಿತ್ತುಕೊಳ್ತಾರೆ. ಬ್ಯಾಲೆನ್ಸ್ ಸೆಟ್ಲ್ ಮಾಡ್ಲಿಲ್ಲ ಅಂದ್ರೆ ಡಬ್ಬಿಂಗ್ ಮಾಡಲ್ಲ. ಇವರ ದುಡ್ಡು ಹಾಕಿ ದಾನ ಧರ್ಮ ಮಾಡಬೇಕಲ್ವಾ? ಮಾನವೀಯತೆ ಅನ್ನೋದು ನಮ್ಮ ಜೇಬಿನಿಂದ ದಾನ ಧರ್ಮ ಮಾಡಬೇಕು. ಇನ್ನೊಬ್ಬರ ಜೇಬಿನಿಂದ ತೆಗೆದು ದಾನ ಧರ್ಮ ಮಾಡೋದು ವ್ಯರ್ಥ. ಕಾರಣ ಪುಣ್ಯ ಅವರಿಗೆ ಹೋಗಲ್ಲ, ಯಾರ ಜೇಬಿನಿಂದ ತೆಗೆದು ಮಾಡಿರುತ್ತಾರೋ ಅವರಿಗೆ ಹೋಗೋದು" ಎಂದು ಉಮಾಪತಿ ಶ್ರೀನಿವಾಸ್ ಹೇಳಿದ್ದಾರೆ.
ದರ್ಶನ್ ನಟನೆಯ 'ರಾಬರ್ಟ್' ಚಿತ್ರವನ್ನು ಉಮಾಪತಿ ನಿರ್ಮಿಸಿದ್ದರು. ದರ್ಶನ್ ಸ್ನೇಹಿತರ ಬಳಗದಲ್ಲಿ ಗುರ್ತಿಸಿಕೊಂಡಿದ್ದರು. 'ಸಿಂಧೂರ ಲಕ್ಷ್ಮಣ' ಚಿತ್ರ ನಿರ್ಮಾಣಕ್ಕೂ ಮುಂದಾಗಿದ್ದರು. ಅಷ್ಟರಲ್ಲಿ 25 ಕೋಟಿ ರೂ. ಲೋನ್ ವ್ಯವಹಾರದಲ್ಲಿ ಭಿನ್ನಾಭಿಪ್ರಾಯ ಶುರುವಾಗಿ ಇಬ್ಬರೂ ದೂರಾಗಿದ್ದರು.


Click it and Unblock the Notifications











