ನಟ ವಿಜಯ್ ರಾಘವೇಂದ್ರ ಎರಡನೇ ಮದುವೆ ಬಗ್ಗೆ ತಂದೆ ಚಿನ್ನೇಗೌಡ್ರು ಮಾತು
ಕನ್ನಡ ನಟ ವಿಜಯ್ ರಾಘವೇಂದ್ರ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ರಿಪ್ಪನ್ ಸ್ವಾಮಿ' ಬಳಿಕ ರಾಘು ನಟನೆಯ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಸಿನಿಮಾ ಈ ತಿಂಗಳ ಅಂತ್ಯಕ್ಕೆ ತೆರೆಗೆ ಬರಲಿದೆ. ಇದೆಲ್ಲದರ ನಡುವೆ ವಿಜಯ್ ರಾಘವೇಂದ್ರ 2ನೇ ಮದುವೆ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ.
ಕಳೆದ ವರ್ಷ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದರು. ಬ್ಯಾಂಕಾಕ್ ಪ್ರವಾಸಕ್ಕೆ ಹೋಗಿದ್ದ ಸಮಯದಲ್ಲಿ ಅದೇ ಕೊನೆಯುಸಿರೆಳೆದಿದ್ದರು. ಕೂಡಲೇ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಿರಲಿಲ್ಲ. ಪತ್ನಿ ಅಗಲಿಕೆ ನೋವಿನಲ್ಲೇ ವಿಜಯ್ ಕಾಲ ಕಳೆಯುತ್ತಿದ್ದಾರೆ. 2ನೇ ಮದುವೆ ಮಾತೇ ಇಲ್ಲ ಎನ್ನುತ್ತಿದ್ದಾರೆ. ಆದರೆ ಪೋಷಕರು ಈ ಬಗ್ಗೆ ಮಾತನಾಡುವ ಪ್ರಯತ್ನ ಮಾಡಿರುವುದು ಇದೆ.

ವಿಜಯ್ ರಾಘವೇಂದ್ರಗೆ 2ನೇ ಮದುವೆ ಆಗುವಂತೆ ನಾನು, ಅವರ ಮಾವ ಶಿವರಾಮ್ ಹಾಗೂ ಅವರ ಪತ್ನಿ ಕೂಡ ಹೇಳಿದ್ದೇವೆ. ಆದರೆ ಅವನು ಒಪ್ಪುತ್ತಿಲ್ಲ ಎಂದು ಚಿನ್ನೇಗೌಡ್ರು ಹೇಳಿದ್ದಾರೆ. ನೆಲಮುಗಿಲು ಟಿವಿ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ರಾಘ, ಮುರಳಿ ರೀತಿಯ ಮಕ್ಕಳನ್ನು ಪಡೆದ ನಾನೇ ಧನ್ಯ. "ಇಂತಹ ಮಕ್ಕಳನ್ನು ಪಡೆದ ಹೆಮ್ಮೆ ನನಗಿದೆ. ಆದರೆ ಎಲ್ಲದರ ನಡುವೆ ಕೆಟ್ಟ ಕನಸಿನಂತೆ ವಿಜಯ್ ರಾಘವೇಂದ್ರ ಪತ್ನಿ ಅಲ್ಪ ಕಾಲದಲ್ಲೇ ಹೋಗಿಬಿಟ್ರು. ಆ ಬಳಿಕ ಕೂಡ ಮನವಹಿಸಲು ಎಷ್ಟೋ ಪ್ರಯತ್ನ ಮಾಡ್ದೆ. ಒಪ್ಪುತ್ತಿಲ್ಲ, ಅವನ ಮಗ ಪಿಯುಸಿ ಓದುತ್ತಿದ್ದಾನೆ" ಎಂದು ಚಿನ್ನೇಗೌಡ್ರು ಹೇಳಿದ್ದಾರೆ.
ಮಾತು ಮುಂದುವರೆಸಿರುವ ಚಿನ್ನೇಗೌಡ್ರು "ಈಗಲೂ ತಾನಾಯ್ತು ತನ್ನ ಕೆಲ್ಸ ಆಯ್ತು ಅಂತ ವಿಜಯ್ ಇದ್ದಾನೆ. ಹಗಳಿರುಳು ಕೆಲ್ಸ ಮಾಡ್ತಾನೆ. ಏನೇ ಇದ್ದರೂ ಹೆತ್ತಕರುಳು, ನೋಡಿದಾಗ ಯಾಕೆ ಹಿಂಗೆ ಆಗೋಯ್ತು ಅವನ ಪತ್ನಿ ತೀರಿಹೋದ್ಲು. ಮುಂದೆ ಹೆಂಗೆ ಅನ್ನಿಸುತ್ತೆ. ರಾಘು ಮಾವ ಶಿವರಾಮ್, ಅತ್ತೆ ಕೂಡ ಎಷ್ಟೋ ಹೇಳ್ತಾರೆ. ಇನ್ನೊಂದು ಮದುವೆ ಮಾಡ್ಕೊ ಅಂತ. ಆದರೆ ಅವ್ನು ಮಾತ್ರ ಆ ಜಾಗಕ್ಕೆ ತುಂಬಲು ಸಾಧ್ಯವಿಲ್ಲ ಎನ್ನುತ್ತಾನೆ. 2ನೇ ಮದುವೆ ಬೇಡ ಅಂತ ಒಬ್ಬೊಂಟಿಯಾಗಿದ್ದಾನೆ" ಎಂದು ವಿವರಿಸಿದ್ದಾರೆ.

ನಮ್ಮ ಮನೆಗೂ ಬರ್ತಾನೆ, ಊಟ ಮಾಡ್ತಾನೆ, ಯಾಕೋ ಮಗನೇ, ಇನ್ನು ಎಷ್ಟು ದಿನ ರೀತಿ ಇರ್ತೀಯಾ ಅನ್ನುತ್ತಿದ್ದಂತೆ ಅಪ್ಪಾಜಿ ಏನೋ ಪೀಠಿಕೆ ಹಾಕ್ತಾರೆ ಅಂತ ಎದ್ದು ಹೋಗಿಬಿಡ್ತಾನೆ. ಇವತ್ತಿಗೂ ಅದೇ ನಯ ವಿನಯ ಇದೆ. ಮುಂದೆ ಭಗವಂತ ಶ್ರೀನಿವಾಸ ಇಚ್ಛೆ ಹೇಗಿದೆಯೋ ಗೊತ್ತಿಲ್ಲ ಎಂದು ಹಿರಿಯ ನಿರ್ಮಾಪಕ ಚಿನ್ನೇಗೌಡ್ರು ವಿವರಿಸಿದ್ದಾರೆ.
ವಿಜಯ್ ರಾಘವೇಂದ್ರ ಹುಟ್ಟಿದ್ದೇ ಆಕಸ್ಮಿಕ. ಎಲ್ಲೂ ಈ ವಿಚಾರ ಮಾತನಾಡಿಲ್ಲ. ಅವನು ತಾಯಿ ಹೊಟ್ಟೆಯಲ್ಲಿದ್ದಾಗ 8ನೇ ತಿಂಗಳು. ಒಮ್ಮೆ ಔಷಧಿ ಕೊಡಬೇಕಿತ್ತು. ಅದನ್ನು ತರಲು ಬೈಕ್‌ನಲ್ಲಿ ಹೋಗುತ್ತಿದ್ದೆವು. ಆಗ ಒಂದು ಕುದುರೆ ಅಡ್ಡಡ್ಡ ನುಗ್ಗುತ್ತಿತ್ತು. ಬಳಿಕ ಹೋಗೋ ಔಷಧಿ ತಂದು ಕೊಟ್ಟೆವು. ಅಬಾರ್ಷನ್ ಆಗಿಬಿಡಬೇಕಿತ್ತು. ಪುಣ್ಯಕ್ಕೆ ಏನು ಆಗಲಿಲ್ಲ. ಅಲ್ಲಿಂದ ಒಂದು ತಿಂಗಳ ಬಳಿಕ ರಾಘು ಹುಟ್ಟಿದ್ದು. ನಮ್ಮ ತಂಗಿ ಮಂತ್ರಾಲಯ ರಾಯರಿಗೆ ಹರಕೆ ಹೊತ್ತಿದ್ದಳು. ಗಂಡು ಮಗು ಹುಟ್ಟಿದ್ರೆ ರಾಘವೇಂದ್ರ ಅಂತ ಹೆಸರಿಡುತ್ತೇವೆ ಅಂತ. ರೋಹಿಣಿ ನಕ್ಷತ್ರದಂತೆ 'V' ಅಕ್ಷರದಲ್ಲಿ ಹೆಸರಿಡಬೇಕಿತ್ತು. ಹಾಗಾಗಿ ವಿಜಯ ರಾಘವೇಂದ್ರ ಎಂದು ನಾಮಕರಣ ಮಾಡಿದೆವು ಎಂದು ಚಿನ್ನೇಗೌಡ್ರು ನೆನಪಿಸಿಕೊಂಡಿದ್ದಾರೆ.
'ಚಲಿಸುವ ಮೋಡಗಳು' ಚಿತ್ರದಲ್ಲಿ ವಿಜಯ್ ರಾಘವೇಂದ್ರ ಮೊದಲಿಗೆ ಕ್ಯಾಮರಾ ಎದುರಿಸಿದ್ದರು. ಬಳಿಕ ಬಾಲನಟನಾಗಿ ಕೆಲ ಚಿತ್ರಗಳಲ್ಲಿ ನಟಿಸಿದ್ದರು. 'ಚಿನ್ನಾರಿ ಮುತ್ತ' ಚಿತ್ರದ ನಟನೆಗಾಗಿ ರಾಜ್ಯಪ್ರಶಸ್ತಿ, 'ಕೊಟ್ರೇಶಿ ಕನಸು' ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಸಿಕ್ಕಿತ್ತು. 'ನಿನಗಾಗಿ' ಚಿತ್ರದ ಮೂಲಕ ಹೀರೊ ಆಗಿ ಪರಿಚಿತರಾಗಿದ್ದರು.


Click it and Unblock the Notifications











