ಗ್ಯಾಂಗ್ರಿನ್‌ನಿಂದ ಕಾಲು ಕಳೆದುಕೊಂಡಿದ್ದ ಉರಿಕಂಗಳ ಖಳನಾಯಕ,ನೆರವಾಗಿದ್ದು ಅಪ್ಪು, ಶಿವಣ್ಣ, ಉಪ್ಪಿ ಮಾತ್ರ..!
ಕನ್ನಡ ಚಿತ್ರರಂಗಕ್ಕೆ ಅನೇಕರು ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಆ ಪೈಕಿ ಸತ್ಯಜಿತ್ ಕೂಡ ಒಬ್ಬರು. ಕೇವಲ ಹತ್ತನೇ ಕ್ಲಾಸ್ ಓದಿದ್ದ ಸತ್ಯಜಿತ್ ಬಾಲ್ಯದಲ್ಲಿಯೇ ಈ ಕಲೆ ಕಡೆ ಆಕರ್ಷಿತರಾದರು. ಸಯ್ಯದ್ ನಿಜಾಮುದ್ದೀನ್ ಆಗಿದ್ದ ಇವರು ಆ ನಂತರ ಸತ್ಯಜಿತ್ ಆಗಿ ಕನ್ನಡ ಚಿತ್ರರಂಗಕ್ಕೂ ಬಂದರು. ಸುಮಾರು 650ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದರು. ಜನ ಮನ ಗೆದ್ದರು. ಕೆಂಪು ಉರಿಕಂಗಳ ಖಳನಾಯಕ ಎಂದೇ ಹೆಸರುವಾಸಿಯಾದರು.
'ಅರುಣ ರಾಗ', 'ಅಂತಿಮ ತೀರ್ಪು', 'ಶಿವ ಮೆಚ್ಚಿದ ಕಣ್ಣಪ್ಪ', 'ರಣರಂಗ', 'ನಮ್ಮೂರ ರಾಜ', 'ನ್ಯಾಯಕ್ಕಾಗಿ ನಾನು', 'ಯುದ್ಧಕಾಂಡ', 'ಇಂದ್ರಜಿತ್', 'ನಮ್ಮೂರ ಹಮ್ಮೀರ', 'ಪೊಲೀಸ್ ಲಾಕಪ್', 'ಮನೆದೇವ್ರು', 'ಮಂಡ್ಯದ ಗಂಡು', 'ಪೊಲೀಸ್ ಸ್ಟೋರಿ', 'ಸರ್ಕಲ್ ಇನ್ಸ್‌ಪೆಕ್ಟರ್', 'ಪಟೇಲ', 'ದುರ್ಗದ ಹುಲಿ', 'ಅಪ್ಪು', 'ಧಮ್', 'ಅಭಿ', 'ಆಪ್ತಮಿತ್ರ', 'ಅರಸು', 'ಇಂದ್ರ', 'ಭಾಗ್ಯದ ಬಳೇಗಾರ', 'ಕಲ್ಪನಾ', 'ಗಾಡ್ ಫಾದರ್', 'ಲಕ್ಕಿ', 'ಉಪ್ಪಿ 2', 'ಮಾಣಿಕ್ಯ', 'ರನ್ನ', 'ರಣವಿಕ್ರಮ', 'ಮೈತ್ರಿ' , ಹೀಗೆ ಹತ್ತಾರು ಚಿತ್ರ ಹಲವಾರು ಪಾತ್ರಗಳ ಮೂಲಕ ಕರುನಾಡಿನ ಮನೆ ಮತ್ತು ಮನಗಳನ್ನು ತಲುಪಿದರೂ ಕೂಡ ಸತ್ಯಜಿತ್ ತಮ್ಮ ಕೊನೆಯ ದಿನಗಳಲ್ಲಿ ಕಣ್ಣೀರಿನಲ್ಲಿಯೇ ಕೈ ತೊಳೆಯಬೇಕಾಗಿ ಬಂದಿದ್ದು ದುರ್ದೈವ.

ಹೌದು, ಒಂದೊಮ್ಮೆ ಬಹುಬೇಡಿಕೆಯ ನಟನಾಗಿದ್ದ ಸತ್ಯಜಿತ್ ಆ ನಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. ಅನಾರೋಗ್ಯಕ್ಕೀಡಾಗಿ ಆ ನಂತರ ಚಿಕಿತ್ಸೆಗಾಗಿ ಊರೂರು ಅಲೆದಾಡಿದರು. ಗ್ಯಾಂಗ್ರಿನ್ ನಿಂದ ಎಡಗಾಲನ್ನು ಕೂಡ ಕಳೆದುಕೊಂಡರು. ಆಗ ಶಿವರಾಜ್ ಕುಮಾರ್, ಉಪೇಂದ್ರ ಮತ್ತು ಅಪ್ಪು ತಲಾ ಒಂದು ಲಕ್ಷ ರೂಪಾಯಿಯ ಸಹಾಯವನ್ನೂ ಸತ್ಯಜಿತ್ ಅವರಿಗೆ ಮಾಡಿದ್ದರು. ಆದರೆ, ದುರಂತ ಅಂದರೆ ಈ ಮೂವರನ್ನು ಹೊರತು ಪಡಿಸಿ, 650ಕ್ಕೂ ಅಧಿಕ ಚಿತ್ರಗಳಲ್ಲಿ ಆಕ್ಟ್ ಮಾಡಿದ್ದ ಸತ್ಯಜಿತ್ ಅವರ ಆರೋಗ್ಯವನ್ನು ಚಿತ್ರರಂಗದಿಂದ ಯಾರೊಬ್ಬರು ವಿಚಾರಿಸಲಿಲ್ಲ. ಖುದ್ದು ಸತ್ಯಜಿತ್ ಈ ವಿಚಾರದಲ್ಲಿ ಆಗ ತಮ್ಮ ಬೇಸರ ಹೊರ ಹಾಕಿದ್ದರು. ಗ್ಯಾಂಗ್ರಿನ್ ನಿಂದಾಗಿ ನನ್ನ ಕಾಲು ಕಟ್ ಆಗಿದೆಯಾದ್ರೂ ಕಲಾವಿದರ ಸಂಘದಿಂದ ಇನ್ನೂ ಪರಿಹಾರ ಸಿಕ್ಕಿಲ್ಲ, ಹಿರಿಯ ನಟ ಅಂಬರೀಶ್ ನೀನು ಹೇಗಿದ್ದೀಯಾ ಎಂದು ಕೇಳಿಲ್ಲ ಎಂದು ಹಿರಿಯ ನಟ ಸತ್ಯಜೀತ್ ಅಳಲನ್ನು ತೋಡಿಕೊಂಡಿದ್ದರು.
ಆದರೂ ಕುಗ್ಗದ ಸತ್ಯಜಿತ್ ತಮ್ಮ ಕಷ್ಟವನ್ನೆಲ್ಲ ಮರೆತು ತಮ್ಮ ಮಕ್ಕಳಲ್ಲಿ ಖುಷಿಯನ್ನು ಕಾಣ ಬಯಸಿದರು. ಗ್ಯಾಂಗ್ರೀನ್'ನಿಂದ ಕಾಲು ಕಳೆದುಕೊಂಡ ನೋವಿನಲ್ಲಿಯೇ ಬೆಂಗಳೂರಿನ ಯಲಹಂಕ ಬಳಿಯ ಮಧುರ ಮಿಲನಾ ಕನ್ವೆಷನ್ ಸೆಂಟರ್'ನಲ್ಲಿ ತಮ್ಮ ಮಗಳ ಸ್ವಲೇಹಾ ಅವರ ಅದ್ದೂರಿ ಮದುವೆಯನ್ನೂ ಮಾಡಿದರು. ಆದರೆ, ದುರಾದೃಷ್ಟ ಅಪ್ಪನ ವಿರುದ್ಧವೇ 2021ರಲ್ಲಿ ಮಗಳು ಬಾಣಸವಾಡಿ ಪೊಲೀಸ್ ಸ್ಟೇಶನ್‌ನಲ್ಲಿ ದೂರು ದಾಖಲಿಸಿದರು. ಹಣದ ವಿಚಾರವಾಗಿ ನನ್ನ ತಂದೆ ಹಿಂಸೆ ಕೊಡುತ್ತಿದ್ದಾರೆ ಎಂದು ಅಲವತ್ತುಕೊಂಡರು. ನನ್ನ ತಂದೆ ನನಗೆ ಶಿಕ್ಷಣ ಕೊಡಿಸಿದ್ದಾರೆ. 16 ಲಕ್ಷ ರೂಪಾಯಿ ಸಾಲ ಇದೆ ಆದರೆ ಈಗ ನಾನು ಗರ್ಭಿಣಿ ಹೀಗಾಗಿ ನನಗೆ ಸಂಬಳ ಬರುತ್ತಿಲ್ಲ, ನನ್ನ ಇಬ್ಬರು ಸಹೋದರರು ಇದ್ದಾರೆ. ಅವರಿಗೆ ಮನೆ ನೋಡಿಕೊಳ್ಳಲು ಹೇಳಿ ಎಂದೆ ಎಂದು ಹೇಳಿದೆ ಎಂದರು. ಚಿಕ್ಕ ವಿಚಾರವನ್ನು ದೊಡ್ಡದಾಗಿ ಮಾಡಿದ್ದಾರೆ ಎಂದರು.

ಮಗಳ ಈ ಮಾತುಗಳಿಂದ ನೊಂದು ಬೆಂದು ಹೋಗಿದ್ದ ಸತ್ಯಜಿತ್, ಮಗಳನ್ನು ಪೈಲೆಟ್ ಓದಿಸಿದ್ದೇವೆ. ಅವಳು ಏಕಾಏಕಿ ಓರ್ವ ಹುಡುಗನನ್ನು ಮದುವೆಯಾಗ್ತೀನಿ ಅಂತ ಹೇಳಿದಳು. ಮದುವೆ ನಂತರವೂ ನನ್ನ ಜೊತೆ ಚೆನ್ನಾಗಿದ್ದಳು. ಇತ್ತೀಚೆಗೆ ಅವಳ ಹತ್ತಿರ ಮನೆ ಬಾಡಿಗೆ ನೀಡಲು ಹಣ ಕೊಡಿ ಎಂದು ಮನವಿ ಮಾಡಿದ್ದೆ. ಸಿಕ್ಕಾಪಟ್ಟೆ ಸಾಲ ಮಾಡಿ ಅವಳನ್ನು ಓದಿಸಿದ್ದೆವು. ನಾನು ನನ್ನ ಮಗಳಿಗೆ ಏನು ಹಿಂಸೆ ಕೊಡೋಕೆ ಸಾಧ್ಯ ಎಂದು ಪ್ರಶ್ನೆ ಹಾಕಿದ್ದರು. ಕಣ್ಣೀರು ಹಾಕಿದ್ದರು.
ಹೀಗೆ ಒಂದು ಕಡೆ ಆರ್ಥಿಕ ಸಮಸ್ಯೆ ಇನ್ನೊಂದು ಕಡೆ ಮಗಳಿಂದನೇ ಪೊಲೀಸ್ ಠಾಣೆ ಮೆಟ್ಟಿಲು ಹತ್ತಬೇಕಾದ ಪರಿಸ್ಥಿತಿ, ಇದೆಲ್ಲದರಿಂದ ಕುಗ್ಗಿ ಹೋದ ಸತ್ಯಜಿತ್ ಮಗಳಿಂದ ದೂರವಾದ ಆರೇ ತಿಂಗಳಿನಲ್ಲಿ ಅನಾರೋಗ್ಯದಿಂದ ತಮ್ಮ 72ನೇ ವಯಸ್ಸಿನಲ್ಲಿ ಬದುಕಿನ ಯಾತ್ರೆಯನ್ನು ಮುಗಿಸಿದರು. ಇನ್ನೂ ದುರಂತ ಅಂದರೆ ತಂದೆ ಸತ್ತು ಮಲಗಿದ್ದರು ಆಸ್ಪತ್ರೆಗೆ ಬಂದು ಮಗಳು ತಂದೆಯ ಮುಖವನ್ನ ನೋಡಲಿಲ್ಲ. ಬದಲಿಗೆ ಸ್ಮಶಾನಕ್ಕೆ ನೇರವಾಗಿ ಬಂದು ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದರು.


Click it and Unblock the Notifications











