"ಈ ಸಮಸ್ಯೆ ಇಂದು ನಿನ್ನೆದಲ್ಲ, ಆ ದೃಶ್ಯ ನನ್ನ ಕಣ್ಣಲ್ಲಿ ನೀರು ತರಿಸಿತ್ತು"; ಗಿರಿಜಮ್ಮ
ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಇನ್ನೆರಡು ದಿನಗಳಲ್ಲಿ ಸಿನಿಮಾ ಓಟಿಟಿಗೆ ಬರ್ತಿದೆ. ಆದರೂ ಸಹ ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾರೆ. ಈಗಾಗಲೇ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಮುನ್ನುಗ್ಗುತ್ತಿದೆ. ಬುಕ್‌ಮೈ ಶೋನಲ್ಲೇ 10 ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿದೆ.
ಸಾಮಾನ್ಯ ಪ್ರೇಕ್ಷಕರ ಜೊತೆಗೆ ಸಿನಿಮಾ ತಾರೆಯರು, ಚಿಂತಕರು ಸಹ 'ಕಾಟೇರ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಕಲಾವಿದರ ಅಭಿನಯ, ನಿರ್ದೇಶನ ಹೀಗೆ ಪ್ರತಿ ವಿಭಾಗದ ಬಗ್ಗೆಯೂ ಮಾತನಾಡುತ್ತಿದ್ದಾರೆ. ಅಪ್ಪಟ ಕನ್ನಡ ಮಣ್ಣಿನ ಕಥೆ ಚಿತ್ರವನ್ನು ಹಾಡಿ ಹೊಗಳಿದ್ದಾರೆ. ದರ್ಶನ್ ಅಭಿಮಾನಿಗಳಂತೂ 'ಕಾಟೇರ' ಸಕ್ಸಸ್ ಸಂಭ್ರಮದಲ್ಲಿ ತೇಲುತ್ತಿದ್ದಾರೆ. ಇದೀಗ ಹಿರಿಯ ನಟಿ ಗಿರಿಜಾ ಲೋಕೇಶ್ 'ಕಾಟೇರ' ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

"ನಾನು ನೋಡಿದ 'ಕಾಟೇರ' ಚಿತ್ರ. ಮೊದಲನೆದಾಗಿ ನಿರ್ದೇಶಕರಿಗೆ ನನ್ನ ಅಭಿನಂದನೆಗಳು. ಹಾಗೆ ನಿರ್ದೇಶಕರ ಬೇಕು ಬೇಡಗಳನ್ನು ಹಾಗೂ ಮಾಡಿಕೊಟ್ಟ ನಿರ್ಮಾಪಕರಿಗೆ ನನ್ನ ನಮನಗಳು. ಯಾಕೆಂದರೆ ಇಂಥ ಒಳ್ಳೆ ಕಥೆಯನ್ನು ಸಿನಿಮಾ ಮಾಡಿದ್ದೀರಾ ಒಂದು ದೃಶ್ಯ ಕಾವ್ಯವನ್ನು ನೋಡಿದ ಹಾಗಾಯಿತು. ಇಂದು ನೆನ್ನೆಯದಲ್ಲ ಈ ಸಮಸ್ಯೆ. ನಮ್ಮನ್ನು ಕಾಡುತ್ತಿರುವ ಸಮಸ್ಯೆ. ಕಥೆಗೆ ತಕ್ಕ ಪಾತ್ರಗಳ ಆಯ್ಕೆ. ಯಾವ ಪಾತ್ರದ ಬಗ್ಗೆ ಹೇಳುವುದು? ದರ್ಶನ್‌ರವರ ಪಾತ್ರದ ಬಗ್ಗೆ ಹೇಳುವುದಾದರೆ ಆ ಪಾತ್ರದ ಬೇಕಾದ ನಿಲುವು ಎತ್ತರ ಮೈ ಕಟ್ಟು ಅವರ ಅಭಿನಯ ಎಂಥವರಿಗು ದಂಗು ಪಡಿಸುತ್ತೆ."
"ಸಾಮಾನ್ಯವಾಗಿ ನನ್ನಂಥ ವಯಸ್ಸಾದವರಿಗೆ ಫೈಟಿಂಗ್ ಇಷ್ಟವಾಗುವುದಿಲ್ಲ. ಆದರೆ ಈ ಸಿನಿಮಾದಲ್ಲಿ ಪ್ರತಿಯೊಂದು ಫೈಟಿಗೂ ನಾನು ಕೂಡ ವಿಸಿಲ್ ಹೊಡೆಯುತ್ತಿದ್ದೆ ಅಂತಹ ಖುಷಿಯಾಗುತ್ತಿತ್ತು. ಬಾವಿಯ ದೃಶ್ಯವಂತೂ ನಿರ್ದೇಶಕನ ಕಲ್ಪನೆ ಏನು ಎಂಬುದನ್ನು ಸಾರಿ ಸಾರಿ ಹೇಳುತ್ತಿತ್ತು. ಶ್ರುತಿ ಅವರು ಮಗುವಿಗೆ ಹಾಲು ಕುಡಿಸಲು ಬರುವ ದೃಶ್ಯ ಕಣ್ಣಲ್ಲಿ ನೀರು ತರಿಸುತ್ತಿತ್ತು. ಆ ದೃಶ್ಯದಲ್ಲಿ ಚೈತನ್‌ರವರು ಎಷ್ಟು ಅದ್ಭುತವಾಗಿ ಅಭಿನಯಿಸಿದ್ದಾರೆ. ಮತ್ತೆ ಕಾಟೇರ ಸಣ್ಣವನಿದ್ದಾಗ ಬರುವ ಪಾತ್ರ ಚಂದು ಅವನದು ಕೂಡ ಸಣ್ಣ ಪಾತ್ರವಾದರೂ ನೆನಪಿಟ್ಟುಕೊಳ್ಳುವ ಪಾತ್ರ ಮಾಮನ ಹಾಗೆ ಮೈಮಾಟವನ್ನು ಎಷ್ಟು ಚಂದ ಮಾಡಿಕೊಂಡಿದ್ದಾನೆ.

ಅವನ ಗೆಳತಿಯಾಗಿ ಅಂಕಿತ ಗೌಡ ಕೂಡ ಎಂಥ ಮುದ್ದಾಗಿ ಕಾಣುತ್ತೆ."
"ಮತ್ತೆ ಬಿರಾದರ್ ಅವರದಂತೂ ಮರೆಯಲಾಗದ ಪಾತ್ರ. ಅವರ ಕೈಯಲ್ಲಿ ಹಿರಣ್ಯ ಕಶ್ಯಪು ಪಾತ್ರ ಮಾಡಿಸಿದ್ದು. ಹಿಂದೆ ಕಾಟೇರ ದನಿ ಕೊಟ್ಟಿದ್ದು ಅದ್ಭುತವಾಗಿತ್ತು. ಮತ್ತೆ ನಮ್ಮ ನಾಯಕಿಯನ್ನು ಮರೆಯುವುದು ಹೇಗೆ? ತಾಯಿ ಹಾಗೆ ಸುಂದರ ಮುಖ, ನೃತ್ಯ ಎಲ್ಲವೂ ಎಲ್ಲವೂ ಚೆಂದ. ಕಳಶಪ್ರಾಯವಾಗಿರುವ ದರ್ಶನ್ ರವರದಂತೂ ಒಳ್ಳೆಯ ಅಭಿನಯ. ಚಿತ್ರ ನೋಡಿ ಬರುವಾಗ ಮನಸ್ಸು ತುಂಬಿ ಬಂತು ಎಂಥ ಒಳ್ಳೆ ಚಿತ್ರವನ್ನ ಕೊಟ್ಟಿದ್ದಾರೆ. ಪ್ರತಿಯೊಬ್ಬರ ಪಾತ್ರ ಪ್ರತಿಯೊಂದು ಪಾತ್ರ ಎಷ್ಟು ಮುಖ್ಯವಾದದ್ದು ಎಲ್ಲರೂ ತುಂಬಾ ಚೆಂದವಾಗಿ ಅಭಿನಯಿಸಿದ್ದಾರೆ. ನಮ್ಮ ನಿರ್ದೇಶಕರಿಗೆ ನಿಜವಾಗಿ ಹ್ಯಾಟ್ಸಾಫ್ ಹೇಳಲೇಬೇಕು. ಹಾಗೆ ನಿರ್ಮಾಪಕರಿಗೂ ನನ್ನ ಅಭಿನಂದನೆಗಳು. ಹೀಗೆ ಒಳ್ಳೆಯ ಚಿತ್ರಗಳನ್ನು ಕೊಡುತ್ತಾ ಹೋಗಿ ನಮನಗಳು" ಎಂದು ಪೋಸ್ಟ್ ಮಾಡಿದ್ದಾರೆ.
ಸದ್ಯ ದರ್ಶನ್ 'ಡೆವಿಲ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಿಲನಾ ಪ್ರಕಾಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಫೆಬ್ರವರಿ 16ಕ್ಕೆ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಫಸ್ಟ್ ಲುಕ್ ಪೋಸ್ಟರ್ ಹೊರಬೀಳಲಿದೆ.


Click it and Unblock the Notifications











