For Quick Alerts
  ALLOW NOTIFICATIONS  
  For Daily Alerts

  ಅಣ್ಣಾವ್ರ ಬಗ್ಗೆ ಹೊನ್ನವಳ್ಳಿ ಕೃಷ್ಣ ಮೊಗೆದು ಕೊಟ್ಟ ನೆನಪ ಸುಧೆ

  |

  'ಅವ್ರು ದೇವ್ರು ಕಣಪ್ಪ, ದೇವ್ರು' ರಾಜ್‌ಕುಮಾರ್ ಅವರ ವ್ಯಕ್ತಿತ್ವವನ್ನು ವರ್ಣಿಸಲು ಪದಗಳಿಗಾಗಿ ಹುಡುಕಿ ಸೋತ ಹಿರಿಯ ನಟ ಹೊನ್ನವಳ್ಳಿ ಕೃಷ್ಣ, ರಾಜ್‌ಕುಮಾರ್ ಅವರ ಗುಣಗಳನ್ನೆಲ್ಲಾ ಒಟ್ಟು ಮಾಡಿ 'ದೇವರು' ಎಂದರು.

  1960ರ ದಶಕದ ವೇಳೆಗಾಗಲೆ ಪೌರಾಣಿಕ, ಐತಿಹಾಸಿಕ ಸಿನಿಮಾಗಳ ಜೊತೆ-ಜೊತೆಗೆ ಸಾಮಾಜಿಕ, 'ಜೇಡರ ಬಲೆ' ರೀತಿಯ ಥ್ರಿಲ್ಲರ್‌ ಸಿನಿಮಾಗಳಲ್ಲಿಯೂ ನಟಿಸಿ ಎಲ್ಲ ವಯೋಮಾನದವರ ಮನಸೂರೆಗೊಳಿಸಿದ್ದರು ರಾಜ್‌ಕುಮಾರ್. ಆ ಸಮಯದಲ್ಲಿ ಅದೆಷ್ಟೋ ಮಂದಿ ರಾಜ್‌ಕುಮಾರ್ ಅವರನ್ನು ಕಾಣಲು ಬೆಂಗಳೂರಿಗೆ ಬಸ್ಸು ಹಿಡಿದು ಬರುತ್ತಿದ್ದರು. ಅಂಥಹವರಲ್ಲಿ ಒಬ್ಬರು ನಟ ಹೊನ್ನವಳ್ಳಿ ಕೃಷ್ಣ.

  ರಾಜ್‌ಕುಮಾರ್ ಅವರನ್ನು ಕಾಣಲೇಬೇಕು ಎಂಬ ಅದಮ್ಯ ಹಂಬಲದಿಂದ ಹಾಸನದ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿಯಿಂದ ಬೆಂಗಳೂರಿಗೆ 1968 ರಲ್ಲಿ ಬಂದವರು ಹೊನ್ನವಳ್ಳಿ ಕೃಷ್ಣ. ಆದರೆ ಇಲ್ಲಿಗೆ ಬಂದ ಮೇಲೆ ಗೊತ್ತಾಯಿತು ರಾಜ್‌ಕುಮಾರ್ ಅವರು ಚೆನ್ನೈ, ಆಗಿನ ಮದ್ರಾಸ್‌ನಲ್ಲಿ ಇರುತ್ತಾರೆಂದು. ಆದರೆ ಹೊನ್ನವಳ್ಳಿ ಹಳ್ಳಿಗೆ ವಾಪಸ್ಸಾಗಲು ಮನಸ್ಸಾಗಲಿಲ್ಲ. ಯಾರೊ ಕೊಟ್ಟ ಸಲಹೆ ಮೇರೆಗೆ ಆರಾಣೆ ಕೊಟ್ಟು 'ನ್ಯೂ ಫಿಲಂ ಡೈರಿ' ಕೊಂಡು ಅದರಲ್ಲಿ ರಾಜ್‌ಕುಮಾರ್ ಅವರ ವಿಳಾಸ ಹುಡುಕಿ ಹೊರಟರು. ಅವರ ಶ್ರಮ ವ್ಯರ್ಥವಾಗಲಿಲ್ಲ. ಗೋಲ್ಡನ್‌ ಸ್ಟುಡಿಯೋದಲ್ಲಿ ಅವರ ಆರಾಧ್ಯ ದೈವ ಅಣ್ಣಾವ್ರು ಸಿಕ್ಕೇಬಿಟ್ಟರು.

  ಮರೆಯಲ್ಲಿ ನಿಂತು ಅಣ್ಣಾವ್ರಗಾಗಿ ಕಾದಿದ್ದ ಹೊನ್ನವಳ್ಳಿ ಕೃಷ್ಣ

  ಮರೆಯಲ್ಲಿ ನಿಂತು ಅಣ್ಣಾವ್ರಗಾಗಿ ಕಾದಿದ್ದ ಹೊನ್ನವಳ್ಳಿ ಕೃಷ್ಣ

  'ಮದ್ರಾಸಿನ ಗೋಲ್ಡನ್ ಸ್ಟುಡಿಯೋದಲ್ಲಿ ''ರೌಡಿ ರಂಗಣ್ಣ' ಚಿತ್ರದ ಶೂಟಿಂಗ್ ನಡೀತಿತ್ತು. ಆಗೆಲ್ಲ ಯಾರನ್ನೂ ಸ್ಟುಡಿಯೋ ಒಳಗೆ ಬಿಡುತ್ತಿರಲಿಲ್ಲ. ನಾನು ಹೇಗೋ ಮಾಡಿ ಸ್ಟುಡಿಯೋ ಒಳಗೆ ಹೋಗಿ ಒಂದು ಗೋಣಿ ಚೀಲದ ಮರೆಯಲ್ಲಿ ಅಡಗಿ ನಿಂತಿದ್ದೆ. ರಾಜಶೇಖರ್, ಚಂದ್ರಕಲಾ ಅವರುಗಳೆಲ್ಲಾ ಬಂದರು ಆದರೆ ರಾಜ್‌ಕುಮಾರ್ ಕಾಣಲಿಲ್ಲ. ತುಸು ತಡವಾಗಿ ರಾಜ್‌ಕುಮಾರ್ ಅವರು ಬಂದರು, ಅವರನ್ನು ನೋಡಿದ್ದೇ ತಡ ಹೋಗಿ ಅವರ ಕಾಲಿಗೆ ಎರಗಿದೆ. ಅಣ್ಣಾವ್ರು ನನ್ನ ಎಬ್ಬಿಸಿ ಕುಶಲೋಪರಿ ವಿಚಾರಿಸಿದರು. ಜೊತೆಯಲ್ಲಿ ಕೂರಿಸಿಕೊಂಡು ಮಾತನಾಡಿಸಿದರು. ಕುಡಿಯಲು ಕಾಫಿ ಕೊಡಿಸಿದರು. ನನ್ನ ಜನ್ಮಕ್ಕೆ ಇಷ್ಟು ಸಾಕೆಂದು ನಾನು ಅಲ್ಲಿಂದ ವಾಪಸ್ಸಾದೆ' ಎಂದು 50 ವರ್ಷ ಹಿಂದೆ ನಡೆದ ಘಟನೆಯನ್ನೂ ಇಂದಿನಿತೂ ಮರೆಯದೆ ವಿವರಿಸಿದರು ಹೊನ್ನವಳ್ಳಿ ಕೃಷ್ಣ. ಅಂದು ನಡೆದ ಸಂಭಾಷಣೆ ಸಹ ನೆನಪಿದೆ ಅವರಿಗೆ. ಕೃಷ್ಣ ಅವರ ಜೀವನದಲ್ಲಿ ಆ ಘಟನೆಗೆ ಘನವಾದ ಮಹತ್ವವಿದೆ ಹಾಗಾಗಿ ಆ ಘಟನೆ ಅವರ ಸ್ಮೃತಿಪಟಲದಲ್ಲಿ ಅಚ್ಚೊತ್ತಿಬಿಟ್ಟಿದೆ.

  ದೊಡ್ಮನೆಯ ಹಳೆಯ ವೈಭೋಗದ ನೆನಪು ಮಾಡಿಕೊಂಡ ಹೊನ್ನವಳ್ಳಿ ಕೃಷ್ಣ

  ದೊಡ್ಮನೆಯ ಹಳೆಯ ವೈಭೋಗದ ನೆನಪು ಮಾಡಿಕೊಂಡ ಹೊನ್ನವಳ್ಳಿ ಕೃಷ್ಣ

  ಮೊದಲ ಭೇಟಿಯಲ್ಲಿಯೇ ರಾಜ್‌ಕುಮಾರ್ ಅವರ ಪ್ರಭಾವಕ್ಕೆ ಸಿಕ್ಕಿಬಿಟ್ಟಿದ್ದ ಹೊನ್ನವಳ್ಳಿ ಕೃಷ್ಣ ಹಂಬಲಿಸಿದಾಗಲೆಲ್ಲಾ ರಾಜ್‌ಕುಮಾರ್ ಅವರನ್ನು ನೋಡಲು ಹೋಗುತ್ತಿದ್ದರು. ಸುಮಾರು 40 ಕ್ಕೂ ಹೆಚ್ಚು ಜನರಿದ್ದ ಕೂಡು ಕುಟುಂಬದಲ್ಲಿದ್ದ ರಾಜ್‌ಕುಮಾರ್ ಅವರ ಮನೆಯ ಹಲವರು ಹೊನ್ನವಳ್ಳಿ ಕೃಷ್ಣ ಅವರಿಗೆ ಪರಿಚಿತರಾದರು. ಆ ನಂತರ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ ಮೇಲೆ ರಾಜ್‌ಕುಮಾರ್ ಕುಟುಂಬಕ್ಕೆ ಇನ್ನಷ್ಟು ಹತ್ತಿರವಾದರು ಕೃಷ್ಣ. ''ರಾಜ್‌ಕುಮಾರ್ ಅವರದ್ದು ಬಹಳ ದೊಡ್ಡ ಕುಟುಂಬ. ಎಲ್ಲ ಹಬ್ಬ, ಸಂತೋಷಗಳನ್ನು ಒಟ್ಟಿಗೆ ಆಚರಿಸುತ್ತಿದ್ದರು. ನಮ್ಮನ್ನೂ ಕರೆಯುತ್ತಿದ್ದರು. ಅದೊಂದು ಹಬ್ಬದ ವಾತಾವರಣ. ಅವರ ಮನೆಯಲ್ಲಿ ಬೇಸರದ, ಜಗಳದ ಸನ್ನಿವೇಶಗಳನ್ನು ನೋಡಿದ್ದೇ ನನಗೆ ನೆನಪಿಲ್ಲ' ಎಂದು ದೊಡ್ಮನೆಯ ಹಳೆಯ ವೈಭೋಗವನ್ನು ನೆನಪಿಸಿಕೊಂಡರು ಹೊನ್ನವಳ್ಳಿ ಕೃಷ್ಣ.

  ಊಟಕ್ಕೆ ಮುನ್ನ ಎಲ್ಲರನ್ನೂ ನೆನಪಿಸಿಕೊಳ್ಳುತ್ತಿದ್ದರು: ಹೊನ್ನವಳ್ಳಿ ಕೃಷ್ಣ

  ಊಟಕ್ಕೆ ಮುನ್ನ ಎಲ್ಲರನ್ನೂ ನೆನಪಿಸಿಕೊಳ್ಳುತ್ತಿದ್ದರು: ಹೊನ್ನವಳ್ಳಿ ಕೃಷ್ಣ

  'ನಾನು ಸುಸಮಾರು 80 ಸಿನಿಮಾಗಳಲ್ಲಿ ಅವರೊಟ್ಟಿಗೆ ನಟಿಸಿದ್ದೇನೆ. ಅವರೆಂದೂ'' ನೀನು ಹೀಗೆ ನಟಿಸು, ಹೀಗೆ ನಟಿಸಬೇಡ'' ಎಂದು ನನಗೆ ಹೇಳಲೇ ಇಲ್ಲ. ಆದರೆ ಚೆನ್ನಾಗಿ ನಟಿಸಿದಾಗ ಬೆನ್ನು ತಟ್ಟದೆ ಇರುತ್ತಿರಲಿಲ್ಲ. ಸೆಟ್‌ನಲ್ಲಿದ್ದಾಗ ಊಟಕ್ಕೆ ಹೋಗುವ ಮುನ್ನ ಎಲ್ಲರನ್ನೂ ನೆನಪು ಮಾಡಿಕೊಳ್ಳುತ್ತಿದ್ದರು. 'ಅವರನ್ನು ಊಟಕ್ಕೆ ಕರಿ, ಇವರನ್ನು ಊಟಕ್ಕೆ ಕರಿ' ಹೀಗೆ ಯಾರೂ ಊಟ ಮಾಡದೇ ಇರಬಾರದು. ಎಲ್ಲರೂ ಒಟ್ಟಿಗೆ ಊಟ ಮಾಡಬೇಕು ಎಂಬುದು ಅವರ ನಿಲವಾಗಿತ್ತು' ಎಂದು ರಾಜ್‌ಕುಮಾರ್ ಅವರ ಮನುಷ್ಯ ಪ್ರೀತಿ ಬಗ್ಗೆ ಉದಾಹರಣೆ ನೀಡಿದರು ಹೊನ್ನವಳ್ಳಿ ಕೃಷ್ಣ.

  ಅವರಿಂದ ಕಲಿತ ಜೀವನ ಪಾಠ ಹಲವಾರು: ಹೊನ್ನವಳ್ಳಿ ಕೃಷ್ಣ

  ಅವರಿಂದ ಕಲಿತ ಜೀವನ ಪಾಠ ಹಲವಾರು: ಹೊನ್ನವಳ್ಳಿ ಕೃಷ್ಣ

  'ರಾಜ್‌ಕುಮಾರ್ ಅವರು ಯಾರನ್ನೂ ಏಕವಚನದಲ್ಲಿ ಮಾತನಾಡಿಸುತ್ತಿರಲಿಲ್ಲ. ಎಲ್ಲರ ಬಗ್ಗೆಯೂ ಅವರಿಗೆ ಗೌರವ. ನಾನು ಹಾಗೂ ಇನ್ನು ಕೆಲವು ಕಿರಿಯ ಆತ್ಮೀಯರು ಸಿಕ್ಕಾಗ ಹಳ್ಳಿ ಭಾಷೆ ಬಳಸಿ ಪ್ರೀತಿಯಿಂದ, ಸಲುಗೆಯಿಂದ ಮಾತನಾಡುತ್ತಿದ್ದರು. ಉಳಿದಂತೆ ತಮಗಿಂತ ಸಣ್ಣವರನ್ನೂ ಸಹ ಏಕವಚನದಲ್ಲಿ ಸಂಭೋಧಿಸುತ್ತಿರಲಿಲ್ಲ. ಬಹುವಚನದಲ್ಲಿ ಮಾತನಾಡಬೇಕು, ಯಾರನ್ನೂ ಕೆಟ್ಟ ದೃಷ್ಟಿಯಲ್ಲಿ ನೋಡಬಾರದು, ಪ್ರೀತಿಯಿಂದ ಮಾತನಾಡಿಸಬೇಕು, ಸದಾ ಜಾಗೃತವಾಗಿರಬೇಕು' ಎಂಬ ಜೀವನ ಪಾಠಗಳನ್ನು ಅಣ್ಣಾವ್ರಿಂದ ಕಲಿತಿದ್ದಾಗಿ ಹೆಮ್ಮೆಯಿಂದ ಹೇಳಿದರು ಹೊನ್ನವಳ್ಳಿ ಕೃಷ್ಣ.

  ಅವರಿದ್ದಾಗ ಕಲೆಗೆ ಬೆಲೆ ಇತ್ತು, ಈಗ ಬೆಲೆ ಕೊಟ್ಟರೆ ಬೆಲೆ: ಹೊನ್ನವಳ್ಳಿ ಕೃಷ್ಣ

  ಅವರಿದ್ದಾಗ ಕಲೆಗೆ ಬೆಲೆ ಇತ್ತು, ಈಗ ಬೆಲೆ ಕೊಟ್ಟರೆ ಬೆಲೆ: ಹೊನ್ನವಳ್ಳಿ ಕೃಷ್ಣ

  'ಅವರಿದ್ದಾಗ ಕಲೆಗೆ ಬೆಲೆ ಇತ್ತು, ಈಗ ಬೆಲೆ ಕೊಟ್ಟರೆ ಕಲೆ ಎಂಬಂತಾಗಿದೆ. ಅವರಿದ್ದಾಗ ಸಿನಿಮಾ ಸೆಟ್‌ಗಳಲ್ಲಿ ಇದ್ದ ಆತ್ಮೀಯತೆ, ಸಮಾನತೆ ಭಾವ ಇಂದು ಇಲ್ಲ. ಎಲ್ಲರೂ ಕಾಂಚಾಣದ ಹಿಂದೆ ಓಡುತ್ತಿದ್ದಾರೆ. ಹಲವಾರು ನಟ-ನಟಿ, ತಂತ್ರಜ್ಞರು ಅವರಿಂದ ಸಹಾಯ ಪಡೆದಿದ್ದರು. ಆದರೆ ಅದನ್ನು ಎಂದೂ ಹೊರಗೆ ಹೇಳಿಕೊಳ್ಳುತ್ತಿರಲಿಲ್ಲ. ಅವರಿಗೆ ಪ್ರಚಾರ ಪಡೆಯುವ ಸಣ್ಣ ಇಚ್ಛೆಯೂ ಇರಲಿಲ್ಲ. ಈಗಿನ ಪರಿಸ್ಥಿತಿಯನ್ನು ನಾನು ವಿವರಿಸುವಂತಿಲ್ಲ ಬಿಡಿ' ಎಂದು ತಮ್ಮ 'ಸಮಾಜ ಸೇವೆ'ಯ ಡಂಗುರ ಸಾರುವ ಹೊಸ ನಟ-ನಟಿಯರಿಗೆ ಪರೋಕ್ಷವಾಗಿ ಮಾತಲ್ಲೆ ತಿವಿದರು ಹಿರಿಯ ನಟ ಹೊನ್ನವಳ್ಳಿ ಕೃಷ್ಣ.

  ಅವರಿಲ್ಲ ಎಂಬುದನ್ನು ನನ್ನ ಮನಸ್ಸು ಒಪ್ಪಲು ತಯಾರಿಲ್ಲ: ಹೊನ್ನವಳ್ಳಿ ಕೃಷ್ಣ

  ಅವರಿಲ್ಲ ಎಂಬುದನ್ನು ನನ್ನ ಮನಸ್ಸು ಒಪ್ಪಲು ತಯಾರಿಲ್ಲ: ಹೊನ್ನವಳ್ಳಿ ಕೃಷ್ಣ

  'ಅವರಿಲ್ಲ ಎನ್ನುವುದನ್ನು ನಂಬುವುದು ನನಗೆ ಈಗಲೂ ಸಾಧ್ಯವಾಗಿಲ್ಲ. ಅವರು ತಮ್ಮ ಮನೆಯಲ್ಲಿದ್ದಾರೆ ನಾನು ಈಗಲೂ ಹೋಗಿ ಮಾತನಾಡಿಸಬಹುದು. ಪಂಚೆ ತೊಟ್ಟು, ಟವೆಲ್‌ ಹೆಗಲ ಮೇಲೆ ಹಾಕಿಕೊಂಡು ವರಾಂಡದಲ್ಲಿ ಕೂತಿರುತ್ತಾರೆ, ನನ್ನನ್ನು ಕಂಡ ಕೂಡಲೇ 'ಬಾಯ್ಯ ಕೃಷ್ಣ' ಎಂದು ನನ್ನನ್ನು ಕರೆಯುತ್ತಾರೆ ಅನಿಸುತ್ತದೆ. ಅವರಿಲ್ಲ ಎಂಬುದನ್ನು ಒಪ್ಪಲು ನನ್ನ ಮನಸ್ಸಿಗೆ ಸಾಧ್ಯವಾಗುತ್ತಿಲ್ಲ. ನನ್ನ ಪಾಲಿಗೆ ಅವರು ಈಗಲೂ ಇದ್ದಾರೆ, ಮುಂದೆಯೂ ಇರುತ್ತಾರೆ. ನನ್ನ ಮನೆಯಲ್ಲಿ ಅವರ ಹಲವು ಚಿತ್ರಗಳನ್ನು ಹಾಕಿಕೊಂಡಿದ್ದೇನೆ. ಪ್ರತಿದಿನ ಅವನ್ನು ನೋಡುತ್ತೇನೆ. ಸಂತೋಷ ಪಡುತ್ತೇನೆ' ಎಂದು ಭಾವುಕವಾಗಿ ನುಡಿದು ಮಾತು ಮುಗಿಸಿದರು ಹೊನ್ನವಳ್ಳಿ ಕೃಷ್ಣ.

  English summary
  Actor Honnavalli Krishna talks about Dr Rajkumar. He shared memories of working with Dr Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X