ಟ್ವಿಟ್ಟರ್‌ನಲ್ಲಿ ಈ ವರ್ಷವೂ ವಿಜಯ್ ನಂಬರ್ ಒನ್!
ತಮಿಳಿನ ಸ್ಟಾರ್ ನಟ ವಿಜಯ್, ಸಿನಿಮಾ ರಂಗದಲ್ಲೇ ಆಗಲಿ, ಸಾಮಾಜಿಕ ಜಾಲತಾಣದಲ್ಲಿಯೇ ಆಗಲಿ ನಂಬರ್ 1. ಕಳೆದ ವರ್ಷದಂತೆ ಈ ಬಾರಿಯೂ ಅವರು ಟ್ವಿಟ್ಟರ್‌ನ ಮನೊರಂಜನಾ ವಿಭಾಗದಲ್ಲಿ ನಂಬರ್ 1 ಆಗಿದ್ದಾರೆ.
2021 ಮುಗಿಯಲು ಬಂದಿದ್ದು ಈ ವರ್ಷ ಅತಿ ಹೆಚ್ಚು ರೀಟ್ವೀಟ್ ಆದ ಟ್ವೀಟ್, ಹೆಚ್ಚು ಲೈಕ್ ಪಡೆದ ಟ್ವೀಟ್, ಹೆಚ್ಚು ಕೋಟ್ ಆದ ಟ್ವೀಟ್ ಹೆಚ್ಚು ಕಮೆಂಟ್ ಪಡೆದ ಟ್ವೀಟ್, ಹೆಚ್ಚು ಟ್ರೆಂಡ್ ಆದ ಹ್ಯಾಷ್‌ಟ್ಯಾಗ್ ಇತರೆಗಳನ್ನು ಟ್ವಿಟ್ಟರ್ ಇಂಡಿಯಾ ಬಿಡುಗಡೆ ಮಾಡಿದೆ.
ಕಳೆದ ವರ್ಷ ವಿಜಯ್ ಮಾಡಿದ್ದ ಒಂದು ಟ್ವೀಟ್ ಭಾರತದಲ್ಲಿ ಅತಿ ಹೆಚ್ಚು ರೀಟ್ವೀಟ್ ಆಗಿದ್ದ ಟ್ವೀಟ್ ಎಂಬ ಹೆಗ್ಗಳಿಕೆ ಗಳಿಸಿತ್ತು. ಈ ಬಾರಿಯೂ ಸಹ ವಿಜಯ್ ಅವರ ಟ್ವೀಟ್ ಅತಿ ಹೆಚ್ಚು ಬಾರಿ ರೀಟ್ವೀಟ್ ಆದ ಮನೊರಂಜನಾ ವಿಭಾಗದ ಟ್ವೀಟ್ ಎಂಬ ಹೆಸರು ಗಳಿಸಿಕೊಂಡಿದೆ.

ಕಳೆದ ವರ್ಷ ಬಿಡುಗಡೆ ಆಗಿದ್ದ 'ಮಾಸ್ಟರ್' ಸಿನಿಮಾದ ಬಳಿಕ ವಿಜಯ್ ಮುಂದಿನ ಸಿನಿಮಾ ಯಾವುದಾಗಿರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು, ಅದೇ ಸಮಯಕ್ಕೆ ವಿಜಯ್, ತಮ್ಮ ಮುಂದಿನ ಸಿನಿಮಾ 'ಬೀಸ್ಟ್'ನ ಪೋಸ್ಟರ್ ಒಂದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಈ ಟ್ವೀಟ್, ಸಿನಿಮಾ ರಂಗದಲ್ಲಿ ಅತಿ ಹೆಚ್ಚು ರೀಟ್ವೀಟ್ ಆದ ಟ್ವೀಟ್ ಎನಿಸಿಕೊಂಡಿದೆ.
ಅದು ಮಾತ್ರವೇ ಅಲ್ಲ, ದಕ್ಷಿಣ ಭಾರತ ಚಿತ್ರರಂಗದಲ್ಲಿ ಟ್ವಿಟ್ಟರ್‌ನಲ್ಲಿ ಅತಿ ಹೆಚ್ಚು ಚರ್ಚೆಯಾದ ಟಾಪ್ ಐದು ಸಿನಿಮಾಗಳಲ್ಲಿ ಎರಡು ವಿಜಯ್ ಸಿನಿಮಾಗಳಿವೆ. ಮೊದಲನೇಯ ಸ್ಥಾನದಲ್ಲಿ 'ಬೀಸ್ಟ್' ಇದ್ದರೆ ಮೂರನೇ ಸ್ಥಾನದಲ್ಲಿ 'ಮಾಸ್ಟರ್' ಇದೆ. ಎರಡನೇ ಸ್ಥಾನದಲ್ಲಿ ಅಜಿತ್ ನಟನೆಯ 'ವಾಲಿಮಾ' ಇದೆ. ನಾಲ್ಕನೇ ಸ್ಥಾನದಲ್ಲಿ ತಮಿಳು ನಟ ಸೂರ್ಯ ನಟನೆಯ 'ಜೈ ಭೀಮ್' ಇದ್ದರೆ ಐದನೇ ಸ್ಥಾನದಲ್ಲಿ ಪವನ್ ಕಲ್ಯಾಣ್ ನಟನೆಯ 'ವಕೀಲ್ ಸಾಬ್' ಇದೆ.
ಇನ್ನು 2021 ರಲ್ಲಿ ಟ್ವಿಟ್ಟರ್‌ನಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾದ ಸಿನಿಮಾ ಸೆಲೆಬ್ರಿಟಿ ಸೋನು ಸೂದ್. ಕೊರೊನಾ ಕಾಲದಲ್ಲಿ ಅವರು ಮಾಡಿದ ಸಹಾಯದ ಕಾರಣಕ್ಕೆ ಸೋನು ಸೂದ್ ಬಹುವಾಗಿ ಚರ್ಚಿತರಾದರು. ಅದರ ಹೊರತಾಗಿ ಈ ಬಾರಿ ಸೋನು ಸೂದ್ ಮೇಲೆ ಐಟಿ ರೇಡ್ ಆಯಿತು. ಅವರ ಮುಂಬೈನ ಹೋಟೆಲ್ ನಿಯಮಬಾಹಿರವಾಗಿ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿ ಬಂತು. ಸೋನು ಸೂದ್ ರಾಜಕೀಯಕ್ಕೆ ಪ್ರವೇಶಿಸುತ್ತಾರೆ ಎಂಬ ಸುದ್ದಿಯೂ ಹರಿದಾಡಿತು ಹಾಗಾಗಿ ಈ ವರ್ಷ ಸೋನು ಸೂದ್ ಹೆಸರು ಟ್ವಿಟ್ಟರ್‌ನಲ್ಲಿ ಹೆಚ್ಚು ಉಲ್ಲೇಖವಾಗಿದೆ.
ಕಳೆದ ವರ್ಷ ವಿಜಯ್ ತಮ್ಮ ಅಭಿಮಾನಿಗಳೊಟ್ಟಿಗೆ ಸೆಲ್ಫಿಯೊಂದನ್ನು ಹಂಚಿಕೊಂಡಿದ್ದರು ಆ ಸೆಲ್ಫಿ ಟ್ವೀಟ್ ಭಾರತದಲ್ಲಿ ಅತಿ ಹೆಚ್ಚು ಬಾರಿ ರೀಟ್ವೀಟ್ ಆದ ಟ್ವೀಟ್ ಎಂಬ ಹೆಗ್ಗಳಿಕೆಗೆ ಕಾರಣವಾಗಿತ್ತು. ಆ ಸೆಲ್ಫಿಯ ಹಿಂದೆ ಆಸಕ್ತಿದಾಯಕ ಅಂಶವೂ ಇತ್ತು. ಮಾಸ್ಟರ್ ಸಿನಿಮಾದ ಚಿತ್ರೀಕರಣದಲ್ಲಿದ್ದ ವಿಜಯ್ ಮನೆಯ ಮೇಲೆ ಐಟಿ ರೇಡ್ ಆಗಿತ್ತು. ಆಗಷ್ಟೆ ವಿಜಯ್ ನಟನೆಯ 'ಬಿಗಿಲ್' ಸಿನಿಮಾದಲ್ಲಿ ವಿಜಯ್ ಕೇಂದ್ರ ಸರ್ಕಾರದ ನೀತಿಗಳನ್ನು ಪ್ರಶ್ನೆ ಮಾಡಿದ್ದರು. ಅದರ ಪ್ರತಿಫಲವಾಗಿಯೇ ರೇಡ್ ಆಗಿದೆ ಎಂಬುದು ಜನಜನಿತವಾಗಿತ್ತು. ಐಟಿ ದಾಳಿಯ ಎಲ್ಲ ಕಾರ್ಯಗಳನ್ನು ಮುಗಿಸಿ ವಿಜಯ್ ಚಿತ್ರೀಕರಣ ಸೆಟ್ ಇದ್ದ ನವೇಲಿಗೆ ವಾಪಸ್ಸಾದಾಗ ಅಲ್ಲಿ ಸಾವಿರಾರು ಮಂದಿ ಅಭಿಮಾನಿಗಳು ವಿಜಯ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದರು. ಆಗ ವಿಜಯ್ ಅಭಿಮಾನಿಗಳೊಟ್ಟಿಗೆ ಸೆಲ್ಫಿ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ಸೆಲ್ಫಿ ಸೂಪರ್ ವೈರಲ್ ಆಗಿತ್ತು.


Click it and Unblock the Notifications











