ಪ್ರೀತಿ ಮಾಡಿದವರೆಲ್ಲಾ ಗೆಲ್ಲಲ್ಲ; ಯಶಸ್ವಿ ಪ್ರೇಮಿ ಎನಿಸಿಕೊಳ್ಳುವುದು ಇವರು ಮಾತ್ರ!
ಪ್ರೀತಿ ಇದೊಂದು ಪವಿತ್ರವಾದ ಸಂಬಂಧ, ಅದ್ಭುತವಾದ ಅನುಭವ. ಪ್ರೀತಿಲಿ ಗೆದ್ದೋರು ಪ್ರೀತಿಯ ಸಂಬಂಧವನ್ನು ಪವಿತ್ರ ಅಂದ್ರೆ, ಪ್ರೀತಿಲಿ ಸೋತೋರು, ಪ್ರೀತಿ ಮಾಡದವರು ಅದನ್ನ ವಿಚಿತ್ರ ಅಂತಾರೆ. ಆದರೆ ಪ್ರತಿಯೊಬ್ಬರ ಜೀವನದಲ್ಲಿ ಒಂದು ಬಾರಿಯಾದರೂ ಪ್ರೀತಿ ಆಗಿರುತ್ತದೆ. ಈಗೀಗ ಟ್ರೆಂಡ್ ಬದಲಾಗಿದೆ. ಒಬ್ಬರ ಮೇಲೆ ಎಷ್ಟೇ ಪ್ರೀತಿ ಇದ್ರೂ ಅವರು ಸಿಗಲ್ಲ ಅಂತಾ ಗೊತ್ತಾದಾಗ ಆ ಸಂಬಂಧಕ್ಕೆ ಕ್ರಶ್ ಎಂದು ಹೆಸರಿಟ್ಟು ಬಿಡುತ್ತಾರೆ. ಅದೇನೆ ಇರಲಿ ಈ ಪ್ರೀತಿ ಯಾಕೆ ಭೂಮಿ ಮೇಲೆ ಎನ್ನುವ ಪ್ರಶ್ನೆಗೆ ಇಲ್ಲಿಯವರೆಗೂ ಉತ್ತರ ಸಿಕ್ಕಿಲ್ಲ.
ಪ್ರೀತಿ ಅಂದ್ರೆ ಸಿನಿಮಾ ಪರದೆ ಮೇಲೆ ತೋರಿಸ್ತಾರಲ್ಲ ಹಾಗಲ್ಲ ಎನ್ನುವ ಮಾತನ್ನು ಅನೇಕರು ಹೇಳ್ತಾನೆ ಇರುತ್ತಾರೆ. ಇರಬಹುದು ಪ್ರೀತಿ, ಪ್ರೀತಿಯಲ್ಲಿನ ಅನುಭವವನ್ನು ಯಾರೂ ಕೂಡ ಚಿತ್ರಿಸಲು ಸಾಧ್ಯವಿಲ್ಲ. ಯಾಕಂದ್ರೆ ಪ್ರೀತಿ ಅಂದ್ರೆನೆ ಹಾಗೆ ಅದಕ್ಕೊಂದು ಅಂದ, ಚಂದ, ರೂಪ, ಮಿತಿ ಯಾವೂದು ಇಲ್ಲ. ಸ್ವಚ್ಛಂಧವಾಗಿ ಅನುಭವಿಸುವ ಅನುಭವವದು.

ಸಿನಿಮಾ ಪ್ರೀತಿ ಬೇರೆ.. ನಿಜ ಜೀವನದ ಪ್ರೀತಿ ಬೇರೆ..
ತಂಪಾದ ಗಾಳಿ, ತುಂತುರು ಮಳೆ, ಎಲ್ಲಿಂದಲೋ ಹಾರಿ ಬಂದ ದುಪ್ಪಟ್ಟವೊಂದು ಆತನ ಮುಖದ ಮೇಲೆ ಬಂದು ಬೀಳುತ್ತದೆ. ಅದನ್ನು ಸರಿಸುತ್ತಿದಂತೆ ಅವನ ಎದುರಲ್ಲಿ ಚಂದದ, ಅವನ ಕಣ್ಣಿಗೆ ಮಾತ್ರ ದೇವತೆ ರೀತಿ ಕಾಣುವ ಹುಡುಗಿ ನಿಂತಿರುತ್ತಾಳೆ. ಲವ್ ಅಟ್ ಫಸ್ಟ್ ಸೈಟ್ ಅಲ್ಲೇ ಆಗಿಬಿಡುತ್ತದೆ. ಇದೊಂದು ಪಕ್ಕಾ ಸಿನಿಮಾ ಸೀನ್. ಸಾಮಾನ್ಯವಾಗಿ ಒಂದು ಕಾಲ ಘಟ್ಟದ ಸಿನಿಮಾಗಳಲ್ಲಿ ಹುಡುಗ ಹುಡುಗಿಯ ಮೊದಲ ಭೇಟಿಯನ್ನು ಹೀಗೆ ತೋರಿಸುತ್ತಿದ್ದರು. ಈ ತಂಪಾದ ಗಾಳಿ, ತುಂತುರು ಮಳೆ ಇದೆಲ್ಲಾ ಪ್ರಕೃತಿಯನ್ನು ಅನುಭವಿಸುವವರಿಗೆ ಖುಷಿ ಕೊಡುವ ಕ್ಷಣಗಳು. ನಿಜ ಜೀವನದಲ್ಲಿ ನಾವು ಪ್ರೀತಿಸೋರು ನಮಗೆ ಸಿಗುವ ಸಮಯದಲ್ಲಿ ಈ ರೀತಿ ಆಗದಿದ್ದರೂ, ನಮ್ಮನ್ನು ಪ್ರೀತಿಸುವವರ ಜೊತೆ ಸಮಯ ಕಳೆದಾಗ ಅದು ಹಿತವೆಸುತ್ತದೆ. ನಾವು ಅತಿಯಾಗಿ ಪ್ರೀತಿಸಿಸುವರನ್ನು ಕಂಡಾಗ, ತಣ್ಣನೆ ಗಾಳಿ ಸೋಕಿದಂತೆ, ತುಂತುರು ಮಳೆ ಮೈ ಸ್ಪರ್ಶಿಸಿದಂತೆ ಹೃದಯ ಹಿಗ್ಗುತ್ತದೆ.

ಗೆದ್ದ ಪ್ರೀತಿಗಳಿಗಿಂತ ಬ್ರೇಕಪ್ ಹೆಚ್ಚು
ಇನ್ನು ಕೆಲವು ಪ್ರೀತಿಗಳು ಅರ್ಧದಲ್ಲೇ ಮುದುಡಿ ಹೋದರೆ, ಇನ್ನರ್ಧ ಪ್ರೀತಿಗಳು ಮದುವೆಯ ಬಾಗಿಲನ್ನು ತಟ್ಟುತ್ತವೆ. ಇತ್ತೀಚಿನ ದಿನಗಳಲ್ಲಿ ಪ್ರೀತಿ ಎನ್ನುವ ಪದಕ್ಕಿಂತ ಬ್ರೇಕ್ ಅಪ್ ಅನ್ನೋ ಪದನೇ ಜಾಸ್ತಿ ಕೇಳುತ್ತೇವೆ. ಕಾರಣ ಹಲವಿರಬಹುದು ಆದರೆ ಪ್ರೀತಿಸುವವರನ್ನು ಕಳೆದುಕೊಂಡಾಗ ಆಗುವ ನೋವು ಕಾಡುತ್ತಿರುತ್ತದೆ. ಸಿನಿಮಾದಲ್ಲಿ ತೋರಿಸಿದಂತೆ ಅಪಾರ್ಥಗಳಿಂದ ಬ್ರೇಕಪ್ ಆಗಿ ಒಂದೇ ಹಾಡಿನಲ್ಲಿ ಇಬ್ಬರ ಜೀವನ ಶೈಲಿ ಬದಲಾದಂತಲ್ಲ ನಿಜ ಜೀವನ. ಅಥವಾ ಬ್ರೇಕಪ್ ಆದ್ರೂ ಕೂಡ ಎಲ್ಲೋ ದೂರದಲ್ಲಿ ಒಬ್ಬರನ್ನೊಬ್ಬರು ಮಿಸ್ ಮಾಡಿಕೊಳ್ಳುತ್ತಾ ಕೊನೆಗೊಂದು ದಿನ ಅನಿರೀಕ್ಷಿತವಾಗಿ ಭೇಟಿಯಾಗಿ ಮತ್ತೆ ಒಂದಾಗುವುದು ನಿಜ ಜೀವನದಲ್ಲಿ ಎಲ್ಲೋ ಬೆರಳೆಣಿಕೆಯ ಘಟನೆಗಳಷ್ಟೇ. ಇನ್ನು ಸಿಗದಿದ್ದರೂ ದೂರದಿಂದಲೇ ಪ್ರೀತಿಸುವ ಕ್ಯಾಟಗರಿ ಬೇರೆ. ಆದರೆ ಬಹುತೇಕ ಸಂಬಂಧಗಳಲ್ಲಿ ಬ್ರೇಕಪ್ ಆದ ಮೇಲೆ ಒಬ್ಬರನೊಬ್ಬರು ದ್ವೇಷಿಸಿಕೊಂಡು, ದಿನಕ್ಕೆ ನೂರು ಸ್ಟೇಟಸ್ ಹಾಕಿಕೊಂಡು, ಗೆಳೆಯರ ಹತ್ತಿರ ಬೈದುಕೊಂಡು ನೆನಪುಗಳನ್ನು ಮರೆಸಿ, ಮತ್ತೆ ಹೊಸ ಬದುಕಿನತ್ತ ಬರುತ್ತಾರೆ.

ಯಶಸ್ವಿ ಪ್ರೇಮಿಗಳು ಯಾರು?
ಪ್ರೀತಿಯಲ್ಲಿ ಗೆದ್ದವರು ಮದುವೆ ಎನ್ನುವ ಸಂಬಂಧದೊಳಗೆ ಒಂದಲ್ಲಾ ಒಂದು ದಿನ ಸಿಲುಕಲೇ ಬೇಕು. ಕಷ್ಟ ಇದ್ರೂ ಮದುವೆಯಾಗಿ ಮೊದಲು ಒಂದು ಬಸ್ ಆಮೇಲೆ ಐದು ಬಸ್ ಮಾಲೀಕನಾಗುತ್ತೇನೆ ಎನ್ನುವ ಭರದ ಕನಸಿನಲ್ಲೇ ಕೆಲವರು ಪೋಷಕರನ್ನು ಎದುರು ಹಾಕಿಕೊಂಡು ಮದುವೆಯಾಗುತ್ತಾರೆ. ಆದರೆ ರಿಯಾಲಿಟಿ ತುಂಬಾನೇ ಬೇರೆ. ಇನ್ನು ಪ್ರೀತಿಸಿದವರನ್ನೇ ಮದುವೆಯಾದಾಗ ಸಿಗುವ ಖುಷಿ ಸಂತೃಪ್ತಿ ಬೇರೆ, ಕೆಲವರಿಗೆ ಏನೋ ಸಾಧಿಸಿದಂತೆ. ಆದರೆ ಪ್ರೀತಿಯ ಜೀವನಕ್ಕೂ ಮದುವೆ ಜೀವನಕ್ಕೂ ತುಂಬಾ ವ್ಯತ್ಯಾಸಗಳು ಕಂಡುಬರುತ್ತದೆ. ಆ ಜೀವನವನ್ನು ಜೀಕಿದ ವ್ಯಕ್ತಿ, ತನ್ನ ಪ್ರೀತಿಗೆ ನೋವಾಗದಂತೆ, ಅವಮಾನವಾಗದಂತೆ ನೋಡಿಕೊಂಡ ವ್ಯಕ್ತಿಯೇ ಯಶಸ್ವಿ ಪ್ರೇಮಿಯಾಗುತ್ತಾನೆ.


Click it and Unblock the Notifications











