''65 ಮೆಟ್ರೋ ಸ್ಟೇಷನ್‌ಗಳಲ್ಲಿ ಒಂದಕ್ಕಾದರೂ ಶಂಕರ್ ನಾಗ್ ಹೆಸರಿಡಬಾರದಾ''- ರಮೇಶ್ ಭಟ್...!
ಶಂಕರ್ ನಾಗ್ ದೈಹಿಕವಾಗಿ ಮರೆಯಾಗಿ ಮೂವತ್ತು ನಾಲ್ಕು ವರ್ಷ ಕಳೆದು ಹೋಗಿದ್ದರೂ ಅವರು ಜೀವಂತವಾಗಿರುವ ಥರಹೇವಾರಿ ರೀತಿಯನ್ನು ನೋಡಿದರೆ ಅಚ್ಚರಿಯಾಗುತ್ತದೆ. ಅಭಿಮಾನ ಇಮ್ಮಡಿಸುತ್ತದೆ. ಅಷ್ಟಕ್ಕೂ ಅವರ ನೆನಪಿಗೊಂದು ನೆಪವೇ ಬೇಕಿಲ್ಲ. ಆ ರೀತಿ ಕ್ರಿಯಾಶೀಲರಾಗಿ ಎಲ್ಲದರತ್ತಲೂ ಮಿಡಿಯುತ್ತಾ ಜೀವಿಸಿದ ಶಂಕರ್ ನಾಗ್ ಕನ್ನಡ ಚಿತ್ರರಂಗದ ಅಜರಾಮರ ನಕ್ಷತ್ರ.
ಶಂಕರಣ್ಣ ಅವರ ಆಲೋಚನೆ, ವೃತ್ತಿ ಮತ್ತು ಕನಸುಗಾರಿಕೆಗೆ ಯಾವುದೇ ಪರಿಧಿರಲಿಲ್ಲ. ಇರುವಾಗಲೇ ಸತ್ತಂತೆ ಬದುಕುವವರ ನಡುವೆ ಸತ್ತೂ ಬದುಕಿರುವ ಶಂಕರ್ ನಾಗ್ ಜೀವಿಸಿದ ಜೀವನ್ಮುಖಿ ಶೈಲಿಯೇ ಅವರ ಪ್ರಭಾವವನ್ನು ದಶಕಗಳಾಚೆಗೂ ದಾಟಿಸಿಕೊಂಡು ಬಂದಿದೆ. ಶಂಕರ್ ನಾಗ್ ಬದುಕಿದ್ದು ಕೇವಲ ಮೂವತ್ತೂಚಿಲ್ಲರೆ ವರ್ಷ ಮಾತ್ರ. ಆದರೆ ಆ ಅಲ್ಪ ಅವಧಿಯಲ್ಲಿಯೇ ಅವರು ಮಾಡಿದ ಸಾಧನೆ ಮಾತ್ರ ಅಗಾಧ.

ಇನ್ನೂ ಶಂಕರ್ ನಾಗ್ ಅವರಲ್ಲಿ ಸರಿಯಾದ ದಿಕ್ಕಿನಲ್ಲಿ ಕನಸು ಕಂಡು ಅದನ್ನು ಸಾಕಾರಗೊಳಿಸಲು ಎಂಥಾ ಸವಾಲಿಗಾದರೂ ಎದೆಗೊಡುವ ಛಲ ಇತ್ತು. ಒಂದು ಕ್ಷಣವನ್ನೂ ವ್ಯರ್ಥವಾಗಿಸಲು ಬಿಡದ ಅವರು ಈ ಸಮಾಜಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿಯೂ ಆಲೋಚಿಸುತ್ತಿದ್ದರು. ಎರಡ್ಮೂರು ದಶಕಗಳಾಚೆ ನಿಂತು ಯೋಚಿಸುವ ಅಭೂತಪೂರ್ವ ದೂರದೃಷ್ಟಿ ಹೊಂದಿದ್ದ ಶಂಕರ್, ಆಗಿನ ಕಾಲಕ್ಕೇ ಭವಿಷ್ಯದ ಬೆಂಗಳೂರಿಗೆ ಕನಸಿನ ಭಾಷ್ಯ ಬರೆದಿದ್ದರು. ಬೆಂಗಳೂರಿಗೊಂದು ಮೆಟ್ರೋ, ನಂದಿ ಬೆಟ್ಟಕ್ಕೆ ರೋಪ್ ವೇ, ಜನಸಾಮಾನ್ಯನ ಅಗ್ಗದ ಮನೆ ಕನಸಿಗೆ ಹೊಸ ತಂತ್ರಜ್ಞಾನ, ಸಿನಿಮಾಕ್ಕಾಗಿ ಮಲ್ಟಿಪ್ಲೆಕ್ಸ್ ಹೀಗೆ ಅವರ ಕನಸುಗಳು ರೋಚಕ.
ಹೀಗೆ ಹತ್ತು ಹಲವು ಕನಸು ಕಂಡಿದ್ದ ಶಂಕರ್ ನಾಗ್ ಆ ಕಾಲದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿಯೇ ಬರೋಬ್ಬರಿ 9 ಲಕ್ಷ ರೂ. ಖರ್ಚು ಮಾಡಿ ಮೆಟ್ರೋ ಮಾರ್ಗ ಎಲ್ಲೆಲ್ಲಿ ಮಾಡಬೇಕು ಎಂಬುದರ ಕುರಿತು ನೀಲನಕ್ಷೆಯನ್ನೂ ಸಿದ್ಧಪಡಿಸಿದ್ದರು. ಈ ಕುರಿತು ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಿದ್ದರು. ಇಂಥಾ ಶಂಕರ್ ನಾಗ್ ಅವರು ಮೆಟ್ರೋ ಸೇವೆಯ ಕನಸು ಕಂಡು ಕೂಡ 22 ವರ್ಷಗಳ ನಂತರ ಆ ಕನಸು ನನಸಾಗಿದೆ. 2011ರಿಂದ ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಆರಂಭವಾಗಿದೆ.ಆದರೆ .. ದೌರ್ಭಾಗ್ಯ ಬೆಂಗಳೂರಿನಲ್ಲಿ ಬರೋಬ್ಬರಿ 65 ಮೆಟ್ರೋ ನಿಲ್ದಾಣಗಳಿದ್ದರೂ ಒಂದೇ ಒಂದು ಮೆಟ್ರೋ ನಿಲ್ದಾಣಕ್ಕೆ ಸರ್ಕಾರ ಇಲ್ಲಿಯವರೆಗೆ ಶಂಕರ್ ನಾಗ್ ಅವರ ಹೆಸರನ್ನು ಇಟ್ಟಿಲ್ಲ. ಇಡುವ ಮನಸು ಮಾಡಿಲ್ಲ. ಇದಕ್ಕೆ ಕಾರಣ ಸರ್ಕಾರಕ್ಕೆ ಗೊತ್ತಾದರೂ ..ಹಿಂದೊಮ್ಮೆ ಶಂಕರ್ ನಾಗ್ ಅವರ ಒಡನಾಡಿ ರಮೇಶ್ ಭಟ್ ಅವರು ಮೆಟ್ರೋ ಮತ್ತು ಶಂಕರ್ ನಾಗ್ ಅವರ ಕುರಿತು ಮಾತನಾಡಿದ ಮಾತುಗಳೂ ಈಗ ಇನ್ನೊಮ್ಮೆ ವೈರಲ್ ಆಗಿವೆ. ಈ ಮೂಲಕ ಬೆಂಗಳೂರಿಗೆ ಮೆಟ್ರೋ ಸೇವೆ ಸಿಗಬೇಕು ಎಂದು ಕನಸು ಕಂಡಿದ್ದೇ ಶಂಕರ್ ನಾಗ್ ಆದರೂ ಅವರ ಹೆಸರನ್ನು ಯಾಕೆ ಇಲ್ಲಿಯವರೆಗೆ ಇಟ್ಟಿಲ್ಲ ಎಂಬ ಪ್ರಶ್ನೆ ಮತ್ತೊಮ್ಮೆ ಎದ್ದಿದೆ.

ಹೌದು, ಅಸಲಿಗೆ.. ಹೆಗ್ಗದ್ದೆ ಸ್ಟುಡಿಯೋಗೆ ಮೂರು ವರ್ಷದ ಹಿಂದೆ ರಮೇಶ್ ಭಟ್ ಸಂದರ್ಶನವೊಂದನ್ನು ನೀಡಿದ್ದರು. ಆ ಸಂದರ್ಶನದಲ್ಲಿ ಶಂಕರ್ ನಾಗ್ ವ್ಯಕ್ತಿತ್ವ ಮತ್ತು ಕನಸುಗಳ ಬಗ್ಗೆ ಮಾತನಾಡಿದ್ದ ರಮೇಶ್ ಭಟ್, ಮೆಟ್ರೋ ಶಂಕರ್ ನಾಗ್ ಕಂಡಿದ್ದ ಬಹುದೊಡ್ಡ ಕನಸಾಗಿತ್ತು ಎಂದಿದ್ದರು. ಈ ಕನಸೆಂಬ ಕುದುರೆಯ ಬೆನ್ನೇರಿ ಆ ಕಾಲದಲ್ಲಿಯೇ ಲಂಡನ್‌ಗೆ ತೆರಳಿ ತಾವು ಬೆವರು ಸುರಿಸಿದ 9 ಲಕ್ಷ ರೂಪಾಯಿಯನ್ನು ಶಂಕರ್ ನಾಗ್ ಖರ್ಚು ಮಾಡಿದ್ದರು ಎಂದು ರಮೇಶ್ ಭಟ್ ಹೇಳಿದ್ದರು. ಕೇವಲ ಕರಾಟೆ ಕಿಂಗ್ ಎಂದು ಹೆಸರು ಮಾಡಿದರಷ್ಟೇ ಸಾಲದು, ಮರ ಸುತ್ತಿಕೊಂಡು ಡಿಶುಂ, ಡಿಶುಂ ಮಾಡಿಕೊಂಡು ಹೋಗಬಾರದು. ಮಕ್ಕಳಿಗೆ ನಾವೇನಾದರೂ ಮಾಡಿದ್ದೇವೆ ಎಂದು ಹೇಳಲಿಕ್ಕೆ ಸಾಮಾಜಿಕ ಸೇವೆ ಕೆಲಸ ಮಾಡಬೇಕು ಎಂದು ಅಂದುಕೊಂಡಿದ್ದರು ಎಂದು ಈ ಸಂದರ್ಶನದಲ್ಲಿ ಹೇಳಿರುವ ರಮೇಶ್ ಭಟ್, ಮೆಟ್ರೋ ನಿಲ್ದಾಣಕ್ಕೆ ಶಂಕರ್ ನಾಗ್ ಹೆಸರಿಡಲಿಲ್ಲವೆಂಬುದು ಈಗಲೂ ಬೇಸರ ಕಾಡುತ್ತಿದೆ ಎಂದು ತಮ್ಮ ಮನದ ನೋವನ್ನೂ ಹಂಚಿಕೊಂಡಿದ್ದರು. ಈವರೆಗೂ ಶಂಕರ್ ನಾಗ್ ಹೆಸರನ್ನು ಒಂದೇ ಒಂದು ನಿಲ್ದಾಣಕ್ಕೂ ಇಟ್ಟಿಲ್ಲ. ಅದ್ಯಾಕೆ ಅದನ್ನು ಮಾಡಿಲ್ಲವೋ ಎಂದು ಸರ್ಕಾರದ ವಿರುದ್ಧ ಅಸಮಾಧಾನವನ್ನೂ ಹೊರ ಹಾಕಿದ್ದರು.
ರಮೇಶ್ ಭಟ್ 03 ವರ್ಷದ ಹಿಂದೆ ಮಾತನಾಡಿದ ಈ ಮಾತುಗಳೂ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಮಾರ್ದನಿಸುತ್ತಿವೆ. ಮೆಟ್ರೋ ಸ್ಟೇಷನ್‌ಗೆ ಶಂಕರ್ ನಾಗ್ ಅವರ ಹೆಸರನ್ನಿಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸರ್ಕಾರ ಈ ಕಡೆ ಗಮನ ಕೊಡುತ್ತಾ, ಅಸಂಖ್ಯಾತರ ಬೇಡಿಕೆ -ಕೋರಿಕೆ ಈಡೇರಿಸುತ್ತಾ ಅನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











