ಚಿರುಗೆ ₹3 ಕೋಟಿ ಸಂಭಾವನೆ; ಧರ್ಮಸ್ಥಳದವ್ರು 'ಶ್ರೀಮಂಜುನಾಥ' ಚಿತ್ರ ಬಿಡುಗಡೆಗೆ ಒಪ್ಪಲಿಲ್ಲ; ವಾಸು
ಕೆ. ರಾಘವೇಂದ್ರ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಭಕ್ತಿಪ್ರಧಾನ ಸಿನಿಮಾ 'ಶ್ರೀಮಂಜುನಾಥ'. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಈ ಸಿನಿಮಾ ನಿರ್ಮಾಣವಾಗಿತ್ತು. ಹಂಸಲೇಖ ಸಂಗೀತದ ಚಿತ್ರದ ಹಾಡುಗಳು ಇಂದಿಗೂ ಜನಜನಿತ. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ದೊಡ್ಡದಾಗಿ ಗೆಲ್ಲಲೇ ಇಲ್ಲ.
ಚಿನ್ನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಜಯಶ್ರೀ ದೇವಿ 'ಶ್ರೀಮಂಜುನಾಥ' ಚಿತ್ರ ನಿರ್ಮಾಣ ಮಾಡಿದ್ದರು. ಅವತ್ತಿನ ಕಾಲಕ್ಕೆ ಬರೋಬ್ಬರಿ 15 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿತ್ತು. ಆದರೆ ಚಿತ್ರಕ್ಕೆ ಹಾಕಿದ್ದ ಬಂಡವಾಳ ಮಾತ್ರವೇ ವಾಪಸ್ ಬಂತು. ನಯಾಪೈಸೆ ಲಾಭ ಬರಲಿಲ್ಲ. ಅಂದು ಧರ್ಮಸ್ಥಳದವ್ರು ಸಿನಿಮಾ ಬಿಡುಗಡೆ ಮಾಡಬಾರದು ಎಂದು ಪಟ್ಟು ಹಿಡಿದಿದ್ದರು. ಬಳಿಕ ಸುಸೂತ್ರವಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿತ್ತು.

'ಶ್ರೀಮಂಜುನಾಥ' ಚಿತ್ರಕ್ಕೆ ವಾಸು ಕಾರ್ಯಕಾರಿ ನಿರ್ಮಾಪಕರಾಗಿದ್ದರು. ಚಿತ್ರದ ಎಲ್ಲಾ ಮೇಲ್ವಿಚಾರಣೆ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದರು. ಹೆಗ್ಗದ್ದೆ ಸ್ಟುಡಿಯೋ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ 'ಶ್ರೀಮಂಜುನಾಥ' ಸಿನಿಮಾ ಮೇಕಿಂಗ್ ವಿಚಾರಗಳನ್ನು ವಾಸು ಹಂಚಿಕೊಂಡಿದ್ದಾರೆ. ಆ ಸಿನಿಮಾ ನಿರ್ಮಾಣದ ಸಮಯದಲ್ಲಿ ಎದುರಿಸಿದ ಸಮಸ್ಯೆಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಚಿತ್ರದಲ್ಲಿ ಶಿವನ ಪಾತ್ರದಲ್ಲಿ ತೆಲುಗು ನಟ ಚಿರಂಜೀವಿ ನಟಿಸಿದ್ದರು. ಪಾರ್ವತಿಯಾಗಿ ಮೀನಾ ಮಿಂಚಿದ್ದರು. ಶಿವನ ಭಕ್ತ ಮಂಜುನಾಥನಾಗಿ ಅರ್ಜುನ್ ಸರ್ಜಾ, ಆತನ ಪತ್ನಿ ಕಾತ್ಯಾಯನಿಯಾಗಿ ಸೌಂದರ್ಯ, ಅಂಬಿಕೇಶ್ವರ ಮಹಾರಾಜನಾಗಿ ಅಂಬರೀಶ್ ಹಾಗೂ ಮಹಾರಾಣಿ ಸುಮಲತಾ ದೇವಿ ಆಗಿ ಸುಮಲತಾ ಅಂಬರೀಶ್ ಬಣ್ಣ ಹಚ್ಚಿದ್ದರು.
'ಶ್ರೀಮಂಜುನಾಥ' ಚಿತ್ರಕ್ಕೆ ಹಂಸಲೇಖ ಸಂಗೀತ ಹಾಗೂ ಸಾಹಿತ್ಯ ದೊಡ್ಡ ಬಲ ತುಂಬಿತ್ತು ಎಂದು ವಾಸು ನೆನಪಿಸಿಕೊಂಡಿದ್ದಾರೆ. ಇನ್ನು ಶಿವನ ಪಾತ್ರದಲ್ಲಿ ನಟಿಸಲು ಅವತ್ತಿನ ಕಾಲಕ್ಕೆ ಚಿರಂಜೀವಿ ಅವರಿಗೆ 3 ಕೋಟಿ ರೂ. ಸಂಭಾವನೆ ಕೊಟ್ಟಿದ್ದೆವು. ನಾನೇ ನನ್ನ ಕೈಯಾರೆ ಅಷ್ಟು ಹಣವನ್ನು ಚಿರಂಜೀವಿ ಅವರಿಗೆ ತಲುಪಿಸಿದ್ದೆ. ಕಂಠೀರವ ಸ್ಟುಡಿಯೋದಲ್ಲಿ ಕೈಲಾಸದ ದೊಡ್ಡ ಸೆಟ್ ಹಾಕಿ ಚಿತ್ರೀಕರಣ ನಡೆಸಿದ್ದೆವು ಎಂದು ವಾಸು ಮೆಲುಕು ಹಾಕಿದ್ದಾರೆ.

"ನಾವು ಸಿನಿಮಾ ನಿರ್ಮಾಣ ಮಾಡುವ ಬಗ್ಗೆ ಧರ್ಮಸ್ಥಳದಲ್ಲಿ ಯಾರ ಅನುಮತಿ ಪಡೆದಿರಲಿಲ್ಲ. ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ಪೋಸ್ಟರ್ ಬಿಡುಗಡೆ ಆಗಿತ್ತು. ಮಂಜುನಾಥ ಸ್ವಾಮಿ ಇರುವ ಪೋಸ್ಟರ್ ಅನ್ನು ಕಸದ ಬುಟ್ಟಿ ಬಳಿ ಹುಡುಗರು ಅಂಟಿಸಿಬಿಟ್ಟಿದ್ದರು. ಅದು ಧರ್ಮಸ್ಥಳ ಟ್ರಸ್ಟ್‌ನವರಿಗೆ ಗೊತ್ತಾಗಿ ನಮ್ಮನ್ನು ಕರೆಸಿದ್ದರು. ಅನುಮತಿ ಇಲ್ಲದೇ ಸಿನಿಮಾ ಮಾಡಿದ್ದು ತಪ್ಪು, ಪೋಸ್ಟರ್ ಈ ರೀತಿ ಹಾಕಿದ್ದಾರೆ. ಹಾಗಾಗಿ ನಿಮ್ಮ ಸಿನಿಮಾ ಮೇಲೆ ಆಕ್ಷನ್ ತಗೋತ್ತೀವಿ ಎಂದರು. ಕೊನೆಗೆ ಟ್ರಸ್ಟ್‌ನವರನ್ನು ಕರೆಸಿ, ಬೆಂಗಳೂರಿನಲ್ಲಿ ಚಿತ್ರದ ಪ್ರೀಮಿಯರ್ ಶೋ ತೋರಿಸಿದ್ವಿ. ಸಿನಿಮಾ ನೋಡಿ ಖುಷಿಪಟ್ಟರು. ಒಳ್ಳೆ ಸಿನಿಮಾ ಮಾಡಿದ್ದೀರಾ ಎಂದು ಹೊಗಳಿ ಬಿಡುಗಡೆಗೆ ಒಪ್ಪಿದ್ದರು" ಎಂದು ವಾಸು ನೆನಪಿಸಿಕೊಂಡಿದ್ದಾರೆ.
ಸಿನಿಮಾ ಬಿಡುಗಡೆ ಬಳಿಕ ನಾವು ಧರ್ಮಸ್ಥಳಕ್ಕೆ ಹೋಗಿ ಕ್ಷಮೆ ಕೇಳಿದ್ದೆವು. 'ಶ್ರೀಮಂಜುನಾಥ' ಸಿನಿಮಾ ತೆರೆಕಂಡ ಬಳಿಕ ಧರ್ಮಸ್ಥಳಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು. ಭಕ್ತರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಲ್ಲಿನ ಸಿಬ್ಬಂದಿ ಸಹಾಯಕತೆ ತೋಡಿಕೊಂಡರು. ಇನ್ನು ಕೋಟಿಲಿಂಗ ದೇವಸ್ಥಾನವನ್ನು ಕೂಡ ಚಿತ್ರದಲ್ಲಿ ತೋರಿಸಿದ್ದೆವು. ಸಾಕಷ್ಟು ಜನ ಧರ್ಮಸ್ಥಳದಲ್ಲೇ ಕೋಟಿ ಲಿಂಗ ಆಲಯ ಕೂಡ ಇದೆ ಎಂದು ಬರುತ್ತಿದ್ದರು. ಈ ಬಗ್ಗೆ ಅಲ್ಲಿನ ಸಿಬ್ಬಂದಿ ಬಳಿ ಕೇಳುತ್ತಿದ್ದರಂತೆ. ಅವರಿಗೂ ಸ್ಪಷ್ಟನೆ ಕೊಟ್ಟು ಕೊಟ್ಟು ಸಾಕಾಗಿತ್ತು ಎಂದು ವಾಸು ಆ ಪ್ರಸಂಗವನ್ನು ವಿವರಿಸಿದ್ದಾರೆ.
'ಶ್ರೀಮಂಜುನಾಥ' ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಹಾಕಿದ್ದ ಹಣ ಮಾತ್ರ ಬಂತು. ಲಾಭ ಬರಲಿಲ್ಲ ಎಂದು ವಾಸು ಹೇಳಿದ್ದಾರೆ. "ಸಿನಿಮಾ ಬಿಡುಗಡೆಯಾದ ಒಂದು ವಾರದ ಬಳಿಕ ಧರ್ಮಸ್ಥಳಕ್ಕೆ ನಾವು ಹೋಗಿದ್ದೆವು. ಆಗ ದೊಡ್ಡವರು ಒಂದು ಮಾತು ಹೇಳಿದ್ರು. ಮಂಜುನಾಥನ ಹೆಸರೇಳಿಕೊಂಡು ದುಡ್ಡು ಮಾಡಬೇಕು ಎಂದುಕೊಂಡಿದ್ದರೆ ನಿಮಗೆ ಒಂದು ರೂಪಾಯಿ ಬರಲ್ಲ. ಭಕ್ತಿಯಿಂದ ಮಾಡಿದ್ದರೆ ಮಾತ್ರ ದುಡ್ಡು ಬರಲ್ಲ ಎಂದಿದ್ರು. ಅವ್ರು ಹೇಳಿದಂತೆ ಹಾಕಿದ್ದ ದುಡ್ಡು ಮಾತ್ರ ಬಂತು. ಅಸಲು ವಾಪಸ್ ಬಂತು, ಅದಕ್ಕೆ ಆಗಿದ್ದ ಬಡ್ಡಿ ನಾವೇ ಕೈಯಿಂದ ಕಟ್ಟುವಂತಾಯಿತು" ಎಂದು ವಾಸು ತಿಳಿಸಿದ್ದಾರೆ.


Click it and Unblock the Notifications











