"ನನ್ನ ಮಗ ಮೃತಪಟ್ಟಾಗಲೂ ನಾನು ದುಃಖ ಪಡಲಿಲ್ಲ, ಆದರೆ ಪುನೀತ್ ಹೋದಾಗ"
ಅಭಿಮಾನಿಗಳಿಗೆ ಅಪ್ಪು ಅಗಲಿಕೆಯ ನೋವು ಇನ್ನು ಕಮ್ಮಿ ಆಗಿಲ್ಲ. ಎಷ್ಟೋ ಜನ ತಮ್ಮ ಮನೆ ಮಗನನ್ನೇ ಕಳೆದುಕೊಂಡಿದ್ದೇವೆ ಎನ್ನುವಂತೆ ಇಂದಿಗೂ ಭಾವಿಸುತ್ತಿದ್ದಾರೆ. ಮನೆಗಳಲ್ಲಿ ಪುನೀತ್ ರಾಜ್‌ಕುಮಾರ್ ಫೋಟೊ ಇಟ್ಟು ಪೂಜೆ ಮಾಡುತ್ತಿದ್ದಾರೆ. ಅಪ್ಪು ಸಜ್ಜನ ಸರಳ ವ್ಯಕ್ತತ್ವವನ್ನು ಕೊಂಡಾಡದವರಿಲ್ಲ.
ಹಿರಿಯ ನಟ ಬೆಂಗಳೂರು ನಾಗೇಶ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಗಂಧದಗುಡಿ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಡಾ. ರಾಜ್‌ಕುಮಾರ್ ಜೊತೆ ತೆರೆ ಹಂಚಿಕೊಂಡಿದ್ದಾರೆ. 1964ರಲ್ಲಿ ಬಂದಿದ್ದ 'ತುಂಬಿದ ಕೊಡ' ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಬಳಿಕ ಹತ್ತಾರು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಮಿಂಚಿದ್ದರು. 'ಗುರುಶಿಷ್ಯರು' ಚಿತ್ರದಲ್ಲಿ ಸುಬ್ರಮಣ್ಯ ಆಗಿ ನಗಿಸಿದ್ದರು. ಈಗ ಅವರಿಗೆ 88 ವರ್ಷ ವಯಸ್ಸಾಗಿದೆ. ರಘುರಾಮ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ತಮ್ಮ ಸಿನಿ ಜೀವನ ಮೆಲುಕು ಹಾಕಿದ್ದಾರೆ.

ಅಣ್ಣಾವ್ರು ಹಾಗೂ ಪುನೀತ್ ರಾಜ್‌ಕುಮಾರ್ ಬಗ್ಗೆ ಸಾಕಷ್ಟು ಸಂಗತಿಗಳನ್ನು ಬೆಂಗಳೂರು ನಾಗೇಶ್ ಬಿಚ್ಚಿಟ್ಟಿದ್ದಾರೆ. ಪುನೀತ್ ರಾಜ್‌ಕುಮಾರ್ ರೀತಿಯ ವ್ಯಕ್ತಿ ಅಷ್ಟು ಬೇಗ ಹೋಗಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. "ಬೆಂಗಳೂರಿನ ಪ್ಯಾಲೇಸ್‌ನಲ್ಲಿ 'ಮಯೂರ' ಸಿನಿಮಾ ಚಿತ್ರೀಕರಣದ ವೇಳೆ ಪುನೀತ್ ಹುಟ್ಟಿದ್ದರು. ಆಗ ಟ್ರಂಕ್ ಕಾಲ್ ಇತ್ತು. ವಿಷಯ ಗೊತ್ತಾಗಿ ಅಣ್ಣಾವ್ರು ಬಹಳ ಖುಷಿಯಾಗಿದ್ದರು. ಶೂಟಿಂಗ್ ಬಿಟ್ಟು ಹೋಗುವುದು ಹೇಗೆ ಅಂದ್ರು, ನಾನೇ ಒಪ್ಪಿಸಿ ಕಳುಹಿಸಿದೆ. ಬಳಿಕ ನಾವು ಮದ್ರಾಸಿಗೆ ಹೋದಾಗ ಅಪ್ಪುನ ಎತ್ತಿಕೊಂಡಿದ್ದೆವು" ಎಂದು ನೆನಪಿಸಿಕೊಂಡಿದ್ದಾರೆ.
ಪುನೀತ್ ಚಿನ್ನದಂತಹ ಹುಡುಗ ಎಂದ ನಾಗೇಶ್ ತಮ್ಮಗೆ ಒಮ್ಮೆ ಹಣ ಸಹಾಯ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. "ಪುನೀತ್ ಚಿನ್ನದಂತ ಹುಡುಗ. ಒಮ್ಮೆ ನನಗೆ ಹಣದ ಸಹಾಯ ಬೇಕಿತ್ತು. ವಜ್ರೇಶ್ವರಿ ಕಚೇರಿಗೆ ಹೋಗಿದ್ದೆ. ಎದುರಿಗೆ ಅಪ್ಪು ಬಂದ. ಆಗಷ್ಟೆ 'ಬೆಟ್ಟದ ಹೂವು' ಸೇರಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದ. ಏನು ಅಂಕಲ್ ಅಂದ. ಸ್ವಲ್ಪ ಹಣದ ಸಹಾಯ ಬೇಕಿತ್ತು ಅಂದೆ. ಕೂಡಲೇ ಪ್ಯಾಂಟ್ ಜೇಬಿಗೆ ಕೈಹಾಕಿ, ಇದ್ದ ಅಷ್ಟು ಹಣ ಬಾಚಿ ಕೈಗಿಟ್ಟ. ಎಷ್ಟು ಇದೆ ಅಂತ ಕೂಡ ನೋಡ್ಲಿಲ್ಲ. 500 ರೂಪಾಯಿ ಇತ್ತು. ಅವತ್ತಿನ ಕಾಲಕ್ಕೆ ಅದು ದೊಡ್ಡ ಮೊತ್ತ" ಎಂದು ನಾಗೇಶ್ ಹೇಳಿದ್ದಾರೆ.

ಯಾವಾಗ ಎಲ್ಲೇ ಸಿಕ್ಕರೂ ಅಪ್ಪು ಖುಷಿಯಾಗಿ ಮಾತನಾಡಿಸುತ್ತಿದ್ದ. ಅವನು ಔಟ್‌ಡೋರ್ ಶೂಟಿಂಗ್ ಹೋದರೆ ಒಂದು ಚೆಕ್ ಬುಕ್ ತಗೊಂಡು ಹೋಗ್ತಿದ್ದ. ಚಿತ್ರೀಕರಣ ಮುಗಿಸಿ ಬರುವಷ್ಟರಲ್ಲಿ ಅದು ಖಾಲಿ ಆಗಿರುತ್ತಿತ್ತು. ಕೇಳಿದವರಿಗೆ ಚೆಕ್ ಕೊಡ್ತಿದ್ದ. ಅದು ಮನೆಯವರರಿಗೂ ಗೊತ್ತಾಗುತ್ತಿರಲಿಲ್ಲ. ನನ್ನ ಮಗ ಹೋದಾಗಲೂ ನಾನು ದುಃಖ ಪಡಲಿಲ್ಲ. ಪುನೀತ್ ಹೋದಾರ ಬಹಳ ನೋವಾಯಿತು. ಅಂತ ಒಳ್ಳೆಯ ವ್ಯಕ್ತಿ. 'ದೇವತಾ ಮನುಷ್ಯ' ಎಂದೇ ಹೇಳಬಹುದು ಎಂದು ಅಪ್ಪು ಗುಣಗಾನ ಮಾಡಿದ್ದಾರೆ ಬೆಂಗಳೂರು ನಾಗೇಶ್.
'ಗಂಧದಗುಡಿ' ಸಿನಿಮಾ ಚಿತ್ರೀಕರಣದ ವೇಳೆ ನನ್ನ ಮದುವೆ ಆಗಿದ್ದು. ಮದುವೆ ಫಿಕ್ಸ್ ಆಗಿದ್ದರೂ ಎಂಪಿ ಶಂಕರ್ ಹೋಗುವುದು ಬೇಡ ಎಂದಿದ್ದರು. ಆಗ ಅಣ್ಣಾವ್ರು ಹೇಳಿ ರೆಕ್ಮಂಡ್ ಮಾಡಿದ ಮೇಲೆ ಹೋಗಲು ಅವಕಾಶ ಸಿಕ್ಕಿತ್ತು. ಮದುವೆಯಾದ ಬೆನ್ನಲ್ಲೇ ಮತ್ತೆ ಚಿತ್ರೀಕರಣಕ್ಕೆ ವಾಪಸ್ ಬಂದೆ. ನನಗೆ ಒಂದು ಹೆಣ್ಣು ಮಗು, ಒಬ್ಬ ಗಂಡು ಮಗ. ನನ್ನ ಕಣ್ಣೆದುರೇ ಹೃದಯಾಘಾತದಿಂದ ಮಗ ಪ್ರಾಣಬಿಟ್ಟ. ಮಗ ಹೋಗಿದ್ದಕ್ಕೆ ನಾನು ದುಃಖ ಪಡಲಿಲ್ಲ. ಅವನ ಕೆಲಸ ಮುಗಿಸಿಕೊಂಡು ಹೋಗಿದ್ದಾನೆ. ಅವನೇ ಪುಣ್ಯವಂತ ಎಂದು ಬೆಂಗಳೂರು ನಾಗೇಶ್ ಹೇಳಿದ್ದಾರೆ.


Click it and Unblock the Notifications











